ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸಂವಿಧಾನ ಓದು: ಮೌಲ್ಯ ಅರಿಯೋಣ

Published 14 ಸೆಪ್ಟೆಂಬರ್ 2023, 23:30 IST
Last Updated 14 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು (ಸೆ.15) ದೊಡ್ಡ ಮಟ್ಟದಲ್ಲಿ ಆಚರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಜನಸಮೂಹದ ನಡುವೆ ಸಂವಿಧಾನದ ಪೀಠಿಕೆಯನ್ನು ಓದುವ ಈ ಕಾರ್ಯಕ್ರಮ ರಾಜ್ಯದಾದ್ಯಂತ ನಡೆಯಲಿದೆ. ಸಂವಿಧಾನ ಪೀಠಿಕೆಯ ಪ್ರಾಮುಖ್ಯ ಹಾಗೂ ಅದರ ಆಶಯಗಳ ಹಿಂದಿರುವ ಸಾಮಾಜಿಕ ಕಾಳಜಿ, ಕಳಕಳಿಯನ್ನು ತಳಮಟ್ಟದವರೆಗೂ ತಲುಪಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಆಗಬಹುದು. ಸಂವಿಧಾನದ ಅರಿವೇ ಇಲ್ಲದ ಯುವ ಸಮೂಹಕ್ಕೆ ಭಾರತದ ಸಂವಿಧಾನ ಅಪೇಕ್ಷಿಸುವ ಬಹುತ್ವ ಸಂಸ್ಕೃತಿ, ಸೋದರತ್ವ, ಸಹಬಾಳ್ವೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಮುಟ್ಟಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶ ಎಂದು ಭಾವಿಸಬಹುದು.

ಆದರೆ ಸರ್ಕಾರ ಕೈಗೊಂಡಿರುವ ಅಭಿಯಾನ ಮತ್ತು ಆಚರಣೆಗಳಿಂದಾಚೆಗೂ ವಿಶಾಲ ಸಮಾಜಕ್ಕೆ ತನ್ನದೇ ಆದ ಕರ್ತವ್ಯಗಳು ಇರುವುದನ್ನು ಮನಗಾಣದೇ ಹೋದರೆ ಇದು ಮತ್ತೊಂದು ಸಂಭ್ರಮದ ಉತ್ಸವವಾಗಿ ಪರ್ಯವಸಾನಗೊಳ್ಳುತ್ತದೆ. ಇಂದು ಯುವಸಮುದಾಯವನ್ನು ತಲುಪಬೇಕಿರುವುದು ಗ್ರಾಂಥಿಕ ಸಂವಿಧಾನವಲ್ಲ. ಈ ಗ್ರಂಥದಲ್ಲಿ ಅಡಗಿರುವ ಸಾಮಾಜಿಕ ಮೌಲ್ಯಗಳು, ಸೂಕ್ಷ್ಮ ಸಂವೇದನೆಯ ಆಲೋಚನೆಗಳು, ಮನುಜ ಸಂಬಂಧಗಳನ್ನು ಬೆಸೆಯಬಹುದಾದ ಮಾನವೀಯ ಚಿಂತನೆಗಳು, ಅಮಾನುಷವಾದ ಆಚರಣೆ ಮತ್ತು ಸಂಪ್ರದಾಯಗಳನ್ನು ತೊಡೆದುಹಾಕುವ ಕ್ರಾಂತಿಕಾರಕ ಚಿಂತನೆಗಳನ್ನು ಮೌಲಿಕವಾಗಿಯೇ ಜನಸಾಮಾನ್ಯರಿಗೆ ಮುಟ್ಟಿಸುವುದು ನಮ್ಮ ಆದ್ಯತೆಯಾಗಬೇಕಿದೆ. ಪಠಣ ಮತ್ತು ಮನನ ಇವೆರಡರ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಅರಿತುಕೊಂಡರೆ, ನಾವು ಎಲ್ಲಿ ಎಡವುತ್ತಿದ್ದೇವೆ ಎನ್ನುವುದು ಅರ್ಥವಾಗುತ್ತದೆ.

ಇಂದು ಭಾರತದ ಸಂವಿಧಾನ ಸುರಕ್ಷಿತವಾಗಿದೆ. ಈ ಸಂವಿಧಾನ ರೂಪಿಸಿದ ಪ್ರಜಾಪ್ರಭುತ್ವ ವ್ಯವಸ್ಥೆಯೂ ಸುಸ್ಥಿತಿಯಲ್ಲಿದೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ ಆಡಳಿತಾತ್ಮಕ ಚೌಕಟ್ಟಿನಿಂದ ಹೊರನಿಂತು ನೋಡಿದಾಗ, ನಮ್ಮ ಸುತ್ತಲಿನ ಸಮಾಜ ಪ್ರತಿಯೊಂದು ಹೆಜ್ಜೆಯಲ್ಲೂ ಸಂವಿಧಾನದ ಆಶಯಗಳನ್ನು ಅಪಮೌಲ್ಯಗೊಳಿಸುತ್ತಿರುವುದನ್ನು ಗಮನಿಸಬಹುದು. ಒಕ್ಕೂಟ ವ್ಯವಸ್ಥೆಯ ತತ್ವಗಳು ಶಿಥಿಲವಾಗುತ್ತಿರುವಂತೆಯೇ, ಚುನಾವಣಾ ರಾಜಕಾರಣದಲ್ಲಿ ಇರಬೇಕಾದ ಸಾಂವಿಧಾನಿಕ ಪ್ರಜ್ಞೆ ಕ್ರಮೇಣ ನಶಿಸಿಹೋಗುತ್ತಿರುವುದನ್ನೂ ಗಮನಿಸಬೇಕಿದೆ. ಭಾರತದ ಸಂವಿಧಾನ ಆಶಿಸುವ ಆಚರಣೆಯ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಗಳು ಆಡಳಿತ ವ್ಯವಸ್ಥೆಯ ಅಥವಾ ಪಟ್ಟಭದ್ರ ಹಿತಾಸಕ್ತಿಗಳ ಇಚ್ಛೆಗನುಸಾರವಾಗಿ ಶಿಥಿಲವಾಗುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಆದರೆ ಇಡೀ ಸಮಾಜವನ್ನು ಅಡ್ಡಡ್ಡಲಾಗಿ ಸೀಳಿರುವ ಅಸ್ಮಿತೆಯ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣದ ಹಿತಾಸಕ್ತಿಗಳು, ಈ ಅಸಾಂವಿಧಾನಿಕ ನಿಲುವುಗಳನ್ನು ಸಮರ್ಥಿಸುವ ಬೃಹತ್‌ ಸಂಖ್ಯೆಯ ಜನಸಮೂಹಗಳನ್ನು ಸೃಷ್ಟಿಸಿ ತಮ್ಮ ಹಿಡಿತದಲ್ಲಿ ಇರಿಸಿಕೊಂಡಿವೆ.

ಮತನಿರಪೇಕ್ಷತೆ, ಜಾತ್ಯತೀತತೆಯಂತಹ ಪದಪುಂಜಗಳು ತಮ್ಮ ಮೂಲ ಅರ್ಥವನ್ನೇ ಕಳೆದುಕೊಂಡಿದ್ದು, ಅಧಿಕಾರ ರಾಜಕಾರಣದ ವ್ಯಾಪ್ತಿಯಲ್ಲಿ ಅಪ್ರಸ್ತುತ ಎನಿಸುವಂತಾಗಿವೆ. ರಾಜಕೀಯ ಶಕ್ತಿಗಳು ತಮ್ಮ ಅಸ್ತಿತ್ವದ ರಕ್ಷಣೆಗಾಗಿ ಈ ಅಮೂಲ್ಯ ಚಿಂತನೆಗಳನ್ನು ರಕ್ಷಾ ಕವಚಗಳಂತೆ ಬಳಸುತ್ತಿವೆ. ಅಷ್ಟೇ ಅಲ್ಲದೆ ತಮ್ಮ ನಿತ್ಯ ಬದುಕಿನಲ್ಲಿ ವ್ಯಕ್ತಿಗತ ಜೀವನ- ಜೀವನೋಪಾಯಕ್ಕಾಗಿ ಶ್ರಮಿಸುವ ಕೋಟ್ಯಂತರ ಜನರ ನಡುವೆ ಜಾತಿ, ಮತ, ಧರ್ಮ, ಭಾಷೆಯ ಮುಳ್ಳುಬೇಲಿಗಳನ್ನು ನಿರ್ಮಿಸಿರುವ ಮತೀಯ-ಸಾಂಸ್ಕೃತಿಕ ರಾಜಕಾರಣವು ಸಾಮಾನ್ಯ ಜನರ ನಡುವೆ ಈಗಾಗಲೇ ಇರುವ ಅಂತರವನ್ನು ಮತ್ತಷ್ಟು ಹಿಗ್ಗಿಸುತ್ತಿದೆ. ಹಸಿವು, ಬಡತನ, ದಾರಿದ್ರ್ಯ, ನಿರುದ್ಯೋಗದಂತಹ ಜ್ವಲಂತ ಸಮಸ್ಯೆಗಳಿಗೆ ಆಡಳಿತ ನೀತಿಗಳನ್ನು, ಆರ್ಥಿಕ ಮಾದರಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕಾದ ಜನತೆ, ಮತ್ತೊಂದು ಕೋಮಿನ ಅಥವಾ ಜಾತಿಯ ಜನರನ್ನು ದೂಷಿಸುವ ಒಂದು ವಿಕೃತ ಸಾಮಾಜಿಕ ಮಾದರಿಯನ್ನು ಅಪ್ಪಿಕೊಂಡಿದೆ.

ಸಂವಿಧಾನ ಅಪೇಕ್ಷಿಸುವ ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಸೋದರತ್ವದ ಭಾವನೆ, ಸಹಬಾಳ್ವೆಯ ಮನಃಸ್ಥಿತಿಯನ್ನು ತಳಮಟ್ಟದವರೆಗೂ ವ್ಯಾಪಿಸಬೇಕೆಂದಾದರೆ, ಈ ಸಾಂವಿಧಾನಿಕ ಮೌಲ್ಯಗಳ ಹಿಂದಿರುವ ಚಾರಿತ್ರಿಕ ಪರಂಪರೆ ಮತ್ತು ಬಹುಸಾಂಸ್ಕೃತಿಕ ನೆಲೆಗಳನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಕೊಡಬೇಕಾಗುತ್ತದೆ.

ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರವನ್ನು ತಮಗೆ ಸಂಬಂಧಿಸದ ವಿದ್ಯಮಾನಗಳು ಎಂದು ಭಾವಿಸುವ ಒಂದು ಬೃಹತ್‌ ಜನಸಮೂಹವನ್ನು ನಾವು ನೋಡುತ್ತಲೇ ಬಂದಿದ್ದೇವೆ. ಈ ಜನಸಮೂಹದಲ್ಲಿ ವ್ಯವಸ್ಥೆಯ ಫಲಾನುಭವಿಗಳು ಇರುವಷ್ಟೇ ಪ್ರಮಾಣದಲ್ಲಿ ವ್ಯವಸ್ಥೆಯಿಂದ ನೊಂದ ಜೀವಿಗಳೂ ಇರಲು ಸಾಧ್ಯ. ಆದರೆ ಈ ನೊಂದ ಜೀವಿಗಳ ನೋವು, ಯಾತನೆಯನ್ನು ಮರೆಮಾಚುವ ಧಾರ್ಮಿಕ ಹೊದಿಕೆಗಳು, ಜಾತಿಯ ಕವಚಗಳು ಅಥವಾ ಆರ್ಥಿಕ ಸವಲತ್ತುಗಳು ಭಾರತದ ಸಂವಿಧಾನದ ಮೌಲ್ಯಗಳನ್ನು ಶಿಥಿಲಗೊಳಿಸುವ ಅಸ್ತ್ರಗಳಾಗಿ ಪರಿಣಮಿಸಿವೆ. ಇದರ ವಿರುದ್ಧ ಹೋರಾಡುವುದೇ ಆದರೆ, ಸಂವಿಧಾನ ಪೀಠಿಕೆಯ ಓದು ರೂಢಿಗತ ಆಚರಣೆಯಾಗದೆ (ritualistic) ನಿತ್ಯ ಬದುಕಿನ ಒಂದು ಭಾಗವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT