ಶನಿವಾರ, ಫೆಬ್ರವರಿ 22, 2020
19 °C
ಸಾಂವಿಧಾನಿಕ ಮೌಲ್ಯಗಳ ಪ್ರತಿಪಾದನೆ ಕುಟುಂಬದಿಂದಲೇ ಆರಂಭವಾಗಬೇಕು

ಆಚರಣೆಯಿಂದ ಅರಿವು

ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ Updated:

ಅಕ್ಷರ ಗಾತ್ರ : | |

Prajavani

ಜನವರಿ 26ರಂದು ನಾವು ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ. ಆದರೆ, ಆ. 15ರ ಸ್ವಾತಂತ್ರ್ಯೋತ್ಸವಕ್ಕೂ ಗಣರಾಜ್ಯೋತ್ಸವಕ್ಕೂ ಹೆಚ್ಚಿನವರಿಗೆ ವ್ಯತ್ಯಾಸವೇ ಗೊತ್ತಿಲ್ಲ. ಉದಾಹರಣೆಗೆ, ಯಾವುದಾದರೂ ಒಂದು ಶಾಲೆಯಲ್ಲಿ ನೋಡಿ. ರಾಷ್ಟ್ರಧ್ವಜದ ಕೆಳಗೆ ಸಾಲಾಗಿ ಆ ದಿನ ಇಟ್ಟಿದ್ದ ಫೋಟೊಗಳನ್ನೇ ಈ ದಿನದಂದೂ ಇಡುತ್ತಾರೆ. ಅದೇ ಭಾರತ ಮಾತಾಕೀ ಜೈ, ಅದೇ ವಂದೇ ಮಾತರಂ.

ಆ. 15ರಂದು ವಸಾಹತುಶಾಹಿ ಬ್ರಿಟಿಷರಿಂದ ನಮಗೆ ಸ್ವಾತಂತ್ರ್ಯ ದಕ್ಕಿದ್ದೇನೋ ನಿಜ. ಆದರೆ ನಾವು 1947ರ ಆ. 15ರಿಂದ 1950ರ ಜ. 26ರವರೆಗೆ ಬ್ರಿಟಿಷ್ ಕಾಮನ್‍ವೆಲ್ತ್ ಆಫ್‌ ನೇಷನ್ಸ್‌ನಲ್ಲಿ ಬ್ರಿಟಿಷ್ ಸಾಮ್ರಾಟರ ಅಡಿಯಲ್ಲಿಯೇ ಅರೆ- ಸ್ವತಂತ್ರ (ಡೊಮೆನಿಯನ್) ದೇಶವಾಗಿದ್ದೆವು. ಏಕೆಂದರೆ ನಮ್ಮನ್ನು ಆಳಿಕೊಳ್ಳಲು ನಮಗೆ ನಮ್ಮದೇ ಆದ ಸಂವಿಧಾನ ಇನ್ನೂ ಇರಲಿಲ್ಲ. ನಾವು ಸಂಪೂರ್ಣ ಸ್ವತಂತ್ರ ಅಥವಾ ಸಾರ್ವಭೌಮ ರಾಷ್ಟ್ರವಾಗಿದ್ದು 1950ರ ಜ. 26ರಂದೇ.

ಸಂವಿಧಾನ ರಚಿಸುವ ಕಾರ್ಯ 1946ರ ಡಿ. 9ರಂದೇ ಆರಂಭವಾಗಿತ್ತು. ವಿವಿಧ ಪ್ರದೇಶಗಳಲ್ಲಿ ಜನರಿಂದ ಆರಿಸಿ ಬಂದ ಸಂವಿಧಾನ ರಚನಾ ಸಭೆಯ 299 ಸದಸ್ಯರ ಸಕ್ರಿಯ ಸಹಭಾಗಿತ್ವ ಮತ್ತು ಕೊನೆಯಲ್ಲಿ ಕರಡು ರಚನಾ ಸಮಿತಿಯ ಅಧ್ಯಕ್ಷರಾದ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಪರಿಶ್ರಮದ ಫಲವಾಗಿ ಸಂವಿಧಾನದ ಕರಡು ತಯಾರಾಗಿ, 1949ರ ನ. 26ರಂದು ಸಂವಿಧಾನ ಸಭೆಯ ಪೂರ್ಣ ಅನುಮೋದನೆಯನ್ನು ಪಡೆಯಿತು. ಆದರೂ ಅದು ಸಕಲ ಸಿದ್ಧತೆಗಳು ಪೂರ್ಣಗೊಂಡು ದೇಶದಲ್ಲಿ ಜಾರಿಗೆ ಬಂದದ್ದು 1950ರ ಜ. 26ರಂದು. ಆ ದಿನದಿಂದ ಇಡೀ ಜಗತ್ತಿನ ಭೂಪಟದಲ್ಲಿ ಭಾರತವು ‘ಸಾರ್ವಭೌಮ, ಜನಸತ್ತಾತ್ಮಕ ಗಣರಾಜ್ಯ’ವಾಗಿ ಹೆಮ್ಮೆಯಿಂದ ತಲೆಯೆತ್ತಿತು.

ಮುಂದೆ, 1976ರಲ್ಲಿ ಆದ 42ನೇ ಸಂವಿಧಾನ ತಿದ್ದುಪಡಿಯ ಅಂಗವಾಗಿ, ‘ಸಮಾಜವಾದಿ, ಜಾತ್ಯತೀತ’ ಎಂಬ ಪದಗಳು ಸೇರಿ, ಭಾರತದ ಜನತೆಯಾದ ನಾವು ಭಾರತವನ್ನು ‘ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಜನಸತ್ತಾತ್ಮಕ ಗಣರಾಜ್ಯ’ವನ್ನಾಗಿ ಕಟ್ಟಲು ಪಣತೊಟ್ಟಿದ್ದೇವೆ. ಭಾರತದ ಎಲ್ಲ ನಾಗರಿಕರಿಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯ; ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯ; ಸ್ಥಾನಮಾನ ಮತ್ತು ಅವಕಾಶಗಳ ಸಮತೆಯನ್ನು ದೊರೆಯುವಂತೆ ಮಾಡುವ ಮತ್ತು ಆ ಉದ್ದೇಶಕ್ಕಾಗಿ ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕಾಗಿ ಪಣ ತೊಟ್ಟಿದ್ದೇವೆ. ನಾವೆಲ್ಲರೂ ಈ ಸಂವಿಧಾನವನ್ನು ‘ನಮಗೆ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ. ಇದನ್ನು ನೆನಪಿಸಿಕೊಳ್ಳುವ ದಿನ ‘ಗಣರಾಜ್ಯೋತ್ಸವ’.

ನಾವು ಇದನ್ನು ಹೇಗೆ ಆಚರಿಸುತ್ತೇವೆ? ಗಂಟುಕಟ್ಟಿರುವ ಧ್ವಜದ ಅಡಿಯ ಕಟ್ಟೆಯ ಮೇಲೆ ರಾಷ್ಟ್ರ ನಾಯಕರ ಫೋಟೊಗಳ ಸಾಲು. ಈಗಂತೂ ಬದಲಾಗುತ್ತಿರುವ ರಾಜಕೀಯ, ಜಾತಿ ಸನ್ನಿವೇಶದಲ್ಲಿ ಈ ಫೋಟೊ ಸಾಲಿನಲ್ಲಿಯೂ ರಾಜಕಾರಣ ಶುರುವಾಗಿದೆ. ಧ್ವಜದ ಆರೋಹಣಕ್ಕೆ ನೀತಿ ಸಂಹಿತೆ ಇದೆ; ಆದರೆ ಇಂಥ ಸಮಾರಂಭಗಳ ಆಚರಣೆಯ ಸ್ವರೂಪ ಹೇಗಿರಬೇಕು ಎಂಬುದಕ್ಕೆ ಸಂಹಿತೆ ಇಲ್ಲ. ಹೀಗಾಗಿ ಅವರವರ ಇಷ್ಟ.

ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜದ ಅಡಿಯಲ್ಲಿ ಇನ್ಯಾವುದೇ ನಾಯಕರ ಫೋಟೊ ಇಡುವ ಅಗತ್ಯವಿಲ್ಲ. ಏಕೆಂದರೆ ಒಂದು ಮೈಲುದ್ದ ಫೋಟೊಗಳನ್ನು ಸಾಲುಗಟ್ಟಿಸಿದರೂ ಅದು ಪರಿಪೂರ್ಣ, ಪ್ರಾತಿನಿಧಿಕ, ಸರ್ವಸಮ್ಮತ ಆಗುವುದೇ ಇಲ್ಲ. ಅದರ ಬದಲು, ಸಂವಿಧಾನದ ಪ್ರಸ್ತಾವನೆಯ ಫೋಟೊ ಮಾತ್ರ ಇದ್ದರೆ ಸಾಕು. ಅದು ಸಂವಿಧಾನದ ಮೂಲಭೂತ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರುವ ಸಂವಿಧಾನದ ಮೂಲ ಗ್ರಂಥದಲ್ಲಿ ಇದಕ್ಕೊಂದು ಸುಂದರವಾದ ಚೌಕಟ್ಟೂ ಇದೆ. ಇದರಲ್ಲಿಯೇ ಕನ್ನಡದ ಅವತರಣಿಕೆಯನ್ನು ಅಳವಡಿಸಿಕೊಂಡರೆ, ಅದನ್ನು ತೂಗು ಹಾಕಿದ ತಾಣಕ್ಕೆ ಒಂದು ‘ಸಾಂವಿಧಾನಿಕ ಘನತೆ’ ದೊರಕುತ್ತದೆ.

ನಾವು ನಡೆಸುತ್ತಿರುವ ‘ಭಾರತ ಸಂವಿಧಾನ ಸಾಕ್ಷರತೆ’ ಆಂದೋಲನದಲ್ಲಿ ಹಂಚಿದ 2,000ಕ್ಕೂ ಹೆಚ್ಚು ಇಂಥ ಭಿತ್ತಿಚಿತ್ರಗಳಲ್ಲಿ ಮೊದಲ ಪ್ರತಿಯನ್ನು ಸುಂದರವಾದ ಕಟ್ಟು ಹಾಕಿಸಿ ನಮ್ಮ ಮನೆಯಲ್ಲಿ ಎದ್ದು ಕಾಣುವ ಹಾಗೆ ತೂಗುಹಾಕಿದ್ದೇವೆ. ಎಂದರೆ, ಸಾಂವಿಧಾನಿಕ ಮೌಲ್ಯಗಳು ಮೊದಲು ಸಮಾಜದ ಮೂಲಘಟಕವಾದ ಕುಟುಂಬದಿಂದಲೇ ಆರಂಭವಾಗಬೇಕು ಎಂಬುದು ನಮ್ಮ ಪರಿಕಲ್ಪನೆ.

ಅಂದ ಹಾಗೆ, ಕರ್ನಾಟಕ ಸರ್ಕಾರದ ಸಮಗ್ರ ಶಿಕ್ಷಣ- ಕರ್ನಾಟಕ ವಿಭಾಗದ ರಾಜ್ಯ ಯೋಜನಾ ನಿರ್ದೇಶಕರು ಒಂದು ಸುತ್ತೋಲೆ ಹೊರಡಿಸಿ, ಎಲ್ಲ ಶಾಲೆಗಳಲ್ಲಿಯೂ ಸಂವಿಧಾನದ ಪ್ರಸ್ತಾವನೆಯ ಫೋಟೊವನ್ನು ತೂಗು ಹಾಕಬೇಕು, ಗಣರಾಜ್ಯೋತ್ಸವದಂದು ಅದನ್ನು ಬಳಸಬೇಕು ಎಂದು ಆದೇಶಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ (www.schooleducation.kar.nic.in) ವೆಬ್‍ಸೈಟಿನಲ್ಲಿ 642 ಸಂಖ್ಯೆಯ ಸುತ್ತೋಲೆಯ ಅಂಗವಾಗಿ ಪ್ರಸ್ತಾವನೆಯ ಸುಂದರವಾದ, ಟಿಫ್‌ ಫಾರ್ಮ್ಯಾಟ್‌ನ ಫೈಲ್‌ ಕೂಡ ಅಪ್‍ಲೋಡ್ ಮಾಡಲಾಗಿದೆ. ಅದನ್ನು ಯಾರು ಬೇಕಾದರೂ ಡೌನ್‍ಲೋಡ್ ಮಾಡಿ, ಪ್ರಿಂಟ್ ಮಾಡಿಸಿ, ಕಟ್ಟು ಹಾಕಿಸಿ ಬಳಸಬಹುದು. ಈ ಮೂಲಕ ಎಲ್ಲರೂ ಸೇರಿ ಈ ಬಾರಿಯ ಗಣರಾಜ್ಯೋತ್ಸವವನ್ನು ಹೆಚ್ಚು ಅರ್ಥಪೂರ್ಣವಾಗಿ ಆಚರಿಸೋಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)