ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಟಿ.ರವಿ ಬರಹ | ಚೀನಾ ತಂತ್ರಕ್ಕೆ ಸ್ವದೇಶಿ ಮಂತ್ರ

ಅತಿಕ್ರಮಣದಿಂದ ನಮ್ಮ ದೇಶದ ನೆಮ್ಮದಿ ಹಾಳುಗೆಡವುತ್ತಿರುವ ಚೀನಾದ ಸೊಕ್ಕಿಗೆ ಸ್ವಾವಲಂಬನೆಯ ಸೂತ್ರವೇ ತಕ್ಕ ಉತ್ತರ
Last Updated 26 ಜೂನ್ 2020, 1:30 IST
ಅಕ್ಷರ ಗಾತ್ರ

ಚೀನಾದ ಸೈನಿಕರು ನಮ್ಮ 20 ಸೈನಿಕರನ್ನು ಗಾಲ್ವನ್‌ ಕಣಿವೆಯಲ್ಲಿ ಇತ್ತೀಚೆಗೆ ಬರ್ಬರವಾಗಿ ಕೊಂದು, ಐವತ್ತಕ್ಕೂ ಹೆಚ್ಚು ಸೈನಿಕರನ್ನು ಗಾಯಗೊಳಿಸಿದ ಸುದ್ದಿ ಕೇಳಿದಾಕ್ಷಣ ಸಂಕಟ, ರೋಷ ಉಕ್ಕಿ ಬಂತು. ಕರ್ನಲ್ ಸಂತೋಷ್‍ ಬಾಬು ಅವರ ತಾಯಿ ಗಾಯತ್ರಿ ಅವರ ಮಾತನ್ನು ಮರೆಯಲು ಸಾಧ್ಯವೇ? ‘ನನ್ನ ಮಗ ತಾಯಿನಾಡಿಗಾಗಿ ಬಲಿದಾನ ಮಾಡಿದ ಬಗ್ಗೆ ಹೆಮ್ಮೆ ಇದೆ. ಅದೇ ರೀತಿ ಒಬ್ಬ ತಾಯಿಯಾಗಿ ಮಗನನ್ನು ಕಳೆದುಕೊಂಡ ದುಃಖ ಇದೆ. ನನ್ನ ಮಗನ ಬಲಿದಾನ ವ್ಯರ್ಥ ಆಗದಿರಲಿ’.

ನಮ್ಮ ಸೈನಿಕರ ಬಲಿದಾನ ವ್ಯರ್ಥವಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಲ್ಲವೇ? ತನ್ನದಲ್ಲದ್ದನ್ನು ಆಕ್ರಮಿಸುವ ಚೀನಾದ ಸ್ವಭಾವ ಇಂದು ನಿನ್ನೆಯದಲ್ಲ, ಅದು ಏಳು ದಶಕಗಳಿಂದಲೂ ಅದನ್ನೇ ಮಾಡಿಕೊಂಡು ಬಂದಿದೆ. ಸ್ವತಂತ್ರ ಟಿಬೆಟ್ ರಾಷ್ಟ್ರವನ್ನು ನುಂಗಿ ನೀರು ಕುಡಿದು, ಭೂತಾನ್‍ ಅನ್ನು ಆಕ್ರಮಿಸುವ, ಅರುಣಾಚಲವನ್ನು ತನ್ನದೆನ್ನುವ, 1962ರಲ್ಲಿ ಭಾರತದ ಅಕ್ಸಾಯ್‌ಚಿನ್‌ ಪ್ರದೇಶವನ್ನು ಅತಿಕ್ರಮಿಸಿಕೊಂಡು, ಈಗ ನೇಪಾಳವನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಧೂರ್ತತನದಿಂದ, ತಾನು ನಂಬಿಕೆಗೆ ಅರ್ಹವಲ್ಲ ಎಂಬುದನ್ನು ಸಾಬೀತು ಮಾಡುತ್ತಲೇ ಬಂದಿದೆ. ನೆಹರೂ ಅವರು ಹಿಂದೀ- ಚೀನಿ ಭಾಯಿಭಾಯಿ ಎನ್ನುತ್ತಾ ಮೈಮರೆತಿದ್ದಾಗಲೇ ಚೀನಾವು ಭಾರತದ ಮೇಲೆ ಆಕ್ರಮಣ ಮಾಡಿದ್ದನ್ನುಮರೆಯಲಾದೀತೇ?

ಚೀನಾ ತನ್ನ ಬಗಲಿನಲ್ಲಿರುವ ಭಾರತವನ್ನು ಮಿತ್ರದೇಶವೆಂದು ಪರಿಗಣಿಸಲೇ ಇಲ್ಲ. ಹಿಂದೆ ಪ್ರಧಾನಿ ಆಗಿದ್ದ ಚೌ ಎನ್ಲಾಯ್‍ ಅವರಿಂದ ಹಿಡಿದು ಇಂದಿನ ಷಿ ಜಿನ್‍ಪಿಂಗ್‍ ಅವರವರೆಗೆ ಮುಖದಲ್ಲಿ ಮಂದಹಾಸ, ಮನಸ್ಸಿನಲ್ಲಿ ಮತ್ಸರ ಸಾಧಿಸುತ್ತಲೇ ಬಂದವರು. ಅರವತ್ತರ ದಶಕದಲ್ಲಿಯೇ ಟಿಬೆಟ್‌ನ ಸ್ವಾಯತ್ತೆಯ ರಕ್ಷಣೆಗೆ ಟೊಂಕಕಟ್ಟಿ ನಿಂತು, ಶತ್ರುವನ್ನು ಅಲ್ಲಿಯೇ ತಡೆದಿದ್ದರೆ, ಇಂದು ನಮ್ಮ ಮನೆ ಬಾಗಿಲಿಗೆ ಬರಲು ಸಾಧ್ಯವೇ ಇರುತ್ತಿರಲಿಲ್ಲ.

ಚೀನಾ ಈಗ ಕಾಲು ಕೆರೆದುಕೊಂಡು ಜಗಳಕ್ಕೆ ಬರಲು ಹಲವು ಕಾರಣಗಳಿವೆ. ಗಡಿಯಲ್ಲಿ ಭಾರತ ಮೂಲಸೌಕರ್ಯ ಅಭಿವೃದ್ಧಿ ಮಾಡುತ್ತಿರುವುದು ಒಂದು ಕಾರಣವಾದರೆ, ಕೊರೊನಾ ದೆಸೆಯಿಂದ ಜಗತ್ತಿನೆದುರು ಚೀನಾ ಅಪರಾಧಿಯಾಗಿ ನಿಂತಿದೆ. ಬಹುತೇಕ ರಾಷ್ಟ್ರಗಳು ಮಾನಸಿಕವಾಗಿ ಚೀನಾದಿಂದ ದೂರವಾಗಿವೆ. ಈ ಸಂದರ್ಭದ ಲಾಭ ಭಾರತಕ್ಕೆ ಆಗುತ್ತದೆಂಬ ಭಯ ಅದನ್ನು ಕಾಡುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾವಲಂಬನೆಯ ಆತ್ಮನಿರ್ಭರ ಸೂತ್ರವು ಚೀನಾವನ್ನು ಕಂಗೆಡಿಸಿದೆ. ಪೂತನಿಯು ಸುಂದರ ಸ್ತ್ರೀ ವೇಷದಲ್ಲಿ ಬೃಂದಾವನಕ್ಕೆ ಹಾಲುಣಿಸಲು ಬಂದಿದ್ದು ಕೃಷ್ಣನ ಮೇಲಿನ ಪ್ರೀತಿಯಿಂದಲ್ಲ, ಅವನನ್ನು ಮುಗಿಸಲು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಹಿಂದೆ ಯುದ್ಧವೆಂದರೆ ಮದ್ದು ಗುಂಡುಗಳ ಪ್ರತ್ಯಕ್ಷ ಯುದ್ಧ. ಆದರೆ, ಇಂದು ಅದಕ್ಕಿಂತ ಭೀಕರವಾದ ಪರೋಕ್ಷ ಯುದ್ಧಗಳನ್ನು ದೇಶವೊಂದು ಮಾಡಬಹುದಾಗಿದೆ. ಆರ್ಥಿಕ ಯುದ್ಧದ ಜೊತೆಗೆ ದೇಶದ ನಿತ್ಯದ ಚಟುವಟಿಕೆಗಳನ್ನು ಬುಡಮೇಲು ಮಾಡುವ ಸೈಬರ್ ಯುದ್ಧವು ಪ್ರತ್ಯಕ್ಷ ಯುದ್ಧಕ್ಕಿಂತ ಭೀಕರ ಎಂಬುದನ್ನು ಮರೆಯಬಾರದು.

ಚೀನಾ ತನ್ನ ಉತ್ಪನ್ನಗಳನ್ನಷ್ಟೇ ಈ ದೇಶಕ್ಕೆ ತರುತ್ತಿಲ್ಲ. ಜೊತೆಗೆ ಮಾರುಕಟ್ಟೆಯನ್ನೂ ನಿಯಂತ್ರಿಸುತ್ತಿದೆ. ನಮ್ಮ ದೇಶದ ಮೊಬೈಲ್ ಫೋನ್‌ ಮಾರುಕಟ್ಟೆಯ ಶೇ 65ರಿಂದ 70ರಷ್ಟು ಚೀನಾ ಕೈಯಲ್ಲಿದ್ದು, ಅಂದಾಜು 18 ಪ್ರಮುಖ ಸ್ಟಾರ್ಟ್‌ಅಪ್‌ ಕಂಪನಿಗಳ ಮೇಲೆ ಹಿಡಿತ ಸಾಧಿಸಿದೆ. ಕಂಪ್ಯೂಟರ್‌ಗಳಲ್ಲಿ ಬಳಸುವ ಚಿಪ್ ಸೇರಿದಂತೆ ಹಲವು ಸಣ್ಣ ಪರಿಕರಗಳು ಚೀನಾದಿಂದ ಆಮದಾಗುತ್ತಿವೆ. ಸೊಳ್ಳೆ ಹೊಡೆಯುವ ಬ್ಯಾಟ್‍ನಿಂದ ಹಿಡಿದು ಗೃಹೋಪಯೋಗಿ ವಸ್ತುಗಳವರೆಗೆ ತನ್ನ ಉತ್ಪನ್ನಗಳ ಮೂಲಕ ನಮ್ಮನ್ನು ನಿಯಂತ್ರಿಸಲು ಮುಂದಾಗುತ್ತಿದೆ.

ಭಾರತ ಬರೀ ಮಾರುಕಟ್ಟೆಯಾಗಬಾರದು, ಉತ್ಪಾದಕ ರಾಷ್ಟ್ರವಾಗಬೇಕು. ನಮ್ಮಲ್ಲಿ ದೇಶೀಯ ವಸ್ತುಗಳನ್ನು ಬಳಸುವ ಮನಃಸ್ಥಿತಿ ಗಟ್ಟಿಗೊಳ್ಳಬೇಕು. ಈ ಕುರಿತ ಬದಲಾವಣೆ ನಮ್ಮ ಮನದಲ್ಲಿ, ಮನೆಯಿಂದಲೇ ಆರಂಭವಾಗಲಿ. ಅಗ್ಗ ಎಂಬ ಕಾರಣಕ್ಕೆ ಚೀನಾದ ಸರಕನ್ನು ದೇಶದೊಳಕ್ಕೆ ಬಿಟ್ಟುಕೊಳ್ಳುತ್ತಾ ಹೋದರೆ ಪರಾವಲಂಬನೆಯೇ ಗತಿಯಾಗುತ್ತದೆ. ಹೀಗಾಗಿ ಇಲ್ಲಿಯೇ ಉತ್ಪಾದಿಸಿ, ಇಲ್ಲಿಯೇ ಬಳಸಿ, ಇಲ್ಲಿನವರಿಗೇ ಉದ್ಯೋಗ ಸಿಗಲಿ ಎಂಬ ಸ್ವದೇಶಿ ಮಂತ್ರದ ಪರಿಣಾಮಕಾರಿ ಅನುಷ್ಠಾನ ಆಗಬೇಕಾಗಿದೆ. ಆಗಲೇ ನವಪೂತನಿಯ ಮಾರಣಹೋಮ, ನವಭಾರತದ ಅಭ್ಯುದಯ.

ನಮ್ಮ ಸೈನಿಕರು ಪ್ರಾಣದ ಹಂಗು ತೊರೆದು ಗಡಿಯನ್ನು ರಕ್ಷಿಸುತ್ತಾರೆ. ದೇಶಕ್ಕಾಗಿ ನಾವೇನು ಮಾಡಬಹುದು? ಗುಂಡು ಹಾರಿಸಬೇಕಿಲ್ಲ, ಗುಂಡಿಗೆ ಎದೆಯೊಡ್ಡಬೇಕಿಲ್ಲ, ಸ್ವದೇಶಿ ಸ್ವಾವಲಂಬನೆಯ ಪಣ ತೊಟ್ಟರೆ ಸಾಕು. ಚೀನಾ ಎಂಬ ಪೂತನಿ ತಾನಾಗಿಯೇ ಕುಸಿದುಬೀಳುತ್ತಾಳೆ, ತಾಯಿ ಭಾರತಿ ಮೇಲೆದ್ದು ನಿಲ್ಲುತ್ತಾಳೆ.

ಲೇಖಕ: ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT