ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ವಿಲಕ್ಷಣ ಮನಃಸ್ಥಿತಿ

ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಗುಣ ರೂಢಿಸಿಕೊಳ್ಳೋಣ
Last Updated 3 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಘಟನೆ ಒಂದು: ಮಂಡ್ಯ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿ ಇತ್ತೀಚೆಗೆ, ಹಿರಿಯ ವಿದ್ವಾಂಸ ಹಂಪ ನಾಗರಾಜಯ್ಯ ಅವರು, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಪ್ರಭುತ್ವದ ಅಸೂಕ್ಷ್ಮತೆಯನ್ನು ಖಂಡಿಸುತ್ತ ಪ್ರಧಾನಿಯವರ ನಿಲುವನ್ನು ಟೀಕಿಸಿದ್ದು. ಹಂಪನಾ ಅವರ ಭಾಷಣವನ್ನು ನೇರವಾಗಿ ಆಲಿಸದ ಯಾರೋ ಒಬ್ಬರು, ಮರುದಿನ ಪತ್ರಿಕಾ ವರದಿಯನ್ನು ಆಧರಿಸಿ, ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಪರಿಣಾಮವಾಗಿ, ಹಂಪನಾ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಲಾಗುತ್ತದೆ.

ಘಟನೆ ಎರಡು: ಕೇಂದ್ರ ಸರ್ಕಾರವು ಜಾರಿಗೆ ತರಲು ಹೊರಟಿರುವ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ನೂರಾರು ರೈತರು ದೆಹಲಿಯಲ್ಲಿ ಸುಮಾರು ಎರಡು ತಿಂಗಳಿನಿಂದ ನಡೆಸುತ್ತಿರುವ ಪ್ರತಿಭಟನೆ.

ಹಂಪನಾ ಅವರಿಗೆ ನೈತಿಕ ಬೆಂಬಲ ಸೂಚಿಸಿ ಅಲ್ಲೊಂದು ಇಲ್ಲೊಂದು ದನಿಗಳು, ಅಭಿಪ್ರಾಯಗಳು ದಾಖಲಾದವು. ವಿಚಿತ್ರ ಹುನ್ನಾರದೊಳಗೆ ಸಿಲುಕಿರುವ ರೈತ ಸಮುದಾಯಕ್ಕೆ ನೇರವಾಗಿ ಬೆಂಬಲ ಸೂಚಿಸಲಾಗದೆ, ದೂರದಿಂದಲೇ ಅವರನ್ನು ಕಂಡು ಮರುಗುತ್ತಿದ್ದ ಲಕ್ಷಾಂತರ ಮನಸ್ಸುಗಳು ಈಗ ಮೌನ ಪ್ರಾರ್ಥನೆಗೆ ಕೊರಳು ಬಾಗಿಸಿವೆ.

ಈ ಎರಡು ಘಟನೆಗಳಲ್ಲೂ ಕಾಣುವ ಒಂದು ಸಮಾನ ಅಂಶವೆಂದರೆ, ಇನ್ನೊಬ್ಬರ ಕಷ್ಟಕ್ಕೆ ಮಿಡಿಯದ ಆಧುನಿಕ ಮನುಷ್ಯನ ಮನಸ್ಸಿನ ಸ್ವರೂಪ ಮತ್ತು ಇದು ಪ್ರತಿನಿಧಿಸುತ್ತಿರುವ ಆಧುನಿಕ ಕಾಲದ ಹಿಂಸೆಯ ಸೂಕ್ಷ್ಮ, ಸಂಕೀರ್ಣ ಬಗೆಗಳು.

ನಾವೆಲ್ಲ ದಿನೇದಿನೇ ಒಂಟಿ ದನಿಗಳಾಗುತ್ತಿದ್ದೇವೆಯೇ? ಯಾರ ಸಂಕಟಕ್ಕೆ ಯಾರೂ ದನಿಗೂಡಿಸದ ಅಪಾಯಕಾರಿ ಮನಃಸ್ಥಿತಿ ರೂಪಿಸುವ ಕೆಲಸದಲ್ಲಿ ಪಾಲುದಾರರಾಗುತ್ತಿದ್ದೇವೆಯೇ ಎಂದು ಅನ್ನಿಸುತ್ತಿರುವಾಗಲೇ ಈ ಕಥೆ ನೆನಪಾಗುತ್ತಿದೆ: ಒಬ್ಬ ಮಾನವ
ಶಾಸ್ತ್ರಜ್ಞ ಬುಡಕಟ್ಟು ಸಮುದಾಯಗಳ ನಡುವೆ ಹಲವು ವರ್ಷಗಳಿಂದ ಇದ್ದುಕೊಂಡು ಮನುಷ್ಯ ವರ್ತನೆ, ನಡವಳಿಕೆ ಇತ್ಯಾದಿಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದ. ಒಂದು ದಿನ ಅವನು, ಹತ್ತಿರದಲ್ಲಿ ಆಟವಾಡುತ್ತಿದ್ದ ಒಂದಷ್ಟು ಬುಡಕಟ್ಟು ಮಕ್ಕಳಿದ್ದಲ್ಲಿಗೆ ಹೋಗಿ, ‘ಒಂದು ಆಟ ಆಡೋಣವಾ?’ ಎಂದು ಕೇಳಿದ. ಮಕ್ಕಳೆಲ್ಲ ಖುಷಿಯಿಂದ ಒಪ್ಪಿದರು.

ಆಗ ಅವನು ಅಲ್ಲಿಂದ ಸ್ವಲ್ಪ ದೂರದಲ್ಲಿ ಕಾಣುತ್ತಿದ್ದ ಮರದ ಬುಡದಲ್ಲಿ ತನ್ನ ಬಳಿ ಇದ್ದ ಕೆಲವು ಚಾಕೊಲೇಟು, ಹಣ್ಣುಗಳ ಪೊಟ್ಟಣವನ್ನು ಇಟ್ಟು ಬಂದ. ಮಕ್ಕಳ ಗುಂಪಿನಲ್ಲಿ ಯಾರು ಮೊದಲು ಓಡಿ ಆ ಪೊಟ್ಟಣವನ್ನು ಮುಟ್ಟುವರೋ ಅವರಿಗೆ ಅದೆಲ್ಲ ಸೇರುತ್ತದೆ ಎನ್ನುವುದು ಆಟ. ಅವನು ಆಟ ಆರಂಭದ ಸೂಚನೆ ಕೊಟ್ಟ ಕೂಡಲೆ ಅಷ್ಟೂ ಮಕ್ಕಳು ಪರಸ್ಪರ ಮುಖವನ್ನು ನೋಡಿಕೊಂಡು, ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದು, ಅವನು ನಿಗದಿಪಡಿಸಿದ್ದ ಗುರಿಯೆಡೆಗೆ ಎಲ್ಲರೂ ಏಕಕಾಲಕ್ಕೆ ಓಡಿ ಒಟ್ಟಿಗೇ ಗುರಿ ಮುಟ್ಟಿದರು. ಮಕ್ಕಳ ಈ ವರ್ತನೆಯಿಂದ ಆಶ್ಚರ್ಯಕ್ಕೊಳಗಾದ ಮಾನವಶಾಸ್ತ್ರಜ್ಞ, ಅವರು ಹಾಗೆ ಮಾಡಿದ್ದೇಕೆ, ಯಾರಾದರೂ ಒಬ್ಬರೇ ಬೇಗ ಗುರಿ ಮುಟ್ಟಿದ್ದರೆ ಎಲ್ಲವೂ ಅವರದ್ದೇ ಆಗುತ್ತಿತ್ತಲ್ಲವೇ ಎಂದು ಕೇಳಿದ. ಆಗ ಒಬ್ಬ ಹುಡುಗ ‘ಉಬುಂಟು..!’ ಎಂದು ಕಿರುಚಿದ. ಮಾನವಶಾಸ್ತ್ರಜ್ಞನು ‘ಹಾಗಂದ್ರೆ?’ ಎಂದು ಆಶ್ಚರ್ಯದಲ್ಲಿ ಕೇಳಿದಾಗ ಆ ಹುಡುಗ ಹೇಳಿದ, ‘ಹಂಗಂದ್ರೆ... ಯಾರಾದರೂ ಒಬ್ಬರಿಗೆ ಅದು ಸಿಕ್ಕಿದ್ದರೆ ಬೇರೆಯವರಿಗೆ ಬೇಜಾರಾಗ್ತಿತ್ತಲ್ಲ? ಯಾರಾದ್ರೂ ಬೇಜಾರಾಗಿದ್ರೆ ನಾವು ಖುಷಿಯಾಗಿರೋಕೆ ಹೆಂಗಾಗುತ್ತೆ?’ ಅಂದನು.

ಅಷ್ಟೂ ವರ್ಷಗಳ ತನ್ನ ಅಧ್ಯಯನದಲ್ಲಿ ಕಂಡುಕೊಳ್ಳಲಾಗದ ಆ ಸಮುದಾಯದ ಅಪರೂಪದ ಸತ್ಯವೊಂದು ಅಲ್ಲಿ, ಆ ಮಕ್ಕಳ ಮೂಲಕ ಅವನ ಮುಂದೆ ಅಂದು ಬಿಚ್ಚಿಕೊಂಡಿತ್ತು.

ವಿಶ್ವದ ಜೀವಕೋಟಿಯನ್ನು ಒತ್ತಟ್ಟಿಗೆ ಬಂಧಿಸುವ ಕೊಂಡಿಯೇ ‘ಉಬುಂಟು’. ಇದು 19ನೇ ಶತಮಾನದಲ್ಲಿ ಆಫ್ರಿಕಾದಲ್ಲಿ ಹುಟ್ಟಿಕೊಂಡ ಪರಿಕಲ್ಪನೆ. ಪ್ರೀತಿಯು ಜಗತ್ತಿನ ಎಲ್ಲ ಜೀವಗಳಲ್ಲಿ ಹುದುಗಿರುವ ಮೂಲಭೂತ ಸತ್ಯ ಮತ್ತು ಈ ಪ್ರೀತಿಯಿಂದಲೇ ಪ್ರತಿಯೊಂದು ಜೀವವೂ ಮತ್ತೊಂದರ ಜೊತೆ ಸಂಬಂಧ ಮತ್ತು ಸಂಪರ್ಕವನ್ನು ಏರ್ಪಡಿಸಿಕೊಳ್ಳುತ್ತದೆ ಎನ್ನುವ ಹೊಳಹು ಈ ಕಥೆಯದ್ದು. ಮೇಲಿನ ಎರಡು ಘಟನೆಗಳಿಗೆ ಈ ಕಥೆಯನ್ನು ವಿಸ್ತರಿಸಿಕೊಂಡರೆ ಪರಿಹಾರ ಎಷ್ಟು ಸರಳ ಮತ್ತು ಸುಲಭ!

ಆದರೆ... ಪ್ರೀತಿಸುವುದೆಂದರೇನು ಅಷ್ಟು ಸಲೀಸೆ? ಅದಕ್ಕಾಗಿ ಮುಖವಾಡಗಳನ್ನು ಕಿತ್ತಿಡಬೇಕು, ನನಗೇ ಕಾಣದೆ ನನ್ನೊಳಗೆ ಸಾವಿರ ಸ್ವರೂಪಗಳಲ್ಲಿ ಬಚ್ಚಿಟ್ಟುಕೊಂಡಿರುವ ಅಹಂಕಾರವನ್ನು ಕಾಣುವ, ಮೀರುವ ನಿಷ್ಠುರತೆ ಇರಬೇಕು. ಎಲ್ಲಕ್ಕಿಂತ ಮುಖ್ಯ, ‘ಇನ್ನೊಂದ’ಕ್ಕಾಗಿ ಮಿಡಿಯುವ ಗುಣ ಬೇಕು, ಅದಕ್ಕೆ ಹೃದಯವಿರಬೇಕು. ಆದ್ದರಿಂದ, ಆ ದಿಸೆಯೆಡೆಗೆ ಒಬ್ಬೊಬ್ಬರು ಒಂದೊಂದು ಹೆಜ್ಜೆ ಇಟ್ಟರೂ ಎಷ್ಟೋ ದಾರಿಯನ್ನು ಒಮ್ಮೆಗೇ ಕ್ರಮಿಸಿದಂತೆ. ಆಗ, ಹಂಪನಾ ಅವರದ್ದು ಒಂಟಿ ದನಿಯಲ್ಲ, ಅದು ನೈತಿಕತೆಯನ್ನು ಉಳಿಸಿಕೊಂಡ ಜನರ ಪ್ರಾತಿನಿಧಿಕ ದನಿ ಎನ್ನುವ; ರೈತ ಹೋರಾಟಕ್ಕೆ ನಮ್ಮ ದನಿಯನ್ನು ದಾಖಲಿಸುವ ಸ್ಥೈರ್ಯ ನಮ್ಮದಾಗುತ್ತದೆ. ಆಗ, ಭಯದ ನೆರಳಿನಲ್ಲಿ ಉಸಿರಾಡುವ ಮತ್ತು ನಮ್ಮ ಹಿತರಕ್ಷಣೆಯೇ ಮುಖ್ಯವಾಗಿರುವ ಸ್ವಾರ್ಥ ಸ್ಥಿತಿಯಿಂದ ನಾವೆಲ್ಲರೂ ಬಿಡುಗಡೆಗೊಂಡು ಲೋಕವನ್ನು
ಎದುರಿಸುವಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT