ಗುರುವಾರ , ಜೂನ್ 24, 2021
24 °C
ರೂಪಾಂತರಿ ಕೊರೊನಾ ಕುರಿತ ಕೇಜ್ರಿವಾಲ್‌ ಹೇಳಿಕೆಯನ್ನು ಸಿಂಗಪುರ ಗಂಭೀರವಾಗಿ ಪರಿಗಣಿಸಿದೆ

ಸಂಗತ: ಸುಳ್ಳು ಸುದ್ದಿ ಮತ್ತು ಸಿಂಗಪುರದ ಸೂತ್ರ

ಸುಕ್ಷೀರಸಾಗರ Updated:

ಅಕ್ಷರ ಗಾತ್ರ : | |

Prajavani

ವಿವಾದಗಳಿಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೂ ಸದಾ ಹತ್ತಿರದ ನಂಟು. ಬುಧವಾರ ಅವರು ಮಾಡಿದ ಒಂದು ಟ್ವೀಟ್ ವಿದೇಶಾಂಗ ಸಚಿವಾಲಯವನ್ನು ಮುಜುಗರಕ್ಕೆ ಈಡು ಮಾಡಿದೆ.

‘ಸಿಂಗಪುರದಲ್ಲಿ ಉದ್ಭವವಾಗಿರುವ ಕೊರೊನಾ-19ರ ಹೊಸ ರೂಪಾಂತರಿಯು ಚಿಕ್ಕ ಮಕ್ಕಳಿಗೆ ಅತ್ಯಂತ ಅಪಾಯಕಾರಿಯೆಂದು ಗೊತ್ತಾಗಿದೆ. ಮೂರನೆಯ ಅಲೆಯ ರೂಪದಲ್ಲಿ ಅದು ದೆಹಲಿಯನ್ನು ಸೇರಬಹುದು. ಕೇಂದ್ರ ಸರ್ಕಾರಕ್ಕೆ ನನ್ನ ಕೋರಿಕೆಯೇನೆಂದರೆ, ಸಿಂಗಪುರದೊಂದಿಗಿನ ಎಲ್ಲ ವಿಮಾನ ಸಂಪರ್ಕ ಸೇವೆಗಳನ್ನು ತಕ್ಷಣವೇ ರದ್ದು ಮಾಡಬೇಕು. ಹಾಗೆಯೇ ಆದ್ಯತೆಯ ಮೇರೆಗೆ ಮಕ್ಕಳಿಗೊಂದು ಬದಲಿ ವ್ಯಾಕ್ಸಿನ್ ಅಭಿವೃದ್ಧಿಯತ್ತ ಕೆಲಸ ಮಾಡಬೇಕು’.

ಇದು ಪ್ರಕಟವಾದ ಕೆಲವೇ ಹೊತ್ತಿನಲ್ಲಿ ಜೇನುಗೂಡಿಗೆ ಕಲ್ಲೆಸೆದಂತಾಯಿತು. ಮುಖ್ಯಮಂತ್ರಿಯೊಬ್ಬರ ಹೇಳಿಕೆಯು ಕೇಂದ್ರ ಸರ್ಕಾರದ ಅಧಿಕೃತ ಅಭಿಪ್ರಾಯವಲ್ಲ ಎಂಬ ಸ್ಪಷ್ಟನೆಯನ್ನು ವಿದೇಶಾಂಗ ಸಚಿವರು ಸಿಂಗಪುರ ಸರ್ಕಾರಕ್ಕೆ ನೀಡಬೇಕಾಯಿತು.

ಸಿಂಗಪುರ ಸರ್ಕಾರವು ಕೇಜ್ರಿವಾಲರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಈ ಹಿಂದೆಯೇ ಅಲ್ಲಿ ಅಂಗೀಕೃತವಾಗಿದ್ದ ‘ಪ್ರೊಟೆಕ್ಷನ್ ‍ಫ್ರಮ್ ಆನ್‍ಲೈನ್ ಫಾಲ್ಸ್‌ಹುಡ್ಸ್ ಆ್ಯಂಡ್ ಮ್ಯಾನಿಪ್ಯುಲೇಶನ್ ಆ್ಯಕ್ಟ್’ (ಪಿಒಎಫ್‌ಎಂಎ) ಅಡಿಯಲ್ಲಿನ ‘ತಪ್ಪುಮಾಹಿತಿ ಪ್ರಸರಣಾ ವಿರೋಧಿ ಕಾನೂನನ್ನು’ ಗುರುವಾರದಿಂದ ಜಾರಿಗೆ ತಂದಿದೆ. ಅಲ್ಲಿನ ಸ್ವಾಸ್ಥ್ಯ ಸಚಿವಾಲಯವು ಪಿಒಎಫ್‌ಎಂಎ ಕಚೇರಿಯ ಮೂಲಕ ಫೇಸ್‍ಬುಕ್, ಟ್ವಿಟರ್‌ನಂಥ ಸಾಮಾಜಿಕ ಜಾಲತಾಣಗಳಿಗೆ ‘ಸಾಮಾನ್ಯ ತಿದ್ದುಪಡಿ ಮಾರ್ಗದರ್ಶಿ’ಗಳನ್ನು ಆದೇಶಿಸಿದೆ. ಅದರ ಅನ್ವಯ, ಸಿಂಗಪುರದಲ್ಲಿನ ಸಾಮಾಜಿಕ ಜಾಲತಾಣದ ಬಳಕೆದಾರರು ಕಳುಹಿಸುವ ಸಂದೇಶಗಳ ಜತೆಯಲ್ಲಿ ‘ಕೋವಿಡ್-19ರ ಸಿಂಗಪುರ ರೂಪಾಂತರಿಗಳು ಯಾವುವೂ ಇಲ್ಲ. ಮಕ್ಕಳಿಗೆ ತೀವ್ರ ಅಪಾಯಕಾರಿಯಾಗುವಂಥ ಕೋವಿಡ್-19 ರೂಪಾಂತರಿ ಇದೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ’ ಎಂಬ ಸಂದೇಶವು ಸ್ವಯಂಚಾಲಿತವಾಗಿ ಸೇರ್ಪಡೆಯಾಗುತ್ತದೆ.

ಆನ್‍ಲೈನ್‍ ಮಾಧ್ಯಮಗಳ ಮೂಲಕ ಸುಲಭವಾಗಿ ಸುಳ್ಳು ಅಥವಾ ಕುಚೋದ್ಯದ ಸುದ್ದಿಗಳನ್ನು ತ್ವರಿತಗತಿಯಲ್ಲಿ ಪ್ರಸರಿಸಬಹುದು. ಇಂಥ ಸುದ್ದಿಗಳಿಗೆ ಕಡಿವಾಣ ಹಾಕುವುದು ಅಷ್ಟು ಸುಲಭವಲ್ಲ. ಈ ಕುರಿತಂತೆ ಐರೋಪ್ಯ ಒಕ್ಕೂಟವು ಬಹಳ ಹಿಂದೆಯೇ ‘ಸುಳ್ಳು ಸುದ್ದಿ ಹಾಗೂ ಆನ್‍ಲೈನ್ ತಪ್ಪು ಮಾಹಿತಿ’ ಪ್ರಸರಣದ ವಿರುದ್ಧ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕೆಂದು ನಿರ್ಧರಿಸಲು ಉನ್ನತ ಮಟ್ಟದ ಪರಿಣತ ಸಮಿತಿಯೊಂದನ್ನು ನೇಮಕ ಮಾಡಿತ್ತು. ಆ ಸಮಿತಿಯು 2018ರ ಜನವರಿಯಲ್ಲಿ ಕೆಲವೊಂದು ಶಿಫಾರಸುಗಳನ್ನು ಮಾಡಿತ್ತು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ– 1. ಆನ್‍ಲೈನ್‍ನಲ್ಲಿ ಪ್ರಕಟವಾಗುವ ಸುದ್ದಿಗಳ ಪಾರದರ್ಶಕತೆಯನ್ನು ಹೆಚ್ಚಿಸುವುದು. 2. ತಪ್ಪು ಮಾಹಿತಿ ಪ್ರಸರಣಕ್ಕೆ ಕಡಿವಾಣ ಹಾಕಲು ಮಾಧ್ಯಮ ಹಾಗೂ ಮಾಹಿತಿ ಸಾಕ್ಷರತೆಯನ್ನು ಪ್ರೋತ್ಸಾಹಿಸುವುದು. 3. ತಪ್ಪು ಮಾಹಿತಿಯನ್ನು ತಕ್ಷಣವೇ ಗುರುತಿಸಬಲ್ಲ ತಂತ್ರಜ್ಞಾನ ಸಲಕರಣೆಗಳನ್ನು ಆನ್‍ಲೈನ್ ಮಾಧ್ಯಮದ ಬಳಕೆದಾರರು ಹಾಗೂ ಪತ್ರಕರ್ತರಿಗೆ ನೀಡುವುದು. 4. ಯುರೋಪಿಯನ್ ಸುದ್ದಿ ಮಾಧ್ಯಮದ ವೈವಿಧ‍್ಯ ಹಾಗೂ ಸುಸ್ಥಿರವಾದ ವಿಶಿಷ್ಟ ಸೊಗಡನ್ನು ಕಾಪಾಡಿಕೊಳ್ಳುವುದು. 5. ತಪ್ಪು ಮಾಹಿತಿಗಳಿಂದ ಯುರೋಪ್‍ನ ಮೇಲಾಗಿರುವ ದುಷ್ಪರಿಣಾಮಗಳ ಕುರಿತಂತೆ ಸಂಶೋಧನೆಗಳನ್ನು ಪ್ರೋತ್ಸಾಹಿಸುವುದು.

ಯುರೋಪ್ ಅಥವಾ ಅಮೆರಿಕ ಹೋರಾಡಬೇಕಿರುವುದು ಅನ್ಯ ದೇಶಗಳಿಂದ ಪ್ರಸರಣವಾಗುವ ಸುಳ್ಳು ಸುದ್ದಿ ಅಥವಾ ತಪ್ಪು ಮಾಹಿತಿಗಳ ಪ್ರಸರಣದ ವಿರುದ್ಧ. ಆದರೆ ಭಾರತದಲ್ಲಿ ಇದು ಆಂತರಿಕ ಸಮಸ್ಯೆ ಯಾಗಿಯೇ ಹೆಚ್ಚು ಕಾಡುತ್ತಿದೆ. ರಾಜಕೀಯ ಪಕ್ಷಗಳ ಸಿದ್ಧಾಂತಗಳಿಗೆ ಕಟಿಬದ್ಧರಾಗಿರುವ ಸ್ವಯಂ ಸೇವಕರ ತಂಡಗಳು ನಿರಂತರವಾಗಿ ಕಾರ್ಯವಹಿಸುತ್ತಿವೆ. ಜತೆಗೆ ರಾಜಕೀಯ ಪಕ್ಷಗಳೇ ‘ಅಧಿಕೃತ’ (?) ಮಾಹಿತಿ ತಂತ್ರಜ್ಞಾನ ಸೆಲ್‍ಗಳ ಮೂಲಕ ತಮ್ಮ ವಿರೋಧಿಗಳನ್ನು ಹಣಿಯುವಂಥ ಸುದ್ದಿಗಳ ಪ್ರಸರಣದಲ್ಲಿ ತೊಡಗಿಕೊಂಡಿವೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ– 2000ದ ಅಡಿಯಲ್ಲಿ ಕಂಪ್ಯೂಟರ್ ಸೌಕರ್ಯ ಅಥವಾ ಸಂಪರ್ಕ ಸಾಧನದ ಮೂಲಕ ಸುಳ್ಳು ಸುದ್ದಿಯ ಪ್ರಸರಣವನ್ನು ತಡೆಗಟ್ಟಬಲ್ಲ ಸೆಕ್ಷನ್ 66ಎ ಜಾರಿಗೆ ಬರುವುದರಲ್ಲಿತ್ತು. ಯಾರಿಗಾದರೂ ಕೋಪ ತರಿಸುವ, ತೊಂದರೆಗೀಡು ಮಾಡುವ, ಅಪಾಯ ತಂದೊಡ್ಡುವ, ತಡೆ ಹಾಕುವ, ಅವಮಾನಿಸುವ, ಗಾಸಿ ಮಾಡುವ, ದ್ವೇಷ ಸಾಧಿಸುವ, ಹಗೆತನದ, ಕ್ರಿಮಿನಲ್ ಉದ್ದೇಶದ ಸುದ್ದಿಗಳನ್ನು ಸುಳ್ಳೆಂದು ಗೊತ್ತಿದ್ದರೂ ಪಸರಿಸುವ ಕಿಡಿಗೇಡಿಗಳ ವಿರುದ್ಧ ಇದನ್ನು ಬಳಸಬಹುದಿತ್ತು. ಆದರೆ ಸುಪ್ರೀಂ ಕೋರ್ಟ್ ಇದನ್ನು ಅಸಾಂವಿಧಾನಿಕವೆಂದು ತಳ್ಳಿಹಾಕಿದ ಮೇಲೆ, ಸಾಮಾಜಿಕ ಜಾಲತಾಣಗಳ ದುರ್ಬಳಕೆಯನ್ನು ತಡೆಗಟ್ಟುವ ನಿಯಮಗಳ ಕರಡನ್ನು ಕೇಂದ್ರ ಸರ್ಕಾರ 2018ರಲ್ಲಿ ಸಿದ್ಧಪಡಿಸಿತು.

2019ರ ಚುನಾವಣೆಗಳ ಸಂದರ್ಭದಲ್ಲಿ ಅಭ್ಯರ್ಥಿಗಳ ಸಾಮಾಜಿಕ ಜಾಲತಾಣ ಖಾತೆಗಳ ವಿವರಗಳನ್ನು ತನಗೆ ಕಡ್ಡಾಯವಾಗಿ ನೀಡಬೇಕೆಂದು ಚುನಾವಣಾ ಆಯೋಗ ಆದೇಶಿಸಿತ್ತು.

ಕಾನೂನಿನ ಕುಣಿಕೆಗಳು ಇಷ್ಟೆಲ್ಲಾ ಇದ್ದರೂ ಜಾಲತಾಣಗಳಲ್ಲಿ ಸಾಮಾಜಿಕ ಜವಾಬ್ದಾರಿ ಮರೆತು ಅರಿವಿದ್ದೋ ಅರಿವಿಲ್ಲದೆಯೋ ಸುಳ್ಳು ಸುದ್ದಿಗಳು, ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು