ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿನ್ನಾ: ಬೇವು ಬಿತ್ತಿ ಮಾವು ಬಯಸಿದರೇ?

Last Updated 23 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ರಾಮಚಂದ್ರ ಗುಹಾ ಅವರು, ‘ಇಸ್ಲಾಂ ಬಗ್ಗೆ ಏನೂ ಗೊತ್ತಿಲ್ಲದ ವ್ಯಕ್ತಿ ಮಾತ್ರವಲ್ಲ ಮುಸ್ಲಿಮರ ಬಗ್ಗೆ ಏನೂ ಗೊತ್ತಿಲ್ಲದ ಮತ್ತು ಏನನ್ನಾದರೂ ತಿಳಿದುಕೊಳ್ಳಲು ಆಸಕ್ತಿಯೂ ಇಲ್ಲದ ವ್ಯಕ್ತಿಯಾಗಿದ್ದರೂ ಮುಸ್ಲಿಮರಿಗಾಗಿ ಸ್ವತಂತ್ರ ದೇಶವೊಂದನ್ನು ಸೃಷ್ಟಿಸಿಕೊಟ್ಟರು’ ಎಂದು ಜಿನ್ನಾ ಬಗ್ಗೆ ಬರೆದಿದ್ದಾರೆ (ಪ್ರ.ವಾ., ಸೆ. 15). ಅದೇ ಲೇಖನದಲ್ಲಿ, ‘ಭಾರತದಲ್ಲಿ ರಾಷ್ಟ್ರಪಿತನ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ; ಆದರೆ ಪಾಕಿಸ್ತಾನದಲ್ಲಿ ಆ ದೇಶದ ರಾಷ್ಟ್ರಪಿತನ ಬಗ್ಗೆ ಯಾರೂ ವಿಮರ್ಶಾತ್ಮಕವಾಗಿ ಮಾತನಾಡುವುದಿಲ್ಲ’ ಎಂದೂ ಬರೆಯುತ್ತಾರೆ. ಈ ಒಂದು ಮಾತೇ, ಅನೇಕ ಅಡಚಣೆಗಳ ಹೊರತಾಗಿಯೂ ಕೋಮುವಾದಿಗಳು ಎಷ್ಟೇ ಅಬ್ಬರಿಸಿದರೂ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವ ಈ ದೇಶದಲ್ಲಿ ಎಷ್ಟು ಗಟ್ಟಿಯಾಗಿ, ಆಳವಾಗಿ ಬೇರೂರಿವೆ ಎಂಬ ಬಗ್ಗೆ ಹಾಗೂ ನೆರೆಯ ದೇಶದ ವಸ್ತುಸ್ಥಿತಿಯ ಬಗ್ಗೆ ಸಂಪುಟಗಳಲ್ಲಿ ಹೇಳಬಹುದಾದ್ದನ್ನು ಹೇಳುತ್ತಿದೆ.

ವೈಯಕ್ತಿಕ ಜೀವನದಲ್ಲಿ ರಿಲಿಜಿಯಸ್ ಆಗಿಲ್ಲದ, ಕಟ್ಟರ್ ಪಂಥೀಯ ಮುಸ್ಲಿಮನಲ್ಲದ, ಅಷ್ಟೇ ಏಕೆ, ನಮಾಜು ಮಾಡಲು ಸದ್ಗೃಹಸ್ಥ ಮುಸ್ಲಿಮರಂತೆ ಮಸೀದಿಗೆ ಹೋಗದ, ಇಸ್ಲಾಂ ತತ್ವಕ್ಕೆ ವಿರುದ್ಧವಾಗಿ ವಿಸ್ಕಿ, ಸಿಗರೇಟು ಪ್ರಿಯನಾಗಿದ್ದ ವ್ಯಕ್ತಿಯೊಬ್ಬ ಒಂದು ಕೋಮಿನ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸಿ, ಅವರನ್ನು ಬಡಿದೆಬ್ಬಿಸಿ, ಸಂಘಟಿಸಿ ದೇಶ ಸೃಷ್ಟಿಸಿಕೊಟ್ಟರು. ಅದೇ ಸಮಯಕ್ಕೆ ವೈಯಕ್ತಿಕ ಜೀವನದಲ್ಲಿ ಅತ್ಯಂತ ರಿಲಿಜಿಯಸ್ ಆಗಿದ್ದ, ಧರ್ಮದ ನಿಜವಾದ ಅಂತಃಸತ್ವ ಏನೆಂದು ಹಾಗೂ ಹಿಂದೂ ಧರ್ಮದ ಸಾರ ಸತ್ವ ಏನೆಂದು ಯಾವುದೇ ಧಾರ್ಮಿಕ ಮುಖಂಡರಿಗಿಂತ, ಸಾಧು ಸಂನ್ಯಾಸಿಗಳಿಗಿಂತ ಚೆನ್ನಾಗಿ ಮನಗಂಡಿದ್ದ ಬಾಪೂ, ಎಂದೂ ಧರ್ಮದ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸದ, ಪ್ರಚೋದಿಸದ ವ್ಯಕ್ತಿಯಾಗಿದ್ದರು ಮತ್ತು ಇಡೀ ಮಾನವತೆಯೆಲ್ಲ ಒಂದು ಎಂದು ಸಾರಿದ್ದಷ್ಟೇ ಅಲ್ಲದೆ ಹಿಂದೂ– ಮುಸ್ಲಿಂ ಏಕತೆ ಮತ್ತು ಸಾಮರಸ್ಯವನ್ನು ಜೀವನದ ಮಂತ್ರವೆಂಬಂತೆ ಜಪಿಸುತ್ತಿದ್ದರು, ಅದೇ ಕಾರಣಕ್ಕಾಗಿಯೇ ಹುತಾತ್ಮರಾದರು.

ಸಾವರ್ಕರ್ ಕೂಡ ನಿರೀಶ್ವರವಾದಿಯಾಗಿದ್ದೂ ಹಿಂದುತ್ವದ ಪ್ರತಿಪಾದಕರಾಗಿದ್ದರು. ಈ ಒಂದು ವಿಷಯದಲ್ಲಿ ಸಾವರ್ಕರ್‌ ಮತ್ತು ಜಿನ್ನಾ ಅವರಲ್ಲಿ ಸಾಮ್ಯತೆ ಇದೆ. ಆದರೆ ನಾವು ಒಬ್ಬ ವ್ಯಕ್ತಿಯನ್ನು ಅಳೆಯಬೇಕಾದ್ದು ಅವನು ವೈಯಕ್ತಿಕ ಜೀವನದಲ್ಲಿ ಏನಾಗಿದ್ದ ಎಂಬುದಕ್ಕಿಂತ ಲೋಕಕ್ಕೆ ಯಾವ ಸಂದೇಶವನ್ನು ಬಿಟ್ಟುಹೋಗುತ್ತಾನೆ, ಲೋಕಕ್ಕೆ ಯಾವ ಮುಖವನ್ನು ಢಾಳವಾಗಿ ತೋರಿಸುತ್ತಾನೆ, ಯಾವುದು ಪ್ರಭಾವಶಾಲಿಯಾಗಿ ಜನರ ಮನಸ್ಸನ್ನು ಕಲಕುತ್ತದೆ ಮತ್ತು ತನ್ನ ಪ್ರಭಾವ ಮುದ್ರೆಯನ್ನೊತ್ತುತ್ತದೆ ಎಂಬುದರ ಮೇಲೆ. ‘Man is not judged by what he is, not by what he was, but by what he becomes’ ಎಂಬ ಮಾತು ಪ್ರಸಿದ್ಧವೇ ಇದೆ.

ಹಾಗೆ ನೋಡಿದರೆ ನಮ್ಮ ಬಾಪೂಗೆ ವೈಯಕ್ತಿಕ ಮತ್ತು ಸಾರ್ವತ್ರಿಕ, ಅಂತರಂಗ– ಬಹಿರಂಗ ಎರಡೂ ಒಂದೇ ಆಗಿತ್ತು ಎಂದು ಹೇಳಬಹುದು. ಅವರಲ್ಲಿ ಜಿನ್ನಾರಲ್ಲಿದ್ದಂಥ ದ್ವಿಧಾ ಪ್ರವೃತ್ತಿಗೆ ಅವಕಾಶವೇ ಇರಲಿಲ್ಲ. ಜಿನ್ನಾಗೆ ಎಂದೂ ‘ವಿದ್ಯೆಯ ಪರಿಪಾಕ’ ಎಂದು ಹೇಳಬಹುದಾದಂಥ ಸಂಸ್ಕಾರಯುತ ಶಿಕ್ಷಣ ದೊರೆತಿರಲೇ ಇಲ್ಲವೆನ್ನಬಹುದು. ಅವರು ಕೂಡ ಗಾಂಧಿಯಂತೆಯೇ ಇಂಗ್ಲೆಂಡಿಗೆ ಹೋಗಿ ಬ್ಯಾರಿಸ್ಟರ್ ಪದವಿ ಪಡೆದು ಬಂದವರು. ಅಷ್ಟೇ ಅಲ್ಲ ಗಾಂಧಿಗಿಂತ ಸಮರ್ಥ ಮತ್ತು ಯಶಸ್ವಿ ವಕೀಲರಾಗಿದ್ದವರು. ಅವರಿಬ್ಬರ ಹೋಲಿಕೆಗಳು ಅಷ್ಟಕ್ಕೆ ನಿಲ್ಲುತ್ತವೆ. ಈ ಮನುಷ್ಯ ಗಾಂಧಿ ಹತ್ಯೆಯಾದಾಗ ವ್ಯಕ್ತಪಡಿಸಿದ ಅಭಿಪ್ರಾಯ ‘A great Hindu Leader is dead’ ಎಂದು. ಈಗಾಗಲೇ ತಿಳಿಸಿದಂತೆ ತನ್ನ ದೇಶಬಾಂಧವರ ವಿರೋಧವನ್ನೂ ಲೆಕ್ಕಿಸದೆ ಗಾಂಧೀಜಿ ಹಿಂದೂ– ಮುಸ್ಲಿಂ ಏಕತೆಯನ್ನು ಜೀವನದ ವ್ರತವೆಂಬಂತೆ ಪಾಲಿಸಿಕೊಂಡು ಬಂದವರು. ಅಂಥವರ ಮಹಾನ್ ವ್ಯಕ್ತಿತ್ವವನ್ನು ಎಷ್ಟು ಮಾತ್ರಕ್ಕೂ ಕಂಡುಕೊಳ್ಳುವಂಥ ಉದಾತ್ತ ದೃಷ್ಟಿ ಜಿನ್ನಾಗೆ ಇಡೀ ಜೀವನದಲ್ಲಿ ಸಾಧ್ಯವಾಗಲೇ ಇಲ್ಲ. ಹಾಗಾಗಿ ಅದು ಬಾಪೂಗೆ ಮಾಡಿದ ದೊಡ್ಡ ಅಪಚಾರವಷ್ಟೇ ಅಲ್ಲದೆ ಮಹಾ ಮಾನವನೊಬ್ಬನಿಗೆ ಮಾಡಿದ ಅಪಚಾರ ಕೂಡ.

ಆದ್ದರಿಂದಲೇ ಆ ವ್ಯಕ್ತಿ ವೈಯಕ್ತಿಕ ಜೀವನದಲ್ಲಿ ನಿರೀಶ್ವರವಾದಿಯೆಂಬಂತೆ ನಡೆದುಕೊಂಡರೂ ಧರ್ಮದ ಸಂಕುಚಿತವಾದ ದೃಷ್ಟಿ ಧೋರಣೆಗಳಿಂದ ಯಾವತ್ತೂ ಬಿಡುಗಡೆ ಪಡೆಯಲೇ ಇಲ್ಲ. ಗಾಂಧಿ ಹತ್ಯೆಯಾದಾಗಿನ ಸಂದರ್ಭದ ಜಿನ್ನಾರ ಹೇಳಿಕೆಯನ್ನೇ ಉಲ್ಲೇಖಿಸುತ್ತ ಸ್ವತಃ ನೆಹರೂ ಜಿನ್ನಾ ಅವರ ವಿದ್ಯಾ ಸಂಸ್ಕಾರದ ಕುಬ್ಜತೆಯ ಬಗ್ಗೆ ಹೇಳಿದ್ದಾಗಿ ಖ್ಯಾತ ಹಿಂದಿ ಕವಿ ಹಾಗೂ ನೆಹರೂ ಅವರ ಆಪ್ತರಾಗಿದ್ದ ರಾಮಧಾರಿ ಸಿಂಹ ದಿನಕರ್ ತಮ್ಮ ‘ಲೋಕದೇವ ನೆಹರೂ’ ಪುಸ್ತಕದಲ್ಲಿ ದಾಖಲು ಮಾಡುತ್ತಾರೆ. ಜಿನ್ನಾ ಅವರಿಗೆ ತಮ್ಮ ದೇಶ ಸೆಕ್ಯುಲರ್, ಪ್ರಜಾಪ್ರಭುತ್ವ ದೇಶವಾಗಿ ರೂಪುಗೊಂಡು ಸಹಿಷ್ಣುವಾಗಿರಬೇಕೆಂಬ ಆಸೆಯಿತ್ತು ಎಂದು ಹೇಳುತ್ತಾರೆ. ಆದರೆ ಅವರ ಬದುಕನ್ನು ವಿಶ್ಲೇಷಿಸಿ ನೋಡಿದರೆ ನಿಜಕ್ಕೂ ಅಂಥ ಆಸೆಯಿತ್ತೇ ಎಂಬ ಸಂದೇಹ ಯಾರಿಗೇ ಆದರೂ ಕಾಡುತ್ತದೆ. ಆ ಸಂದೇಹಕ್ಕೆ ಪುಷ್ಟಿಕೊಡುವಂತೆ ಸ್ವತಂತ್ರ ದೇಶವಾಗಿ ರೂಪುಗೊಂಡು ಮುಕ್ಕಾಲು ಶತಮಾನದ ಸನಿಹಕ್ಕೆ ಬಂದಿದ್ದರೂ ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ ಎಂಬುವು ಆ ದೇಶದ ಪಾಲಿಗೆ ಇನ್ನೂ ಮೊಲದ ಕೋಡಾಗಿಯೇ ಉಳಿದಿರುವುದು ಎಲ್ಲರಿಗೂ ತಿಳಿದೇ ಇದೆ. ಬೇವಿನ ಬೀಜ ಬಿತ್ತಿ ಮಾವಿನ ಫಲ ಬಯಸುವುದೆಂಬುದು ದ್ವೇಷ, ಹಿಂಸೆಗಳಿಂದ ಕೂಡಿದ ಜಿನ್ನಾರ ಇಂಥ ಪ್ರಯತ್ನವನ್ನು ಕುರಿತೇ ಹೇಳಿದ್ದಾಗಿರ ಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT