ಬುಧವಾರ, ಅಕ್ಟೋಬರ್ 28, 2020
20 °C
ಕೇಂದ್ರ ಸರ್ಕಾರದ ಹೊಸ ‘ಪ್ರಾಜೆಕ್ಟ್‌ ಡಾಲ್ಫಿನ್‌’ ಯೋಜನೆಯಿಂದ ಈ ಸಸ್ತನಿಗಳ ಸಂರಕ್ಷಣೆಗೆ ಹೆಚ್ಚಿನ ಕಸುವು ದೊರೆಯಲಿದೆ ಎಂಬುದು ತಜ್ಞರ ಪ್ರತಿಪಾದನೆ

ಸಂಗತ: ‘ಸುಸು’ಗೊಂದು ಸಿಹಿ ಸುದ್ದಿ

ಗುರುರಾಜ್ ದಾವಣಗೆರೆ Updated:

ಅಕ್ಷರ ಗಾತ್ರ : | |

Prajavani

ಗಂಗಾ ನದಿಯ ಡಾಲ್ಫಿನ್‍ಗಳ ಕುರಿತು ಸಿಹಿಸುದ್ದಿಯೊಂದು ಹೊರಬಿದ್ದಿದೆ. ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಗಂಗಾ ನದಿ, ಬ್ರಹ್ಮಪುತ್ರ ಮತ್ತು ಅದರ ಉಪನದಿಗಳಲ್ಲಿ ಮತ್ತು ಬಾಂಗ್ಲಾದೇಶದ ಮೇಘನಾ ನದಿಯಲ್ಲಿ ಮಾತ್ರ ಕಾಣಸಿಗುವ ಸಿಹಿನೀರ ಡಾಲ್ಫಿನ್‍ಗಳ ಸಂರಕ್ಷಣೆಗೆ ಹತ್ತು ವರ್ಷಗಳ ಅವಧಿಯ ‘ಗಂಗಾ ಡಾಲ್ಫಿನ್ ಸಂರಕ್ಷಣಾ’ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.

ಇಪ್ಪತ್ತು ವರ್ಷಗಳ ಹಿಂದೆ ಹಲವು ಸಾವಿರಗಳಷ್ಟಿದ್ದ ಡಾಲ್ಫಿನ್‍ಗಳ ಸಂಖ್ಯೆ ಈಗ ಕೇವಲ ಎರಡು ಸಾವಿರಕ್ಕಿಳಿದಿದೆ. ಅನಿಯಂತ್ರಿತ ಮೀನುಗಾರಿಕೆ, ಅಣೆಕಟ್ಟು ನಿರ್ಮಾಣ, ಮಾಲಿನ್ಯ, ಆವಾಸ ನಾಶ ಮತ್ತು ನೀರ ಹರಿವಿನ ಕೊರತೆಯಿಂದಾಗಿ ಅಳಿವಿನಂಚಿಗೆ ಸರಿಯುತ್ತಿರುವ ಡಾಲ್ಫಿನ್‍ಗಳು ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟದ (ಐಯುಸಿಎನ್) ಕೆಂಪು ಪಟ್ಟಿಗೆ ಸೇರಿ ದಶಕವೇ ಕಳೆದಿದೆ. ಕೇಂದ್ರ ಸರ್ಕಾರದ ಈ ಯೋಜನೆಗೆ ಖಾಸಗಿ ವಲಯದ ಬ್ಯಾಂಕ್ ಹಾಗೂ ವಿವಿಧ ಉದ್ಯಮಗಳು ಬೃಹತ್‌ ಪ್ರಮಾಣದ ಹಣಕಾಸಿನ ನೆರವು ನೀಡಲಿವೆ. ಪರಿಸರ ಸಚಿವಾಲಯವು ‘ಗಂಗಾ ಡಾಲ್ಫಿನ್ ಯೋಜನೆ’ ಗೆಲ್ಲಲಿದೆ ಎಂಬ ಉಮೇದಿನಲ್ಲಿದೆ. ಪರಿಸರ- ಪ್ರಾಣಿಪ್ರಿಯರು ಯೋಜನೆಯನ್ನು ಸ್ವಾಗತಿಸಿದ್ದಾರೆ.

2010ರಲ್ಲಿ ‘ರಾಷ್ಟ್ರೀಯ ಜಲಚರ’ ಎಂಬ ಮಾನ್ಯತೆ ಪಡೆದಿದ್ದ ಗಂಗಾ ಡಾಲ್ಫಿನ್‍ಗಳನ್ನು ಸಂರಕ್ಷಿಸುವ ಕೆಲಸ 2012ರಲ್ಲೇ ಪ್ರಾರಂಭವಾಗಿತ್ತು. ಭಾರತ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸಾರ, ಡಾಲ್ಫಿನ್‍ಗಳನ್ನು ಬೇಟೆಯಾಡುವುದು ಶಿಕ್ಷಾರ್ಹ ಅಪರಾಧ. ಆದರೂ ಅವುಗಳ ಕಳ್ಳಬೇಟೆ ನಿರಂತರವಾಗಿ ನಡೆದೇ ಇದೆ. 2012ರಲ್ಲಿ ಎಚ್‍ಎಸ್‍ಬಿಸಿ ಬ್ಯಾಂಕ್‍ನವರು ಪ್ರಾರಂಭಿಸಿದ ‘ಮೈ ಗಂಗಾ, ಮೈ ಡಾಲ್ಫಿನ್’ ಯೋಜನೆಯ ಅಡಿಯಲ್ಲಿ ಗಂಗಾ ನದಿ ಮತ್ತು ಅದರ ಉಪನದಿಗಳ ಪಾತ್ರಗಳಲ್ಲಿ ಡಾಲ್ಫಿನ್‍ಗಳ ಚಟುವಟಿಕೆ ಮತ್ತು ಸಂಖ್ಯೆಯ ಕುರಿತು ವ್ಯವಸ್ಥಿತ ಅಧ್ಯಯನ ನಡೆಯಿತು. ನದಿ ಮತ್ತು ಜಲಾನಯನ ಪ್ರದೇಶಗಳ ಆರೋಗ್ಯದ ಸಂಕೇತವಾಗಿರುವ ಡಾಲ್ಫಿನ್‍ಗಳ ಸಂರಕ್ಷಣೆಗೆ ಒತ್ತು ನೀಡಿದ್ದ ಅಂದಿನ ಕೇಂದ್ರ ಸರ್ಕಾರ ಈಗ ಪ್ರಾರಂಭವಾಗಿರುವ ಹೊಸ ಯೋಜನೆಗೆ ಸಮರ್ಥ ಬುನಾದಿ ಹಾಕಿದೆ ಎನ್ನಬಹುದು.

ಮುಂಬೈ ಮೂಲದ ಡೆವಲಪ್‍ಮೆಂಟ್ ಕ್ರೆಡಿಟ್ ಬ್ಯಾಂಕ್ ಮತ್ತು ಡಬ್ಲ್ಯುಡಬ್ಲ್ಯುಎಫ್– ಇಂಡಿಯಾ ಕಳೆದ ವರ್ಷ ಜಂಟಿಯಾಗಿ ಕಾರ್ಯಯೋಜನೆ ರೂಪಿಸಿ, ಬಿಯಾಸ್ ನದಿ ಪಾತ್ರದುದ್ದಕ್ಕೂ ಡಾಲ್ಫಿನ್‍ಗಳ ಆವಾಸ, ಸಂಖ್ಯೆ ಮತ್ತು ಅವು ಎದುರಿಸುತ್ತಿರುವ ಅಪಾಯದ ಕುರಿತು ವಿಸ್ತೃತ ಅಧ್ಯಯನ ಕೈಗೊಂಡಿದ್ದವು. ಪಂಜಾಬ್ ಸರ್ಕಾರ ಮತ್ತು ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವ ಬ್ಯಾಂಕ್, ಈಗ ಪ್ರಾರಂಭಿಸಲಾಗುತ್ತಿರುವ ಯೋಜನೆಗೆ ಬೇಕಾದ ನೆರವು ನೀಡಲು ಮುಂದಾಗಿದೆ. ಬಂದರು, ಜಲಸಾರಿಗೆ, ವ್ಯವಸಾಯ, ಮೀನುಗಾರಿಕೆ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ನಡೆಯಲಿರುವ ಈ ಯೋಜನೆಯು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಿ ಮುಂದುವರಿಯಲಿದೆ. ನಿಯಂತ್ರಿತ ಮೀನುಗಾರಿಕೆ, ಮಾಲಿನ್ಯ ತಡೆಯ ಜವಾಬ್ದಾರಿ ಹೊತ್ತಿರುವ ಕೇಂದ್ರ ಪರಿಸರ ಸಚಿವಾಲಯವು ಡಾಲ್ಫಿನ್‍ಗಳ ಸಂರಕ್ಷಣೆ ಮತ್ತು ಸಂಖ್ಯಾ ವೃದ್ಧಿಗೆ ವಿಶೇಷ ಗಮನ ನೀಡಲಿದೆ.‌

ನದಿಗಳು ಸೇರುವ ನೀರಿನಲ್ಲಿ ಹೆಚ್ಚಾಗಿ ವಾಸಿಸುವ ಡಾಲ್ಫಿನ್‍ಗಳು ಏಳು ರಾಜ್ಯಗಳ 8 ನದಿಗಳಲ್ಲಿ ತಮ್ಮ ಆವಾಸ ಹೊಂದಿವೆ. ಸುಮಾರು 9ರಿಂದ 12 ತಿಂಗಳುಗಳ ಕಾಲದ ಗರ್ಭಾವಸ್ಥೆಯನ್ನು ಹೊಂದುವ ಡಾಲ್ಫಿನ್‌ಗಳು 2-3 ವರ್ಷಗಳಿಗೊಮ್ಮೆ ಒಂದೇ ಒಂದು ಮರಿಗೆ ಜನ್ಮ ನೀಡುತ್ತವೆ. ಅಚ್ಚರಿಯ ವಿಷಯವೆಂದರೆ, ಈ ಡಾಲ್ಫಿನ್‍ಗಳಿಗೆ ದೃಷ್ಟಿ ಇಲ್ಲ. ಅಲ್ಟ್ರಾಸಾನಿಕ್ ಶಬ್ದದ ನೆರವಿನಿಂದ ಶಬ್ದವೇಧಿ ತಂತ್ರ ಬಳಸಿ ತಮ್ಮ ಬೇಟೆ ಇರುವ ಜಾಗವನ್ನು ಗುರುತಿಸುತ್ತವೆ. ಅಂದರೆ, ಧ್ವನಿತರಂಗಗಳನ್ನು ಹೊಮ್ಮಿಸಿ, ಅವು ಪ್ರತಿಫಲನಗೊಂಡ ತಕ್ಷಣ ಬೇಟೆಯನ್ನು ಪತ್ತೆ ಮಾಡುತ್ತವೆ. ಇವುಗಳ ಸಾಮಾನ್ಯ ಹೆಸರು ‘ಸುಸು’. ಘರಿಯಾಲ್ ಮೊಸಳೆ, ನೀರ ಪಕ್ಷಿಗಳ ಜೊತೆ ಆವಾಸ ಹಂಚಿಕೊಳ್ಳುವ ಸುಸುಗಳು, ಮೀನು, ಅಕಶೇರುಕಗಳನ್ನು ತಿನ್ನುತ್ತವೆ.

ಈಗ ಜಾರಿಯಲ್ಲಿರುವ ಗಂಗಾ ನದಿ ಶುದ್ಧೀಕರಣ ಯೋಜನೆಯಿಂದ ಡಾಲ್ಫಿನ್‍ಗಳ ಸಂರಕ್ಷಣೆಗೆ ಹೆಚ್ಚಿನ ಕಸುವು ದೊರೆಯಲಿದೆ ಎಂಬುದು ತಜ್ಞರ ಪ್ರತಿಪಾದನೆ. ಅಂದುಕೊಂಡ ವೇಗದಲ್ಲಿ ನದಿ ಶುದ್ಧೀಕರಣದ ಕೆಲಸ ನಡೆಯುತ್ತಿಲ್ಲ. ನದಿ ಪಾತ್ರದಲ್ಲಿ ನೆಲೆ ನಿಂತಿರುವ ಉದ್ಯಮಗಳಿಂದ ಮಾಲಿನ್ಯ ನಿಂತಿಲ್ಲ. ಖಾಸಗಿ ಅಣೆಕಟ್ಟುಗಳು ನೀರಿನ ಹರಿವನ್ನು ಸರಿಯಾಗಿ ನಿಯಂತ್ರಿಸುತ್ತಿಲ್ಲ. ಹರಿವಿನ ತೀವ್ರತೆ ಕಡಿಮೆಯಾದಾಗ ಡಾಲ್ಫಿನ್‍ಗಳು ಸುಲಭವಾಗಿ ಮೀನುಗಾರರ ಪಾಲಾಗುತ್ತವೆ. ಹರಿಯುವ ನೀರಿನಲ್ಲಷ್ಟೇ ಬದುಕುವ ಘರಿಯಾಲ್ ಮತ್ತು ಡಾಲ್ಫಿನ್‍ಗಳು ಜೀವಿಸಲಾರದೆ ಅಸುನೀಗುತ್ತವೆ. ಈ ಎಲ್ಲ ಕಾರಣಗಳಿಂದ, ಡಾಲ್ಫಿನ್‍ ಯೋಜನೆ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂದು ಕಾದು ನೋಡದೆ ವಿಧಿಯಿಲ್ಲ ಎಂದಿದ್ದಾರೆ ಸಂರಕ್ಷಣಾ ತಜ್ಞರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು