ಲಸಿಕೆ ಮನುಕುಲಕ್ಕೆ ದೊರೆತ ಅತ್ಯುನ್ನತ ಆವಿಷ್ಕಾರ. ಕೆಲವು ಕಾಯಿಲೆಗಳನ್ನು ನಿಗ್ರಹಿಸಲು ಇದು ಅತ್ಯಂತ ಪರಿಣಾಮಕಾರಿಯಾದ ಮತ್ತು ಪ್ರಬಲವಾದ ಅಸ್ತ್ರ. ಲಸಿಕೆಯ ಆವಿಷ್ಕಾರಕ್ಕೂ ಮೊದಲು, ಸೋಂಕಿನ ಕಾಯಿಲೆಗಳು ಸಹಸ್ರಾರು ಜನರ ಸಾವು ನೋವಿಗೆ ಕಾರಣವಾಗಿದ್ದವು. ಎಡ್ವರ್ಡ್ ಜೆನ್ನರ್ ಎಂಬ ವೈದ್ಯ ವಿಜ್ಞಾನಿ ಮೊದಲಿಗೆ ಲಸಿಕೆಯನ್ನು ಕಂಡುಹಿಡಿದ. ಸಿಡುಬು ಕಾಯಿಲೆಗೆ ಆತ ಸಿದ್ಧಪಡಿಸಿದ ಲಸಿಕೆಯನ್ನು ಯಶಸ್ವಿಯಾಗಿ ಪ್ರಯೋಗಿಸಿ, ಆ ಕಾಯಿಲೆಯನ್ನು ವಿಶ್ವದಿಂದಲೇ ನಿರ್ಮೂಲ ಮಾಡಿರುವುದು ವೈದ್ಯಲೋಕದ ಹೆಮ್ಮೆಯ ಸಾಧನೆ.
ಸಿಡುಬು ಸಂಪೂರ್ಣವಾಗಿ ಕಣ್ಮರೆಯಾಗುತ್ತಾ ಬಂದಂತೆ, ವಿಶ್ವ ಆರೋಗ್ಯ ಸಂಸ್ಥೆಯು ‘ವಿಸ್ತರಣಾ ಲಸಿಕಾ ಕಾರ್ಯಕ್ರಮ’ ಎಂಬ ಬೃಹತ್ ಕಾರ್ಯಕ್ರಮವನ್ನು ಜಾರಿಗೆ ತಂದಿತು. ಅಂದಿನ ದಿನಗಳಲ್ಲಿ ಜನರನ್ನು ಹೆಚ್ಚು ಬಾಧಿಸುತ್ತಿದ್ದ ಆರು ಸೋಂಕಿನ ಕಾಯಿಲೆಗಳಾದ ಕ್ಷಯ, ಗಂಟಲಮಾರಿ, ನಾಯಿಕೆಮ್ಮು, ಧನುರ್ವಾಯು, ದಡಾರ ಮತ್ತು ಪೋಲಿಯೊ ವಿರುದ್ಧ ಲಸಿಕೆ ನೀಡುವುದಕ್ಕೆ ಈ ಕಾರ್ಯಕ್ರಮದಲ್ಲಿ ಒತ್ತು ನೀಡಲಾಗಿತ್ತು. ಹೆಚ್ಚು ಹೆಚ್ಚು ಕಾಯಿಲೆಗಳಿಗೆ ಲಸಿಕೆ ತಯಾರಿಸಿ ಯಶಸ್ವಿಯಾಗಿ ಕೊಡುವುದು, ದೇಶದ ಮೂಲೆ ಮೂಲೆಗೂ ಲಸಿಕೆಗಳು ತಲುಪುವಂತೆ ಮಾಡುವುದು ಇದರ ಮುಖ್ಯ ಯೋಜನೆಗಳಾಗಿದ್ದವು.
ಸಿಡುಬಿನ ನಂತರ ನಾವು ಕಾರ್ಯಪ್ರವೃತ್ತರಾದದ್ದು ಪೋಲಿಯೊ ಹೊಡೆದೋಡಿಸಲು. ಪ್ರತಿವರ್ಷವೂ ಡಿಸೆಂಬರ್ ಮತ್ತು ಜನವರಿ ತಿಂಗಳ ಎರಡು ನಿರ್ದಿಷ್ಟ ದಿನಗಳಂದು ಇಡೀ ದೇಶದ ಎಲ್ಲಾ ಐದು ವರ್ಷದೊಳಗಿನ ಮಕ್ಕಳಿಗೆ ಈ ಲಸಿಕೆಯನ್ನು ಹಾಕುವಂತಹ ವಿಶೇಷ ಕಾರ್ಯಕ್ರಮವನ್ನು ಜಾರಿಗೊಳಿಸಲಾಯಿತು. ಇದರ ಪರಿಣಾಮವಾಗಿ, 2014ರ ಮೇ ತಿಂಗಳಲ್ಲಿ ಭಾರತವನ್ನು ‘ಪೋಲಿಯೊಮುಕ್ತ ದೇಶ’ ಎಂದು ಪರಿಗಣಿಸಿದ್ದು ನಮ್ಮ ಮತ್ತೊಂದು ಹೆಮ್ಮೆಯ ಸಾಧನೆ.
ವಿಸ್ತರಣಾ ಕಾರ್ಯಕ್ರಮದ ಪಟ್ಟಿಗೆ ಇನ್ನೂ ಹೆಚ್ಚಿನ ಲಸಿಕೆಗಳು ಸೇರ್ಪಡೆಯಾಗುತ್ತಲೇ ಬಂದಿವೆ. ಪ್ರಸ್ತುತ ಹೆಪಟೈಟಿಸ್ ಬಿ, ಪೋಲಿಯೊ ಚುಚ್ಚುಮದ್ದು, ರೋಟಾ ವೈರಾಣು, ನ್ಯೂಮೋಕಾಕಲ್ ಕಾಂಜ್ಯುಗೇಟ್, ಹಿಮೋಫಿಲಸ್ ಟೈಪ್ ಬಿ ಮುಖ್ಯವಾದವು. ಇವುಗಳನ್ನು ಸರ್ಕಾರ ಉಚಿತವಾಗಿ ಪೂರೈಸುತ್ತಿರುವುದು ಸೋಂಕಿನ ಇಳಿಮುಖಕ್ಕೆ ಮುಖ್ಯ ಕಾರಣವಾಗಿದೆ.
ಈ ಪಟ್ಟಿಯಲ್ಲಿ ಸೇರದ ಇನ್ನೂ ಹಲವು ಲಸಿಕೆಗಳನ್ನು ಭಾರತೀಯ ಶಿಶು ವೈದ್ಯ ಅಕಾಡೆಮಿ ಅನುಮೋದಿಸುತ್ತದೆ. ತುಸು ದುಬಾರಿಯಾದ ಈ ಲಸಿಕೆಗಳನ್ನು ಸರ್ಕಾರ ಉಚಿತವಾಗಿ ಕೊಡದಿದ್ದರೂ ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳ ತಜ್ಞರ ಸಲಹೆಯ ಮೇರೆಗೆ ತೆಗೆದುಕೊಳ್ಳಬಹುದು. ಈ ಪಟ್ಟಿಯಲ್ಲಿ ವ್ಯಾರಿಸೆಲ್ಲಾ, (ಅಮ್ಮಾ, ಸಣ್ಣ ದಡಾರ), ಟೈಫಾಯ್ಡ್, ಹೆಪಟೈಟಿಸ್ ಎ, ಎಚ್‍ಪಿವಿ ಮುಖ್ಯವಾದವು. ಇದೀಗ ಸರ್ಕಾರವು ಮಹಿಳೆಯರಿಗೆ ಗರ್ಭಕೊರಳಿನ ಕ್ಯಾನ್ಸರ್‌ನಿಂದ ರಕ್ಷಣೆ ನೀಡುವ ಎಚ್‍ಪಿವಿ ಲಸಿಕೆಯ ಅಭಿಯಾನವನ್ನು ಪ್ರಾರಂಭಿಸಿದೆ. ಈ ಲಸಿಕೆಯನ್ನು 9-14 ವರ್ಷದ ಕಿಶೋರಿಯರಿಗೆ ಉಚಿತವಾಗಿ ಪೂರೈಸುವುದರ ಬಗ್ಗೆ ಚಿಂತನೆ ನಡೆಸಿದೆ.
ಕೆಲವು ಸ್ಥಳೀಯ ಕಾಯಿಲೆಗಳಿಗೆ ಆಯಾ ಪ್ರದೇಶಗಳಲ್ಲಿ ಮಾತ್ರವೇ ಲಸಿಕೆಗಳನ್ನು ಕೊಡುವ ವ್ಯವಸ್ಥೆ ಕೂಡ ಚಾಲ್ತಿಯಲ್ಲಿದೆ. ಉದಾಹರಣೆಗೆ, ಜಪಾನೀಸ್ ಎನ್ಸೆಫಲೈಟಿಸ್ (ಮೆದುಳು ಜ್ವರ) ಲಸಿಕೆಯನ್ನು ಉತ್ತರಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಕರ್ನಾಟಕದ ಕೆಲವು ಪ್ರದೇಶಗಳಲ್ಲಿಯೂ ಮತ್ತು ಮಂಗನ ಕಾಯಿಲೆಗೆ ಲಸಿಕೆಯನ್ನು ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಗ್ರಾಮಗಳಲ್ಲಿಯೂ ಉಚಿತವಾಗಿ ಪೂರೈಸಲಾಗುತ್ತಿದೆ.
ಇನ್ನು ಕೆಲವು ಲಸಿಕೆಗಳನ್ನು ವಿದೇಶಗಳಿಗೆ ಭೇಟಿ ನೀಡುವ ಪ್ರಯಾಣಿಕರಿಗೆ ಕೊಡಲಾಗುತ್ತದೆ. ಆ ಪ್ರದೇಶದ ಸ್ಥಳೀಯ ಕಾಯಿಲೆಯ ರೋಗಾಣುವನ್ನು ಪ್ರಯಾಣಿಕರು ನಮ್ಮ ದೇಶಕ್ಕೆ ಹೊತ್ತು ತರಬಾರದು ಎಂಬುದು ಇದರ ಉದ್ದೇಶ. ಉದಾಹರಣೆಗೆ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಕ್ಕೆ ತೆರಳುವವರಿಗೆ ‘ಎಲ್ಲೋ ಫೀವರ್’ ಲಸಿಕೆಯನ್ನು ಕೊಡಲಾಗುತ್ತದೆ.
ಲಸಿಕೆ ಎಂದಾಕ್ಷಣ ಮಕ್ಕಳಿಗೆ ಕೊಡುವ ಲಸಿಕೆಗಳಷ್ಟೇ ಎಲ್ಲರಿಗೂ ನೆನಪಾಗುತ್ತವೆ. ಹಿರಿಯರು ಹಾಕಿಸಿಕೊಳ್ಳಬಹುದಾದ ಲಸಿಕೆಗಳೂ ಇವೆ. ಇವುಗಳಲ್ಲಿ ಮುಖ್ಯವಾದ ಇನ್‍ಫ್ಲೂಯೆಂಜಾ, ನ್ಯೂಮೋಕಾಕಲ್ ಲಸಿಕೆಗಳು ಶ್ವಾಸಕೋಶದ ಸೋಂಕಿನ ವಿರುದ್ಧ ರಕ್ಷಣೆಯನ್ನು ಒದಗಿಸುತ್ತವೆ. ರೋಗನಿರೋಧಕ ವ್ಯವಸ್ಥೆಯು ಶಿಥಿಲವಾದಾಗ ಸಂಭವಿಸುವ ಸರ್ಪಸುತ್ತು ಅಥವಾ ಹರ್ಪಿಸ್ ಜೋಸ್ಟರ್ ಸೋಂಕಿಗೂ ಲಸಿಕೆಯು ಈಗಾಗಲೇ ಸಿದ್ಧವಾಗಿದೆ. ಲಸಿಕೆಗಳನ್ನು ಸಂಗ್ರಹಿಸಿ ಇಡುವ ವ್ಯವಸ್ಥೆ ಕೂಡ ಅತಿಮುಖ್ಯ. ಇಂತಿಷ್ಟೇ ನಿಗದಿತ ಉಷ್ಣತೆಯಲ್ಲಿ, ಸೂಕ್ತ ರೆಫ್ರಿಜಿರೇಟರ್‌ಗಳಲ್ಲಿ ಇಡಬೇಕು. ಸಂಗ್ರಹಣಾ ವ್ಯವಸ್ಥೆಯಲ್ಲಿ ಎಲ್ಲಿಯೂ ವ್ಯತ್ಯಯವಾಗಬಾರದು. ಅಂತೆಯೇ ಲಸಿಕೆಗಳನ್ನು ಸಾಗಿಸುವಾಗಲೂ ಅತ್ಯಂತ ಜಾಗ್ರತೆ ವಹಿಸಬೇಕು. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದಾಗ ಸೂಕ್ತ ಬದಲಿ ವ್ಯವಸ್ಥೆ ಇರುವುದನ್ನು ಖಾತರಿ ಮಾಡಿಕೊಳ್ಳಬೇಕು.
ಪ್ರತಿಯೊಂದು ಲಸಿಕೆಗೂ ನಿರ್ದಿಷ್ಟ ಜೀವಿತಾವಧಿ ಇರುತ್ತದೆ. ಹಾಗಾಗಿ, ಶುಶ್ರೂಷಕರು ಲಸಿಕೆಗಳನ್ನು ಕೊಡುವ ಮೊದಲು ಅದರ ಜೀವಿತಾವಧಿಯನ್ನು ಪರಿಶೀಲಿಸಿ ನೋಡುವ ಅಭ್ಯಾಸ ಒಳ್ಳೆಯದು. ಈ ಸಣ್ಣಪುಟ್ಟ ಎಚ್ಚರಿಕೆಗಳು ಕೂಡ ಲಸಿಕಾ ಕಾರ್ಯಕ್ರಮದ ಪೂರ್ಣ ಪ್ರಮಾಣದ ಯಶಸ್ಸಿಗೆ ಪೂರಕವಾಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.