ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸಂಕೀರ್ಣ ಸವಾಲು, ನಡುಮಾರ್ಗದ ನಿರೀಕ್ಷೆ

ಸತೀಶ್ ಜಿ.ಕೆ. ತೀರ್ಥಹಳ್ಳಿ ಲೇಖನ
Published 26 ಜುಲೈ 2023, 22:36 IST
Last Updated 26 ಜುಲೈ 2023, 22:36 IST
ಅಕ್ಷರ ಗಾತ್ರ

–ಸತೀಶ್ ಜಿ.ಕೆ. ತೀರ್ಥಹಳ್ಳಿ

ಪರಿಸರ ಸಮತೋಲನ ಮತ್ತು ಜೈವಿಕ ಸಂಪತ್ತಿನ ಪೋಷಣೆಯ ದಿಸೆಯಲ್ಲಿ ಹೇಗಾದರೂ ಮಾಡಿ ಒಂದಷ್ಟು ಕಾಡನ್ನು ಉಳಿಸಿಕೊಳ್ಳಲೇಬೇಕಾದ ಒತ್ತಡದಲ್ಲಿದೆ ವರ್ತಮಾನ. ಆದರೆ ಒತ್ತುವರಿ ಸಮಸ್ಯೆಯಿಂದಾಗಿ ಮಲೆನಾಡ ಕಾಡು ಗೊಂದಲದ ಗೂಡು. ಲಾಗಾಯ್ತಿನಿಂದ ಉಳ್ಳವರು ಮತ್ತು ಇಲ್ಲದವರ ನಡುವೆ ದೊಡ್ಡ ಕಂದಕವೇ ಇದೆ. ಫಲವತ್ತಾದ ಹತ್ತಾರು ಎಕರೆ ತೋಟಗದ್ದೆಗಳ ಜಮೀನ್ದಾರರು ಕಾಡುಗುಡ್ಡಗಳಿಗೇ ಬೇಲಿ ಹಾಕಿ ಜೈಸಿಕೊಂಡ ಶಕ್ತರು. ಆದರೆ ಸಣ್ಣ, ಅತಿಸಣ್ಣ ಸಾಗುವಳಿದಾರರಿಗೆ ಕಣ್ಕಟ್ಟಿ ಬಿಟ್ಟಂತಹ ಪರಿಸ್ಥಿತಿ.

ನಾಡಿಗೆ ಬೆಳಕು ನೀಡಲು ಬದುಕು ಕಳೆದುಕೊಂಡ ಶರಾವತಿ ನಿರಾಶ್ರಿತರ ಬವಣೆ ಬಗೆಹರಿದಿಲ್ಲ. ವರಾಹಿ-ಚಕ್ರಾ, ತುಂಗಾ ಮತ್ತು ಭದ್ರಾ ನದಿ ಯೋಜನೆಗಳಲ್ಲಿ ನಿರಾಶ್ರಿತರಾದವರೂ ತಮ್ಮ ಮನೆ, ಊರು, ಜಾಗ, ಬದುಕು-ಬಾಂಧವ್ಯ, ಆಚರಣೆ-ಸಂಸ್ಕೃತಿಗಳನ್ನೆಲ್ಲ ಬಲಿ ಕೊಟ್ಟಾಗಿದೆ.

ಅರಣ್ಯ ಪ್ರದೇಶವಾದ ಪಶ್ಚಿಮಘಟ್ಟದ ತಪ್ಪಲಲ್ಲಿ ನೈಜ ಅರಣ್ಯ ರಕ್ಷಕರೆಂದರೆ ಸಣ್ಣ ರೈತರು ಹಾಗೂ ಬುಡಕಟ್ಟು ಜನಾಂಗದವರು. ಅವರದ್ದು ಕಾಡಿನೊಟ್ಟಿಗೆ ಹೊಕ್ಕುಬಳಕೆಯ ಸಂಬಂಧ. ಹಾಗಾಗಿ ಸದ್ಯ ಶುದ್ಧ ಪರಿಸರ ಅಂತ ಉಳಿದಿರುವುದು ಹಳ್ಳಿಗಳಲ್ಲಿ ಮಾತ್ರ. ಆದರೆ ಕಾಡುಪ್ರಾಣಿಗಳ ಉಪಟಳದಿಂದ ಪೈರು, ಫಸಲನ್ನು ಕಾಪಾಡಿಕೊಳ್ಳುವಲ್ಲಿ ಅವರದು ಮುಗಿಯದ ಗೋಳು, ಪಡಿಪಾಟಲು.

ಸಣ್ಣಪುಟ್ಟ ರೈತರಿಗೆ ಭತ್ತ ಬೆಳೆಯಲು ಅಲ್ಲಿ ಎಕರೆಗೆ ತಗಲುವ ವಾರ್ಷಿಕ ವೆಚ್ಚಕ್ಕಿಂತಲೂ ಆದಾಯ ಕಡಿಮೆ! ಅನಿಶ್ಚಿತ ಧಾರಣೆಯ ವಾಣಿಜ್ಯ ಬೆಳೆಯಾದ ಶುಂಠಿಯು ನಮ್ಮ ಕಾಡುಗುಡ್ಡಗಳನ್ನು ಬಯಲುಗೊಳಿಸಿ ನೆಲಕ್ಕೆ ವಿಷವಿಕ್ಕಿದೆ. ಎಂಪಿಎಂ ಕಾರ್ಖಾನೆಯ ಅಕೇಶಿಯ ಬೆಳೆಗೆ ಮಲೆನಾಡು ಬರಡಾಗಿದೆ. ಅಡಿಕೆಯೊಂದೇ ಮಲೆನಾಡಿನಲ್ಲಿ ಮರ್ಯಾದೆಯ ಬೆಳೆ! ಹಾಗೆಂದೇ ತುಂಡು ಜಮೀನಿನವರು ಕೂಡ ಅಷ್ಟಿಷ್ಟು ಒತ್ತುವರಿ ಮಾಡಿ ಅಡಿಕೆ ಗಿಡಗಳನ್ನು ಊರಲೇಬೇಕಾದ ಅನಿವಾರ್ಯ ಇಲ್ಲಿಯದು!

ಶತಮಾನಗಳ ಕಾಲ ಜಮೀನ್ದಾರರೆಂಬ ತುಂಡರಸರ ಮನೆಗಳಲ್ಲಿ ಜೀತಕ್ಕಿದ್ದ ತಲೆಮಾರುಗಳು ಇಲ್ಲೀಗ ಕಾಡಂಚಿನ ಸಣ್ಣ ಜಾಗದಲ್ಲಿ ಬೇಲಿ ಹಾಕಿಕೊಂಡು ಸ್ವತಂತ್ರ ಬದುಕಿಗೆ ಹಂಬಲಿಸುತ್ತಿವೆ. ಹೀಗೆಲ್ಲಾ ಪುನರ್ವಸತಿ ಕಂಡುಕೊಂಡವರ ಪಾಲಿಗೆ ವರ್ಗೀಕೃತ ವಿಭಜನೆ, ಡಿನೋಟಿಫಿಕೇಷನ್, ಭೂಒತ್ತುವರಿ ನಿರ್ಬಂಧ ಕಾಯ್ದೆಗಳು ಬದುಕು ಕಸಿಯುವ ಕರಾಳ ಶಾಸನವಾಗಿ ಪರಿಗಣಿತವಾಗುತ್ತಿವೆ.

ಭೂಕಬಳಿಕೆಗೆ ಕಡಿವಾಣ ಹಾಕಲು ರಚಿಸಲಾಗಿದ್ದ ಎ.ಟಿ.ರಾಮಸ್ವಾಮಿ ಮತ್ತು ವಿ. ಬಾಲಸುಬ್ರಮಣಿಯನ್‌ ಸಮಿತಿಯ ವರದಿಗಳ ಆಧಾರದ ಮೇಲೆ ಶಾಸನ ರಚಿಸಿ, ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸುವ ನಿಲುವಿಗೆ ಬಲ ತುಂಬಲಾಗಿತ್ತು. ಆದರೆ ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆಯ ಸೆಕ್ಷನ್‌ 192/ಎ ಅನ್ನು ಅವೈಜ್ಞಾನಿಕವಾಗಿ ಸಾಮಾನ್ಯೀಕರಿಸಿ ರಾಜ್ಯವ್ಯಾಪಿಯಾಗಿ ಅಳವಡಿಸಿಕೊಂಡದ್ದು, ವಿಶೇಷವಾಗಿ ಮಲೆನಾಡು ಭಾಗದ ಬಡಜನರ ನಿದ್ದೆಗೆಡಿಸಿತ್ತು.

ಹೀಗೆ ಅಮಾಯಕರ ಬದುಕುವ ಹಕ್ಕನ್ನೇ ಕಿತ್ತುಕೊಳ್ಳುವ ಕಾನೂನಿಗೆ ಇತ್ತೀಚೆಗೆ ತಂದ ತಿದ್ದುಪಡಿಯಿಂದ ಬಿಕ್ಕಟ್ಟು ಸದ್ಯ ಒಂದು ಹಂತಕ್ಕೆ ಇತ್ಯರ್ಥವಾಗಿದೆ. ಆದರೆ ದಿನಗೂಲಿಯನ್ನಷ್ಟೇ ನಂಬಿ ಬದುಕು ಕಟ್ಟಿಕೊಂಡಿದ್ದ ಬಡ ಕೂಲಿಕಾರ್ಮಿಕರನ್ನೂ ನೆಲದ ಮೂಲನಿವಾಸಿಗಳಾದ ಗಿರಿಜನರನ್ನೂ ನಾಡಿಗೆ ನೀರು, ಬೆಳಕು ನೀಡುವ ಯೋಜನೆಗಳಲ್ಲಿ ನಿರಾಶ್ರಿತರಾದ ಕೆಳವರ್ಗದ ಶ್ರಮಿಕರನ್ನೂ 1963ರ ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್‌ 64/ಎ ಪ್ರಕಾರ ಅರಣ್ಯ ಒತ್ತುವರಿದಾರರು, ಭೂಕಬಳಿಕೆದಾರರು ಎಂದು ಆರೋಪಿಸಿ, ತಲೆಮಾರುಗಳಿಂದ ಸಾಗುವಳಿ ಮಾಡಿಕೊಂಡು ಬಂದ ತುಂಡುಭೂಮಿಯ ಗದ್ದೆತೋಟಗಳನ್ನೇ ಅರಣ್ಯ ಇಲಾಖೆಯು ನಿರ್ದಯವಾಗಿ ಸವರಿಹಾಕಿದ ಉದಾಹರಣೆಗಳಿವೆ! ಅರಣ್ಯ ಸಂರಕ್ಷಣೆ ಮತ್ತು ಮಾನವೀಯ ನೆಲೆಯಲ್ಲಿ ಅರಣ್ಯವಾಸಿಗಳ ಹಕ್ಕು ರಕ್ಷಣೆಯ ಹೊಣೆಯನ್ನು ಆಳುವವರು ನಾಜೂಕಾಗಿ ನಿಭಾಯಿಸಬೇಕಿದೆ. ಒತ್ತುವರಿ, ಬಗರ್‌ಹುಕುಂ ಸಮಸ್ಯೆಗೆ ಶೀಘ್ರ ಪರಿಹಾರ ಹುಡುಕಲೇಬೇಕಿದೆ.

ಹೌದು, ಸರ್ಕಾರಿ ಭೂಮಿ ಮತ್ತು ಅರಣ್ಯ ಪ್ರದೇಶವನ್ನು ಉಳಿಸಬೇಕಾದ್ದು ಸರ್ಕಾರದ ಕರ್ತವ್ಯ. ಅರಣ್ಯ ಸಂರಕ್ಷಣೆ ಮತ್ತು ಒತ್ತುವರಿ ತೆರವು ಕುರಿತ ಅರಣ್ಯ ಸಚಿವರ ಇತ್ತೀಚಿನ ಹೇಳಿಕೆ ಹಾಗೂ ಅದೇ ಹೊತ್ತಿಗೆ ಬಗರ್‌ಹುಕುಂ ಸಮಸ್ಯೆಗೆ ಇತಿಶ್ರೀ ಹಾಡುವ ಮುಖ್ಯಮಂತ್ರಿಯವರ ಬದ್ಧತೆಯ ಮಾತಿಗೆ ಅರ್ಥ ಬರಬೇಕು. ಈ ದಿಸೆಯಲ್ಲಿ ಬಡವರ ಹಿತರಕ್ಷಣೆ ಮತ್ತು ಪರಿಸರ ರಕ್ಷಣೆಗೆ ನಡುಮಾರ್ಗವೊಂದನ್ನು ಕಂಡುಕೊಳ್ಳುವ ತುರ್ತು ಅಗತ್ಯವಿದೆ. ಬಗರ್‌ಹುಕುಂ ಸಾಗುವಳಿದಾರರ ಕುಟುಂಬಕ್ಕೆ ಗರಿಷ್ಠ ಜಮೀನು ಮಿತಿಗೊಳಿಸಿ ಹಕ್ಕುಪತ್ರ ನೀಡಿ, ಮಿಕ್ಕಿದ್ದನ್ನು ವಶಪಡಿಸಿಕೊಂಡು ಅರಣ್ಯೀಕರಣಕ್ಕೆ ಸರ್ಕಾರ ಮುಂದಾಗಬೇಕೆಂಬುದು ಬಹುಜನರ ಒತ್ತಾಯ. ಈ ಬಗ್ಗೆ ವ್ಯಾಪಕ ಚರ್ಚೆಯೊಂದಿಗೆ ಶೀಘ್ರ ನಿರ್ಧಾರ ತೆಗೆದುಕೊಂಡಲ್ಲಿ ಎಲ್ಲವೂ ಕ್ಷೇಮ.

‘ಅರಣ್ಯ ರಕ್ಷಣೆ’ ಎಂಬುದು ಹಗ್ಗದ ಮೇಲಿನ ನಡಿಗೆಯಂತಿರುವ ಶತಮಾನದ ಸಂಕೀರ್ಣ ಸವಾಲು. ಇದಕ್ಕೆ ಸ್ಥಳೀಯರನ್ನೂ ಒಳಗೊಂಡು ಸಂವೇದನಾಶೀಲ ಮನಃಸ್ಥಿತಿಯಲ್ಲಿ ಪರಿಹಾರ ಹುಡುಕಬೇಕಾದ ಇಚ್ಛಾಶಕ್ತಿಯನ್ನು ಸರ್ಕಾರ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT