ಭಾನುವಾರ, ಜೂಲೈ 12, 2020
22 °C
ಪ್ರತಿಮಾ ನಾಶದಿಂದ ಇತಿಹಾಸದ ಪುನರ್‌ನಿರ್ಮಾಣ ಸಾಧ್ಯವೇ?

ಸಂಗತ | ಪ್ರತಿಮೆ ಎಂಬ ಹೆಜ್ಜೆಗುರುತು

ಡಾ. ಜ್ಯೋತಿ Updated:

ಅಕ್ಷರ ಗಾತ್ರ : | |

Prajavani

ಯಾವುದೇ ದೇಶದ ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದರೆ, ಕೆಲವೊಂದು ಸ್ಥಾಪಿತ ಪ್ರತಿಮೆಗಳು ಮತ್ತು ಅವುಗಳನ್ನು ಸುತ್ತುವರಿದ ರಾಜಕಾರಣದ ಕುರುಹುಗಳು ವಿಶಿಷ್ಟ ಸಂಕೇತಗಳಾಗಿ ಕಾಣಸಿಗುತ್ತವೆ. ಇವುಗಳ ಹಿನ್ನೆಲೆ ಗಮನಿಸಿದರೆ, ಕೆಲವು ಬೃಹತ್ ಪ್ರತಿಮೆಗಳನ್ನು ಸ್ವತಃ ಆ ‘ಮಹಾನ್’ ವ್ಯಕ್ತಿಗಳೇ ಸ್ವಪ್ರೇಮದಿಂದ ಅಥವಾ ಬಹಳ ಹಿರಿದಾದ ತಮ್ಮ ವ್ಯಕ್ತಿತ್ವ ಮುಂದಿನ ಜನಾಂಗಗಳಿಗೆ ಆದರ್ಶಪ್ರಾಯವಾಗುವ ಎಲ್ಲ ಸಾಧ್ಯತೆಗಳಿವೆ ಎನ್ನುವ ಸ್ವನಂಬಿಕೆಯಿಂದ, ತಮ್ಮ ಸಾಮ್ರಾಜ್ಯದ ಉದ್ದಗಲಕ್ಕೂ ಸ್ಥಾಪಿಸಿದ ಉದಾಹರಣೆಗಳಿವೆ. ಈ ಸ್ವಪ್ರೀತಿ ಮುಂದುವರಿದು, ತಾವು ವಶಪಡಿಸಿಕೊಂಡ ಪ್ರದೇಶಗಳಲ್ಲೂ ಇವು ಗಳನ್ನು ಸ್ಥಾಪಿಸಿದ್ದಿದೆ. ಇದಕ್ಕೆ ವ್ಯತಿರಿಕ್ತವಾಗಿ, ಅವರ ಸಾಮ್ರಾಜ್ಯಕ್ಕೆ ದಾಳಿಯಾದಾಗ ಮೊದಲು ಬಲಿಪಶುಗಳಾಗಿರುವುದು ಈ ಬಡಪಾಯಿ ಪ್ರತಿಮೆಗಳೇ.

ಇನ್ನು ಕೆಲವು ಪ್ರತಿಮೆಗಳನ್ನು ಸ್ಥಾಪಿಸುವುದು ಅವರ ಅಭಿಮಾನಿಗಳು. ಇದು ಹೆಚ್ಚಾಗಿ, ವ್ಯಕ್ತಿ ಅಳಿದ ಮೇಲೆ ಅವರ ನೆನಪು ಮತ್ತು ಪ್ರಭಾವ ಮಾಸದಿರಲಿ ಎನ್ನುವ ಸದುದ್ದೇಶ ಹೊಂದಿರುತ್ತದೆ. ಅಭಿಮಾನಿ ದೇವರುಗಳಿಂದ ಸ್ಥಾಪನೆಗೊಂಡ ಪ್ರತಿಮೆಗಳಲ್ಲಿ ದೇವರು, ಇತಿಹಾಸ ಪ್ರಸಿದ್ಧರು, ರಾಷ್ಟ್ರ ನಾಯಕರು, ಸಿನಿಮಾ ತಾರೆಯರು ಇತ್ಯಾದಿ ವೈವಿಧ್ಯಗಳಿವೆ. ಅಭಿಮಾನಿಗಳ ಪ್ರೀತಿಬಂಧದಲ್ಲಿ ಸಿಕ್ಕಿಹಾಕಿಕೊಂಡ ಪ್ರತಿಮೆಗಳು ಕೆಲವೊಮ್ಮೆ ತಮ್ಮ ಉದ್ದ, ಅಗಲ, ಗಾತ್ರ, ತೂಕದ ವಿಷಯದಲ್ಲಿ ಉಳಿದ ಪ್ರತಿಮೆಗಳೊಂದಿಗೆ ಸ್ಪರ್ಧೆಗಿಳಿಯುವುದಿದೆ. ಈ ಅಭಿಮಾನಿಗಳನ್ನು ಕೆರಳಿಸುವುದಕ್ಕಾಗಿ ಕೆಲವೊಮ್ಮೆ ಪ್ರತಿಮೆಗಳಿಗೆ ಚಪ್ಪಲಿ ಹಾರ ಅಥವಾ ಬಣ್ಣ ಬಳಿದು ಅವಮಾನ ಮಾಡಿದ ಉದಾಹರಣೆಗಳಿವೆ.

ನಮ್ಮ ದೇಶದಲ್ಲಿನ ಪ್ರತಿಮಾ ರಾಜಕೀಯವನ್ನು ಗಮನಿಸಿದರೆ, ಕೆಲವು ವರ್ಷಗಳ ಹಿಂದೆ ಮಾಯಾವತಿ ಅವರು ಉತ್ತರ ಪ್ರದೇಶದುದ್ದಕ್ಕೂ ತಮ್ಮ ಬೃಹತ್ ಪ್ರತಿಮೆಗಳ ಸ್ಥಾಪನೆಗೆ ಕ್ರಮ ಕೈಗೊಂಡಿದ್ದರು. ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ‘ಹುಮ್ಮಸ್ಸಿ’ನಲ್ಲಿ, ಅಲ್ಲಿಯವರೆಗೆ ಬೇರೂರಿದ್ದ ಕಮ್ಯುನಿಸ್ಟ್ ನಾಯಕರ ಪ್ರತಿಮೆಗಳನ್ನು ಕೆಡವಿಹಾಕಲಾಗಿತ್ತು. ಗುಜರಾತಿನಲ್ಲಿ ಈಚೆಗೆ ಸ್ಥಾಪಿಸಿದ ವಲ್ಲಭಬಾಯಿ ಪಟೇಲರ ಪ್ರತಿಮೆಯು ಬೃಹತ್ ಗಾತ್ರ ಮತ್ತು ದುಬಾರಿ ವೆಚ್ಚಕ್ಕಾಗಿ ಹೆಸರು ಮಾಡಿತ್ತು.

ಈ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಈಗ ನಡೆಯುತ್ತಿರುವ ಪ್ರತಿಮಾ ರಾಜಕೀಯ ಹೊಸ ಚರ್ಚೆಗೆ ಗ್ರಾಸವಾಗಿದೆ. ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವರ್ಣೀಯ, ಪೊಲೀಸರ ದೌರ್ಜನ್ಯದಿಂದ ಸತ್ತ ನಂತರ ಭುಗಿಲೆದ್ದ ಪ್ರತಿಭಟನೆ, ಜನಾಂಗೀಯ ನಿಂದನೆಯ ವಿರುದ್ಧದ ಘೋಷಣೆಗಳಿಂದ ಆರಂಭವಾಗಿ, ವಿಸ್ತಾರ ಗೊಳ್ಳುತ್ತ, ಜನರ ಆಕ್ರೋಶ ಈಗ ಐತಿಹಾಸಿಕ ಪ್ರತಿಮೆಗಳ ಮೇಲೆ ಬಿದ್ದಿದೆ. ಈ ಪ್ರತಿಮೆಗಳು ಅಭಿವ್ಯಕ್ತಿ ಸುವ ವ್ಯಕ್ತಿಗಳ ಇತಿಹಾಸವನ್ನು ಮರುಪರಿಶೀಲಿಸಿ, ವಸಾಹತು ನಾಯಕರು, ಜನಾಂಗ ನಿಂದನೆ ಮಾಡಿದವರ ಪ್ರತಿಮೆಗಳನ್ನು ಉರುಳಿಸಲಾಗುತ್ತಿದೆ. ಇವುಗಳಲ್ಲಿ, ಅಮೆರಿಕವನ್ನು ವಸಾಹತನ್ನಾಗಿಸಿದ ಕೊಲಂಬಸ್ ಮತ್ತು ಗುಲಾಮಗಿರಿಯನ್ನು ಬೆಂಬಲಿಸಿದ ದಂಡನಾಯಕರು, ಸೈನಿಕರ ಪ್ರತಿಮೆಗಳು ಹೆಚ್ಚಾಗಿವೆ. ಇದೀಗ ಇದು ಐರೋಪ್ಯ ದೇಶಗಳಿಗೂ ಹಬ್ಬಿ, ಅಲ್ಲೂ ಪ್ರತಿಮೆಗಳು ನೆಲಕ್ಕುರುಳುತ್ತಿವೆ.

ಹೀಗೆ ಪ್ರತಿಮೆಗಳನ್ನು ಕೆಡವುತ್ತಿರುವುದು ಸರಿಯೇ ಎಂದು ಚರ್ಚಿಸಬೇಕಾಗಿದೆ. ಇಂತಹ ಪ್ರತಿಮೆಗಳು ಇತಿಹಾಸದ ಕ್ರೌರ್ಯವನ್ನು ಪ್ರತಿಬಿಂಬಿಸುತ್ತವೆ, ಕೆಡಹುವ ಮೂಲಕ ಅವುಗಳ ಅಸ್ತಿತ್ವವನ್ನೇ ನಾಶ ಮಾಡಿ ಹೊಸ ಇತಿಹಾಸ ನಿರ್ಮಿಸುತ್ತಿದ್ದೇವೆ ಎಂದು ಪ್ರತಿಭಟನಕಾರರು ಹೇಳುತ್ತಾರೆ.

ಇಲ್ಲಿ ಮೂಡುವ ಮೊದಲ ಪ್ರಶ್ನೆ, ಇತಿಹಾಸಕ್ಕೆ ವಾರಸುದಾರರಿದ್ದಾರೆಯೇ? ಪ್ರತಿಮೆಗಳನ್ನು ಕೆಡಹುವುದರಿಂದ ಇತಿಹಾಸದ ಪುನರ್‌ನಿರ್ಮಾಣ ಸಾಧ್ಯವೇ? ಹಾಗೆ ಗಮನಿಸಿದರೆ, ಮಾನವನ ಇತಿಹಾಸದುದ್ದಕ್ಕೂ ಕ್ರೌರ್ಯ, ಹಿಂಸೆ, ದಬ್ಬಾಳಿಕೆ ನಡೆಯುತ್ತಲೇ ಬಂದಿದೆ (ಮಾನವ ಹಕ್ಕುಗಳ ಗಂಧ ಗಾಳಿಯಿಲ್ಲದೆ). ವಿಶೇಷವೆಂದರೆ, ಅಮೆರಿಕವು ಶ್ವೇತವರ್ಣೀಯರದ್ದೂ ಅಲ್ಲ, ಕಪ್ಪುವರ್ಣೀಯರದ್ದೂ ಅಲ್ಲ. ಕೊಲಂಬಸ್ ಕಾಲಿಟ್ಟ ಮೇಲೆ, ಶ್ವೇತವರ್ಣೀಯರ ವಲಸೆ ಮತ್ತು ಕಪ್ಪುವರ್ಣೀಯರ ಗುಲಾಮಗಿರಿ ಆರಂಭವಾದುದು. ಅಲ್ಲಿನ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ಸ್ ಎಂದೋ ನಾಮಾವಶೇಷವಾಗಿದ್ದಾರೆ. ಹೀಗೆ, ಇತಿಹಾಸ ದಲ್ಲಿ ಹಿಮ್ಮುಖವಾಗಿ ಚಲಿಸಿದಷ್ಟೂ ನಾವು ನಿಂತಿರುವ ನೆಲಕ್ಕೆ ಪರಕೀಯರಾಗುತ್ತೇವೆ.

ಈ ದಿಸೆಯಲ್ಲಿ ಇತಿಹಾಸ ಪ್ರಸ್ತುತವೇ? ಎಷ್ಟು ಪ್ರಸ್ತುತ? ಇತಿಹಾಸ ನಿರಂತರವಾಗಿ, ವರ್ತಮಾನಕ್ಕೆ ಪ್ರಸ್ತುತವಾಗುತ್ತಾ ಹೋಗುತ್ತದೆ. ಇತಿಹಾಸದ ತಪ್ಪುಗಳು ಮುನ್ನೆಚ್ಚರಿಕೆಯಾಗಿ ನಮ್ಮನ್ನು ಭವಿಷ್ಯದ ಹಾದಿಯಲ್ಲಿ ನಡೆಸಬೇಕಿದೆ.

ಇತಿಹಾಸವೆನ್ನುವುದೇ ದೊಡ್ಡ ಪ್ರತಿಮೆ, ರೂಪಕ. ಇಲ್ಲಿ ನಮ್ಮ ಪೂರ್ವಜರು ಮಾಡಿದ ಒಳಿತು– ಕೆಡುಕು ಎಲ್ಲಾ ಅಡಕವಾಗಿವೆ. ಇದರಲ್ಲಿ ಪ್ರಸ್ತುತವೆನಿಸಿದ್ದನ್ನು ಆರಿಸಿಕೊಂಡು, ಅಪ್ರಸ್ತುತವೆನಿಸಿದ್ದನ್ನು ಇತಿಹಾಸದಲ್ಲಿಯೇ ಬಿಟ್ಟು, ಮುನ್ನಡೆಯುವುದು ಶ್ರೇಯಸ್ಸು. ಇತಿಹಾಸದುದ್ದಕ್ಕೂ ದೀನದಲಿತರ, ಮಹಿಳೆಯರ ಶೋಷಣೆಯ ಕುರುಹುಗಳಿವೆ. ಎಷ್ಟನ್ನು ನಮಗೆ ಅಳಿಸಿಹಾಕಲು ಸಾಧ್ಯ? ‘ಕೆಟ್ಟ’ ಪ್ರತಿಮೆಗಳನ್ನು ನಾಶ ಮಾಡುವುದು, ಅವುಗಳ ಹಿಂದಿನ ಕ್ರೌರ್ಯವನ್ನು ಮುಂದಿನ ಜನಾಂಗದಿಂದ ಮರೆಮಾಚಿದಂತೆಯೇ. ಹಾಗಾಗಿ, ಇತಿಹಾಸದ ಕುರುಹುಗಳನ್ನು ಹಾಗೆಯೇ ಬಿಟ್ಟು, ಆದರೆ ಅರಿತುಕೊಂಡು, ಅವು ಕೊಡುವ ಸಂದೇಶದಿಂದ, ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಿರಲಿ ಎನ್ನುವುದೇ ಒಳಿತು. ಈ ಪ್ರತಿಮೆ ಗಳು, ಮಾನವ ಇತಿಹಾಸದ ಒಳಿತು– ಕೆಡುಕುಗಳ ಹೆಜ್ಜೆಗುರುತುಗಳಾಗಿ, ಸ್ಮಾರಕಗಳಾಗಿ ಉಳಿಯಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು