ಸೋಮವಾರ, ಮಾರ್ಚ್ 1, 2021
29 °C
ವನ್ಯಮೃಗಗಳ ಹತ್ಯೆ ಮಾಡುವವರಿಗೆ ಇನ್ನಷ್ಟು ಕಠಿಣ ಶಿಕ್ಷೆ ವಿಧಿಸಬೇಕಾಗಿದೆ

ಸಂಗತ| ಮೃಗವಧೆಯ ಪರಾಕಾಷ್ಠೆ

ಪ.ರಾಮಕೃಷ್ಣ ಶಾಸ್ತ್ರಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗದ ಬಳಿ ಗಣಿಯಲ್ಲಿ ಸ್ಫೋಟಕ ಸಿಡಿದು ಭಾರಿ ಅನಾಹುತವಾದ ಸುದ್ದಿಯ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಒಂದು ವಿಡಿಯೊ ಅಷ್ಟೊಂದು ಪ್ರಚಾರ ಪಡೆಯದೇ ಹೋಯಿತೇನೊ! ಆನೆಯೊಂದು ತಲೆಯ ಮೇಲೆ ಬೆಂಕಿಯ ರಾಶಿಯನ್ನೇ ಹೊತ್ತುಕೊಂಡು ವೇದನೆಯಿಂದ ಘೀಳಿಡುತ್ತ ಓಡುತ್ತಿರುವ ಕರುಳು ಹಿಂಡುವ ದೃಶ್ಯ ಅದು. ಜೊತೆಗೆ ಅದೇ ಆನೆಯ ಶವವನ್ನು ಲಾರಿಯ ಮೇಲೆ ಹೇರಿ, ಅರಣ್ಯ ಇಲಾಖೆಯ ಒಬ್ಬ ಸಿಬ್ಬಂದಿ ಅದರ ಸೊಂಡಿಲನ್ನು ಹಿಡಿದುಕೊಂಡು, ‘ಇನ್ನು ಮುಂದೆ ನಾನು ಯಾರಿಗೆ ಹಣ್ಣು ತಿನ್ನಿಸಲಿ?’ ಎಂದು ಕೇಳುತ್ತ ಗಳಗಳನೆ ಕಂಬನಿಗರೆಯುವ ಸನ್ನಿವೇಶವನ್ನು ನೋಡಿದರೆ, ಯಾವುದೇ ಭಾವುಕ ಹೃದಯ ಕೂಡ, ಕೃಷಿಯನ್ನು ನಾಶ ಮಾಡುವ ಕಾಡಾನೆ ಗಳ ಅಟಾಟೋಪವನ್ನು ಪೂರ್ಣವಾಗಿ ಮರೆತು ಎರಡು ತೊಟ್ಟು ಕಣ್ಣಹನಿ ಸುರಿಸದೇ ಇರಲಾರದು.

ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷ ದಿನನಿತ್ಯ ನಡೆಯುತ್ತಲೇ ಇದೆ. ಒಂದೆಡೆ, ವನ್ಯಮೃಗ ಸಂರಕ್ಷಣೆಯ ಕಾಯ್ದೆ. ಇನ್ನೊಂದೆಡೆ, ಅರಣ್ಯ ಪ್ರದೇಶದಲ್ಲಿ ವಸತಿ, ಕೃಷಿ ಜೊತೆಗೆ ಐಷಾರಾಮಿ ರೆಸಾರ್ಟ್‌ಗಳನ್ನು ಕಟ್ಟಿಕೊಂಡು ಧನ ಸಂಪಾದನೆಯ ಮಾರ್ಗ ಹಿಡಿದವರ ತಲೆಯ ಮೇಲೂ ಅದೇ ಸರ್ಕಾರದ ರಾಜಕಾರಣಿಗಳು, ಅಧಿಕಾರಿಗಳು ಆಶೀರ್ವಾದದ ಹಸ್ತ ಇಟ್ಟುಬಿಟ್ಟಿದ್ದಾರೆ. ನಿಯಂತ್ರಣ
ವಿಲ್ಲದೆ ಬೆಳೆಯುತ್ತಿರುವ ವನ್ಯಮೃಗ ಸಂಕುಲಕ್ಕೆ ಆಹಾರ ಕೊಡಬೇಕಾದ ಅರಣ್ಯವು ಬಯಲಾಗುತ್ತಿರುವಾಗ, ಹಸಿವು ನೀಗಿಸಲು ಅವು ಮನುಷ್ಯ ವಸತಿಯತ್ತ ನುಗ್ಗದೆ ಬೇರೆ ದಾರಿಯಾದರೂ ಎಲ್ಲಿದೆ?

ಈ ಆನೆಯ ಪ್ರಕರಣವೂ ಅಂಥದ್ದೇ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮಸಿನಗುಡಿ ಮೀಸಲು ಹುಲಿ ಸಂರಕ್ಷಣೆಯ ಪ್ರದೇಶದಲ್ಲಿ ಎರಡು ತಿಂಗಳ ಹಿಂದೆ 50 ವರ್ಷದ ಕಾಡಾನೆಯೊಂದು ಬೆನ್ನಿನ ಮೇಲೆ ಗಾಯವಾಗಿ ನರಳುತ್ತಿತ್ತು. ಅರಣ್ಯ ರಕ್ಷಕರು ಅದನ್ನು ಕರೆತಂದು ಕೆಲವು ದಿನ ಚಿಕಿತ್ಸೆ ನೀಡಿದರು. ತಿನ್ನಲು ಒಳ್ಳೆಯ ಆಹಾರ ಕೊಟ್ಟರು. ಯಾರಿಗೂ ಹಾನಿ ಮಾಡದ ಪೊಲೀಸ್ ಅಧಿಕಾರಿ ಎಂಬ ಭಾವದಲ್ಲಿ ‘ಎಸ್‍ಐ’ ಎಂಬ ಹೆಸರಿನಿಂದ ಕರೆದರು. ಗಾಯ ಗುಣವಾಗುತ್ತಿದ್ದಂತೆ ಮತ್ತೆ ಕಾಡಿಗೆ ಸೇರಿಸಿಬಂದರು.

ಆದರೆ ಕೆಲವು ದಿನ ಜನರ ಪ್ರೀತಿ, ಸ್ವಾದಿಷ್ಟ ಆಹಾರ ಉಂಡಿದ್ದ ಕಾಡಾನೆ ಮತ್ತೆ ಊರಿಗೆ ಬಂದಿತು. ಅರಣ್ಯ ರಕ್ಷಕರನ್ನು ಹುಡುಕುವ ಅವಸರದಲ್ಲಿ, ಹಾದಿಯಲ್ಲಿದ್ದ ಒಂದು ರೆಸಾರ್ಟ್ ಮುಂದೆ ಐಷಾರಾಮಿ ಕಾರೊಂದಕ್ಕೆ ಭಾಗಶಃ ಹಾನಿ ಮಾಡಿತು. ಇದರಿಂದ ಕ್ರುದ್ಧನಾದ ರೆಸಾರ್ಟ್ ಮಾಲೀಕ ದಾನವನಾದ. ಟೈರಿನ ಒಳಗೆ ಸೀಮೆಎಣ್ಣೆ ತುಂಬಿಸಿ, ಬೆಂಕಿ ಹಚ್ಚಿ ಆನೆಯ ಮೇಲೆ ಎಸೆದ. ಉರಿಯುವ ಟೈರು ಆನೆಯ ತಲೆಯ ಮೇಲೆ ಸಿಲುಕಿಕೊಂಡು ಕೊಡವಿದರೂ ಕೆಳಗೆ ಬೀಳಲಿಲ್ಲ. ಆಗ ಅದರ ನೋವು, ಕೂಗು ಕಂಡೂ ಅವನ ಮನ ಕರಗಲಿಲ್ಲ. ‘ಹೋಗು, ಕಾಡಿಗೆ ಹೋಗಿ ಸಾಯಿ. ಇಲ್ಲಿ ಸಾಯಬೇಡ’ ಎಂದು ಕ್ರೂರವಾಗಿ ಹೇಳುತ್ತ ತನ್ನ ಧ್ವನಿಯನ್ನು, ಮೂಕಪ್ರಾಣಿಯ ಮರಣ ವೇದನೆಯನ್ನು ಮೊಬೈಲ್ ಮೂಲಕ ಚಿತ್ರೀಕರಣ ಮಾಡಿದ.

ಬೆಂಕಿಯ ಪ್ರಕೋಪದಿಂದ ಒದ್ದಾಡುತ್ತಿದ್ದ ಆನೆಯನ್ನು ಅರಣ್ಯ ರಕ್ಷಕರು ಗಮನಿಸಿ ಆಸ್ಪತ್ರೆಗೆ ಸಾಗಿಸಲು ಮುಂದಾದರೂ ಅದು ಜೀವ ತೊರೆಯಿತು. ಇಂತಹ ಕ್ರೌರ್ಯಕ್ಕೆ ಯಾರು ಕಾರಣರೆಂಬುದು ಬೆಳಕಿಗೆ ಬರದೇ ಹೋಗುತ್ತಿತ್ತು. ಆದರೆ ಅದನ್ನು ಚಿತ್ರೀಕರಿಸಿ ಹಿಂಸಾನಂದ ಅನುಭವಿಸಿದವನು ಆ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರ ಫಲವಾಗಿ ತಡವಾಗಿಯಾದರೂ ಬಂಧನಕ್ಕೊಳಗಾದ.

ಅರಣ್ಯ ಕಾಯ್ದೆಯ ಪ್ರಕಾರ, ಅವನಿಗೆ ಏಳು ವರ್ಷಗಳ ಸೆರೆವಾಸ ಆದರೂ ಆಗಬಹುದು. ಆದರೆ ಆನೆಯ ಶವ ಪರೀಕ್ಷೆ ಮಾಡಿದ ವೈದ್ಯರು, ‘ಬೆಂಕಿಯ ಗಾಯದಿಂದಲೇ ಆನೆ ಸತ್ತಿದೆ ಎನ್ನಲು ಬಾರದು. ಅದರ ದೇಹದಲ್ಲಿ ಬೇರೆ ಸಮಸ್ಯೆಗಳಿದ್ದವು’ ಎಂಬ ವರದಿ ನೀಡಿರುವುದು, ಪ್ರಕರಣ ಮುಚ್ಚಿಹೋಗುವ ಅಪಾಯದ ಸುಳಿವನ್ನೂ ನೀಡಿದೆಯಂತೆ.

ಕಳೆದ ವರ್ಷ ಕೇರಳದಲ್ಲಿ ಕಾಡುಹಂದಿಗಾಗಿ ಹಣ್ಣಿನೊಳಗೆ ಇರಿಸಿದ್ದ ಸ್ಫೋಟಕವನ್ನು ತಿಂದುದರ ಪರಿಣಾಮವಾಗಿ ಗರ್ಭಿಣಿ ಆನೆಯೊಂದು ಛಿದ್ರವಾಯಿತು. ಅಲ್ಲಲ್ಲಿ ಬೇಲಿಗೆ ಅಕ್ರಮ ವಿದ್ಯುತ್ ಸಂಪರ್ಕ ನೀಡಿ ಆನೆಗಳ ಸಾವಿಗೆ ಕಾರಣವಾಗುವ ಪ್ರಕರಣಗಳು ವರದಿಯಾಗುತ್ತಿವೆ.

ಆನೆ ಹತ್ಯೆಯಂತಹ ಕುಕೃತ್ಯಕ್ಕೆ ಏಳು ವರ್ಷಗಳ ಸೆರೆವಾಸ ಬಿಟ್ಟರೆ ಇನ್ನೇನಿಲ್ಲ ಎಂಬ ಭಂಡತನ ಜನರಲ್ಲಿ ಬೇರೂರಿದರೆ, ಆನೆಗಳ ಹಿಂಡು ಕೃಷಿನಾಶ ಮಾಡಿದಾಗ ಸ್ಥಿಮಿತ ಕಳೆದುಕೊಂಡ ರೈತರು ಕೂಡ ಅದೇ ದಾರಿ ಹಿಡಿದರೂ ಅಚ್ಚರಿಯಿಲ್ಲ. ಆದರೆ ಕೊಡಗು, ನೀಲಗಿರಿ ಮುಂತಾದೆಡೆಗಳ ಬಫರ್ ವಲಯಗಳಲ್ಲಿ ವಿರಾಮದ ಮನೆಗಳನ್ನು ನಿರ್ಮಿಸಿ, ವಿಹಾರಕ್ಕಾಗಿ ಬರುವವರಿಗೆ ಒದಗಿಸುವ ಉದ್ಯಮದ ಹಿಂದೆ ಇರುವ ಪ್ರತಿಷ್ಠೆಯ ಕೈಗಳ ಆಟ ನಿಲ್ಲಬೇಕಾಗಿದೆ.

ಮನುಷ್ಯನೇ ವನ್ಯಜೀವಿಗಳ ಸಾಮ್ರಾಜ್ಯವನ್ನು ಆಕ್ರಮಿಸಿ ಮಂಗಗಳು, ನವಿಲುಗಳು, ಆನೆಗಳು ಕಾಟ ಕೊಡುತ್ತಿವೆ ಎಂದು ಆರೋಪಿಸುತ್ತಿದ್ದಾನೆ. ತನಗೆ ಅಡೆತಡೆಯಾಗುವ ಮೃಗಪಕ್ಷಿಗಳನ್ನು ವಿಷ, ಸ್ಫೋಟಕ, ಕೋವಿಗಳ ಬಳಕೆ ಮಾಡಿ ನಾಶ ಮಾಡುತ್ತಿದ್ದಾನೆ. ಈ ಸಂಘರ್ಷಕ್ಕೊಂದು ನಿಲುಗಡೆ ಬೇಕಲ್ಲವೇ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು