ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ‘ಆಸ್ತಿ’ಯಾಗುವ ಆಕರ್ಷಣೆ ಏಕೆ?

ಅಸಂಖ್ಯ ಹೋರಾಟಗಳ ಫಲವಾಗಿ ಇಂದು ಮನೆಯ ಹೊಸ್ತಿಲು ದಾಟುವ ಅವಕಾಶ ಪಡೆದಿರುವ ಹೆಣ್ಣುಮಕ್ಕಳು ಮತ್ತ್ಯಾರದೋ ಆಸ್ತಿಯಾಗಲು ಹೊರಡುವುದು ವಿಪರ್ಯಾಸ
Published 6 ಜೂನ್ 2024, 0:18 IST
Last Updated 6 ಜೂನ್ 2024, 0:18 IST
ಅಕ್ಷರ ಗಾತ್ರ

ನನ್ನ ತಂಗಿಯರಿಗೆ ನಮಸ್ಕಾರ, ಮೊನ್ನೆ ಕೆಲವು ಕಾಲೇಜು ಹುಡುಗಿಯರ ಚೂಡಿದಾರ್‌ ಮೇಲೆ ಹುಡುಗರು ‘ಮೈ ಪ್ರಾಪರ್ಟಿ’ ಎಂದು ಬರೆಯುತ್ತಿರುವ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ನೋಡಿ ಒಂದು ಕ್ಷಣ ಮನಸ್ಸು ಪಿಚ್ಚೆಂದಿತು. ಹುಡುಗರು ಹುಡುಗಿಯರ ಡ್ರೆಸ್‌ ಮೇಲೆ ಬರೆಯುತ್ತಿದ್ದಾರೆಂಬ ಕಾರಣಕ್ಕೆ ಬಹಳ ಮಂದಿ ಕೆಟ್ಟ ಕೆಟ್ಟ ಕಮೆಂಟುಗಳನ್ನು ಹಾಕಿದ್ದರು. ಆದರೆ ನನಗೆ ಸಂಕಟವಾಗಿದ್ದು, ಆ ಹುಡುಗರು ನಿಮ್ಮ ಬಟ್ಟೆಗಳ ಮೇಲೆ ‘ನನ್ನ ಆಸ್ತಿ’ ಎಂದು ಬರೆಯುತ್ತಿದ್ದುದಕ್ಕೆ!

ಅಯ್ಯೋ ಮಕ್ಕಳೇ, ನಾವು ಚಿನ್ನ, ಭೂಮಿ, ಮನೆ, ವಸ್ತುಗಳಂತೆ ಯಾರದ್ದೋ ಅಧೀನಕ್ಕೆ ಒಳಪಟ್ಟವರಲ್ಲ. ನಾವೂ ಪುರುಷರಂತೆಯೇ ಉಸಿರಾಡುವ, ಸ್ವತಂತ್ರ ಆಲೋಚನೆಗಳಿರುವ ಮನುಷ್ಯ ಜೀವಿಗಳು ಎಂಬುದನ್ನು ಈ ಸಮಾಜಕ್ಕೆ ಅರ್ಥಮಾಡಿಸಲು ಶತಶತಮಾನಗಳಿಂದ ಹೋರಾಡುತ್ತಾ ಬಂದಿರುವ ಬಹುದೊಡ್ಡ ಮಹಿಳಾ ಚಳವಳಿಯನ್ನೇ ನಿಮ್ಮ ಈ ಒಂದು ಕೃತಿಯಿಂದ ಅವಮಾನಗೊಳಿಸಿಬಿಟ್ಟಿರಲ್ಲಾ! ತಮಾಷೆಯೆಂದರೆ, ಯಾರೋ ಮಾಡಿದ ಅಸಂಖ್ಯ ಹೋರಾಟಗಳ ಫಲವಾಗಿಯೇ ಮನೆಯ ಹೊಸ್ತಿಲು ದಾಟುವ ಅವಕಾಶ ಪಡೆದು ಪದವಿ ಓದುತ್ತಿರುವ ನೀವು, ಮತ್ತೆ ಯಾರದ್ದೋ ಆಸ್ತಿಯಾಗಲು ಹೊರಟಿರುವುದು! ನಿಮಗೆ ಗೊತ್ತಿರಲಿ, ಸಹಸ್ರ ಸಹಸ್ರ ವರ್ಷಗಳಿಂದ ಹೆಣ್ಣನ್ನು ಆಸ್ತಿ ಎಂದು ಪರಿಗಣಿಸುತ್ತಿರುವುದನ್ನು ವಿರೋಧಿಸಿ ಅದೆಷ್ಟೋ ಮಂದಿಯ ತ್ಯಾಗ, ಬಲಿದಾನದ ಫಲವಾಗಿ ಇದೀಗ ಉಸಿರಾಡುತ್ತಿದ್ದೇವೆ. ಮತ್ತೆ ಮರಳಿ ಆಸ್ತಿಯಾಗುವ ನಿಮ್ಮ ಆಕರ್ಷಣೆಗೆ ಏನೆನ್ನಬೇಕೋ ತೋಚುತ್ತಿಲ್ಲ!

ಗೊತ್ತು ನನಗೆ, ಇದರಲ್ಲಿ ಪೂರ್ತಿ ತಪ್ಪು ನಿಮ್ಮದಲ್ಲ. ನಮ್ಮ ಜನಪ್ರಿಯ ಚಲನಚಿತ್ರಗಳು, ಧಾರಾವಾಹಿಗಳು ಇಂದಿಗೂ ಇಂತಹ ಸ್ಟೀರಿಯೋಟೈಪ್‌ ವಿಚಾರಧಾರೆಯನ್ನೇ ಜನರ ಮನಸ್ಸಿನಲ್ಲಿ ತುಂಬುತ್ತವೆ. ಇಂದಿಗೂ ಸಿಂಡ್ರೆಲಾಳ ಕಥೆಯೇ ನಮ್ಮ ಹುಡುಗಿಯರಿಗೆ ಇಷ್ಟ. ಹಿಂದೆ ನಾವು ಓದುತ್ತಿದ್ದ ಕಥೆಗಳಲ್ಲಿ, ರಾಕ್ಷಸನಿಂದ ಬಂದಿಯಾಗಿದ್ದ ರಾಜಕುಮಾರಿ, ಹೇಗೆ ಕುದುರೆಯ ಮೇಲೆ ಬರುವ ವೀರ ರಾಜಕುಮಾರನೊಬ್ಬ ಏಳು ಸಾಗರ ದಾಟಿ ಬಂದು ತನ್ನನ್ನು ಬಿಡುಗಡೆ ಮಾಡುತ್ತಾನೆ ಎಂದು ಕಾಯುತ್ತಿದ್ದಳೋ ಹಾಗೆಯೇ ಇಂದಿಗೂ ನಮ್ಮ ಹೆಣ್ಣುಮಕ್ಕಳು ಒಳ್ಳೆಯ ಗಂಡ ಸಿಕ್ಕರೆ ತಮ್ಮ ಬದುಕು ನೆಲೆ ಕಂಡಿತು ಎಂದುಕೊಂಡು ಬಿಡುತ್ತಾರೆ. ನಮ್ಮ ಕುಟುಂಬಗಳಲ್ಲೂ ಪುರುಷ ಶ್ರೇಷ್ಠತೆಯ ದೊಡ್ಡಸ್ತಿಕೆ ನಮ್ಮದೇ ಮನೆಯ ಸದಸ್ಯರ ನಡೆನುಡಿಗಳಿಂದ ತಲೆಮಾರುಗಳಿಂದ ತಲೆಮಾರುಗಳಿಗೆ ದಾಟುತ್ತಿರುತ್ತದೆ. ಉದಾಹರಣೆಗೆ, ಹಿಂದಿನಿಂದಲೂ ಆಸ್ತಿಗೂ ಹೆಣ್ಣಿಗೂ ಅವಿನಾಭಾವ ಸಂಬಂಧವಿದೆ. ಹಾಗಂತ ಆಸ್ತಿಯಲ್ಲಿ ಅವಳಿಗೆ ಯಾವ ಒಡೆತನವೂ ಇರಲಿಲ್ಲ. ಅವಳೇ ಆಸ್ತಿ ಎಂಬಂತೆ ಪರಿಗಣಿಸಲ್ಪಟ್ಟಿದ್ದಳು. ಆದರೆ ಆಸ್ತಿಯನ್ನು ಉಳಿಸುವಲ್ಲಿ, ಬಲಪಡಿಸುವಲ್ಲಿ ಹೆಣ್ಣುಮಕ್ಕಳು ವಸ್ತುಗಳಂತೆ ಬಳಸಲ್ಪಡುತ್ತಿದ್ದರು. ಉದಾಹರಣೆಗೆ, ಅಕ್ಕನ ಮಗಳನ್ನು ಮಾವ ಮದುವೆಯಾಗುವುದು, ಹಿಂದೆ ರಾಜಮನೆತನಗಳು ಪರಸ್ಪರ ವಿವಾಹ ಸಂಬಂಧ ಬೆಳೆಸುತ್ತಿದ್ದಂತೆ ಇಂದು ಉದ್ಯಮಿಗಳ ಕುಟುಂಬಗಳು ಹಾಗೂ ರಾಜಕೀಯ ಕುಟುಂಬಗಳ ನಡುವಿನ ಹುಡುಗ, ಹುಡುಗಿ ವಿವಾಹವಾಗುವುದು ಸಾಮಾನ್ಯ.

ಹೆಂಡತಿಗೆ ಹೊಡೆಯುವುದು ತನ್ನ ಹಕ್ಕು ಅನ್ನುವ ಮಾತು, ಗಂಡುಮಕ್ಕಳ ಕೈಲಿ ತಟ್ಟೆ ತೊಳೆಸಬೇಡ, ಕಸಬರಿಗೆ ಮುಟ್ಟಿಸಬೇಡ ಎನ್ನುವಂತಹ ಆದೇಶಗಳು ಇವೆಲ್ಲವೂ ಸಹಜ ಎಂದು ನಿಮಗನಿಸುತ್ತದೆ. ಆದರೆ ಇದರ ಪರಿಣಾಮ ಎಲ್ಲಿಯವರೆಗೆ ಬಂದು ಮುಟ್ಟಿದೆ ಎಂದರೆ, ತನ್ನನ್ನು ಪ್ರೀತಿಸದಿದ್ದರೆ ಹೆಣ್ಣನ್ನೇ ಮುಗಿಸಿಹಾಕುವುದು ಸಹಜ ಎನ್ನಿಸುವ ಮಟ್ಟಿಗೆ! ಅಂತಹ ಹಿಂಸೆಯನ್ನು ವಿಜೃಂಭಿಸುವ ಚಿತ್ರಗಳು ಸೂಪರ್‌ ಹಿಟ್‌ ಆಗುತ್ತಿರುವುದಕ್ಕೂ ಹೆಣ್ಣಿನ ಮೇಲೆ ಹೆಚ್ಚುತ್ತಿರುವ ಕ್ರೌರ್ಯಕ್ಕೂ ಸಂಬಂಧವಿದೆಯೆಂದು ನಿಮಗೆ ಅರ್ಥ
ವಾಗುತ್ತಿಲ್ಲವೇಕೆ? ಅವನೇನು ಕೈಗೆ ಬಳೆ ತೊಟ್ಟುಕೊಂಡಿಲ್ಲ ಎನ್ನುವ ಮಾತನ್ನು ಮಹಿಳೆಯರೇ ಆಡುತ್ತಾರೆಂದರೆ, ಪುರುಷರೆಂದರೆ ತಮಗಿಂತ ಶ್ರೇಷ್ಠವೆಂಬ ಭಾವನೆ ಹೆಣ್ಣುಮಕ್ಕಳಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ನೀವು ಊಹಿಸಬಹುದು.

ಬಹು ಹಿಂದಿನಿಂದಲೂ ಇಂತಹ ಕೀಳರಿಮೆಯನ್ನು ಹೆಣ್ಣುಮಕ್ಕಳಲ್ಲಿ ತುಂಬುತ್ತಾ ಬರಲಾಗಿದೆ. ಅದು ರಾಮಾಯಣವಾಗಿರಲಿ ಅಥವಾ ಮಹಾಭಾರತ ಆಗಿರಲಿ ಯುದ್ಧವಾಗುವುದೇ ಹೆಣ್ಣಿನಿಂದ ಎನ್ನುವಂತಹ ಮಾತು ಬಹಳ ಸಾಮಾನ್ಯವಾಗಿ ಕೇಳಿಬರುತ್ತದೆ. ಆದರೆ ಯುದ್ಧವೆನ್ನುವುದು ಪುರುಷನ ಅಧಿಕಾರ ಸ್ಥಾಪನೆಯ ಮನೋಭಾವದ ಫಲ. ಹೆಣ್ಣು, ಹೊನ್ನು, ಮಣ್ಣಿಗೆ ತಾನೇ ಯಜಮಾನನಾಗಿರಬೇಕೆಂಬ ಯಾಜಮಾನಿಕೆಯ ಗುಣದಿಂದಾಗಿಯೇ ಯುದ್ಧಗಳಾಗುತ್ತವೆ. ತಮಾಷೆ ಎಂದರೆ, ತಮ್ಮ ಪಾತ್ರವೇ ಇಲ್ಲದಿದ್ದರೂ ಯುದ್ಧದ ಪರಿಣಾಮದಿಂದ ಜಗತ್ತಿನಾದ್ಯಂತ ಇಂದು ನರಳುತ್ತಿರುವುದು ಹೆಣ್ಣುಮಕ್ಕಳೇ ಎನ್ನುವುದನ್ನು ನಿಮಗೆ ಯಾರೂ ಹೇಳಿಲ್ಲ ಎಂದು ಕಾಣುತ್ತದೆ. ಜಗತ್ತಿನಾದ್ಯಂತ ಮಹಿಳೆಯರು ದೇಶದ ಆಗುಹೋಗುಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಹಕ್ಕಿಗಾಗಿ ಹೋರಾಡುತ್ತಿದ್ದರೆ ನೀವು ಮತ್ತೆ ಯಾರದ್ದೋ ಆಸ್ತಿಯಾಗಲು ಹೊರಟಿದ್ದೀರಿ. ಈಗಾಗಲೇ ಸಮಾಜ ನಿಮ್ಮನ್ನು ಗಂಡಿನ ಆಸ್ತಿ ಎಂದು ಪರಿಗಣಿಸುವುದನ್ನೇನೂ ಬಿಟ್ಟಿಲ್ಲ.

ಮಕ್ಕಳೇ, ವೇಷಭೂಷಣಗಳಲ್ಲಿ ಆಧುನಿಕತೆಯನ್ನುಅಳವಡಿಸಿಕೊಂಡ ಮಾತ್ರಕ್ಕೆ ಯಾರೂ ಆಧುನಿಕರಾಗುವುದಿಲ್ಲ. ನಿಮ್ಮ ವಿಚಾರಧಾರೆಯು ಬದಲಾಗಬೇಕಿರುವುದು ನಿಮ್ಮ ಭವಿಷ್ಯದ ದೃಷ್ಟಿಯಿಂದ ಮಾತ್ರವಲ್ಲ, ಸಮಾಜದ ಆರೋಗ್ಯದ ದೃಷ್ಟಿಯಿಂದಲೂ ಅನಿವಾರ್ಯ.

–ಇಂತಿ ನಿಮ್ಮ ಸಹೋದರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT