ಅಮೋಘವರ್ಷ ಅವರ ‘ಕಾಳಿ’ ಸಾಕ್ಷ್ಯಚಿತ್ರ ಅನಾವರಣಗೊಂಡಿದ್ದು 2015ರ ಆಗಸ್ಟ್ 14ರಂದು. ಹತ್ತು ವರ್ಷಗಳ ನಂತರ ಈ ಸಾಕ್ಷ್ಯಚಿತ್ರ, ಭವಿಷ್ಯದ ಶಕುನದಂತೆ ಭಾಸವಾಗುತ್ತಿದೆ.

ಜೀವನದಿಯನ್ನು ಕೊಂಡಾಡಿರುವ ಆ ಚಿತ್ರ, ಇಂದು ನಾವು ಕಳೆದುಕೊಳ್ಳುತ್ತಿರುವುದೇನು ಎಂಬುದನ್ನು ಮನದಟ್ಟಾಗಿಸುತ್ತಿದೆ. ಪಶ್ಚಿಮಘಟ್ಟಗಳ ಮಡಿಲಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಪಾತಾಗುಡಿ ಎನ್ನುವ ಪುಟ್ಟ ಗ್ರಾಮದ ಜಾನಕಿ ಎನ್ನುವ ಅಜ್ಜಿ, ತನ್ನ ಮೊಮ್ಮಗ ಗಜಾನನನನ್ನು ಕಾಳಿ ನದಿಯ ಉಗಮ ಸ್ಥಳಕ್ಕೆ ಕರೆದುಕೊಂಡು ಹೋಗುವ ದೃಶ್ಯಗಳು, ಕಾಲವೇ ನದಿಯಂತೆ ಹರಿದುಹೋದರೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ.

‘ಕಾಳಿ’ ಸಾಕ್ಷ್ಯಚಿತ್ರ ಪರಿಸರ ಸಂರಕ್ಷಣೆಯ ಒಂದು ಚಳವಳಿಯಂತೆಯೂ ಕಾಣಿಸುತ್ತದೆ. ಕಾಳಿ ನದಿಯನ್ನು ಮಾನವನ ದುರಾಸೆಗೆ ಮೀಸಲಿಟ್ಟಿರುವ ಸಂಪನ್ಮೂಲವೆಂದು ನೋಡದೆ, ಜೀವಂತ ನದಿ ಹಾಗೂ ಪೀಳಿಗೆಯನ್ನು ಬಂಧಿಸುವ ಜೀವಸಂಧಾನದ ರೂಪದಲ್ಲಿ ನೋಡುವಂತೆ ಕರುನಾಡನ್ನು ಕೂಗಿ ಕರೆವ ರೂಪದಲ್ಲಿ ಈ ಸಾಕ್ಷ್ಯಚಿತ್ರವನ್ನು ನೋಡಬಹುದು. ಈ ಸಾಕ್ಷ್ಯಚಿತ್ರ, ನದಿಯ ಸೌಂದರ್ಯವನ್ನಷ್ಟೇ ಸೆರೆಹಿಡಿಯಲಿಲ್ಲ; ಕಾಳಿಯ ಜೀವನ್ಮರಣದ ಹೋರಾಟವನ್ನೂ ಹಿಡಿದಿಟ್ಟಿದೆ. ಜಲಾನಯನ ಪ್ರದೇಶಗಳು, ಅರಣ್ಯಗಳು, ಕುಣಬಿ ರೈತರ ಹೊಲಗಳು, ಗೌಳಿಗಳ ಜಾನುವಾರುಗಳು ಮೇಯುವ ದಾರಿಗಳು, ಇವೆಲ್ಲವೂ ಕಾಳಿಯೊಡನೆ ಅವಿನಾಭಾವ ಸಂಬಂಧ ಹೊಂದಿವೆ. ನದಿಯನ್ನು ಕಳೆದುಕೊಂಡರೆ, ವನ್ಯಜೀವಿ, ಕೃಷಿ, ಪ್ರವಾಸೋದ್ಯಮ, ಸಮುದಾಯಗಳು, ಜಲಾಶಯಗಳು, ವಿದ್ಯುತ್ ಯೋಜನೆಗಳು, ಯಾವುದೂ ಉಳಿಯುವುದಿಲ್ಲ.

ನಮ್ಮ ನದಿಗಳನ್ನು ನಾವು ಕುಟುಂಬದ ಸದಸ್ಯರಂತೆ ನೋಡುತ್ತೇವೆಯೇ ಅಥವಾ ಕೇವಲ ಸಂಪನ್ಮೂಲವೆಂದು ಬಳಸುತ್ತೇವೆಯೇ ಎಂಬ ಪ್ರಶ್ನೆಯನ್ನು ಮುಂದಿಡುವ ಕಾಳಿ ಸಾಕ್ಷ್ಯಚಿತ್ರದಲ್ಲಿ, ನದಿಯೇ ಕಥೆಗಾರನ ರೂಪದಲ್ಲಿ ಎದುರಾಗುತ್ತದೆ; ಕರ್ನಾಟಕದ ನಿಜವಾದ ಸಮೃದ್ಧಿ ಇರುವುದು ನೈಸರ್ಗಿಕ ಸಂಪನ್ಮೂಲಗಳನ್ನು ಗೌರವಿಸುವುದರಲ್ಲಿಯೇ ಹೊರತು, ಶೋಷಿಸುವುದರಲ್ಲಿ ಅಲ್ಲ ಎನ್ನುವುದನ್ನು ಮನವರಿಕೆ ಮಾಡಿಸುತ್ತದೆ.

ನದಿ ಹಾಗೂ ಅರಣ್ಯ ರಕ್ಷಣೆಯಲ್ಲಿ ಅರಣ್ಯ ಸಿಬ್ಬಂದಿಯ ಮೌನ ಹೋರಾಟವೂ ಪ್ರಶಂಸನೀಯ. ಅಕ್ರಮ ಬೇಟೆ, ಮರ ಕಡಿತಲೆ, ಒತ್ತುವರಿ ವಿರುದ್ಧ, ಬೆರಳೆಣಿಕೆಯಷ್ಟು ಸಂಪನ್ಮೂಲಗಳೊಂದಿಗೆ ಅವರು ಹಗಲು–ರಾತ್ರಿ ಹೋರಾಡುತ್ತಿದ್ದಾರೆ.

ಪರಿಸರ ಸಂರಕ್ಷಣೆಯ ಸವಾಲುಗಳು ಹೆಚ್ಚುತ್ತಿವೆ. ಘಟ್ಟಗಳನ್ನು ಕತ್ತರಿಸುವ ಹೆದ್ದಾರಿ ಯೋಜನೆಗಳು, ಕಾಳಿಯ ಜೀವಜಲವಾದ ಅರಣ್ಯ ಜಲಾನಯನ ಪ್ರದೇಶಗಳನ್ನು ಹಾಳುಗೆಡವಲು ಹೊರಟಿರುವ ಬೃಹತ್ ವಿದ್ಯುತ್ ಹಾಗೂ ರೈಲ್ವೆ ಯೋಜನೆಗಳು, ನಿಯಂತ್ರಣವಿಲ್ಲದ ಪ್ರವಾಸೋದ್ಯಮ– ಇವೆಲ್ಲವೂ ನದಿಯ ಅಂತರಂಗವನ್ನು ಹಾಳುಮಾಡುತ್ತಿವೆ.

ನದಿಯೊಡನೆ ಬೆಸೆದುಕೊಂಡ ಸಮುದಾಯಗಳ ಸ್ಥಿತಿ ಆತಂಕ ಹುಟ್ಟಿಸುವಂತಿದೆ. ಕುಣಬಿ ರೈತರು ಹಲವು ತಲೆಮಾರುಗಳಿಂದ ಭತ್ತ ಬೆಳೆಯುತ್ತಿದ್ದಾರೆ. ಕಾಳಿ ನದಿ ಅವರ ಕಾವಲುದೇವತೆ. ಆದರೆ, ಅಣೆಕಟ್ಟಿನ ನೀರು ಒಂದೆಡೆ ಹೊಲಗಳನ್ನು ಮುಳುಗಿಸುತ್ತಿದ್ದರೆ, ಮತ್ತೊಂದೆಡೆ ಬತ್ತಿಸುತ್ತಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಜಮೀನು ಎಗ್ಗಿಲ್ಲದೆ ಪರಿವರ್ತನೆ ಆಗುತ್ತಿದೆ. ಕೃಷಿ ಭೂಮಿ ಕುಗ್ಗುತ್ತಿದೆ. ಗೌಳಿ ಸಮುದಾಯದ ಜಾನುವಾರುಗಳು ಮೇಯುವ ಬಯಲುಗಳು ಹೆದ್ದಾರಿಗಳಾಗುತ್ತಿವೆ. ಇವು ಕೇವಲ ಪರಿಸರ ಸಮಸ್ಯೆಗಳಲ್ಲ, ಸಮುದಾಯಗಳ ಸಂಸ್ಕೃತಿ ಮತ್ತು ಗೌರವದ ಕುಸಿತ. ಇದೇ ಸಮಯದಲ್ಲಿ, ಮೀನುಗಳು ತಮ್ಮ ಹಾದಿ ಕಳೆದುಕೊಂಡಿವೆ; ಆನೆ–ಹುಲಿ–ಚಿರತೆಗಳು ಕುಗ್ಗಿದ ಅರಣ್ಯದಲ್ಲಿ ಜನವಸತಿಗಳತ್ತ ನುಗ್ಗುತ್ತಿವೆ.

ನದಿ ಎನ್ನುವುದು ಕೇವಲ ಹರಿಯುವ ನೀರಲ್ಲ. ಅದು ನಮ್ಮ ತೀರ್ಮಾನಗಳ ಪ್ರತಿಬಿಂಬ. ಇದು ದುರಾಸೆ ಮತ್ತು ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆಯೇ ಅಥವಾ ಬುದ್ಧಿವಂತಿಕೆ ಮತ್ತು ಸಂಯಮವನ್ನು ಪ್ರತಿಬಿಂಬಿಸುತ್ತದೆಯೇ? ಕಾಳಿ ಸಾಕ್ಷ್ಯಚಿತ್ರ ನದಿಗೆ ಧ್ವನಿ ಕೊಟ್ಟಿತು. ಅಮೋಘವರ್ಷ ಆ ಧ್ವನಿಗೆ ಆತ್ಮ ಕೊಟ್ಟರು. ನೀತಿಗಳು ನದಿಗಳನ್ನು ರಕ್ಷಿಸಬಹುದಾದರೂ, ಅವುಗಳ ಭವಿಷ್ಯಕ್ಕಾಗಿ ಹೋರಾಡಲು ಅವುಗಳನ್ನು ಪ್ರೀತಿಸಲು ನಮಗೆ ಸ್ಫೂರ್ತಿ ನೀಡುವ ಕಥೆಗಳು ‘ಕಾಳಿ’ಯಂತಹ ಅದ್ಭುತ ಸಾಕ್ಷ್ಯಚಿತ್ರಗಳಾಗಿವೆ.

ಈ ಸಾಕ್ಷ್ಯಚಿತ್ರವನ್ನು ವೀಕ್ಷಿಸುವಾಗ, ಅಥವಾ ಪ್ರಕೃತಿ ಶಿಬಿರದಲ್ಲಿ, ಜಾಗೃತಿ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ತೋರಿಸುವಾಗ ನಿಜಕ್ಕೂ ನೋಡುಗರ ಕಣ್ಣಾಲಿಗಳು ತೇವವಾಗುತ್ತವೆ. ಕಾಳಿ ಕಣಿವೆಯ ಪ್ರೀತಿ, ನದಿಯ ನಿಶ್ವಾಸ, ಅರಣ್ಯದ ಶ್ರವಣ, ಅಲ್ಲಿನ ಮುಗ್ಧ ಜನರು, ಇವೆಲ್ಲವನ್ನೂ ಹತ್ತಿರದಿಂದ ನೋಡಿ ಅನುಭವಿಸಿದ ನನ್ನಂತಹ ಸಾವಿರಾರು ಜನರ ಹೃದಯಗಳಲ್ಲಿ ಸಾಕ್ಷ್ಯಚಿತ್ರ ಹಲವು ಭಾವಗಳನ್ನು ಹೊಮ್ಮಿಸುತ್ತದೆ.

ಕರ್ನಾಟಕದಲ್ಲಿ ಪರಿಸರ ನೀತಿ ರೂಪಿಸುವವರಿಗೆ ಒಂದು ಮಾತು: ಕಾಳಿಯನ್ನು ಹೆದ್ದಾರಿ, ಅಣೆಕಟ್ಟು, ಬೃಹತ್ ವಿದ್ಯುತ್ ಯೋಜನೆಗಳು, ನಿಯಂತ್ರಣವಿಲ್ಲದ ಪ್ರವಾಸೋದ್ಯಮದಿಂದ ರಕ್ಷಿಸಿ. ನಾಗರಿಕರಿಗೆ ಒಂದು ಮನವಿ: ಇದು ನಿಮ್ಮ ಆಸ್ತಿಯೂ, ನಿಮ್ಮ ಮಕ್ಕಳ ಆಸ್ತಿಯೂ ಆಗಿದೆ ಎಂದು ನೆನಪಿರಿಸಿಕೊಳ್ಳಿ. ಮತ್ತು ಮುಖ್ಯವಾಗಿ, ಕಾಳಿ ಮತ್ತು ಅರಣ್ಯಗಳಿಲ್ಲದೆ, ಸಮುದಾಯ, ವನ್ಯಜೀವಿ, ಪ್ರವಾಸೋದ್ಯಮ, ಅಣೆಕಟ್ಟು, ವಿದ್ಯುತ್ ಯೋಜನೆಗಳು, ಕೃಷಿ, ಯಾವುದೂ ಉಳಿಯುವುದಿಲ್ಲ.

ಕಾಳಿಯನ್ನು ಕಾಯುವುದು ಆಯ್ಕೆ ಅಲ್ಲ, ಅದು ನಮಗುಳಿದಿರುವ ಏಕೈಕ ದಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.