ಗುರುವಾರ , ಆಗಸ್ಟ್ 18, 2022
24 °C
ವಿದ್ಯಾರ್ಥಿಯಲ್ಲಿ ಕಲಿಕೆ ಖಾತರಿಪಡಿಸಿಕೊಳ್ಳುವ ಪ್ರಕ್ರಿಯೆ ಬಲಪಡಿಸಬೇಕಾಗಿದೆ

ಸಂಗತ: ಪರೀಕ್ಷಾರಹಿತ ವ್ಯವಸ್ಥೆ ಹೇಗೆ?

ಡಾ. ಎಚ್.ಬಿ.ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

Prajavani

ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆ ತರುವ ದಿಸೆಯಲ್ಲಿ ಪರೀಕ್ಷೆಗಳು ಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಸಮಗ್ರ ಚರ್ಚೆಯ ಅಗತ್ಯ ಇದೆ. ಬೋಧನೆ, ಕಲಿಕೆ ಮತ್ತು ಪರೀಕ್ಷಾ ಪ್ರಕ್ರಿಯೆಗಳು ಜೊತೆಗೂಡಿ ಸಾಗುತ್ತವೆ. ಪ್ರಾಚೀನ ಕಾಲದಲ್ಲಿ ಕಲಿಕೆಯು ಶ್ರವಣ, ಮನನ, ನಿಧಿಧ್ಯಾಸನದ ಮೂಲಕ ಸಾಗುತ್ತಿತ್ತು. ನಿಯಮಿತವಾಗಿ ನಡೆಸಲಾಗುತ್ತಿದ್ದ ಚರ್ಚೆ ಹಾಗೂ ವಿಚಾರ ಸಂಕಿರಣ
ಗಳ ಮೂಲಕವೂ ಕಲಿಕೆ ನಡೆಯುತ್ತಿತ್ತು. ಶಿಷ್ಯರು ಸದಾ ಗುರುಗಳ ನೇರ ವೈಯಕ್ತಿಕ ಗಮನ, ನಿಯಂತ್ರಣದಲ್ಲಿ ಇರುತ್ತಿದ್ದರು. ಈ ಕಾರಣದಿಂದ, ಶಿಷ್ಯರಲ್ಲಾಗುತ್ತಿದ್ದ ಕಲಿಕೆಯ ಬಗ್ಗೆ ಗುರುಗಳಿಗೆ ಸಂಪೂರ್ಣ ಮಾಹಿತಿ ಇರುತ್ತಿತ್ತು.

ಬಹು ಹಿಂದಿನಿಂದಲೇ ಗ್ರೀಸ್, ಚೀನಾ, ಭಾರತ ಹಾಗೂ ವಿಶ್ವದ ಇತರೆಡೆ ಶಿಕ್ಷಣ ನೀಡಲು ವಿವಿಧ ಸ್ವರೂಪದ ಸಂಸ್ಥೆಗಳಿದ್ದವು. ಔಪಚಾರಿಕ ಸ್ವರೂಪದ ಶಾಲೆಗಳನ್ನು ಅಮೆರಿಕದ ಹೊರೆಸ್ ಮಾನ್ 18ನೇ ಶತಮಾನದಲ್ಲಿ ಸಂಶೋಧಿಸಿದ ಎನ್ನಲಾಗುತ್ತದೆ. ಅವನಿಗಿಂತ ಪೂರ್ವದಲ್ಲಿ, ಪೋಷಕರಿಗೆ ತಮ್ಮ ತುಂಟತನ, ಚೇಷ್ಟೆಗಳ ಮೂಲಕ ತೊಂದರೆ ಕೊಡುತ್ತಿದ್ದ ಮಕ್ಕಳನ್ನೆಲ್ಲಾ ಹೆನ್ರಿ ಪಿ. ಸ್ಕೂಲ್ ಎಂಬುವರು ಒಂದು ಕೊಠಡಿಯಲ್ಲಿ ಕೂಡಿಹಾಕುತ್ತಿದ್ದರು ಎನ್ನಲಾದ ಕಾರಣ ಸ್ಕೂಲ್ ಎಂಬ ಹೆಸರು ಬಂದಿದೆ ಎಂಬ ದಂತಕತೆಯಿದೆ. ಪರೀಕ್ಷೆಯನ್ನು ಅಮೆರಿಕದ ಹೆನ್ರಿ ಫಿಷಲ್ ಎಂಬುವರು ರೂಢಿಗೆ ತಂದರು ಎನ್ನಲಾಗಿದೆ.

ವೃತ್ತಿ, ಜಾತಿ, ಧರ್ಮಗಳನ್ನು ಮೀರಿ, ಸರ್ವರಿಗೂ ಪ್ರವೇಶ ನೀಡಿ ಶಿಕ್ಷಣ ನೀಡುವ ಸಾರ್ವತ್ರಿಕ ಮುಕ್ತ ಶಿಕ್ಷಣವು ಬ್ರಿಟಿಷ್ ಆಳ್ವಿಕೆಯಲ್ಲಿ ಪ್ರಾರಂಭಗೊಂಡಿತು. 1813ರ ಚಾರ್ಟರ್ ಕಾನೂನು ₹ 1 ಲಕ್ಷ ಮೊತ್ತವನ್ನು ಭಾರತೀಯರ ಶಿಕ್ಷಣಕ್ಕೆ ಮೀಸಲಿಟ್ಟಿತು. ಬ್ರಿಟಿಷ್ ಅಧಿಕಾರಿಗಳಾದ ಮೆಕಾಲೆ, ವುಡ್‍ ಅವರ ಕಾಲದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಚುರುಕು ಪಡೆಯಿತು. ಪಾಶ್ಚಾತ್ಯ ಸಾಹಿತ್ಯ, ವಿಜ್ಞಾನ, ಇಂಗ್ಲಿಷ್ ಭಾಷೆಯನ್ನು ಅಳವಡಿಸಲಾಯಿತು. ಬ್ರಿಟಿಷ್ ಆಡಳಿತಕ್ಕೆ ದೊಡ್ಡ ಸಂಖ್ಯೆಯ ಗುಮಾಸ್ತ ಹಾಗೂ ಆಡಳಿತ ವರ್ಗ ಅವಶ್ಯವಾಗಿತ್ತು. ಹೆಚ್ಚು ಶಾಲೆಗಳನ್ನು ತೆರೆದು, ಬಾಲಕಿಯರನ್ನೂ ಒಳಗೊಂಡಂತೆ ಎಲ್ಲರಿಗೂ ಶಿಕ್ಷಣ ನೀಡಲು ಕ್ರಮ ವಹಿಸಲಾಯಿತು.

ಔಪಚಾರಿಕ ಶಾಲೆಗಳಲ್ಲಿ ಏನನ್ನು, ಎಷ್ಟು ಕಲಿಯಬೇಕು ಎಂಬುದನ್ನು ನಿರ್ದಿಷ್ಟಪಡಿಸಲಾಯಿತು. ಕಲಿತದ್ದನ್ನು ತಿಳಿಯಲು ಪರೀಕ್ಷಾ ವ್ಯವಸ್ಥೆಯು ನಿರ್ದಿಷ್ಟ ರೂಪ ಪಡೆಯಿತು. ದೇಶದಲ್ಲಿ 1921ರಲ್ಲಿ ಉತ್ತರಪ್ರದೇಶದಲ್ಲಿ ಶಾಲಾ ಶಿಕ್ಷಣ ಪರೀಕ್ಷೆಗೆ ಮೊದಲ ಬೋರ್ಡ್ ಸ್ಥಾಪಿಸಲಾಯಿತು. ಶಿಕ್ಷಣವು ಹೆಚ್ಚು ಔಪಚಾರಿಕ, ನಿರ್ದಿಷ್ಟ, ಸ್ಪಷ್ಟ, ಖಚಿತವಾಗುತ್ತಾ ಹೋದಂತೆ ಕಲಿಕಾ ಬೋಧನಾ ಪ್ರಕ್ರಿಯೆ ಸಹ ಸಾಂಪ್ರದಾಯಿಕ ಎನ್ನುವಂತೆ ಆಗುತ್ತಾ ಹೋಯಿತು. ಜೊತೆಜೊತೆಗೆ ಶಾಲಾ ಶಿಕ್ಷಣವು ವ್ಯಾಪಾರೀಕರಣಗೊಳ್ಳುತ್ತ ಸಾಗಿದಂತೆ ಬಾಹ್ಯ ಆಡಂಬರ, ಒಣ ಶಿಸ್ತುಗಳು ವಿಜೃಂಭಿಸುತ್ತಾ ಹೋದವು. ಸ್ಥಾಪಿತ ಹಿತಾಸಕ್ತಿ
ಗಳು ಪರೀಕ್ಷೆಗಳನ್ನು ಹೆಚ್ಚು ಜನಪ್ರಿಯಗೊಳಿಸಿ, ಸ್ಪರ್ಧೆ, ಪೈಪೋಟಿಗಳನ್ನು ಮುಂಚೂಣಿಗೆ ತರುವಲ್ಲಿ ಯಶಸ್ವಿಯಾದವು. ಇದರ ಫಲವಾಗಿ ಬೋಧನೆ- ಕಲಿಕಾ ಪ್ರಕ್ರಿಯೆಗಳಿಗಿಂತ ಪರೀಕ್ಷೆಗೆ ಹೆಚ್ಚು ಪ್ರಾಧಾನ್ಯ ಕೊಡುವ ಪರಿಸ್ಥಿತಿ ಸೃಷ್ಟಿಯಾಯಿತು. ಶಿಕ್ಷಣವು ಜ್ಞಾನ ಸಂಪಾದನೆಗೆ ಎಂಬಲ್ಲಿಂದ ಮಾಹಿತಿ, ಅಂಕಿ ಅಂಶವನ್ನು ಕಂಠಪಾಠ ಮಾಡಿ, ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದು ‘ಯಶಸ್ವಿ’ ಎನಿಸಿಕೊಳ್ಳಬೇಕು ಎಂಬಲ್ಲಿಗೆ ಬಂದು ನಿಂತಿತು.

ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ಅರ್ಥೈಸುವಂತೆ ಕಲಿಸುವುದಕ್ಕಿಂತ ನಿಗದಿತ ಪಠ್ಯವನ್ನು ಸೂಚಿತ ಕಾಲಾವಧಿಯೊಳಗೆ ಪೂರೈಸಿ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಿ, ಅವರನ್ನು ‘ಯಶಸ್ವಿ’ಯಾಗಿ ಮುಂದೆ ದಾಟಿಸುವ ಪ್ರಕ್ರಿಯೆ ಹೆಚ್ಚಿನೆಡೆ ಸಾಮಾನ್ಯ ಎಂಬಂತಾಯಿತು. ಪರೀಕ್ಷಾ ಫಲಿತಾಂಶ ಮುಖ್ಯವಾಗುತ್ತಾ ಹೋಯಿತೇ ವಿನಾ ಬೋಧನಾ ಕಲಿಕಾ ಪ್ರಕ್ರಿಯೆಯನ್ನು ಬಲಪಡಿಸುವ, ಮಕ್ಕಳಲ್ಲಿ ಸಹಜ ಕಲಿಕೆಯ ಆನಂದವನ್ನು ಉದ್ದೀಪಿಸುವ ಹಾಗೂ ನಿಯಮಿತ ಬೆಂಬಲ, ಮೇಲ್ವಿಚಾರಣೆಯ ಮೂಲಕ ಶೈಕ್ಷಣಿಕ ಪ್ರಕ್ರಿಯೆಯನ್ನು ಕಣ್ಗಾವಲಿನಲ್ಲಿ ಇರಿಸುವ ಕೆಲಸ ಹಿಂದೆ ಬಿತ್ತು.

1932ರಲ್ಲಿ ಪ್ರಕಟಗೊಂಡ ಗೀಜುಭಾಯ್ ಬಧೇಕಾ ಅವರ ಜನಪ್ರಿಯ ಪುಸ್ತಕ ‘ಹಗಲು ಗನಸು’ವಿನಲ್ಲಿ ಪರೀಕ್ಷೆಗಳ ರದ್ದತಿಯ ಬಗ್ಗೆ ಹೀಗೆ ಉಲ್ಲೇಖಿಸಲಾಗಿದೆ- ‘ವಿದ್ಯಾರ್ಥಿಯು ಓದುತ್ತಿರುವವರೆಗೆ, ಶಿಕ್ಷಕ ಕಲಿಸುತ್ತಿರುವವರೆಗೆ ಪರೀಕ್ಷೆಯ ಅವಶ್ಯಕತೆ ಇದ್ದೇ ಇದೆ. ವಿದ್ಯಾರ್ಥಿಗಳು ಉತ್ಸಾಹದಿಂದ ಓದಲು ಸಿದ್ಧರಾದಾಗ ಶಿಕ್ಷಕನು ಅಷ್ಟೇ ಕೌಶಲದಿಂದ, ಉತ್ಸಾಹದಿಂದ ಕಲಿಸಲು ಮುಂದೆ ಬಂದಾಗ ಮಾತ್ರ ಪರೀಕ್ಷೆಯನ್ನು ಕೈಬಿಡಬಹುದು’.

ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮಕ್ಕಳ ಕೇಂದ್ರಿತ ಶಿಕ್ಷಣ ಪದ್ಧತಿ ಹಾಗೂ ಅನುತ್ತೀರ್ಣರಹಿತ ನೀತಿ ಜಾರಿಗೊಳಿಸಲಾಯಿತು. ನಿರಂತರ, ಸಮಗ್ರ ಮೌಲ್ಯಮಾಪನ ಪದ್ಧತಿಯ ಅಳವಡಿಕೆಯ ಮೂಲಕ ಪರೀಕ್ಷಾ ಸುಧಾರಣೆಗೂ ಮುಂದಡಿ ಇಡಲಾಯಿತು. ಆದರೆ ಕಲಿಕೆಯನ್ನು ಖಾತರಿಪಡಿಸಿಕೊಳ್ಳದೇ ಉತ್ತೀರ್ಣ ಮಾಡುವ ವ್ಯವಸ್ಥೆಯಿಂದ ಗುಣಮಟ್ಟದಲ್ಲಿ ಕುಸಿತಕ್ಕೆ ನಾಂದಿಯಾಗುವ ಜೊತೆಗೆ 10, 12ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಒತ್ತಡ ಸೃಷ್ಟಿಯಾಯಿತು.

ಆಯಾ ತರಗತಿಗಳ ಪ್ರತೀ ವಿದ್ಯಾರ್ಥಿಯಲ್ಲಿ ನಿಗದಿತ ಕಲಿಕೆಯನ್ನು ಖಾತರಿಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಬಲಪಡಿಸುವಲ್ಲಿ ಯಶಸ್ವಿಯಾಗುವ ಹಂತ ತಲುಪುವ ಮೂಲಕ ಪರೀಕ್ಷಾಕೇಂದ್ರಿತ ವ್ಯವಸ್ಥೆಯಿಂದ ಹೊರಬರಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು