ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕ್ಯಾಂಪಸ್‌ ಸಂದರ್ಶನ– ಎಲ್ಲರಿಗೂ ಮುಕ್ತವಾಗಿರಲಿ

ಕ್ಯಾಂಪಸ್ ಸಂದರ್ಶನವನ್ನು ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೂ ವಿಸ್ತರಿಸಬೇಕು. ಕಂಪನಿಗಳು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಮುಕ್ತ ಮನಸ್ಸಿನಿಂದ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಆಗಬೇಕು
Published 8 ಜನವರಿ 2024, 19:30 IST
Last Updated 8 ಜನವರಿ 2024, 19:30 IST
ಅಕ್ಷರ ಗಾತ್ರ

ಶಿಕ್ಷಣದ ಮೂಲ ಉದ್ದೇಶ ಏನೇ ಇರಲಿ, ಅದರಿಂದ ಉದ್ಯೋಗ ಖಾತರಿ ಎಂಬುದನ್ನು ಮನಗಂಡೇ ಬಹುತೇಕ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿರುವುದು ವಾಸ್ತವ. ಇದನ್ನು ಅರಿತೇ, ಒಂದೆಡೆ ಶಿಕ್ಷಣ ಸಂಸ್ಥೆಗಳು, ಮತ್ತೊಂದೆಡೆ ಉದ್ಯೋಗದಾತರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಒಂದು ರೀತಿಯಲ್ಲಿ ಚೆಲ್ಲಾಟವಾಡುತ್ತಿರುವುದು ಶಿಕ್ಷಣ ಕ್ಷೇತ್ರದಲ್ಲಿನ ಶೋಷಣೆಗಳಲ್ಲಿ ಒಂದು.

ಈ ನಡೆ ಉನ್ನತ ಶಿಕ್ಷಣದಲ್ಲಿ, ಅದರಲ್ಲೂ ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ‘ಕ್ಯಾಂಪಸ್ ಸಂದರ್ಶನ’ ಎಂಬ ಆಕರ್ಷಕ ಹೆಸರುಳ್ಳ ಪ್ರಲೋಭನೆಗೆ ಕಾರಣ ಆಗುತ್ತಿದೆ. ತಮ್ಮ ಮಕ್ಕಳನ್ನು ತಾಂತ್ರಿಕ ಕೋರ್ಸ್‌ಗೆ
ಸೇರಿಸಲು ಪೋಷಕರು ಪ್ರಧಾನವಾಗಿ ಪರಿಗಣಿಸುತ್ತಿ ರುವುದು, ಈ ಸಂಸ್ಥೆಗಳಲ್ಲಿ ನಡೆಯುವ ಕ್ಯಾಂಪಸ್ ಸಂದರ್ಶನವನ್ನು. ಅಂದರೆ, ಪ್ರತಿಷ್ಠಿತ ಕಂಪನಿಗಳು ಪದವಿಯ ಮುಕ್ತಾಯಕ್ಕೆ ಮುಂಚೆಯೇ ವಿದ್ಯಾರ್ಥಿ
ಗಳನ್ನು ನೇರವಾಗಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುವುದನ್ನು ಖಾತರಿಪಡಿಸಿಕೊಳ್ಳುವುದೇ ಆಗಿದೆ. ಇದು ಒಂದು ರೀತಿಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕ್ಯಾಂಪಸ್‌ಸಹಿತ ಅಥವಾ ಕ್ಯಾಂಪಸ್‌ರಹಿತ ಎಂಬ ಕೃತಕ ವರ್ಗೀಕರಣಕ್ಕೆ ಒಳಪಡಿಸಿದೆ.

ದೊಡ್ಡ ಕಂಪನಿಗಳು ಪ್ರತಿಷ್ಠಿತ ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳನ್ನು ಸಂದರ್ಶನದ ಮೂಲಕ ತರಬೇತಿಗಾಗಿಯೋ ಉದ್ಯೋಗಕ್ಕಾಗಿಯೋ ನೇಮಕ ಮಾಡಿಕೊಳ್ಳುವ ಈ ಆಕರ್ಷಕ ಪ್ರಕ್ರಿಯೆ ಅನೇಕ ವರ್ಷಗಳಿಂದ ಮುಂದುವರಿದುಕೊಂಡು ಬಂದಿದೆ. ಇಲ್ಲಿ ಪರೀಕ್ಷೆಗೆ ಒಳಪಡುವುದು ಪ್ರತಿಭೆ ಮಾತ್ರವೋ ಅಥವಾ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವವೋ ಎಂಬುದು ಕಂಪನಿಗಳ ವಿವೇಚನೆಗೆ ಬಿಟ್ಟ ಸಂಗತಿಯಾಗಿರುತ್ತದೆ. ಆದರೆ ಈ ರೀತಿಯ ಸಂದರ್ಶನ ನಡೆಯುವುದು ಆಯ್ದ ಕಾಲೇಜುಗಳಲ್ಲಿ ಅದರಲ್ಲೂ ನಗರದಲ್ಲಿರುವ ಕೆಲವು ಸಂಸ್ಥೆಗಳಲ್ಲಿ ಮಾತ್ರ. ಅಂದರೆ, ಆ ಕಂಪ‍ನಿಗಳು ಹೊಂದಿರುವ ಅಭಿಪ್ರಾಯದ ಪ್ರಕಾರ, ಪ್ರತಿಭಾವಂತರು ಅಥವಾ ತಮ್ಮ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಉಳ್ಳವರು ದೊರೆಯುವುದು ಈ ಕಾಲೇಜುಗಳಲ್ಲಿ ಮಾತ್ರ. ಹಾಗಾಗಿಯೇ, ಆ ಕಂಪನಿಗಳಿಗೆ ಈ ಕಾಲೇಜುಗಳು ಮಾತ್ರ ಪಥ್ಯ, ಮಿಕ್ಕವು ಅಪಥ್ಯ ಎಂಬಂತಾಗಿದೆ. ಅದಕ್ಕಾಗಿ ಇಂತಹ ಕಾಲೇಜುಗಳಲ್ಲಿ ಶುಲ್ಕದ ಪ್ರಮಾಣ ತುಸು ಹೆಚ್ಚೇ ಇರು ವುದು ಗೊತ್ತಿಲ್ಲದ ಸಂಗತಿಯೇನಲ್ಲ. 

ಪೋಷಕರಿಗಂತೂ ಇಂತಹ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸುವುದು ಪ್ರತಿಷ್ಠೆಯ ಸಂಗತಿ. ಶುಲ್ಕ ಭರಿಸಲು ಸಾಧ್ಯವಿಲ್ಲದ ವಿದ್ಯಾರ್ಥಿಗಳಿಗೆ, ಅಂತಹ ಕಾಲೇಜುಗಳೂ ಆಕರ್ಷಕ ಉದ್ಯೋಗದ ಪ್ರಲೋಭನೆ ಗಳೂ ಗಗನಕುಸುಮವೇ ಆಗಿರುತ್ತವೆ.

ಮಕ್ಕಳು ಪದವಿಯನ್ನು ಮುಗಿಸಲಿ, ಮುಗಿಸ ದಿರಲಿ ಉದ್ಯೋಗ ಖಾತರಿ ಎಂಬ ಜೀವನದ ಬಹು ಮುಖ್ಯವಾದ ಮಜಲಿಗೆ ಒಡ್ಡಿಕೊಂಡಿರುವುದರ ದ್ಯೋತಕ ಕ್ಯಾಂಪಸ್‌ ಸಂದರ್ಶನ. ಈ ‘ಉದ್ಯೋಗ ಭಾಗ್ಯ’ದಿಂದ ಅನೇಕ ಕಾಲೇಜುಗಳ ಮಕ್ಕಳು ವಂಚಿತ ರಾಗುವುದರಿಂದ, ಎಲ್ಲ ರಂಗಗಳಲ್ಲೂ ಕಾಣಸಿಗುವ ಒಂದಲ್ಲ ಒಂದು ರೀತಿಯ ತಾರತಮ್ಯವು ಇಲ್ಲಿಗೂ ಈ ರೂಪದಲ್ಲಿ ವಿಸ್ತರಿಸಿದೆ. ಕಂಪನಿಗಳವರು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಈ ಕಾಲೇಜುಗಳಿಗೆ ಸಂದರ್ಶನ ನಡೆಸಲು ಭೇಟಿ ನೀಡುತ್ತಾರೋ ಅಥವಾ ಕಾಲೇಜುಗಳೇ ತಮ್ಮ ಸಾಮಾಜಿಕ, ಶೈಕ್ಷಣಿಕ ಪ್ರತಿಷ್ಠೆ ಕಾಪಾಡಿಕೊಳ್ಳಲು, ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿ ಸಲು, ಸಂದರ್ಶನ ನಡೆಸುವಂತೆ ಕಂಪನಿಗಳನ್ನು ಒತ್ತಾಯಪಡಿಸುತ್ತವೋ ಎಂಬುದು ಸ್ಪಷ್ಟ ಆಗುವುದಿಲ್ಲ.

ಏನಾದರಾಗಲಿ, ವಿದ್ಯಾರ್ಥಿಗಳಿಗೆ ಉದ್ಯೋಗ ಭಾಗ್ಯ ದೊರಕುವುದು ಮಾತ್ರ ಅತ್ಯುತ್ತಮವಾದ ಆಶಾದಾಯಕ ಬೆಳವಣಿಗೆಯೇ ಸರಿ. ಆದರೆ, ಇದರಲ್ಲಿ ಸ್ಪಷ್ಟವಾಗಿ ಕಾಣುವ ತಾರತಮ್ಯ ಎಷ್ಟರ
ಮಟ್ಟಿಗೆ ಸಮರ್ಥನೀಯ ಎಂಬುದರ ಬಗ್ಗೆ ಯಾರೂ ಯೋಚಿಸುವುದಿಲ್ಲ.

ಕಲಬುರಗಿಯ ತಾಂತ್ರಿಕ ಸಂಸ್ಥೆಯೊಂದರ ಪ್ರಾಂಶುಪಾಲರು ಈ ವ್ಯವಸ್ಥೆಯ ಬಗ್ಗೆ ಇತ್ತೀಚೆಗೆ ದನಿ ಎತ್ತಿದ್ದರು. ‘ನಾವು ಸಹ ನಮ್ಮ ಸಂಸ್ಥೆಗಳಲ್ಲಿ ಅತ್ಯುತ್ತಮವಾದ ಬೋಧಕರನ್ನು ನೇಮಿಸಿಕೊಂಡಿರುವುದಲ್ಲದೆ, ಉತ್ಕೃಷ್ಟ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಈ ಮೂಲಕ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ಶೈಕ್ಷಣಿಕ ಪರಿಸರದಲ್ಲಿ ಶಿಕ್ಷಣ ಒದಗಿಸುವುದೇ ನಮ್ಮ ಗುರಿ. ಇಂತಹದರಲ್ಲೂ ಪೋಷಕರು ಮಾತ್ರ ಬೆಂಗಳೂರು, ಮೈಸೂರಿನ, ಅದ ರಲ್ಲೂ ಆಯ್ದ ಕೆಲವು ಪ್ರತಿಷ್ಠಿತ ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವುದಕ್ಕೆ ಆದ್ಯತೆ ನೀಡುತ್ತಾರೆ. ಅಲ್ಲೆಲ್ಲೂ ಪ್ರವೇಶ ದೊರೆಯದಿದ್ದರೆ ಅಥವಾ ಯಾವುದೋ ಕಾರಣಕ್ಕೆ ಅಲ್ಲಿಗೆ ಕಳುಹಿಸಲು ಸಾಧ್ಯಆಗದಿದ್ದರಷ್ಟೇ ಈ ಪ್ರದೇಶದ ಕಾಲೇಜುಗಳಿಗೆ ತಮ್ಮ ಮಕ್ಕಳಿಗೆ ಪ್ರವೇಶ ಕೊಡಿಸುತ್ತಾರೆ. ಇದಕ್ಕೆಲ್ಲಾ ಮುಖ್ಯ ಕಾರಣ, ಕ್ಯಾಂಪಸ್ ಸಂದರ್ಶನ ಎಂಬ ಮುಖ್ಯ ಪ್ರಲೋಭನೆ. ಇಂತಹ ಬೆಳವಣಿಗೆ ಆತಂಕಕಾರಿ ಅಲ್ಲವೇ’ ಎಂದು ಅವರು ಪ್ರಶ್ನಿಸಿದ್ದರು.

ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಿಂದಾಗಿ, ಎಲ್ಲ ಬಗೆಯ ವಿದ್ಯಾರ್ಥಿಗಳೂ ಉನ್ನತಿ ಸಾಧಿಸುತ್ತಿದ್ದಾರೆ. ಹಾಗಾಗಿ, ಅವರಿರುವುದು ಕೆಲವೇ ಕಾಲೇಜುಗಳಲ್ಲಿ ಎಂಬ ಪೂರ್ವಗ್ರಹವನ್ನು ಮೊದಲು ತೊಡೆದುಹಾಕಬೇಕಾಗಿದೆ. ಎಲ್ಲಾ ವರ್ಗದ ವಿದ್ಯಾರ್ಥಿಗಳ ಹಿತರಕ್ಷಣೆ ಮುಖ್ಯವಾಗಬೇಕು. ಕ್ಯಾಂಪಸ್ ಸಂದರ್ಶನ ಪ್ರಕ್ರಿಯೆಯನ್ನು ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೂ ವಿಸ್ತರಿಸಬೇಕು. ಕಂಪನಿಗಳು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಮುಕ್ತ ಮನಸ್ಸಿನಿಂದ ನೇಮಕಾತಿ ಪ್ರಕ್ರಿಯೆ ನಡೆಸುವಂತಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT