ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ ‌| ರೆಟಿನೊಬ್ಲಾಸ್ಟೋಮಾ ಕುರಿತ ಮಾಹಿತಿ: ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ಆಯ್ಕೆಗಳು

ಡಾ. ವಸುಧಾ ಎನ್. ರಾವ್ ಅವರ ಲೇಖನ
Published 30 ಮೇ 2023, 22:18 IST
Last Updated 30 ಮೇ 2023, 22:18 IST
ಅಕ್ಷರ ಗಾತ್ರ

ಡಾ. ವಸುಧಾ ಎನ್. ರಾವ್ ಅವರ ಲೇಖನ

ಕಣ್ಣಿನ ಕ್ಯಾನ್ಸರ್‌ನ ರೋಗಲಕ್ಷಣಗಳುಳ್ಳ ಮಕ್ಕಳ ದೃಷ್ಟಿಯಿಂದ ಮೇ ಅತ್ಯಂತ ಮಹತ್ವದ ತಿಂಗಳು. ರೆಟಿನಾದ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್‌ನ ಅಪರೂಪದ ಹಂತವಾದ ರೆಟಿನೊಬ್ಲಾಸ್ಟೋಮಾ ಕುರಿತು ಜನಜಾಗೃತಿ ಮೂಡಿಸುವ ಮಹತ್ವದ ಕಾರ್ಯ ಈ ಅವಧಿಯಲ್ಲಿ ಆಗುತ್ತದೆ. ಸಾಮಾನ್ಯವಾಗಿ ರೆಟಿನೊಬ್ಲಾಸ್ಟೋಮಾ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಪ್ರತಿವರ್ಷ ವಿಶ್ವದಾದ್ಯಂತ ಸರಿಸುಮಾರು 8,000 ಪ್ರಕರಣಗಳು ಪತ್ತೆಯಾಗುತ್ತವೆ. ವಿಶೇಷವಾಗಿ, ರೋಗನಿರ್ಣಯ ಮತ್ತು ಚಿಕಿತ್ಸೆ ವಿಳಂಬವಾಗುವ ಅಭಿವೃದ್ಧಿಶೀಲ ದೇಶಗಳಲ್ಲಿ ಈ ಪ್ರಕರಣಗಳ ನಿಖರ ಸಂಖ್ಯೆಯು ಲೆಕ್ಕಕ್ಕೆ ಸಿಗದಿರುವ ಸಾಧ್ಯತೆಯೇ ಹೆಚ್ಚು.

ಕಣ್ಣಿನ ಹಿಂಭಾಗದಲ್ಲಿರುವ ರೆಟಿನಾದ ಜೀವಕೋಶಗಳಲ್ಲಿ ನಡೆಯುವ ಆನುವಂಶಿಕ ರೂಪಾಂತರಗಳಿಂದ ಇಂತಹ ಸ್ಥಿತಿ ಉಂಟಾಗುತ್ತದೆ. ಚಿಕಿತ್ಸೆಯ ಫಲಿತಾಂಶದಲ್ಲಿ ಯಶಸ್ಸು ಪಡೆಯಲು ಆರಂಭದಲ್ಲೇ ಅದನ್ನು ಪತ್ತೆ ಹಚ್ಚುವುದು ಅತ್ಯಂತ ಮುಖ್ಯ. ಕಣ್ಣಿನಲ್ಲಿ ಬಿಳಿ ಹೊಳಪು ಅಥವಾ ಪ್ರತಿಬಿಂಬ ಕಾಣಿಸಿಕೊಳ್ಳುವುದು, ದೃಷ್ಟಿಯಲ್ಲಿ ಹಠಾತ್ ಬದಲಾವಣೆ, ಕಣ್ಣು ಅತಿಯಾಗಿ ಕೆಂಪಾಗುವುದು ಅಥವಾ ಊತದಂತಹ ಲಕ್ಷಣಗಳು ಆರಂಭದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಮುನ್ನೆಚ್ಚರಿಕೆ ಲಕ್ಷಣಗಳನ್ನು ಗುರುತಿಸುವಲ್ಲಿ ಪೋಷಕರು ಮತ್ತು ಆರೈಕೆದಾರರ ಪಾತ್ರ ಪ್ರಮುಖವಾದುದು. ಈ ಯಾವುದೇ ರೋಗಲಕ್ಷಣಗಳು ಕಂಡುಬಂದರೆ, ತಕ್ಷಣವೇ ವೈದ್ಯಕೀಯ ನೆರವು ಪಡೆಯುವುದು ಒಳ್ಳೆಯದು.

ರೆಟಿನೊಬ್ಲಾಸ್ಟೋಮಾದ ಪತ್ತೆಗೆ ಸರಳ ಟಾರ್ಚ್‌ಲೈಟ್ ಪರೀಕ್ಷೆ ಸೇರಿದಂತೆ ನಿಯಮಿತ ಕಣ್ಣಿನ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಶಿಶುವೈದ್ಯರು, ಕುಟುಂಬ ವೈದ್ಯರು ಅಥವಾ ನೇತ್ರತಜ್ಞರು ಈ ಸ್ಕ್ರೀನಿಂಗ್ ಪರೀಕ್ಷೆಗಳನ್ನು ಮಾಡಬಹುದು. ವಿಶೇಷವಾಗಿ, ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ರೆಟಿನೊಬ್ಲಾಸ್ಟೋಮಾದ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆರಂಭಿಕ ರೋಗನಿರ್ಣಯವು ದೃಷ್ಟಿಯ ರಕ್ಷಣೆಗೆ ಅನುವು ಮಾಡಿಕೊಡುವುದಷ್ಟೇ ಅಲ್ಲ ಗಂಭೀರವಾದ ಚಿಕಿತ್ಸೆಗಳ ಅಗತ್ಯವನ್ನೂ ಕಡಿಮೆ ಮಾಡುತ್ತದೆ.

ರೆಟಿನೊಬ್ಲಾಸ್ಟೋಮಾ ಆನುವಂಶಿಕವಾಗಿ ಬರಬಹುದು ಅಥವಾ ಆನುವಂಶಿಕ ಅಲ್ಲದೆಯೂ ಇರಬಹುದು. ಆನುವಂಶಿಕವಾಗಿ ರೆಟಿನೊಬ್ಲಾಸ್ಟೋಮಾ ಕಂಡುಬರುವ ವ್ಯಕ್ತಿಗಳಿಗೆ, ಎರಡೂ ಕಣ್ಣುಗಳಲ್ಲಿ ಅಥವಾ ಒಂದೇ ಕಣ್ಣಿನಲ್ಲಿ ಗಡ್ಡೆಗಳು ಉಂಟಾಗುವ ಅಪಾಯ ಇರುತ್ತದೆ. ಇಂತಹ ಸಂದರ್ಭದಲ್ಲಿ, ಯಶಸ್ವಿ ಚಿಕಿತ್ಸೆಯ ನಂತರವೂ ನಿಯಮಿತ ತಪಾಸಣೆ ಮತ್ತು ಮೇಲ್ವಿಚಾರಣೆ ಅತ್ಯಂತ ಮುಖ್ಯ. ನಿರ್ಲಕ್ಷ್ಯ ವಹಿಸಿದರೆ ಕಾಲಾನಂತರದಲ್ಲಿ ಹೊಸ ಗಡ್ಡೆಗಳು ಬೆಳೆಯಬಹುದು.

ರೆಟಿನೊಬ್ಲಾಸ್ಟೋಮಾವನ್ನು ಮೊದಲೇ ಪತ್ತೆಹಚ್ಚಲು ಆಧುನಿಕ ತಂತ್ರಜ್ಞಾನ ನೆರವಾಗುತ್ತದೆ. ಸರಳವಾದ ಕಾರ್ಯವಿಧಾನವು ವೈದ್ಯರು ರೆಟಿನಾವನ್ನು ಪರೀಕ್ಷಿಸಿ ಯಾವುದೇ ಅಸಹಜತೆಯನ್ನು ಕಂಡು ಹಿಡಿಯಲು ಅನುವು ಮಾಡಿಕೊಡುತ್ತದೆ. ಅಲ್ಟ್ರಾಸೌಂಡ್, ಕಂಪ್ಯೂಟೆಡ್ ಟೊಮೊಗ್ರಫಿ (ಸಿ.ಟಿ) ಮತ್ತು ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್‌ನಂತಹ (ಎಂಆರ್‌ಐ) ಪರೀಕ್ಷೆಗಳು ಗಡ್ಡೆಯ ವ್ಯಾಪ್ತಿ ಮತ್ತು ಅದು ಬೆಳೆದಿರುವ ಸ್ಥಳದ ಬಗ್ಗೆ ಹೆಚ್ಚು ವಿವರವಾದ ಮಾಹಿತಿ ಒದಗಿಸುತ್ತವೆ. ಇಂತಹ ಮಾಹಿತಿಯು ಸೂಕ್ತ ಚಿಕಿತ್ಸೆ ನೀಡುವುದಕ್ಕೆ ಪೂರಕವಾಗಿರುತ್ತದೆ.

ರೆಟಿನೊಬ್ಲಾಸ್ಟೋಮಾ ಚಿಕಿತ್ಸೆಯ ಮಾದರಿಯು ರೋಗದ ಹಂತ, ವ್ಯಾಪ್ತಿ ಸೇರಿದಂತೆ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ. ಗಡ್ಡೆಯು ಕಣ್ಣಿನೊಳಗೆ ಇದ್ದಾಗ, ಬರೀ ಒಂದು ಕಣ್ಣನ್ನು ಆವರಿಸಿಕೊಂಡಾಗ ಮತ್ತು ದೇಹದ ಇತರ ಭಾಗಗಳಿಗೆ ಹರಡದಿದ್ದಾಗ ಸಾಮಾನ್ಯವಾದ ಚಿಕಿತ್ಸೆ ನೀಡಿ ಅದನ್ನು ಗುಣಪಡಿಸಬಹುದು. ಇವುಗಳಲ್ಲಿ ಲೇಸರ್ ಚಿಕಿತ್ಸೆ, ಕ್ರಯೋಥೆರಪಿ (ಗಡ್ಡೆಯ ಕೋಶಗಳನ್ನು ಹೆಪ್ಪುಗಟ್ಟಿಸುವುದು) ಅಥವಾ ಕಣ್ಣಿಗೆ ನೇರವಾಗಿ ತಲುಪಿಸುವ ಕಿಮೋಥೆರಪಿ ಸೇರಿವೆ. ಸುತ್ತಮುತ್ತಲಿನ ಆರೋಗ್ಯಕರ ಅಂಗಾಂಶಗಳಿಗೆ ಹೆಚ್ಚು ಹಾನಿಯಾಗದಿದ್ದಾಗ ಗಡ್ಡೆಯನ್ನು ನಾಶಪಡಿಸಲು ಅಥವಾ ಕುಗ್ಗಿಸಲು ಇಂತಹ ಸಾಮಾನ್ಯವಾದ ಚಿಕಿತ್ಸೆಗಳು ಪರಿಣಾಮಕಾರಿಯಾಗಿರುತ್ತವೆ.

ಕ್ಯಾನ್ಸರ್ ಗಂಭೀರವಾದ ಹಂತ ತಲುಪಿದ್ದರೆ ಅಥವಾ ಕಣ್ಣಿನಾಚೆಗೂ ಹರಡಿದ್ದರೆ ಅಂತಹ ಸಂದರ್ಭಗಳಲ್ಲಿ, ಹೆಚ್ಚು ವ್ಯಾಪಕವಾದ ಚಿಕಿತ್ಸಾ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಗಡ್ಡೆಯನ್ನು ನಾಶಪಡಿಸಿ ಮತ್ತೆ ಅದು ಬೆಳೆಯದಂತೆ ಮಾಡಲು ಕಿಮೋಥೆರಪಿ, ರಕ್ತನಾಳಗಳ ಮೂಲಕ ನಿರ್ವಹಿಸುವ ವ್ಯವಸ್ಥಿತ ಅಥವಾ ಅಂತರ್ ಅಪಧಮನಿ ವಿಧಾನವನ್ನು ಬಳಸಬಹುದು. ಕ್ಯಾನ್ಸರ್ ದೇಹದ ಇತರ ಭಾಗಗಳಿಗೆ ಹರಡದಿರುವುದನ್ನು ಖಚಿತಪಡಿಸಿಕೊಳ್ಳಲು ಅತ್ಯಂತ ಗಂಭೀರವಾದ ಸಂದರ್ಭಗಳಲ್ಲಿ ಎನ್ಯುಕ್ಲಿಯೇಷನ್– ರೋಗಪೀಡಿತ ಕಣ್ಣನ್ನು ತೆಗೆದುಹಾಕುವುದು– ಅಥವಾ ಎಕ್ಸೆಂಟರೇಶನ್‌ನಂತಹ– ಸುತ್ತಮುತ್ತಲಿನ ಅಂಗಾಂಶಗಳ ಸಮೇತ ಕಣ್ಣನ್ನು ತೆಗೆದುಹಾಕುವುದು– ಶಸ್ತ್ರಚಿಕಿತ್ಸೆಗಳು ಬೇಕಾಗಬಹುದು. ಸಾಂದರ್ಭಿಕವಾಗಿ, ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಲು ಮತ್ತು ನಾಶಪಡಿಸಲು ವಿಕಿರಣ ಚಿಕಿತ್ಸೆಯನ್ನು ಅನುಸರಿಸಲಾಗುತ್ತದೆ.

ರೆಟಿನೊಬ್ಲಾಸ್ಟೋಮಾ ಪೀಡಿತ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆಯನ್ನು ಮೀರಿದ ಬೆಂಬಲ ಮತ್ತು ಆರೈಕೆಯ ಅಗತ್ಯ ಇರುತ್ತದೆ. ಮಗು ಮತ್ತು ಅದರ ಕುಟುಂಬದ ಭಾವನಾತ್ಮಕ ಯೋಗಕ್ಷೇಮವೂ ಅಷ್ಟೇ ಮುಖ್ಯ. ಮಾನಸಿಕ ಬೆಂಬಲ, ಸಮಾಲೋಚನೆ, ಸೂಕ್ತ ಮಾರ್ಗದರ್ಶನದ ಜೊತೆಗೆ ಚಿಕಿತ್ಸೆಗಾಗಿ ತೆರಳುವಾಗ ಆರಾಮದಾಯಕ ಪ್ರಯಾಣದ ಲಭ್ಯತೆಯನ್ನು ಒದಗಿಸುವುದೂ ನಿರ್ಣಾಯಕವಾಗಿರುತ್ತದೆ.

ಲೇಖಕಿ: ಮಕ್ಕಳ ಕ್ಯಾನ್ಸರ್‌ ತಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT