ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಪೊರೆಯುವ ನಾಯಕತ್ವದ ತುರ್ತು

ಬಿಕ್ಕಟ್ಟು ನಿವಾರಣೆಯಲ್ಲಿ ಮಹಿಳಾ ನೇತಾರರು ತೋರಿದ ಪ್ರಬುದ್ಧತೆ ಮನನೀಯ
Last Updated 21 ಜೂನ್ 2020, 19:51 IST
ಅಕ್ಷರ ಗಾತ್ರ

‘ಹೆಚ್ಚು ಶಾಂತಿಯುತ ಹಾಗೂ ಕಡಿಮೆ ಹಿಂಸಾತ್ಮಕ ಪ್ರಪಂಚಕ್ಕಾಗಿ ಜಾಗತಿಕ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ನಾಯಕತ್ವ ಮೂಡಿಬರಬೇಕು. ವಿಶ್ವದ ನಾಯಕರಲ್ಲಿ ಹೆಚ್ಚಿನವರು ಮಹಿಳೆಯರಾಗಿದ್ದಲ್ಲಿ, ಆಗ ಬಹುಶಃ ಕಡಿಮೆ ಸಮಸ್ಯೆ, ಕಡಿಮೆ ಹಿಂಸಾಚಾರ… ಎಂಬುದು ನನ್ನ ಭಾವನೆ’ ಎಂದು ದಲೈಲಾಮಾಅವರು ಇತ್ತೀಚೆಗೆ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಕಳೆದ ಕೆಲವು ತಿಂಗಳುಗಳಲ್ಲಿಕೊರೊನಾ ವೈರಸ್ ನಮ್ಮ ಬದುಕಿನಲ್ಲಿ ಸೃಷ್ಟಿಸಿರುವ ತಲ್ಲಣಗಳ ಮಧ್ಯೆಯೇ ಮಹಿಳಾ ನಾಯಕತ್ವದ ಚರ್ಚೆ ಮುನ್ನೆಲೆಗೆ ಬಂದಿರುವುದನ್ನು ನಾವು ಗಮನಿಸಿದ್ದೇವೆ. ಈ ಚರ್ಚೆಗೆ ದಲೈಲಾಮಾ ಮಾತೂ ಪುಷ್ಟಿ ನೀಡಿದಂತಾಗಿದೆ.

ನಾಯಕನೆಂದರೆ ಉತ್ಪ್ರೇಕ್ಷಿತ ದೃಢಕಾಯದ, ಛಲವಂತನಾದ ಭುಜಬಲದ ಪರಾಕ್ರಮಿ, ವೀರಾಗ್ರಣಿ, ಎಲ್ಲರನ್ನೂ ಹೆದರಿಕೆಯಲ್ಲಿ ಇಟ್ಟುಕೊಳ್ಳಬಲ್ಲ ಬಲಿಷ್ಠ ಎಂಬಂಥ ಪರಿಕಲ್ಪನೆ ಇದೆ. ಈ ಗುಣವಿಶೇಷಗಳನ್ನು ಸಾಮಾನ್ಯವಾಗಿ ಪುರುಷರಿಗೇ ಅನ್ವಯಿಸಲಾಗುತ್ತದೆ. ಆದರೆ ಈಗ ಜಗತ್ತಿನಲ್ಲಿ ಸುದ್ದಿಯಲ್ಲಿರುವ ಮಹಿಳಾ ನೇತಾರರು ಈ ಪರಿಕಲ್ಪನೆಗಳಿಗೆ ಸಡ್ಡುಹೊಡೆದಿದ್ದಾರೆ ಎಂಬುದು ಇಲ್ಲಿ ಮುಖ್ಯ.

ಕೋವಿಡ್- 19 ಬಿಕ್ಕಟ್ಟು ನಿಭಾಯಿಸುವಲ್ಲಿ ಮಹಿಳಾ ನೇತಾರರು ಪ್ರದರ್ಶಿಸಿರುವ ಸಂವೇದನಾಶೀಲತೆ ಪರಿಣಾಮಕಾರಿಯಾದದ್ದು.ಪ್ರಧಾನಿ ಜೆಸಿಂದಾ ಅರ್ಡರ್ನ್ ನೇತೃತ್ವದ ನ್ಯೂಜಿಲೆಂಡ್ ಈಗ ‘ಕೋವಿಡ್‌ಮುಕ್ತ’ ಎಂದು ಇತ್ತೀಚೆಗೆ ಘೋಷಿಸಿಕೊಂಡಿತು. ಸ್ಕಾಟ್‌ಲೆಂಡ್, ಐಸ್‌ಲ್ಯಾಂಡ್, ನಾರ್ವೆ, ಫಿನ್‌ಲ್ಯಾಂಡ್, ಕೆರೆಬಿಯನ್ ದ್ವೀಪ ರಾಷ್ಟ್ರ ಸಿಂಟ್ ಮಾರ್ಟೆನ್, ತೈವಾನ್, ಡೆನ್‌ಮಾರ್ಕ್, ಎಸ್ಟೋನಿಯಾ, ಜರ್ಮನಿಯಂತಹ ಮಹತ್ವದ ಹಾಗೂ ಸಣ್ಣಪುಟ್ಟ ರಾಷ್ಟ್ರಗಳಲ್ಲಿನ ಮಹಿಳಾ ನೇತಾರರು ಕೊರೊನಾ ಬಿಕ್ಕಟ್ಟನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಮಹಿಳೆಯರು ಅಳವಡಿಸಿಕೊಂಡ ಕಾರ್ಯವಿಧಾನವೇ ವಿಭಿನ್ನ. ಮುನ್ನೋಟಗಳಿರುವ ವಿವೇಚನಾಯುಕ್ತ ನಿರ್ಣಾಯಕ ನಡೆಗಳನ್ನು ಪ್ರದರ್ಶಿಸಿದ್ದಾರೆ.ಪೊರೆಯುವ ತಾಯ್ತನದ ಗುಣಗಳೂ ನಾಯಕತ್ವದ ದೊಡ್ಡ ಬಲವಾಗಿ ಮುನ್ನೆಲೆಗೆ ಬಂದಿರುವುದು ವಿಶೇಷ.

ವಿಶ್ವದ ರಾಜಕೀಯ ನಾಯಕಿಯರ ಪ್ರಮಾಣ ಈ 21ನೇ ಶತಮಾನದಲ್ಲೂ ಕೇವಲ ಶೇ 7. ನಿತ್ಯದ ಆಡಳಿತಕ್ಕೆ ಅಗತ್ಯವಾದಸಂಕಲ್ಪದ ಜೊತೆಗೇ ಈ ಮಹಿಳೆಯರು ಪ್ರದರ್ಶಿಸಿದ ಕಾರುಣ್ಯ,ಸಹಾನುಭೂತಿಯ ಸಂವೇದನೆಗಳು ಈಗ ಯಶಸ್ವಿ ನಾಯಕತ್ವದ ಮಾದರಿಗಳೆನಿಸಿವೆ.

ಜರ್ಮನಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರು ಸಾವುನೋವು ತಡೆಗೆ ಪ್ರತೀ ವ್ಯಕ್ತಿಯ ಪಾತ್ರ ಹೇಗೆ ಮುಖ್ಯವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತಾ ಹೇಳಿದ್ದ ಮಾತುಗಳಿವು: ‘ಈ ಸಾವು ನೋವುಗಳು ಬರೀ ಅಮೂರ್ತ ಅಂಕಿ ಅಂಶಗಳಲ್ಲ. ಅದು ಅಪ್ಪ, ತಾತ,ಅಮ್ಮ, ಅಜ್ಜಿ, ಸಂಗಾತಿ ಯಾರು ಬೇಕಾದರೂ ಆಗಬಹುದು. ಪ್ರತೀ ಜೀವ ಹಾಗೂ ಪ್ರತೀ ವ್ಯಕ್ತಿಯೂ ಮುಖ್ಯವಾಗುವ ಸಮುದಾಯ ನಮ್ಮದು’.

ಈ ಮಹಿಳಾ ನೇತಾರರ ಪ್ರತಿಸ್ಪಂದನಗಳಲ್ಲಿ ಮೌಲ್ಯಗಳಿವೆ, ಮನುಷ್ಯತ್ವವಿದೆ. ತಜ್ಞರ ಸಲಹೆಗಳಿಗೆ ಅವರು ಓಗೊಟ್ಟಿದ್ದಾರೆ. ಯೋಜನೆಗಳ ಅನುಷ್ಠಾನದಲ್ಲಿ ವಿವೇಚನೆ ಪ್ರದರ್ಶಿಸಿದ್ದಾರೆ. ಈ ಪಯಣದಲ್ಲಿ ಜನರನ್ನೂ ತಮ್ಮೊಟ್ಟಿಗೆ ತೊಡಗಿಸಿಕೊಂಡಿದ್ದಾರೆ ಎಂಬುದು ಆ ದೇಶಗಳ ವರದಿಗಳನ್ನು ಓದಿದಾಗ ಮನದಟ್ಟಾಗುತ್ತದೆ. ವೈದ್ಯಕೀಯ ಪ್ರತಿಸ್ಪಂದನಗಳಲ್ಲಿ ವಿಜ್ಞಾನಿಗಳದ್ದೇ ನೇತೃತ್ವಕ್ಕೆ ಅವಕಾಶ ಮಾಡಿಕೊಡುತ್ತಿರುವುದಾಗಿ ನಾರ್ವೆ ಪ್ರಧಾನಿ ಎರ್ನಾ ಸೋಲ್‌ಬರ್ಗ್ ಹೇಳಿದ್ದರು. ವೈರಸ್‌ನ ಉಚಿತ ಪರೀಕ್ಷೆಗಳ ತಕ್ಷಣದ ಲಭ್ಯತೆ ಹಾಗೂ ಸೋಂಕು ಸಂಪರ್ಕ ಪತ್ತೆ ಮಾಡುವ ವಿಸ್ತೃತ ತಂಡ ರಚನೆಗೆ ಐಸ್‌ಲ್ಯಾಂಡ್ ಪ್ರಧಾನಿ ಕತ್ರಿನ್ ಜಾಕೋಬ್ಸ್ ಡೊಟಿರ್ ಅವರು ರಾಷ್ಟ್ರದಲ್ಲಿ ಇನ್ನೂ ವೈರಸ್ ಬೇರೂರುವ ಮುನ್ನವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು. ತೈವಾನ್ ಅಧ್ಯಕ್ಷೆ ತ್ಸಾಯಿ ಇಂಗ್ ವೆನ್, ಮಾನವ- ಮಾನವರ ಮಧ್ಯದ ಪಸರಿಸುವಿಕೆಯ ಸಾಧ್ಯತೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಸಂಶಯದಲ್ಲಿರುವಾಗಲೇ ಜನವರಿಯಲ್ಲೇ ನೂರಕ್ಕೂ ಹೆಚ್ಚು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಪ್ರಕಟಿಸಿದ್ದರು.ಗೊಂದಲಗೊಂಡಿರುವ ಮಕ್ಕಳು ಹಾಗೂ ಯುವಜನರೊಂದಿಗೆ ವಿಶೇಷ ಮಾತುಕತೆಗಳನ್ನೂ ಕೆಲವು ನಾಯಕಿಯರು ನಡೆಸಿದ್ದಾರೆ. ನಮ್ಮದೇ ರಾಷ್ಟ್ರದ ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರ ಕಾರ್ಯವಿಧಾನವೂ ಜಾಗತಿಕ ಮೆಚ್ಚುಗೆಗೆ ಕಾರಣವಾಯಿತು.

ಮಹಿಳಾ ನೇತಾರರೆಲ್ಲಾ ಯಾವಾಗಲೂ ಪುರುಷ ನಾಯಕರಿಗಿಂತ ಉತ್ತಮ ಸಾಧನೆ ತೋರುತ್ತಾರೆ ಎಂದೇನೂ ಹೇಳಬೇಕಿಲ್ಲ ಎಂಬುದು ನಿಜ. ಆದರೆ, ಈ ನಾಯಕಿಯರು ಪ್ರದರ್ಶಿಸಿದ ನಾಯಕತ್ವದ ಶೈಲಿಗಳು ಜಗತ್ತಿನ ಬಲಾಢ್ಯ ರಾಜಕೀಯ ನೇತಾರರದ್ದಕ್ಕಿಂತ ಭಿನ್ನವಾದವು ಎಂಬುದನ್ನಂತೂ ಒಪ್ಪಬೇಕು. ಬಹುಶಃ ಈ ಮಹಿಳೆಯರ ನಾಯಕತ್ವ ಪ್ರತಿಪಾದಿಸಿರುವುದು ಮೊದಲು ಮಾನವತ್ವದ ಪಾಠ. ನಂತರ ರಾಷ್ಟ್ರೀಯವಾದ.

ನಾಯಕತ್ವದ ಪರಿಕಲ್ಪನೆಗಳು ಬದಲಾಗಬೇಕಿವೆ ಎಂಬುದು ಈಗ ಹೆಚ್ಚು ಪ್ರಸ್ತುತ. ಹವಾಮಾನ ಬದಲಾವಣೆ, ಸಾರ್ವಜನಿಕಆರೋಗ್ಯ ಸಮಸ್ಯೆಗಳು, ಬರಿದಾಗುತ್ತಿರುವ ಭೂಮಿಯ ಸಂಪನ್ಮೂಲಗಳಂತಹ ಹಲವು ಆಯಾಮಗಳುಳ್ಳ 21ನೇ ಶತಮಾನದ ಹೊಸಹೊಸ ಸವಾಲುಗಳಿಗೆ ಹೊಸ ನಾಯಕತ್ವ ಮಾದರಿಗಳೂ ಬೇಕು. ಜನಸಂಖ್ಯೆಯ ಅರ್ಧ ಭಾಗವನ್ನು ನಾಯಕತ್ವ ಸ್ಥಾನಗಳಿಂದಲೇ ಹೊರಗಿಡುವಂತಹ ವ್ಯವಸ್ಥೆಯು ಸರ್ವಮಾನ್ಯವಾದ ಆಡಳಿತವಾಗುವುದು ಅಸಾಧ್ಯ. ಆಡಳಿತದ ನಿರೂಪಣೆ, ಪ್ರಸ್ತುತಿ ಹಾಗೂ ಕಥನಗಳು ಬದಲಾಗಬೇಕಾದ ತುರ್ತು ಇಂದಿನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT