ಶನಿವಾರ, ನವೆಂಬರ್ 26, 2022
22 °C
ಸುರಕ್ಷಿತವೂ ಪೌಷ್ಟಿಕವೂ ಆದ ಆಹಾರ ಸವಿಯದೆ ದಂಡವಾಗುವುದನ್ನು ಪ್ರಕೃತಿ ಕೂಡ ಕ್ಷಮಿಸದು

ಸಂಗತ: ಆಹಾರ ಪದಾರ್ಥಕ್ಕೇಕೆ ‘ತೀರು ತೇದಿ’?

ಯೋಗಾನಂದ Updated:

ಅಕ್ಷರ ಗಾತ್ರ : | |

Prajavani

ವಿಶ್ವ ಕುಟುಂಬದಲ್ಲಿ ಎಲ್ಲರಿಗೂ ಸಾಕಾಗುವಷ್ಟು ಪೌಷ್ಟಿಕ ಆಹಾರ ಉತ್ಪಾದನೆಯಾಗುತ್ತಿದೆ. ಹಸಿವು ಕಾಡಿದ್ದರೆ ಅದು ಆಹಾರ ಹಾನಿ, ದುಂದು, ದುರ್ವ್ಯಯದಿಂದ. ಆಹಾರ ವ್ಯರ್ಥಗೊಳಿಸುವುದರಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳದ್ದೇ ಸಿಂಹಪಾಲು. ಅವು ವರ್ಷಕ್ಕೆ ಒಟ್ಟು ಸುಮಾರು 23 ಕೋಟಿ ಟನ್‍ಗಳಷ್ಟು ಆಹಾರ ಪೋಲಾಗಿಸುತ್ತವೆ. ಇನ್ನು ಅಭಿವೃದ್ಧಿಶೀಲ ದೇಶಗಳಲ್ಲಿ ಯುಕ್ತ ತಂತ್ರಜ್ಞಾನದ ಸೌಲಭ್ಯ ಕಡಿಮೆ. ಹೊಲಗದ್ದೆಗಳಲ್ಲೇ ಆಹಾರದ ನಷ್ಟ, ಪೋಲು ಆರಂಭ. ಸಮಯಕ್ಕೆ ತಕ್ಕಂತೆ ಕಟಾಯಿಸಲಾಗದೆ, ಸಾಗಿಸಲಾಗದೆ, ಸಂಸ್ಕರಿಸಲಾಗದೆ ಕೈಗೆ ಬಂದಿದ್ದು ಬಾಯಿಗೆ ಬಾರದಂತಹ ಸ್ಥಿತಿ. ಹಾನಿಯ ಶೇಕಡ 40ರಷ್ಟು ಸುಗ್ಗಿಪೂರ್ವ ಮತ್ತು ಸಂಸ್ಕರಣಾ ಹಂತಗಳಲ್ಲಿ ಸಂಭವಿಸುತ್ತದೆ.

ಜಗತ್ತಿನಲ್ಲಿ ಉತ್ಪಾದನೆಯಾಗುವ, ಮನುಷ್ಯ ಸೇವನೆಗೆ ಯೋಗ್ಯವಾದ ಆಹಾರದ ಮೂರನೆಯ ಒಂದು ಭಾಗ ಹಾನಿಗೀಡಾಗುತ್ತಿದೆ ಅಥವಾ ವ್ಯರ್ಥವಾಗುತ್ತಿದೆ. ಹಣ್ಣು, ತರಕಾರಿ, ಮೊಟ್ಟೆ, ಮಾಂಸ, ಹಾಲು, ಸಾಗರ ಆಹಾರ ಹಾಗೂ ದವಸ–ಧಾನ್ಯಗಳು ಸೇರಿದಂತೆ ವರ್ಷಕ್ಕೆ ಒಟ್ಟು 130 ಕೋಟಿ ಟನ್ ಆಹಾರ ಹಾಳಾಗುತ್ತಿದೆ. ಇದರ ಮೌಲ್ಯ ಅಂದಾಜು ₹ 80 ಲಕ್ಷ ಕೋಟಿ!

ಆಹಾರ ಹಾನಿ ಮತ್ತು ಪೋಲು ಒಂದು ಜ್ವಲಂತ ಜಾಗತಿಕ ಸಮಸ್ಯೆ. ಸುರಕ್ಷಿತವೂ ಪೌಷ್ಟಿಕವೂ ಆದ ಆಹಾರ ಸವಿಯದೆ ದಂಡವಾಗುವುದನ್ನು ಪ್ರಕೃತಿ ಕೂಡ ಕ್ಷಮಿಸದು. ಕೃಷಿಗೆ ನೀರು, ಗೊಬ್ಬರ, ವಿದ್ಯುತ್‌ನಂತಹ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸದೆ ಆಹಾರ ಪದಾರ್ಥ ಉತ್ಪಾದನೆ ಪ್ರಮಾಣ ಕುಂಠಿತವಾಗಬಹುದು. ‘ಹೊಲ ನೋಡದೆ ಹೋಯ್ತು’ ಎನ್ನುವುದು ಆಡುಮಾತು.

ದುರ್ದೈವವೆಂದರೆ, ಗ್ರಾಹಕರೇ ಬಹುತೇಕ ಈ ದಿಸೆಯಲ್ಲಿ ಕಟಕಟೆಯಲ್ಲಿ ನಿಲ್ಲಲರ್ಹರಾಗಿದ್ದಾರೆ. 2030ರ ವೇಳೆಗೆ ಜಾಗತಿಕವಾಗಿ ಆಹಾರದ ಪೋಲನ್ನು ಶತಾಯಗತಾಯ ಶೂನ್ಯಕ್ಕಿಳಿಸಬೇಕೆಂದು ವಿಶ್ವಸಂಸ್ಥೆ ಪಣತೊಟ್ಟಿದೆ. 2050ರ ವೇಳೆಗೆ ಈಗಿರುವ ಜನಸಂಖ್ಯೆಯ ಜೊತೆಗೆ 200 ಕೋಟಿ ಮಂದಿ ಸೇರುತ್ತಾರೆ. ಹೊಸಬರಿಗೆ ಆಹಾರ ಒದಗಿಸಲು ಈಗಿನ ಲಭ್ಯ ಆಹಾರಕ್ಕಿಂತ ಹೆಚ್ಚು ಉತ್ಪಾದಿಸಲೇಬೇಕಾಗುತ್ತದೆ. ನಮ್ಮ ಜೀವನಶೈಲಿ ಸುಧಾರಿಸಬೇಕಾದುದು ಅನಿವಾರ್ಯ. ತಟ್ಟೆಯಲ್ಲಿ ಅಲ್ಪಸ್ವಲ್ಪವೂ ಬಿಡದಂತೆ ಉಂಡು, ನಾವೀಗಾಗಲೇ ವ್ಯಯಿಸಿರುವ ಹಣ ಉಳಿಸಿದ್ದೇವೆಂಬ ಸಮಾಧಾನ ನಮ್ಮದಾದರೆ ಎಷ್ಟು ಸೊಗಸು. ನಮ್ಮ ಆಹಾರ ಸೇವನೆ ನಾಜೂಕಾದರೆ ತಿನಿಸು ಪೊಟ್ಟಣಗಳ ಮೇಲೆ ‘ತೀರು ತೇದಿ’ (expiry date) ನಮೂದಿನ ಅಗತ್ಯವೇ ಇರದು. ವೃಥಾ ಅಮೂಲ್ಯ ಆಹಾರ ದ್ರವ್ಯಗಳ ಇಟ್ಟಾಟ ಸಲ್ಲದು. ಆಹಾರ ನಾವು ಸೃಷ್ಟಿಸಲಾಗದು.

ಭಾರತೀಯ ಪರಂಪರೆಯಲ್ಲಿ ಆಹಾರವು ದೈವವೆಂಬ ನಂಬಿಕೆಯಿದೆ. ಆಹಾರವನ್ನು ಪ್ರೀತಿಸಬೇಕು, ಅದನ್ನು ಬಳಸದೆ ದಂಡ ಮಾಡಬಾರದೆಂಬ ನಿಲುವು ವೈಜ್ಞಾನಿಕ, ಮಾನವೀಯ. ಆಹಾರದ ಮೌಲ್ಯ ಅದರ ಬೆಲೆಗಿಂತಲೂ ಅಧಿಕ. ಜಾಗತಿಕ ಮಟ್ಟದಲ್ಲಿ ಪ್ರತೀ ಮನೆಯಿಂದ ತಿಂಗಳಿಗೆ ಸರಾಸರಿ 27 ಕಿಲೊ ಗ್ರಾಂಗಳಷ್ಟು ಆಹಾರ ಕಸದ ರಾಶಿ ಸೇರುತ್ತದೆ. ಆಹಾರ ಬಿಸಾಡಿದರೆ ಅದು ಕೊಳೆತು ನಾರುತ್ತದೆ. ಇಂಗಾಲದ ಡೈ ಆಕ್ಸೈಡ್, ಮೀಥೇನ್, ನೈಟ್ರಸ್ ಆಕ್ಸೈಡ್‍ನಂತಹ ಹಸಿರುಮನೆ ಅನಿಲಗಳು ಭುಗಿಲೆದ್ದು ವಾತಾವರಣ ಸೇರುತ್ತವೆ. ಪರಿಣಾಮ ಗೊತ್ತೇ ಇದೆ, ಭೂಮಿ ಕಾವೇರತೊಡಗುತ್ತದೆ. ಆಹಾರ ಪದಾರ್ಥಗಳನ್ನು ಖರೀದಿಸುವ ಮುನ್ನವೇ ಯೋಜಿಸುವುದು ಅಗತ್ಯ. ಮನೆಗೆ ಒಯ್ದರೆ ಸೇವಿಸದೆ ಉಳಿಯಬಹುದೆ ಅಥವಾ ಕೊಳೆಯಬಹುದೆ ಎನ್ನುವ ಪ್ರಜ್ಞೆ ಮುಖ್ಯವಾಗುತ್ತದೆ. ಕನಿಷ್ಠತಮ ಖರೀದಿಯೆ ಪೋಲನ್ನು ತಡೆಯಲು ಪ್ರಬಲ ಅಸ್ತ್ರ.

ತರಕಾರಿಗಳು ಅಲ್ಪಸ್ವಲ್ಪ ಬಾಡಿದ್ದರೂ ಒಣಗಿದ್ದರೂ ಬಿಸಾಡದೆ ಉಪಯೋಗಿಸಬಹುದು. ಹಣ್ಣು, ತರಕಾರಿಯ ಸಿಪ್ಪೆ ಸಹ ವರ್ಜ್ಯವಲ್ಲ, ಉಪಯುಕ್ತ. ಬಂದವರಿಗೆ ಹೊಟ್ಟೆ ಬಿರಿಯುವಂತೆ ಬಡಿಸುವುದು ಯಶಸ್ವಿ ಅತಿಥಿ ಸತ್ಕಾರವೆನ್ನುವುದು ಕೇವಲ ಭ್ರಮೆ. ಅದು ಆತಿಥೇಯರು ವಿಧಿಸುವ ಶಿಕ್ಷೆ. ಎಷ್ಟು ಬೇಕೊ ಅಷ್ಟನ್ನೇ ಬಡಿಸಿ ಉಳಿದಿದ್ದನ್ನು ಬಳಿಕ ಉಪಯೋಗಿಸುವುದು ಪರಿಪಾಟವಾಗಬೇಕಿದೆ.

2019ರಲ್ಲಿ ವಿಶ್ವಸಂಸ್ಥೆಯು ಪ್ರತಿವರ್ಷ ಸೆಪ್ಟೆಂಬರ್‌ 29ನೇ ತಾರೀಕನ್ನು ‘ಅಂತರರಾಷ್ಟ್ರೀಯ ಆಹಾರ ಹಾನಿ ಮತ್ತು ವ್ಯರ್ಥ ಕುರಿತ ಜಾಗೃತಿ ದಿನ’ ಎಂದು ಆಚರಿಸಬೇಕಾಗಿ ತೀರ್ಮಾನಿಸಿತು. ಅದರಂತೆ ಅದರ ಆಶ್ರಯದಲ್ಲಿ ಇದೀಗ ಮೂರನೆಯ ಬಾರಿಗೆ ಆ ಅರ್ಥಪೂರ್ಣ ಸಡಗರಕ್ಕೆ ಅವಕಾಶವಾಗಿದೆ. ‘ಆಹಾರದ ವ್ಯರ್ಥ ನಿಲ್ಲಿಸಿ, ಜನಕ್ಕಾಗಿ ಮತ್ತು ಭೂಗ್ರಹಕ್ಕಾಗಿ’ ಎನ್ನುವುದು ಈಗ ಅಭಿಯಾನ ವಾಕ್ಯ. ನಮ್ಮ ಜನಪದರು ‘ಇದ್ರೆ ಹಿರಿಯಬ್ಬ, ಇಲ್ದಿದ್ರೆ ತಿರಿಯಬ್ಬ’ ಎಂದು ದುಂದನ್ನು ಕಟಕಿಯಾಡುತ್ತಾರೆ.

1965ರ ಸುಮಾರು. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ದಿನಮಾನಗಳು. ಸೈನಿಕರ, ಉಳುವ ರೈತರ ಬಗ್ಗೆ ಭಾರತದ ಅಂದಿನ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್‌ ಶಾಸ್ತ್ರಿ ಅಪಾರ ಕಾಳಜಿ ಹೊಂದಿದ್ದರು. ‘ಸಮರ ಭೂಮಿಯಲ್ಲಿ ವೈರಿಗಳ ವಿರುದ್ಧ ಮಳೆ ಬಿಸಿಲೆನ್ನದೆ ಹೋರಾಡುತ್ತಿದ್ದಾರಲ್ಲ ನಮ್ಮ ಯೋಧರು, ಅವರಿಗೆ ಊಟದ ಸಮಸ್ಯೆ ಇರಬಾರದು’ ಎಂದು ದೃಢವಾಗಿ ಸಂಕಲ್ಪಿಸಿದರು. ತಮ್ಮಿಂದಲೇ ಅಭಿಯಾನ ಪ್ರಾರಂಭಿಸಿಬಿಟ್ಟರು. ಪ್ರತೀ ಸೋಮವಾರ ರಾತ್ರಿಯ ಊಟ ತ್ಯಜಿಸಿದರು. ಅನೇಕ ದೇಶವಾಸಿಗಳು ಹೃದಯ ತುಂಬಿ ಈ ನಡೆ ಅನುಸರಿಸಿದರು. ಶಾಸ್ತ್ರೀಜಿ ಇಂದಿಗೂ ಮಾದರಿಯಾಗುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು