ಮಂಗಳವಾರ, ಜೂನ್ 15, 2021
25 °C

ಸಂಗತ: ಉಚಿತ ಕಾಣಿಕೆಯ ಧರ್ಮಸಂಕಟ

ಮಲ್ಲಿಕಾರ್ಜುನ ಹೆಗ್ಗಳಗಿ Updated:

ಅಕ್ಷರ ಗಾತ್ರ : | |

Prajavani

ಪದವಿ ಕಾಲೇಜಿನ ಮಹಿಳಾ ಪ್ರಾಚಾರ್ಯರೊಬ್ಬರು ಆಸ್ಪತ್ರೆಯ ಬೆಡ್ ಮೇಲೆ ಕುಳಿತು, ಬಡ ರೋಗಿಗಳಿಗೆ ಉಚಿತವಾಗಿ ಹಂಚುವ ಹಣ್ಣುಗಳನ್ನು ಪಡೆಯುತ್ತಿದ್ದ ಚಿತ್ರವೊಂದು ಈಚೆಗೆ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ರಾಜಕೀಯ ಯುವ ಧುರೀಣರೊಬ್ಬರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಬೆಂಬಲಿಗರ ಪಡೆಯೊಂದಿಗೆ ಆಸ್ಪತ್ರೆಗೆ ಬಂದು ರೋಗಿಗಳಿಗೆ ಹಣ್ಣು ಹಂಚುವ ಕಾರ್ಯಕ್ರಮದ ಚಿತ್ರ ಅದು.

ಆ ಮಹಿಳಾ ಪ್ರಾಚಾರ್ಯರು ನನಗೆ ತುಂಬ ಆಪ್ತರು. ಅವರು ಆಸ್ಪತ್ರೆಗೆ ದಾಖಲಾಗಿರುವ ಫೋಟೊ ನೋಡಿ ಗಾಬರಿಯಾಗಿ, ಫೋನ್ ಮಾಡಿದೆ. ಆ ಹೆಣ್ಣುಮಗಳು ಬಿಕ್ಕಿ ಬಿಕ್ಕಿ ಅಳುತ್ತಾ ಹೀಗೆ ಹೇಳಿದರು- ‘ಸರ್, ನನಗೆ ಬಿ.ಪಿ.ಯಲ್ಲಿ ಸ್ವಲ್ಪ ಏರುಪೇರಾಯಿತು. ವೈದ್ಯರ ಸಲಹೆಯಂತೆ ಒಂದು ದಿನದ ಮಟ್ಟಿಗೆ ಅಡ್ಮಿಟ್ ಆಗಿದ್ದೆ. ಅದಾಗಿ ಅರ್ಧ ಗಂಟೆಯೂ ಆಗಿರಲಿಲ್ಲ, ಒಂದು ದೊಡ್ಡ ಗುಂಪು ಬಂದು ನನಗೆ ಹೇಳದೇ ಕೇಳದೇ ಹಣ್ಣುಗಳನ್ನು ಕೈಗಿತ್ತು ಫೋಟೊ ತೆಗೆದುಕೊಂಡಿತು. ಮಾಧ್ಯಮದವರೂ ಬಂದಿದ್ದರು. ಅದು ಕನ್ನಡ, ಇಂಗ್ಲಿಷ್, ಮರಾಠಿ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಪತ್ರಿಕೆ ನೋಡಿದವರೆಲ್ಲ ನನಗೆ ಫೋನ್ ಮಾಡಿ, ಆಸ್ಪತ್ರೆಗೆ ದಾಖಲಾದ ಬಗ್ಗೆ ಕಳವಳದಿಂದ ವಿಚಾರಿಸುತ್ತಿದ್ದಾರೆ. ನಮ್ಮ ಕಾಲೇಜ್‍ನ ತುಂಬ ಇದೇ ಸುದ್ದಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ತಿಂಗಳಿಗೆ 2 ಲಕ್ಷ ರೂಪಾಯಿ ಸಂಬಳ ಪಡೆಯುವ ನೀನು ಪುಕ್ಕಟೆ ಹಣ್ಣು ಪಡೆಯುವ ಅವಶ್ಯಕತೆ ಇತ್ತೇ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಈ ಸಂಗತಿಗಳು ನಮ್ಮ ಕುಟುಂಬದ ನೆಮ್ಮದಿಯನ್ನು ಹಾಳು ಮಾಡಿವೆ’ ಎಂದರು.

‘ಈಗ ಆಸ್ಪತ್ರೆಯಿಂದ ಮನೆಗೆ ಮರಳಿದ್ದೇನೆ. ಸಂಬಂಧಿಕರು, ಪರಿಚಿತರು ಕಳವಳದಿಂದ ಬಂದು ಆರೋಗ್ಯ ವಿಚಾರಿಸುತ್ತಿದ್ದಾರೆ. ಲೆಕ್ಕವಿಲ್ಲದಷ್ಟು ಫೋನ್‍ಗಳು ಬರುತ್ತಿವೆ. ನನಗೆ ಹಣ್ಣು ಕೊಟ್ಟವರು ಹುಟ್ಟುಹಬ್ಬ ಆಚರಿಸಿಕೊಂಡರೇನೋ ನಿಜ. ಆದರೆ ನಮ್ಮ ಮನೆ ನೆಮ್ಮದಿಯೇ ಹಾಳಾಗಿದೆ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಉಳ್ಳವರು, ಜನಪ್ರತಿನಿಧಿಗಳು ಕೆಲವರು ಹುಟ್ಟುಹಬ್ಬವನ್ನು ವೈಭವದಿಂದ ಆಚರಿಸಿಕೊಳ್ಳುತ್ತಾರೆ. ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ಹಂಚುವುದು ಕಾರ್ಯಕ್ರಮದ ಮುಖ್ಯ ಭಾಗವಾಗಿರುತ್ತದೆ. ಸಹಾಯದ ಅವಶ್ಯಕತೆ ಇರುವವರನ್ನು ಗುರುತಿಸಿ, ಬಯಸಿದವರಿಗೆ ಹಣ್ಣು ವಿತರಿಸಬಹುದು. ಅವಶ್ಯಕತೆ ಇಲ್ಲದವರಿಗೆ ಅವರ ಅನುಮತಿ ಪಡೆಯದೇ ಜೋರಾವರಿಯಿಂದ ಹಣ್ಣು ಹಂಚುವುದು ಸರಿಯಲ್ಲ. ಇಂತಹ ಚಿತ್ರಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸುವುದು ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ.

ಎಲ್ಲಕ್ಕಿಂತಲೂ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ, ರೋಗಿಯ ಚಿತ್ರ ಪ್ರಕಟಿಸುವುದು ಎಷ್ಟೋ ಬಾರಿ ಅವರಿಗೆ ಅಪಮಾನದ ಸಂಗತಿಯಾಗಿರುತ್ತದೆ. ಅದು ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುತ್ತದೆ. ಇಂತಹ ಸೂಕ್ಷ್ಮಗಳನ್ನು ಅರಿಯದ ಪ್ರಚಾರ
ಪ್ರಿಯರು ಮಾಧ್ಯಮಗಳಲ್ಲಿ ತಮ್ಮ ಸುದ್ದಿ ಪ್ರಕಟವಾದುದಕ್ಕೆ ಸಂತೋಷಪಡುತ್ತಾರೆ. ಆದರೆ ಚಿತ್ರದಲ್ಲಿ ಕಾಣಿಸಿಕೊಂಡ ಆ ರೋಗಿ ಅನುಭವಿಸುವ ಹಿಂಸೆ, ಸಂಕಟ, ಅಪಮಾನ ಬಹಳ ಜನಕ್ಕೆ ಗೊತ್ತಾಗುವುದಿಲ್ಲ.

ಮುಧೋಳ ಹೈಸ್ಕೂಲ್‌ನ ಹಳೆಯ ವಿದ್ಯಾರ್ಥಿಯೊಬ್ಬರು ವಿದೇಶದಲ್ಲಿ ದೊಡ್ಡ ಉದ್ಯಮಿಯಾಗಿದ್ದಾರೆ. ಅವರು ತಾವು ಓದಿದ ಶಾಲಾ ಕಟ್ಟಡಕ್ಕೆ ₹ 60 ಲಕ್ಷ ದೇಣಿಗೆ ನೀಡಿದ್ದಾರೆ. ಶಾಲೆಯ ಕಟ್ಟಡದ ಮೇಲೆ ಎಲ್ಲಿಯೂ ತಮ್ಮ ಹೆಸರು ದಾಖಲಿಸಕೂಡದು ಮತ್ತು ದೇಣಿಗೆಯ ವಿಚಾರ ಎಲ್ಲಿಯೂ ಪ್ರಚಾರಕ್ಕೆ ಬಳಕೆ ಆಗಬಾರದು ಎಂದು ತಾಕೀತು ಮಾಡಿದ್ದಾರೆ. ಶಾಲೆಯ ಆಡಳಿತ ಮಂಡಳಿಯವರು ಬಹಳ ಆಗ್ರಹಪಡಿಸಿದ್ದರಿಂದ ‘1984-85ನೇ ಸಾಲಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಕಾಣಿಕೆ’ ಎಂದು ಬರೆಯಲು ಒಪ್ಪಿಗೆ ನೀಡಿದ್ದಾರೆ. ಅದು ಅವರ ಸಹಪಾಠಿಗಳಾಗಿದ್ದ ಎಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.

ಕನ್ನಡದ ಪ್ರಸಿದ್ಧ ಲೇಖಕ, ಭಾಷಾತಜ್ಞ ದಿವಂಗತ ಕೆ.ಜಿ.ಕುಂದಣಗಾರ ಅವರಿಗೆ ಸಂಬಂಧಿಸಿದ ಒಂದು ಸಂಗತಿ ನೆನಪಿಗೆ ಬರುತ್ತದೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೌಜಲಗಿ ಗ್ರಾಮವು ಕುಂದಣಗಾರರ ಹುಟ್ಟೂರು. ಅಲ್ಲಿನ ಹೈಸ್ಕೂಲ್ 1961ರಲ್ಲಿ ಆರ್ಥಿಕ ತೊಂದರೆಯಿಂದ ಸ್ಥಗಿತಗೊಂಡಿತ್ತು. ಆಗ ಅವರು ತಮ್ಮ ಮನೆಯನ್ನು ಮಾರಾಟ ಮಾಡಿ ಹೈಸ್ಕೂಲ್ ಪುನರಾರಂಭಕ್ಕೆ ವ್ಯವಸ್ಥೆ ಮಾಡಿದ್ದರು. ಆದರೆ ಅವರು ಈ ಬಗ್ಗೆ ಎಲ್ಲಿಯೂ ಬರೆದುಕೊಂಡಿಲ್ಲ, ಮಾತ್ರವಲ್ಲ ಶಾಲೆಯಲ್ಲಿ ತಮ್ಮ ಭಾವಚಿತ್ರ ಹಾಕುವುದಕ್ಕೂ ಅನುಮತಿ ಕೊಡಲಿಲ್ಲ.

ಕರ್ನಾಟಕ ಸರ್ಕಾರವು ಗಡಿನಾಡ ಭಾಗದಲ್ಲಿ ಸಾಹಿತ್ಯ–ಸಂಶೋಧನೆಗಾಗಿ ಸೇವೆ ಸಲ್ಲಿಸಿದವರಿಗೆ ಪ್ರತಿವರ್ಷ ‘ಪ್ರೊ. ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ’ ಪ್ರಶಸ್ತಿ ನೀಡುತ್ತದೆ. ಪ್ರಶಸ್ತಿ ₹ 5 ಲಕ್ಷ ನಗದು ಹಾಗೂ ಫಲಕ ಒಳಗೊಂಡಿದೆ. ತೆರೆಯಮರೆಯಲ್ಲಿ ನಿಂತು ದೊಡ್ಡ ಕೆಲಸ ಮಾಡಿದ ಕುಂದಣಗಾರ ಅವರನ್ನು ಈಗಲೂ ಕೌಜಲಗಿ ಜನ ಗೌರವದಿಂದ ಸ್ಮರಿಸುತ್ತಾರೆ.

ಸಂಪತ್ತು ಗಳಿಸಬೇಕೆಂಬ ಅದಮ್ಯ ಆಸೆ ಮನುಷ್ಯನಲ್ಲಿ ಇರುವಂತೆ, ಸಮಾಜಕ್ಕೆ ಸಹಾಯ ಮಾಡಬೇಕು, ದಾನ ನೀಡಬೇಕು ಎಂಬ ಒಳತುಡಿತ ಕೂಡ ಇರುತ್ತದೆ. ಅದನ್ನು ಪ್ರಚಾರ ಮಾಡಿಕೊಳ್ಳುವುದು ಸರಿಯಲ್ಲ ಎಂಬ ಸರಳ ಸತ್ಯವನ್ನು ಅರಿತುಕೊಳ್ಳಬೇಕು. ‘ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ’ ಎಂದು ಬಸವಣ್ಣ ಹೇಳಿದ ಮಾತು ತುಂಬ ಮಾರ್ಮಿಕವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.