ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಮತದಾನ ಮಾರಾಟದ ವಸ್ತುವೇನು?

Published : 13 ಫೆಬ್ರುವರಿ 2023, 19:55 IST
ಫಾಲೋ ಮಾಡಿ
Comments

ಯಾವುದೇ ರಾಷ್ಟ್ರವಿರಲಿ ಅಲ್ಲಿ ಪ್ರಜಾಪ್ರಭುತ್ವವಿದ್ದರೆ ಅದೊಂದು ದೊಡ್ಡ ಆದರ್ಶವಾಗುತ್ತದೆ. ಎಲ್ಲ ರೀತಿಯ ರಾಜಕೀಯ ಆಳ್ವಿಕೆಯಲ್ಲಿ ಇದ್ದುದರಲ್ಲಿ ಪ್ರಜಾಪ್ರಭುತ್ವವೇ ಮೇಲು. ಏಕೆಂದರೆ ಅಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜಾಪ್ರಭುತ್ವದಲ್ಲಿ ಬಹುಮತ ಸಾಬೀತಾಗಬೇಕು. ಬಹುತೇಕ ಜನರ ಅಭಿಪ್ರಾಯವೇ ನಿರೂಪಿತವಾಗುವುದರಿಂದ ಪ್ರಜಾಪ್ರಭುತ್ವಕ್ಕೆ ಶ್ರೇಷ್ಠತೆಯ ಪಟ್ಟ!

ಪ್ರಜಾಪ್ರಭುತ್ವವೆಂದರೆ ಪ್ರಜೆಗಳು ಪ್ರಜೆಗಳಿಂದ ಪ್ರಜೆಗಳಿಗಾಗಿ ನಿರ್ಮಾಣವಾಗುವ ರಾಜಕೀಯ ಆಡಳಿತ ವ್ಯವಸ್ಥೆ. ಆದ್ದರಿಂದಲೇ ಎಲ್ಲಕ್ಕೂ ಮಿಗಿಲು ಬಹುಮತ. ಜನರ ಪರವಾಗಿ ಜನಪ್ರತಿನಿಧಿಗಳು ಕೆಲಸ ಮಾಡುತ್ತಾರೆ. ಅವರು ಒಳ್ಳೆಯ ಕೆಲಸ ಮಾಡಲು ಜನಸಾಮಾನ್ಯರು ಅನುವು ಮಾಡಿಕೊಡಬೇಕು. ಅವರಿಗೆ ಒಳ್ಳೆಯ ಕೆಲಸ ಮಾಡಬೇಕು ಎಂಬ ಇರಾದೆ ಇರಬೇಕು. ಅವರ ಅಂತರಂಗದಲ್ಲಿ ಒಳ್ಳೆಯದನ್ನೇ ಮಾಡುವ ಇಚ್ಛಾಶಕ್ತಿಯೂ ಇರಬೇಕಾಗುತ್ತದೆ. ಅದಕ್ಕೆ ಒಳ್ಳೆಯ ಮನಸ್ಸಿನವರು ಆಗಿರಬೇಕಾಗುತ್ತದೆ. ಅವರಲ್ಲಿ ಸಂಸ್ಕೃತಿ ಇರಬೇಕಾಗುತ್ತದೆ, ಆದರ್ಶವೂ ಇರಬೇಕು. ಎಲ್ಲಕ್ಕೂ ಮಿಗಿಲಾಗಿ ಒಳ್ಳೆಯ ವ್ಯಕ್ತಿತ್ವದವರಾಗಿರಬೇಕಾಗುತ್ತದೆ. ಇದು ಬಹಳ ಮುಖ್ಯ.

ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ವ್ಯಕ್ತಿಯಾಗಿರುವುದು ಅತ್ಯಂತ ಮುಖ್ಯ. ಅಂಥವರ ಆಯ್ಕೆ ಪ್ರಜೆಗಳ ನಿರ್ಧಾರವಾಗಬೇಕು. ಈಗ ಅಂಥ ಪರಿಸರವಿಲ್ಲ. ಚುನಾವಣೆಯೂ ವ್ಯಾಪಾರ ಆಗಿದೆ. ಒಳ್ಳೆಯವರೇ ಚುನಾವಣೆಗೆ ನಿಲ್ಲುತ್ತಾರೆ ಎಂಬ ಭರವಸೆ ಇಲ್ಲ. ಚುನಾವಣೆಗೆ ಸ್ಪರ್ಧಿಸಿದವರಲ್ಲಿ ಕಡಿಮೆ ಕೆಟ್ಟವನನ್ನು ಪ್ರಜೆಗಳು ಆರಿಸಬೇಕಾಗುತ್ತದೆ. ಇಲ್ಲ ಅಂದರೆ ಎಲ್ಲರನ್ನೂ ನಿರಾಕರಿಸಿ ಚುನಾವಣೆಗೆ ಬಹಿಷ್ಕಾರ ಹಾಕಬೇಕಾಗುತ್ತದೆ. ಈಗ ನಿರಾಕರಣ ಎಲ್ಲಿ ಬಂತು? ಎಲ್ಲವೂ ಸ್ವೀಕರಣ! ಏನೋ ನಂಜಣ್ಣ ಅಂದರೆ ಬಂದಷ್ಟೇ ಗುಂಜಣ್ಣ ಎಂಬ ಗಾದೆಯಂತೆ.

ಈ ಹೊತ್ತು ಭಾರತದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಹೆಸರನ್ನು ಕೆಡಿಸಿಕೊಂಡಿವೆ. ಎಲ್ಲರೂ ಮತದಾರರಿಗೆ ಆಮಿಷಗಳ ಒಡ್ಡುವವರೆ. ಆಮಿಷ ಒಡ್ಡಿದರೆ ಮತಗಳು ಗ್ಯಾರಂಟಿ ಎಂಬ ಒಂದು ರೀತಿಯ ನಂಬಿಕೆ!

ಕೆಲವರು ನೇರವಾಗಿ ಮನೆ ಮನೆಗೆ ದುಡ್ಡು ಹಂಚುತ್ತಾರೆ. ಇನ್ನು ಕೆಲವರು ದುಬಾರಿ ವಸ್ತುಗಳನ್ನು ಹಂಚಿ ಜನರ ಸಂಪ್ರೀತಿ ಸಂಪಾದಿಸುತ್ತಾರೆ. ಹಂಚುವವರೆಗೂ ಮಾನ ಮರ್ಯಾದೆ ಇಲ್ಲ, ರಾಜಕೀಯದವರು ಹಂಚಿದ್ದನ್ನು ಸ್ವೀಕರಿಸುವ ಮಹಾ ಮಹಾನುಭಾವರಿಗೂ ಸ್ವಲ್ಪವೂ ನಾಚಿಕೆ ಇಲ್ಲ.

‘ಅವನು ಅಧಿಕಾರದಲ್ಲಿದ್ದಾಗ ದುಡ್ಡು ಹೊಡೆದಿದ್ದಾನೆ, ಸಖತ್ ಸಂಪಾದನೆ ಮಾಡಿ ಸ್ವಂತ ಖಜಾನೆ ತುಂಬಿಕೊಂಡಿದ್ದಾನೆ, ಕೊಡಲಿ ಬಿಡು, ಯಾರಪ್ಪನ ದುಡ್ಡು? ಅದೂ ಪ್ರಜೆಗಳ ದುಡ್ಡೇ ತಾನೆ’ ಎಂಬ ಕುತರ್ಕ ಕೆಲವರಲ್ಲಿ. ಹೀಗಾಗಿ ಭ್ರಷ್ಟತೆಯ ಅನಿಷ್ಟ ಪದ್ಧತಿಗೆ ಎಲ್ಲರ ಅಂಕಿತ.

ಈ ಹೊತ್ತು ಭಾರತದಲ್ಲಿ ಜಾತಿ ಮುಖ್ಯವಾಗುತ್ತದೆ. ಜಾತ್ಯತೀತ ಎಂದು ಬಾಯಲ್ಲಿ ಹೇಳುತ್ತೇವೆ. ಆದರೆ ವೋಟ್ ಬ್ಯಾಂಕ್‌ಗಳು ಜಾತಿಯ ಮೇಲೆಯೇ ಅವಲಂಬಿತವಾಗಿವೆ. ಅವನು ನಮ್ಮ ಜಾತಿಯವನು, ಅವನಿಗೆ ವೋಟು ಹಾಕೋಣ, ಯಾವತ್ತಾದರೂ ಒಂದಿಷ್ಟಾದರೂ ಕೆಲಸಕ್ಕೆ ಬರುತ್ತಾನೆ, ಸಂಪೂರ್ಣ ಅಲ್ಲಗಳೆಯುವುದು ಬೇಡ ಎಂಬುದು ಜಾತಿವಾದಿಗಳ ಕುತರ್ಕ. ಅವರ ಲೆಕ್ಕಾಚಾರವು ಸರಿಯೇ. ಎಲ್ಲರೂ ಜಾತಿ ಜಾತಿ ಎನ್ನುವಾಗ ಎಲ್ಲೋ ಕೆಲವರು ಜಾತಿಗಳ ವಿರೋಧಿಸಿ ತತ್ವಗಳ ಎತ್ತಿ ಹಿಡಿದರೆ, ಆ ಒಳ್ಳೆಯವರೇ ಕೆಟ್ಟವರ ಕಂಗಳಲ್ಲಿ ಮೂರ್ಖರು ಎನಿಸಿಕೊಳ್ಳುತ್ತಾರೆ. ಅವನಿಗೆ ಇನ್ನೂ ಬದುಕೋ ಮಾರ್ಗ ಗೊತ್ತಿಲ್ಲ ಎಂದು ಹೀಯಾಳಿಸುತ್ತಾರೆ. ಹೀಗಾಗಿ ಎಲ್ಲೆಡೆ ಆಮಿಷಗಳೇ ತುಂಬಿ ತುಳುಕಿ ಮಾನವನ ದುರಾಸೆಗಳು ಹೆಡೆಯೆತ್ತಿ ‘ಮತದಾನ’ವೇ ತನ್ನ ಕಿಮ್ಮತ್ತು ಕಳೆದುಕೊಂಡಿದೆ.

ಜಾತಿ, ಧರ್ಮ, ಸ್ವಜನಪಕ್ಷಪಾತ, ಪಕ್ಷನಿಷ್ಠೆ ಈ ಎಲ್ಲವೂ ಸೇರಿ ಪ್ರಜೆ ಶುದ್ಧ ಅಂತಃಕರಣದಿಂದ ಯೋಚಿಸಿ ಮತ ನೀಡುವ ಕಾಲ ಈಗಿಲ್ಲ. ಇದೇ ವಿಪರ್ಯಾಸ. ಈ ಹೊತ್ತು ಚುನಾವಣೆಯೇ ಒಂದು ಅಣಕು ಪ್ರದರ್ಶನವಾಗಿದೆ. ಕೇವಲ ನಾಮ್‌ಕೆವಾಸ್ತೆ ಎಂಬಂತೆ. ಮತದಾನದ ಆಶಯವೇ ಮಣ್ಣಾಗಿದೆ. ಮೌಲ್ಯಪಾತದ ದಿನಗಳಲ್ಲಿ ಇದು ವಾಸ್ತವ ದುರಂತ. ಪಾವಿತ್ರ್ಯ ಮನೆ ಮಾಡಬೇಕಾದ ಜಾಗದಲ್ಲಿ 100ಕ್ಕೆ 90ರಷ್ಟು ಜನ ದುಡ್ಡು, ವಸ್ತು ತೆಗೆದುಕೊಂಡು ಮತ ಹಾಕುವುದರಿಂದ ಅಪವಿತ್ರವಾಗಿದೆ ಈ ಕ್ಷೇತ್ರ. ಅಂತರಂಗದ ಅನ್ನಿಸಿಕೆಯ ಬದಿಗೆ ತಳ್ಳಿ ಲಾಭಕೋರ ಪ್ರವೃತ್ತಿ ಮೇಲುಗೈ ಪಡೆದು ನಿಜವಾದ ಮತದಾನ ಆಗುತ್ತಿಲ್ಲ. ಇದು ವಿಷಾದನೀಯ.

ರಾಜಕೀಯ ದಲ್ಲಾಳಿಗಳು, ಮಧ್ಯವರ್ತಿಗಳು, ಜಾತೀಯಪೀಡರು, ಧರ್ಮಗುರುಗಳು ಎಲ್ಲರೂ ಇಲ್ಲಿ ತಪ್ಪು ಹೆಜ್ಜೆ ಇರಿಸಿರುವುದರಿಂದ ‘ನೈಜ ಮತ ಪ್ರದರ್ಶನ’ ಸಾಧ್ಯವಾಗುತ್ತಿಲ್ಲ. ಇದೊಂದು ರೀತಿ ತೋರಾಣಿಕೆಯ ರಂಗನಾಟಕ!

ಮತಗಳು ಬಿಕರಿಯಾಗುತ್ತಿವೆ. ಟಿ.ವಿ., ಫ್ರಿಜ್‌, ಪ್ರೆಷರ್ ಕುಕ್ಕರ್, ಪಂಚೆ, ಸೀರೆ, ದಿನಸಿ ಪದಾರ್ಥಗಳು... ಹೀಗೆ ಏನೇನೋ ಪರಿಕರಗಳ ಕೊಡುಗೆಗಳು, ಮದ್ಯ, ಮಾಂಸದ ತುಂಡುಗಳು, ಭರ್ಜರಿ ಭಕ್ಷ್ಯಗಳು, ಪಾರ್ಟಿಗಳು ಎಲ್ಲವೂ ಮತದಾನ ಪದ್ಧತಿಯನ್ನೇ ಭ್ರಷ್ಟಗೊಳಿಸಿವೆ. ಹೀಗಾಗಿ ಮತಗಳು ಮಾರಾಟದ ಸರಕಾದದ್ದು ಪ್ರಜಾಪ್ರಭುತ್ವದ ಕ್ರೂರ ವಿಪರ್ಯಾಸ.

ಜಾಗೃತನಾಗಬೇಕಿದೆ ಮತದಾರ. ಭ್ರಷ್ಟರಿಗೆ ಮತ ಹಾಕದೆ ಪ್ರಜಾಪ್ರಭುತ್ವ ಉಳಿಸಬೇಕಾಗಿದೆ. ಗಟ್ಟಿಯಾಗಬೇಕಾದರೆ ಪರಾಮರ್ಶೆ ನಡೆಯಬೇಕು. ಮೌಲ್ಯಮಾಪನ ಸರಿಯಾಗಿ ಆಗಿ ಅಂಥವರಿಗೇ ಮತ ನೀಡಿ ‘ಶುದ್ಧರು’ ಗೆದ್ದರೆ ಆಗ ಪ್ರಜಾಪ್ರಭುತ್ವದ ಗೆಲುವು. ನಿಜವಾದ ಉಳಿವು. ಇಲ್ಲವಾದರೆ ಎಲ್ಲವೂ ಹುಸಿ. ಪಡಪೋಸಿ ಚುನಾವಣೆ! ಕುತಂತ್ರಗಳ ಮೂಲಕ ಗೆದ್ದವರು ಅಧಿಕಾರ ಹಿಡಿದು ಇನ್ನೈದು ವರ್ಷಗಳ ಕಾಲ ಸರ್ಕಾರಿ ಬೊಕ್ಕಸ ಲೂಟಿ ಹೊಡೆಯಲು ಪರವಾನಗಿ ಪಡೆಯುತ್ತಾರೆ. ಆಮಿಷಗಳಿಗೆ ಬಲಿಯಾಗಿ ವೋಟು ಹಾಕಿದ ಜನ ಮೂಕಪ್ರೇಕ್ಷಕರಾಗುತ್ತಾರೆ. ಆದ್ದರಿಂದ ಮತ ಚಲಾಯಿಸುವ ಮುನ್ನ ವ್ಯಕ್ತಿಯ ವ್ಯಕ್ತಿತ್ವ ನೋಡಿ ಮತ ನೀಡಬೇಕು. ಪ್ರಜಾಪ್ರಭುತ್ವದ ಮೌಲ್ಯ ಕಾಪಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT