ಮಂಗಳವಾರ, ಅಕ್ಟೋಬರ್ 22, 2019
21 °C

ಅಮೆಜಾನ್‌ ಉರಿಯುತ್ತಿದೆ: ಸಂಕಟವಾಗದೇ?

Published:
Updated:
Prajavani

ಬ್ರೆಜಿಲ್ ದೇಶದ ಅಮೆಜಾನ್ ಕಾಡುಗಳು ಹೊತ್ತಿ ಉರಿಯುತ್ತಿರುವ ಬಗ್ಗೆ ಕಳೆದ ಹಲವು ದಿನಗಳಿಂದ ವರದಿಗಳು ಬರುತ್ತಿವೆ. ಬ್ರೆಜಿಲ್ ಸರ್ಕಾರ ಇದನ್ನು ತಮ್ಮ ‘ಆಂತರಿಕ ವಿಚಾರ’ವೆಂದು ಕರೆದುಕೊಂಡು ಜಾಗತಿಕ ಕಳವಳವನ್ನು ಟೀಕಿಸುತ್ತಲೇ ಬಂದಿತ್ತು. ಆದರೆ ಭೂಮಿಯ ‘ಶ್ವಾಸಕೋಶ’ವೆಂದೇ ಪರಿಗಣಿಸಲಾಗುವ ಅಮೆಜಾನ್ ಕಾಡುಗಳು ಕಣ್ಣೆದುರೇ ಬೂದಿಯಾ ಗುತ್ತಿರುವುದನ್ನು ಕೇವಲ ಬ್ರೆಜಿಲ್‌ನ ಆಂತರಿಕ ವಿಚಾರವೆಂದು ಒಪ್ಪಿಕೊಂಡು ಸುಮ್ಮನಿರುವುದು ಬಹುಶಃ ಯಾವುದೇ ದೇಶಕ್ಕೂ ಸಾಧ್ಯವಿಲ್ಲ. ಪರಿಸರ ಶಾಸ್ತ್ರಜ್ಞರು ಇದನ್ನು ಭಯಂಕರ ಪರಿಸರ ವಿನಾಶ ಎಂದೇ ಪರಿಗಣಿಸಿದ್ದಾರೆ.

ಬ್ರೆಜಿಲ್‌ನ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಪರಿಸರ ಅಧ್ಯಯನಕಾರರು ಅಮೆಜಾನ್ ಕಾಡುಗಳ ದುರಂತಕ್ಕೆ ಅಲ್ಲಿನ ಸರ್ಕಾರದ ಪರಿಸರ ನೀತಿಗಳನ್ನು ಟೀಕಿಸುತ್ತಿದ್ದಾರೆ. ಆದರೆ ಅಧ್ಯಕ್ಷ ಜೈರ್ ಬೊಲ್ಸೊನ್ಯಾರೊ, ಇದು ಪ್ರತಿ ಬೇಸಿಗೆಯಲ್ಲಿ ಉಂಟಾಗುವ ಸಾಮಾನ್ಯ ಬೆಂಕಿಯೆಂದೇ ಇತ್ತೀಚಿನವರೆಗೂ ವಾದಿಸುತ್ತಾ ಬಂದಿದ್ದರು. ಅಂತರರಾಷ್ಟ್ರೀಯ ಒತ್ತಡ ಹೆಚ್ಚಾದ ಮೇಲೆ ಅವರು ಒಂದಷ್ಟು ಪರಿಹಾರ ಕ್ರಮಗಳನ್ನು ಪ್ರಕಟಿಸಿದ್ದಾರೆ. ಇವು ಕೇವಲ ಅರೆಮನಸ್ಸಿನ ಕ್ರಮಗಳು ಎಂಬುದು, ಅಧ್ಯಕ್ಷರ ಪರಿಸರ ಕುರಿತಾದ ಧೋರಣೆಗಳನ್ನು ಗಮನಿಸುತ್ತಲೇ ಬಂದಿರುವವರ ಅಭಿಪ್ರಾಯ. ಏಕೆಂದರೆ, ಅಧ್ಯಕ್ಷರಾಗಿ ಆಯ್ಕೆಯಾದಾಗಿನಿಂದಲೂ ಜೈರ್‌, ಅಮೆಜಾನಿನ ಪರಿಸರ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳನ್ನು, ಪರಿಸರ ತಜ್ಞರನ್ನು ಟೀಕಿಸುತ್ತಲೇ ಬಂದಿದ್ದಾರೆ.

ಸ್ವಯಂ ಸೇವಾ ಸಂಸ್ಥೆಗಳಿಗೆ ಬರುತ್ತಿದ್ದ ಜಾಗತಿಕ ಹಣಕಾಸು ನೆರವು ನಿಂತ ಕಾರಣ ತಮ್ಮ ಮೇಲೆ ಮುನಿಸಿಕೊಂಡು ಆ ಸಂಸ್ಥೆಗಳೇ ಅಮೆಜಾನ್ ಕಾಡಿಗೆ ಬೆಂಕಿ ಹಚ್ಚುತ್ತಿವೆ ಎಂದು ಅಧ್ಯಕ್ಷರು ಆರೋಪಿಸಿದ್ದರು. ಈ ನಿರಾಧಾರ ಆರೋಪದಿಂದ ಪರಿಸರ ಚಿಂತಕರ ಆಕ್ರೋಶಕ್ಕೂ ತುತ್ತಾಗಿದ್ದರು. ಅಮೆಜಾನ್ ಕಾಡುಗಳ ಸಂರಕ್ಷಣೆ ತಮ್ಮ ಸರ್ಕಾರದ ಮುಖ್ಯ ಆದ್ಯತೆ ಆಗುವುದಿಲ್ಲ ಎಂದು ಅಧಿಕಾರ ವಹಿಸಿಕೊಂಡ ಹೊಸತರಲ್ಲೇ ಅವರು ಹೇಳಿದ್ದರು. ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಮಾತುಗಳನ್ನೇ ಆಡುತ್ತಾ ಬಂದಿದ್ದ ಜೈರ್‌, ಅಮೆಜಾನ್ ಕಾಡುಗಳನ್ನು ಬಹುರಾಷ್ಟ್ರೀಯ ಕಂಪನಿಗಳ, ಗಣಿಗಾರಿಕಾ ಉದ್ಯಮಿಗಳ ಕೃಪಾಕಟಾಕ್ಷಕ್ಕೆ ಒಪ್ಪಿಸಿದರು. ಪರಿಸರ ಸಂರಕ್ಷಣೆಯ ನೀತಿಗಳನ್ನು ಕಂಪನಿಗಳ ಅನುಕೂಲಕ್ಕೆ ತಕ್ಕಂತೆ ಸಡಿಲಿಸಿದರು. ಅರಣ್ಯ ಒತ್ತುವರಿ ಮಾಡಿಕೊಳ್ಳುವ ದೊಡ್ಡ ರೈತರಿಗೆ ಹಾಗೂ ಮರಗಳನ್ನು ಕಡಿಯುವವರಿಗೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನು ತಗ್ಗಿಸಿದರು.

ದೇಶದ ಬಲಾಢ್ಯ ಖಾಸಗಿ ಕೃಷಿ ವ್ಯಾಪಾರ ವಲಯದ ಕಟ್ಟಾ ಬೆಂಬಲಿಗರಾಗಿರುವ ಜೈರ್‌, ಪರಿಸರ ಬದಲಾವಣೆಯ ಕುರಿತು ಕೆಲವು ಬಲಪಂಥೀಯ ರಾಜಕೀಯ ನಾಯಕರು ಹೊಂದಿರುವ ನಿಲುವನ್ನೇ ಹೊಂದಿದ್ದಾರೆ. ಟೀಕಾಕಾರರು ಜೈರ್‌ ಅವರನ್ನು ‘ಬ್ರೆಜಿಲ್‌ನ ಡೊನಾಲ್ಡ್ ಟ್ರಂಪ್’ ಎಂದೇ ಕರೆಯುತ್ತಾರೆ. ಪರಿಸರ ಬದಲಾವಣೆಯ ವೈಜ್ಞಾನಿಕ ಅಧ್ಯಯನಗಳ ಕುರಿತು ಸದಾ ಅಪನಂಬಿಕೆ ಹಾಗೂ ಅಗೌರವವನ್ನೇ ತೋರುವ ಟ್ರಂಪ್ ರೀತಿ ಜೈರ್‌ ಕೂಡ ನಡೆದು ಕೊಳ್ಳುತ್ತಾರೆ. ಪರಿಸರ ಕಾರ್ಯಕರ್ತರನ್ನು ಕೊಲ್ಲುವ, ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಬದುಕನ್ನೇ ನಾಶಗೊಳಿಸುವ ಹುನ್ನಾರದಲ್ಲಿ ಗಣಿಗಾರಿಕಾ ಕಂಪನಿಗಳ ಪಾತ್ರ ದೊಡ್ಡದು. ಪರಿಸರ ಕಾರ್ಯಕರ್ತರ ಹತ್ಯೆಯಲ್ಲಿ ಬ್ರೆಜಿಲ್‌ ಮುಂಚೂಣಿಯಲ್ಲಿದೆ.

ಅಲ್ಲೆಲ್ಲೋ ದೂರದಲ್ಲಿ ಅಮೆಜಾನ್ ಕಾಡಿಗೆ ಬೆಂಕಿ ಬಿದ್ದರೆ ನಮಗೇನು ಎಂದು ನಮ್ಮಲ್ಲಿ ಕೆಲವರಿಗಾದರೂ ಅನ್ನಿಸಬಹುದು. ಆದರೆ ಪರಿಸರ ವಿನಾಶವು ಜಾಗತಿಕ ಸಮಸ್ಯೆ ಎನ್ನುವುದನ್ನು ಮರೆಯುವಂತಿಲ್ಲ. ಜಾಗತಿಕವಾಗಿ ಬಿಡುಗಡೆಯಾಗುವ ಆಮ್ಲಜನಕದಲ್ಲಿ ಶೇ 6ರಷ್ಟನ್ನು ಕೇವಲ ಅಮೆಜಾನ್ ಕಾಡುಗಳೇ ಉತ್ಪಾದಿಸುತ್ತವೆ. ಹವಾಮಾನ ಬದಲಾವಣೆ ಹಾಗೂ ಭೂಮಿಯ ತಾಪಮಾನ ಏರಿಕೆಯ ದುಷ್ಪರಿಣಾಮಗಳನ್ನು ನಿಯಂತ್ರಿಸುವಲ್ಲಿ ಈ ಕಾಡುಗಳ ದಟ್ಟ ಹಸಿರು ಹೊದಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಅಮೆಜಾನ್ ಎಂದರೆ ಒಂದಷ್ಟು ಮರಗಳಿರುವ ಕಾಡು ಮಾತ್ರವಲ್ಲ ಎಂಬುದು ಪರಿಸರಾಸಕ್ತರಿಗೆ ಚೆನ್ನಾಗಿ ಗೊತ್ತಿರುತ್ತದೆ. ಅಪರೂಪದ ಪ್ರಾಣಿ, ಪಕ್ಷಿ, ಕೀಟಗಳ ವಿಸ್ಮಯಲೋಕ ಅಮೆಜಾನ್. ಈ ಕಾಡಿನ ಸುತ್ತಮುತ್ತ ವಾಸಿಸುತ್ತಿರುವ ನಾನೂರಕ್ಕೂ ಹೆಚ್ಚು ಬುಡಕಟ್ಟುಗಳ ಲಕ್ಷಾಂತರ ಮೂಲನಿವಾಸಿಗಳ ಬದುಕು ಪ್ರಸ್ತುತ ಬಿಕ್ಕಟ್ಟಿನಿಂದ ವಿನಾಶದ ಅಂಚಿಗೆ ತಲುಪಿದೆ. ಅನೇಕ ಬುಡಕಟ್ಟು ನಾಯಕರ ಬರ್ಬರ ಹತ್ಯೆಗಳಾಗಿವೆ. ಈ ಅಪಾಯವನ್ನೂ ಲೆಕ್ಕಿಸದೆ ಸಾವಿರಾರು ಬುಡಕಟ್ಟು ಮಹಿಳೆಯರು ಬ್ರೆಜಿಲ್‌ನ ರಾಜಧಾನಿಯಲ್ಲಿ ಇತ್ತೀಚೆಗೆ ಬೃಹತ್ ಪ್ರತಿಭಟನೆ ಮಾಡಿದರು. ಅಮೆಜಾನ್‌ ಕಾಡುಗಳ ಪ್ರಸ್ತುತ ಬಿಕ್ಕಟ್ಟಿಗೆ ಪರಿಸರಕ್ಕೆ ಮಾರಕವಾದ ನೀತಿಗಳೇ ಕಾರಣ ಎಂದು ಆರೋಪಿಸಿದರು.

ಅಮೆಜಾನ್ ಕಾಡಿನ ಬೆಂಕಿಯನ್ನು ನಂದಿಸಲು ತಡವಾಗಿಯಾದರೂ ಒಂದಷ್ಟು ಪರಿಹಾರ ಕ್ರಮಗಳನ್ನು ಬ್ರೆಜಿಲ್ ಸರ್ಕಾರ ತೆಗೆದುಕೊಂಡಿದೆ. ವಿಶೇಷ ವಿಮಾನಗಳಿಂದ ಸಾವಿರಾರು ಲೀಟರ್ ನೀರನ್ನು ಕಾಡಿಗೆ ಸುರಿಯಲಾಗುತ್ತಿದೆ. ಅರಣ್ಯನಾಶ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳು ವುದಾಗಿ ಸರ್ಕಾರ ಎಚ್ಚರಿಸಿದೆ. ಆದರೆ ಬಹುರಾಷ್ಟ್ರೀಯ ಕಂಪನಿಗಳ ಲಾಭದ ಹಪಹಪಿಯ ಎದುರು ಅಮೆಜಾನ್ ಕಾಡುಗಳನ್ನು ಉಳಿಸಿಕೊಳ್ಳಲು ಸಾಧ್ಯವೇ ಎಂಬುದು ಈಗ ಉಳಿದಿರುವ ಯಕ್ಷಪ್ರಶ್ನೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)