ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ವಿರುದ್ಧ ದಿಕ್ಕಿಗೆ ಹೆಜ್ಜೆ ಸಾಧ್ಯವೇ?

ಪರಿವರ್ತನೆಯು ವಿನಾಶದೆಡೆಗೆ ಜಗತ್ತನ್ನು ಮುನ್ನಡೆಸುವಂತೆ ಆಗಬಾರದು
Last Updated 12 ಏಪ್ರಿಲ್ 2021, 2:13 IST
ಅಕ್ಷರ ಗಾತ್ರ

ಕೊರೊನಾ ಕಾರಣದಿಂದ ಮಕ್ಕಳ ಕಲಿಕೆ- ಪರೀಕ್ಷೆ, ಶಾಲೆ, ನಾಳೆಗಳ ಅನಿಶ್ಚಿತತೆಯ ಬಗ್ಗೆ ಆತಂಕಗೊಂಡ ವ್ಯಕ್ತಿಯೊಬ್ಬ ಪ್ರಶ್ನಿಸಿದ– ‘ಮಿಂಚಿನ ವೇಗದಲ್ಲಿರುವ ಧಾವಂತದ ಜಗತ್ತು ಸೂಕ್ಷ್ಮಾಣು ಭಯಕ್ಕೆ ನಿಂತಲ್ಲೇ ಬಿಮ್ಮಗೆ ನಿಲ್ಲುವುದಾದರೂ ಯಾಕೆ? ಹಾಗೆ ನಿಲ್ಲುವುದಾದರೆ ಅಷ್ಟೊಂದು ವೇಗವೇಕೆ ಬದುಕಿಗೆ?! ಬೆಳಿಗ್ಗೆಗೊಂದು ಬೈಗಿಗೊಂದು ದೇಶ ಸುತ್ತುವವರಿರುವ ಕಾಲಘಟ್ಟದಲ್ಲಿ, ಮನೆಯೊಳಗೆ ಕೂತು ಬಿಲದ ಇಲಿಗಳಂತೆ ಅವಿತುಕೊಳ್ಳುವ ಪಾಡೇಕೆ ಹೀಗೆ? ಹಾಗಾದರೆ ‘ಕೊರೊನಾ’ ಎಂದರೇನು? ಅದು ತಂತ್ರಜ್ಞಾನದ ಅಣಕವೇ? ಅಭಿವೃದ್ಧಿ-ಆಧುನಿಕತೆಯ ಸ್ವರೂಪವೇ ಅಥವಾ ಕಾಲಚಕ್ರತಿರುಗುತ್ತಿರುವುದರ ಸಂಕೇತವೇ?’

ಉತ್ತರ ಸರಳ– ಕೇವಲ ಅರ್ಧಶತಮಾನ ಕಳೆಯುವಷ್ಟರಲ್ಲಿ ಜಗತ್ತು ಎಷ್ಟೊಂದು ಬದಲಾಗಿಹೋಯಿತು. ಪರಿವರ್ತನೆ ಜಗದ ನಿಯಮ ಹೌದಾದರೂ ಅದು ವಿನಾಶದೆಡೆಗೆ ಜಗತ್ತನ್ನು ಮುನ್ನಡೆಸುವಂತೆ ಆಗಬಾರದು. ಆ ದಿನಗಳಲ್ಲಿ ಸರಳತೆಯೇ ಶ್ರೇಷ್ಠತೆಯಂತಿತ್ತು. ಕಾಲುದಾರಿ, ಗಾಡಿಹಾದಿಗಳು ಬರಿಗಾಲ ನಡಿಗೆಗೆ ಮತ್ತು ಎತ್ತಿನಗಾಡಿಗೆ ಸಾಕಾಗುತ್ತಿದ್ದವು. ಕಿತ್ತುಹೋಗಿದ್ದ ಡಾಂಬರು ರಸ್ತೆಯಲ್ಲಿ ಅಪ್ಪನ ಸೈಕಲ್ ಓಡುತ್ತಿತ್ತು. ಸವಾರಿಗಳಲ್ಲಿ ಕಾಣದ ಕಸುವಿತ್ತು. ಆದರೀಗ ಮನೆಗೊಂದು ಐಷಾರಾಮಿ ಕಾರು ಬಂದುನಿಂತ ಮೇಲೆ, ಕೋಟಿ ಖರ್ಚಿನಲ್ಲಿ ಮನೆಯೆದುರಿನ ಹೈವೇ- ರಸ್ತೆ ಲಕಲಕ ಹೊಳೆಯುವಂತಾದ ಮೇಲೆ ಕಾಡುಗುಡ್ಡ ಗಳೆಲ್ಲಾ ಕರಗಿ ಬಿಸಿಗಾಳಿ ಬೀಸುತ್ತಿರುವ ಅರಿವಾಗಿದೆ.

ಆಗೆಲ್ಲಾ, ತಂತ್ರಜ್ಞಾನದ ಮಾಯೆಯಿಂದ ಅಂಗೈ ಯಲ್ಲಿ ಬ್ರಹ್ಮಾಂಡ ತೋರುತ್ತಿರಲಿಲ್ಲ. ಹಾಗಾಗಿ ಶಾಲೆಪುಸ್ತಕಗಳ ಓದಿಗೆ ಮನ್ನಣೆ ಇತ್ತು. ದಾರಿದೀಪಗಳಂತಿದ್ದ ಹಿರಿಯರ ಮಾತುಮೀರುವ ಧೈರ್ಯ ತೋರುತ್ತಿದ್ದವರು ವಿರಳ. ಈಗಿನಂತೆ ಎಲ್ಲವೂ ಬಿಕರಿಗಿರಲಿಲ್ಲ. ಮಾತು-ನಗು, ಸಂಬಂಧಗಳಲ್ಲಿ ಗಾಢಭಾವ ಉಕ್ಕುತ್ತಿದ್ದ ದಿನಗಳವು. ಕೊಳ್ಳುಬಾಕತನದ ಭ್ರಾಂತಿಯಲ್ಲಿ ಬೇಡದ ವಸ್ತುಗಳನ್ನು ಕೊಂಡೊಯ್ದು ಮನೆಯನ್ನೇ ಕಸದ ತೊಟ್ಟಿಯನ್ನಾಗಿ ಮಾಡುತ್ತಿರಲಿಲ್ಲ. ಅದರಿಂದಾಗಿ ಗಾಳಿ-ನೀರು ಶುದ್ಧವಿದ್ದವು, ಉತ್ಪಾದನೆ- ರವಾನೆ ಅಂತ ಪರಿಸರದ ಮೇಲೆ ವಿಪರೀತ ಒತ್ತಡವೆಲ್ಲಿತ್ತು?

ಮಿಶ್ರ ಬೇಸಾಯದಲ್ಲಿ ಸಾವಯವ ಪದ್ಧತಿ ಚಾಲ್ತಿಯಲ್ಲಿದ್ದ ಕಾಲವದು. ನೆಲದ ಸೂಕ್ಷ್ಮಾಣುಗಳ ಕೊಳೆಸುವಿಕೆ ಕ್ರಿಯೆಯು ಪೋಷಕಾಂಶಗಳ ಚಲನೆಗೆ ಕಾರಣವಾಗುತ್ತಿತ್ತು. ಕ್ರಿಮಿಕೀಟಗಳನ್ನು ತಿನ್ನುವ ಹಕ್ಕಿಪಕ್ಷಿಗಳು ಜೈವಿಕ ನಿಯಂತ್ರಣವನ್ನು ಸಾಧ್ಯಮಾಡುತ್ತಿದ್ದವು. ಮಣ್ಣನ್ನು ನಿರ್ಜೀವಗೊಳಿಸುವ ರಾಸಾಯನಿಕಗಳನ್ನು ಲೋಡುಗಟ್ಟಲೆತಂದುಸುರಿದುಆಹಾರವನ್ನುವಿಷಮಯಗೊಳಿಸುವ,ನೆಲವನ್ನುಮರುಭೂಮೀಕರಣಗೊಳಿಸುವ ಅಗತ್ಯವಿರಲಿಲ್ಲ. ಕೀಟನಾಶಕದಂಥ ವಿಷಪದಾರ್ಥಗಳಿಂದ ಸಹಜೀವಿಗಳನ್ನು ಕೊಂದುಕೊಳ್ಳುತ್ತಾ, ಗಾಳಿ-ನೀರನ್ನು ಮಲಿನ ಗೊಳಿಸುತ್ತಿರಲಿಲ್ಲ. ಪರಿಸರದ ಸಮತೋಲನವನ್ನು ಕದಡುತ್ತಿರಲಿಲ್ಲ.

ಬದುಕಿಡೀ ಕಾಯಿಲೆ ಕಂಡಿರದ ಮಂದಿ ಊರಲ್ಲಿದ್ದರು. ಮಲೆನಾಡಲ್ಲಂತೂ ಬಂಗಾರದ ಬೆಳೆಗಳ ಹಾವಳಿ ಇಷ್ಟಿರಲಿಲ್ಲ. ಅಡಿಕೆ-ಶುಂಠಿಗಾಗಿ ಕಾಡಿನೊಳಗೆ ನೂಕಿದ ಒಡ್ಡುಬೇಲಿಯೆಂಬ ಕೋಟೆಯೊಳಗೆ ರಾತ್ರಿ
ಬೆಳಗಾಗುವುದರಲ್ಲಿ ಕಾಡುಗುಡ್ಡಗಳು ಸುಟ್ಟು ಭಸ್ಮಗೊಳ್ಳುತ್ತಿರಲಿಲ್ಲ. ಕೆರೆ-ಗದ್ದೆಗಳಿನ್ನೂ ಲೇಔಟ್‍ಗಳಾಗಿ ರಲಿಲ್ಲ. ಉಳ್ಳವರು-ಇಲ್ಲದವರ ನಡುವಿನ ಗೋಡೆ ಯಾಚೆಗೆ ಸಂಯಮ-ಸೈರಣೆಗಳಿದ್ದವು. ಅದಾಗ ಸಾವ ಧಾನದ ನೆಲವಾಗಿತ್ತು. ತುಂಗೆ ತಣ್ಣಗೆ ಹರಿಯುತ್ತಿದ್ದಳು.

ಕಾಲ ಹಿಮ್ಮುಖವಾಗಿ ಚಲಿಸುವುದಿಲ್ಲವೆಂಬುದು ನಿಜವಾದರೂ ವ್ಯಕ್ತಿಯೊಬ್ಬನ ಗಂಭೀರ ಪ್ರಶ್ನೆಯನ್ನು ಜಗದಂತರಂಗ ಕೂತು ಕೇಳಿಸಿಕೊಳ್ಳಬೇಕಿದೆ. ‘ಬೈಕೊಂದಕ್ಕೆ ನೂರೈವತ್ತು ಕಿ.ಮೀ ಓಡುವ ಸಾಮರ್ಥ್ಯ ಇದ್ದಾಗಲೂ ಅಷ್ಟೇ ವೇಗಕ್ಕೆ ಹಾತೊರೆಯಬಾರದು, ಸುರಕ್ಷತೆಗಾಗಿ ವೇಗ ನಿಯಂತ್ರಣವಿರಬೇಕು
ಅನ್ನುತ್ತೀರಲ್ಲ. ಹಾಗಿದ್ದರೆ ಇವತ್ತಿನ ಬದುಕಿನ ಆಧುನಿಕ ಶೈಲಿ, ಅಭಿವೃದ್ಧಿ, ತಂತ್ರಜ್ಞಾನಗಳ ಸ್ವರೂಪಕ್ಕೊಂದು ಕಡಿವಾಣ ಬೇಕಲ್ಲವೇ?’

ಉತ್ತರ ಹುಡುಕಬೇಕಾದ ಜಗತ್ತು ಹಿಮಾಲಯದ ತಪ್ಪಲಿನ ಭೂತಾನ್ ಎಂಬ ಪುಟ್ಟದೇಶದ ಅಚ್ಚರಿಯ ಹೆಜ್ಜೆಗಳನ್ನು ಗುರುತಿಸಬೇಕಿದೆ. ಅಭಿವೃದ್ಧಿಯ ನಾಗಾಲೋಟದಲ್ಲಿ ಓಡುತ್ತಿರುವ ಮಿಕ್ಕೆಲ್ಲಾ ರಾಷ್ಟ್ರಗಳ ವಿರುದ್ಧ ದಿಕ್ಕಿನಲ್ಲಿ ಅದು ಹೆಜ್ಜೆ ಹಾಕುತ್ತಿದೆ. ಲಾಭ, ಆರ್ಥಿಕತೆ, ವಿಲಾಸಿ ಜೀವನವೆಲ್ಲಾ ಅಲ್ಲಿಯ ಆದ್ಯತೆಗಳೇ ಅಲ್ಲ. ನೆಲ ಬಗೆದು, ಕಾಡು ಕಡಿದು ಎಬ್ಬಿಸುವ ಬೃಹತ್ ರಸ್ತೆ-ಸೇತುವೆ, ಕಟ್ಟಡ-ಮಹಲುಗಳನ್ನು ಅವರೆಲ್ಲ ಅಭಿವೃದ್ಧಿ ಅಂದುಕೊಂಡಿಲ್ಲ. ಅಲ್ಲಿಯ ನೆಲದ ಪ್ರತಿಯೊಂದೂ ಕಾನೂನು-ಕಟ್ಟಲೆಗಳನ್ನು ಜನರ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯಿಂದ ಸೂಕ್ಷ್ಮವಾಗಿ ರೂಪಿಸಲಾಗುತ್ತದೆ.

ಪ್ರವಾಸೋದ್ಯಮದ ಉಪದ್ರವಗಳನ್ನು ಮನಗಂಡ ಸರ್ಕಾರ, ಅಂತಹ ಚಂದದ ದೇಶದ ಪ್ರವಾಸಿಗರಿಗೆ ದುಬಾರಿ ಶುಲ್ಕ ವಿಧಿಸಿ, ಅದನ್ನು ಸುಸ್ಥಿರ ಅಭಿವೃದ್ಧಿಗಾಗಿಯೇ ಮೀಸಲಿರಿಸಿದೆ. ಅಲ್ಲಿ 1999ರಲ್ಲಿಯೇ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ. ಅದು, ತಂಬಾಕನ್ನು ಕಾನೂನುಬಾಹಿರಗೊಳಿಸಿರುವ ಜಗತ್ತಿನ ಏಕೈಕ ದೇಶ!

ವನ್ಯಮೃಗಗಳ ಹತ್ಯೆಗಾಗಿ ಅಲ್ಲಿ ಜೀವಾವಧಿ ಶಿಕ್ಷೆಯಿದೆ. ಅಲ್ಲಿಯ ಸಂವಿಧಾನವೇ ಪರಿಸರ ಸಂರಕ್ಷಣೆ‌ಯನ್ನು ಮೂಲಭೂತ ಕರ್ತವ್ಯವನ್ನಾಗಿ ಪ್ರಜೆಗಳಿಗೆ ಬೋಧಿಸಿದೆ. ದೇಶದ ಅತಿದೊಡ್ಡ ರಫ್ತು ಎಂದರೆ ‘ನವೀಕರಿಸಬಲ್ಲ ಇಂಧನಮೂಲಗಳು’!

ಆಧುನೀಕರಣದ ಆಪತ್ತುಗಳನ್ನು ಸ್ಪಷ್ಟವಾಗಿ ಗ್ರಹಿಸಿರುವ ಭೂತಾನ್, ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಕಾಳಜಿಯಲ್ಲಿ ಜಗತ್ತಿನ ವಿನೂತನಮಾರ್ಗಸೂಚಿಯಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT