ಸೋಮವಾರ, ಜನವರಿ 17, 2022
27 °C
ಚಿತ್ರನಟರ ಅಭಿಮಾನಿಗಳ ಅತಿರೇಕಕ್ಕೆ ಸ್ವಯಂ ಮಿತಿ ಅಗತ್ಯ

ಸಂಗತ: ಸಾವನ್ನು ಬೆನ್ನಟ್ಟುವ ಸಾವು

ಶಿವಲಿಂಗಸ್ವಾಮಿ ಎಚ್.ಕೆ. Updated:

ಅಕ್ಷರ ಗಾತ್ರ : | |

ಚಿತ್ರನಟರು, ಅಭಿಮಾನಿಗಳು– ಪ್ರಾತಿನಿಧಿಕ ಚಿತ್ರ

ವರ್ಚಸ್ವಿ ನಟರ ಚಲನಚಿತ್ರವೊಂದು ಬಿಡುಗಡೆಯಾಗುತ್ತಿದೆ ಎಂದರೆ ಅಭಿಮಾನಿಗಳ ಕುತೂಹಲ ಮತ್ತು ಉದ್ವೇಗಗಳಿಗೆ ಮಿತಿಯೇ ಇರುವುದಿಲ್ಲ. ತಮ್ಮ ನೆಚ್ಚಿನ ನಾಯಕನಟನ ಬೃಹದಾಕಾರದ ಭಿತ್ತಿಚಿತ್ರಗಳ ಮೇಲೆ ಹಾಲಿನ ಅಭಿಷೇಕ ಮಾಡುವುದು, ಹೇರಳವಾಗಿ ತೆಂಗಿನಕಾಯಿ ಒಡೆಯುವಂತಹ ಕಾರ್ಯಗಳು ನಡೆಯುತ್ತವೆ. ಕೆಲವೊಮ್ಮೆ ಅತಿರೇಕಗಳೂ ಸಂಭವಿಸುತ್ತವೆ.

ವಿಷ್ಣುವರ್ಧನ್ ಅಭಿನಯದ ‘ನಾಗರಹಾವು’ ಚಿತ್ರವು 2018ರಲ್ಲಿ ಮರು ಬಿಡುಗಡೆಯಾದಾಗ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟನ ಕಟ್ಔಟ್ ಮೇಲೆ ರಕ್ತದ ಅಭಿಷೇಕ ಮಾಡಿದ್ದು ಸಹ ದಾಖಲಾಗಿದೆ. ಇದು ಸಾಲದೆಂಬಂತೆ ತಮ್ಮ ಪ್ರಿಯ ನಟರ ಆದರ್ಶಗಳನ್ನಲ್ಲದೆ, ಅವರ ಕೇಶಶೈಲಿ, ಮಾತಿನಶೈಲಿ, ಹಾವಭಾವಗಳನ್ನು ಅನುಸರಿಸುವುದಂತೂ ಸರ್ವೇ ಸಾಮಾನ್ಯ. ಅಭಿಮಾನಿಗಳ ಅತಿರೇಕದ ವರ್ತನೆಗಳಲ್ಲಿ ತೀವ್ರ ನೋವಿನ ಸಂಗತಿಯೆಂದರೆ, ತಮ್ಮ ನೆಚ್ಚಿನ ನಟನ ಸಾವು ಸಂಭವಿಸಿದರೆ ಆ ನೋವು ಭರಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುವುದು. ಪುನೀತ್‌ ರಾಜ್‌ಕುಮಾರ್ ಅಗಲಿಕೆ ಭರಿಸಲಾಗದೆ ಒಂದಿಬ್ಬರು ಆತ್ಮಹತ್ಯೆ ಮಾಡಿಕೊಂಡ ನಿದರ್ಶನ ಇತ್ತೀಚಿನದು.

ಅಭಿಮಾನಿಗಳ ಇಂತಹ ವರ್ತನೆಯನ್ನು ಮನಃಶಾಸ್ತ್ರೀಯವಾಗಿ ಹೀಗೆ ವ್ಯಾಖ್ಯಾನಿಸಬಹುದಾಗಿದೆ: ಕನ್ನಡದ ಪದ ‘ಅಭಿಮಾನಿ’ ಎಂಬುದು ಇಂಗ್ಲಿಷಿನ ಪದವಾದ ‘fan’ನಿಂದ (ಫ್ಯಾನ್‌) ಬಂದಿದೆ. ಫ್ಯಾನ್‌ ಪದದ ಹಿನ್ನೆಲೆಯನ್ನು ಗಮನಿಸಿದರೆ, ಅದರ ಅರ್ಥ fanatic (ಅಂಧಾಭಿಮಾನಿ) ಎಂದಿದೆ. ಒಟ್ಟಿನಲ್ಲಿ, ಫ್ಯಾನ್‌ ಎಂದರೆ ಕೇವಲ ಅಭಿಮಾನಿ ಎಂದಿರುವುದಿಲ್ಲ, ಅಂಧಾಭಿಮಾನಿ ಎಂದು ಸಹ ಆಗಿರುತ್ತದೆ. ರಾಷ್ಟ್ರ, ಧರ್ಮ, ಭಾಷೆ ಮುಂತಾದವುಗಳಿಗಾಗಿ ಖಾಸಗಿ ಬದುಕನ್ನು ಸಹ ತ್ಯಾಗ ಮಾಡಲು ಸಿದ್ಧರಿರುವವರನ್ನು
ಆ್ಯಕ್ಟಿವಿಸ್ಟ್ಸ್ ಎಂದು ಕರೆಯಬಹುದು. ಆದರೆ ನಟರಿಗಾಗಿ ತಮ್ಮ ಜೀವವನ್ನೇ ಕಳೆದುಕೊಳ್ಳುವುದು ಅಂಧಾಭಿಮಾನದಿಂದ.

ತಮ್ಮ ಅತಿರೇಕದ ಅಭಿಮಾನದಲ್ಲಿ ಅಂಧತ್ವ ಇದೆ ಎಂಬುದು ಫ್ಯಾನ್‌ಗಳಿಗೆ ತಿಳಿದಿರುವುದಿಲ್ಲ. ಈ ಪರಿಕಲ್ಪನೆಯನ್ನು ‘ದೈವೀಕರಿಸುವುದು’ ಅಥವಾ ‘ಹೀರೊ ವರ್ಷಿಪ್‌’ ಎನ್ನುತ್ತಾರೆ. ಈ ನಟರು ಎಂದಿಗೂ ಸಾಧಾರಣ ಜೀವಿಗಳಾಗಿರದೆ ದೈವೀಕರಣಗೊಂಡ ಮೃತ್ಯುಂಜಯರಂತೆ ಕಾಣತೊಡಗುತ್ತಾರೆ. ತಮ್ಮ ಚಿತ್ರಗಳಲ್ಲಿ ಅಜೇಯರಾಗಿ ಉಳಿಯುವ ನಟರು ಖಾಸಗಿ ಜೀವನದಲ್ಲಿ ತಮ್ಮಂತೆಯೇ ಸಾಧಾರಣ ನಶ್ವರ ಜೀವಿಗಳು ಎಂಬ ಕಲ್ಪನೆ ಅಭಿಮಾನದ ಅತಿರೇಕದಲ್ಲಿ ಅಭಿಮಾನಿಗಳಿಗೆ ಬರುವುದಿಲ್ಲ.

ಹುಟ್ಟಿದವರು ಸಾಯಲೇಬೇಕು, ನಿಜಾಂಶವನ್ನು ಒಪ್ಪಿಕೊಂಡು ನಾವು ಬದುಕು ಸವೆಸಬೇಕು ಎಂಬ ಮಾತುಗಳಿಗೆ ಅಭಿಮಾನಿಗಳ ಕಿವಿ ಸಂಪೂರ್ಣ ಕಿವುಡಾಗಿರುತ್ತದೆ. ಬೆಳ್ಳಿತೆರೆಯ ಮೇಲೆ ಅಭಿಮಾನಿಗಳ ಭಾವನಾತ್ಮಕ, ಬೌದ್ಧಿಕ ಅವಶ್ಯಕತೆಗಳನ್ನು ತಮ್ಮ ನಟನೆ, ಹಾವಭಾವದಂಥ ಕೌಶಲಗಳಿಂದ ಪೂರೈಸುವ ನಟರು, ಅಭಿಮಾನಿಗಳಿಗೆ ತಮ್ಮ ಜೀವನದ ಬಗ್ಗೆ ಮಾನಸಿಕ ತೃಪ್ತಿ ತಂದುಕೊಟ್ಟಿರುತ್ತಾರೆ. ಈ ಕಾರಣದಿಂದ ಅಂತಹ ನಟರ ಸಾವಿನಿಂದ ಅಭಿಮಾನಿಗಳು ಅನುಭವಿಸುವ ದುಃಖಕ್ಕೆ ಸಾಂತ್ವನ ಹೇಳಲು ಮಾನವನಿರ್ಮಿತ ಭಾಷೆಗಳು ವಿಫಲವಾಗುತ್ತವೆ.

ನಿಜಜೀವನದ ಬವಣೆಯಲ್ಲಿ ಬೇಸತ್ತ ಮನಸ್ಸುಗಳಿಗೆ ಬೆಳ್ಳಿತೆರೆಯ ಮೇಲೆ ಕಾಣುವ ನಟರು ಎಲ್ಲ ಸಮಸ್ಯೆಗಳಿಗೆ ಪರಿಹಾರದ ಮೂಲವಾಗಿ ಕಾಣುತ್ತಿರುತ್ತಾರೆ. ಇದರ ಕಾರಣವು ಕತೆಗಳನ್ನು ಹುಟ್ಟುಹಾಕುವ ನಮ್ಮ ಸಂಪ್ರದಾಯದಲ್ಲಿಯೇ ಇದೆ. ಜೀವನದ ವಿವಿಧ ಮುಖಗಳನ್ನು ಅರ್ಥೈಸಲು ಬಹಳ ಹಿಂದಿನಿಂದಲೇ ಕತೆ ಹೇಳುವ ಅಭ್ಯಾಸ ಎಲ್ಲ ಸಂಸ್ಕೃತಿಗಳಲ್ಲಿ ಇದೆ. ಈ ಕತೆಗಳಲ್ಲಿ ಜೀವನದ ಸಮಸ್ಯೆ ಕುರಿತು ಚರ್ಚೆಯಾದರೆ ಅದಕ್ಕೆ ಪರಿಹಾರವಾಗಿ ಕಥಾನಾಯಕನ ಆದರ್ಶಪ್ರಾಯ ಬದುಕು ಕಂಡುಬರಬಹುದು. ಕೆಲವೊಮ್ಮೆ ಜೀವನದಲ್ಲಿ ಎಲ್ಲರಿಗೂ ಎದುರಾಗಬಹುದಾದ ಖಳನಾಯಕರನ್ನು ನಾಯಕನು ತನ್ನ ಸಾಮರ್ಥ್ಯದಿಂದ ಸದೆಬಡಿದು ಪರಿಹಾರ ನೀಡಬಹುದು.

ಇಂತಹ ಕಥಾನಾಯಕರು ಸಾಹಿತ್ಯದಲ್ಲಾಗಲೀ ಬೆಳ್ಳಿತೆರೆಯಲ್ಲಾಗಲೀ ಕಂಡುಬಂದಾಗ ಕೆಲವು ಅಭಿಮಾನಿಗಳು ಅವರನ್ನು ತಮ್ಮ ಹೃದಯಾಂತರಾಳದಲ್ಲಿ ಇಟ್ಟುಕೊಂಡು ಪೂಜಿಸುತ್ತಾರೆ. ಕತೆಯ ಕರ್ತೃ ತನ್ನ ಕತೆಯ ಮೂಲಕ ಸಾಮಾಜಿಕ ಬದಲಾವಣೆ ಅಥವಾ ಬೆಳವಣಿಗೆ ಆಗಲಿ ಎಂಬ ಇಚ್ಛೆಯನ್ನು ಹೊಂದಿರುತ್ತಾನೆ. ಕಥಾನಾಯಕನ ಪಾತ್ರ ನೋವು, ತ್ಯಾಗ, ಪ್ರೀತಿ, ಧೈರ್ಯ ಮುಂತಾದ ಅಂಶಗಳನ್ನು ಪ್ರತಿನಿಧಿಸುವುದು ಜೀವನದ ಬಗ್ಗೆ ವಿವಿಧ ಅರ್ಥಗಳನ್ನು ಸೃಷ್ಟಿಸಲು ಮಾತ್ರ. ಆದರೆ ತಮ್ಮ ನೆಚ್ಚಿನ ನಟರನ್ನು ದೈವೀಕರಿಸುವ ಅಭಿಮಾನಿಗಳು ಅವರ ಚಿತ್ರಗಳಲ್ಲಿ ಭಾವನಾತ್ಮಕವಾಗಿ ಲೀನವಾಗಿ ಬುದ್ಧಿಯನ್ನು ಅಥವಾ ತರ್ಕವನ್ನು ಬದಿಗೊತ್ತಿರುತ್ತಾರೆ.

ಈ ಸಂದರ್ಭದಲ್ಲಿ ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕಾದ ಸಂಗತಿಯೆಂದರೆ, ಒಬ್ಬ ನಟ ತನ್ನ ಅಭಿಮಾನಿಗಳ ಒಳಿತನ್ನು ಮಾತ್ರ ಬಯಸುತ್ತಾನೆ. ತನ್ನ ಸಾವಿನಲ್ಲಿಯೂ ತನ್ನ ಅಭಿಮಾನಿಗಳ ಬಾಳು ಬಂಗಾರವಾಗಲಿ ಎಂದು ಬಯಸಿ ಅಮರನಾಗಿರುವ ನಟ ಎಲ್ಲರಿಗೂ ‘ಪ್ರೇರಣೆ’ಯಾಗಿರುತ್ತಾನೆಯೇ ಹೊರತು ಸಾವು ತರುವ ಮಾರಕ ‘ಪ್ರಭಾವಿ’ಯಾಗಿರುವುದಿಲ್ಲ. ಹೀಗಾಗಿ ಅಭಿಮಾನಿಗಳು ಭಾವನೆಗಳ ಅತಿರೇಕಕ್ಕೆ ಒಳಗಾಗದೆ ತಾರ್ಕಿಕ ಚಿಂತನೆಯ ಮೂಲಕ ನಟರ ಬದುಕನ್ನು ಸಂಭ್ರಮಿಸುವುದನ್ನು ಕಲಿಯಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು