ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳುತ್ತಿದೆಯೇ ‘ಆಶಾ’ ಮೊರೆ?

ಸುರಕ್ಷಾ ಸಾಧನಗಳ ಕೊರತೆಯ ನಡುವೆಯೂ ಕೊರೊನಾ ವಾರಿಯರ್ಸ್‌ಗಳಾಗಿರುವ ಆಶಾ ಕಾರ್ಯಕರ್ತೆಯರ ಅಳಲನ್ನು ಸರ್ಕಾರ ಆಲಿಸಬೇಕಾಗಿದೆ
Last Updated 19 ಜುಲೈ 2020, 19:31 IST
ಅಕ್ಷರ ಗಾತ್ರ

ಆಶಾ ಕಾರ್ಯಕರ್ತೆಯರು ಕೆಲಸ ನಿರ್ವಹಿಸದೇ ಪ್ರತಿಭಟನೆಗಿಳಿದಿದ್ದಾರೆ. ಏಕೆ? ‘ವ್ಯತಿರಿಕ್ತ ಪರಿಸ್ಥಿತಿಯಲ್ಲೂ ಮನೆ ಮನೆ ತಿರುಗುತ್ತಾ, ಏನೆಲ್ಲ ಸಮೀಕ್ಷೆ ನಡೆಸುತ್ತಾ ದಶಕದಿಂದ ಆರೋಗ್ಯ ವ್ಯವಸ್ಥೆಯ ಬುಡಮಟ್ಟದಲ್ಲಿ ಅಹರ್ನಿಶಿ ಕೆಲಸ ನಿರ್ವಹಿಸುತ್ತಾ ಬಂದಿದ್ದೇವೆ. ಇದೀಗ ಕೊರೊನಾ ಸೋಂಕಿನ ಸೂಕ್ಷ್ಮ ಸಂದರ್ಭದಲ್ಲಿ ಎಲ್ಲರ ಆರೋಗ್ಯ ರಕ್ಷಣೆಯ ಭಾರ ಹೊತ್ತಿದ್ದೇವೆ. ಆದರೆ ನಮ್ಮ ಸಂಸಾರದ ಭಾರ ತೂಗಿಸಲು ಅತ್ಯಗತ್ಯವಾಗಿರುವ ವೇತನ ಇನ್ನೂ ನಿಗದಿಯಾಗಿಲ್ಲ. ಗೌರವಧನವೂ ಸರಿಯಾಗಿ ಕೈಸೇರುತ್ತಿಲ್ಲ. ನಮ್ಮ ಆರೋಗ್ಯ ರಕ್ಷಣೆಗೆ ಬೇಕಾದ ಸಮರ್ಪಕ ವ್ಯವಸ್ಥೆಯನ್ನೂ ಸರ್ಕಾರ ಮಾಡುತ್ತಿಲ್ಲವೆಂದರೆ ನಾವು ಹೇಗೆ ಕೆಲಸ ಮಾಡುವುದು?’ ಇದು ನೊಂದ ಕಾರ್ಯಕರ್ತೆಯರ ಅಳಲು.

ಆಶಾ ಕಾರ್ಯಕರ್ತೆಯರಲ್ಲಿ ಹೆಚ್ಚಿನವರು ಬಡ ಕುಟುಂಬಗಳಿಗೆ ಸೇರಿದವರು. ಇವರ ಕುಟುಂಬಗಳಲ್ಲಿ ಹಲವರು ಲಾಕ್‍ಡೌನ್‍ನಿಂದಾಗಿ ಕೆಲಸ ಕಳೆದುಕೊಂಡಿದ್ದಾರೆ. ಮನೆಮಂದಿಗೆಲ್ಲಾ ಈಗ ಇವರ ಆದಾಯವೇ ಆಧಾರ. ಆದರೆ ದಿನನಿತ್ಯ ಕೋವಿಡ್ ಆತಂಕದ ನೆರಳಿನಲ್ಲೇ ಜೀವಭಯದೊಂದಿಗೆ ಕೆಲಸ ಮಾಡುತ್ತಿದ್ದರೂ ಇವರ ಸುರಕ್ಷತೆಗೆ ಅತ್ಯಂತ ಅವಶ್ಯಕವಾಗಿರುವ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್‌ನಂಥ ಸುರಕ್ಷಾ ಸಾಮಗ್ರಿಗಳನ್ನೂ ಸರ್ಕಾರ ಅಗತ್ಯಕ್ಕೆ ತಕ್ಕಷ್ಟು ಪೂರೈಸುತ್ತಿಲ್ಲ. ಆದರೆ ಕೊರೊನಾ ವಾರಿಯರ್ಸ್ ಎಂಬ ಕಿರೀಟ ತೊಡಿಸಿ, ಆಯಧಗಳಿಲ್ಲದೆ ಅವರನ್ನು ಯುದ್ಧಕ್ಕೆ ಕಳುಹಿಸುತ್ತಿರುವ ಕೀರ್ತಿ ಈಗ ರಾಜ್ಯ ಸರ್ಕಾರದ್ದಾಗಿದೆ! ಬಹಳಷ್ಟು ಕಾರ್ಯಕರ್ತೆಯರು ತಮ್ಮ ವೇತನದಲ್ಲಿಯೇ ರಕ್ಷಣಾ ಸಾಮಗ್ರಿಗಳನ್ನು ಖರೀದಿಸಿ ಕಾರ್ಯ
ನಿರ್ವಹಿಸುತ್ತಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ಇತ್ತೀಚೆಗೆ ‘ಕೊರೊನಾ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿರುವುದಕ್ಕೆ ಆಶಾ ಕಾರ್ಯಕರ್ತೆಯರು ಆಧಾರಸ್ತಂಭಗಳು. ಅವರ ಕೊಡುಗೆ ಅಪಾರ’ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಕಾಗದದ ಮೇಲಿನ ಇಂತಹ ಮೆಚ್ಚುಗೆ ಮಾತ್ರ ಸಾಕೇ? ಅವರ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರವೂ ಮುಂದಾಗಬೇಕಲ್ಲವೇ?

ಲಾಕ್‍ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ, ಆದಾಯವಿಲ್ಲದೆ ಒತ್ತಡ, ಹತಾಶೆ, ರೋಗದ ಕುರಿತ ಆತಂಕ ಹೊಂದಿರುವ ಜನಸಮುದಾಯ ವ್ಯಕ್ತಪಡಿಸುತ್ತಿರುವ ಅನುಮಾನ, ಕ್ರೌರ್ಯ ಮತ್ತು ಅಸಹಿಷ್ಣುತೆಗಳಿಗೆ ಹಲವೆಡೆ ಈ ಕಾರ್ಯಕರ್ತೆಯರು ಬಲಿಪಶುಗಳಾಗುತ್ತಿದ್ದಾರೆ. ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸುವಾಗ ಹಲ್ಲೆಗೆ ಒಳಗಾಗುತ್ತಿದ್ದಾರೆ. ಕುಡುಕರಿಂದ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಆದರೆ ತಮ್ಮ ಜೀವಭಯ, ಆತಂಕದಲ್ಲೂ ಕುಗ್ಗದೆ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಹಲವೆಡೆ ಕೆಲವು ಆಶಾ ಕಾರ್ಯಕರ್ತೆಯರು ಸೋಂಕಿಗೆ ಒಳಗಾಗಿದ್ದಾರೆ.

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಮತ್ತು ಗೌರವಧನ ಎಂಬ ಎರಡು ರೀತಿಯ ವೇತನ ಮಾದರಿಯನ್ನು ಅನುಸರಿಸಲಾಗುತ್ತಿದೆ. ನಿಗದಿತ ಮಾಸಿಕ ವೇತನ ₹ 4,000 ಹಾಗೂ ಎಂಟು ಕಾರ್ಯಕ್ರಮಗಳಿಗೆ ಬಿಡಿಬಿಡಿಯಾಗಿ ₹ 2,000, ವಿವಿಧ ಚಟುವಟಿಕೆಯಾಧಾರಿತ ಕೆಲಸಗಳಿಗೆ ₹ 2,000ದಿಂದ ₹ 3,000... ಹೀಗೆ ಪ್ರತ್ಯೇಕ ಪ್ರತ್ಯೇಕ ಲೆಕ್ಕಾಚಾರದಂತೆ ಮಾಸಿಕವಾಗಿ ಒಬ್ಬ ಕಾರ್ಯಕರ್ತೆಗೆ ಒಟ್ಟು ₹ 8,000ದಿಂದ ₹ 9,000 ಗೌರವಧನ ಹಾಗೂ ಪ್ರೋತ್ಸಾಹಧನವಾಗಿ ನೀಡಬೇಕೆಂದು ಆರೋಗ್ಯ ಇಲಾಖೆಯಲ್ಲಿ ಬಜೆಟ್ ಅನುದಾನ ನಿಗದಿ ಮಾಡಲಾಗಿದೆ. ಆದರೆ ಇವು ದಾಖಲೆಗಷ್ಟೇ! ಇವರಿಗೆ ಎಂದಿಗೂ ಆ ಪ್ರಮಾಣದಲ್ಲಿ ಹಣ ಕೈಸೇರಿಲ್ಲ!

ಗೌರವಧನ ಹಾಗೂ ಪ್ರೋತ್ಸಾಹಧನವನ್ನು ಬಿಡಿಬಿಡಿಯಾಗಿ ನೀಡಲಾಗುತ್ತಿದ್ದು, ಇದಕ್ಕಾಗಿ ಆಶಾಸಾಫ್ಟ್ ಎನ್ನುವ ಸಾಫ್ಟ್‌ವೇರನ್ನು ರಾಷ್ಟ್ರ ಮಟ್ಟದ ಆರ್‌ಸಿಎಚ್‌ ಪೋರ್ಟಲ್‍ಗೆ ಲಿಂಕ್ ಮಾಡಿದ್ದಾರೆ. ಈ ವೆಬ್ ಪೋರ್ಟಲ್‍ಗೆ ಆಶಾ ಕಾರ್ಯಕರ್ತೆಯರು ಎಲ್ಲಾ ಚಟುವಟಿಕೆಗಳನ್ನು ದಾಖಲಿಸಬೇಕಿದ್ದು, ಯಾವುದನ್ನು ದಾಖಲಿಸಲಾಗಿದೆ, ಯಾವುದು ಆಗಿಲ್ಲ ಎಂಬುದೇ ಇವರಿಗೆ ತಿಳಿಯುವುದಿಲ್ಲ! ಹೀಗಾಗಿ ಮಾಡಿದ ಕೆಲಸಕ್ಕೆ ಪ್ರತೀ ತಿಂಗಳು ತಕ್ಕ ವೇತನ ಸಿಕ್ಕುವುದಿಲ್ಲ. ಈ ಅವ್ಯವಸ್ಥೆ
ಯನ್ನು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ, ಸಭೆಗಳು ನಡೆದಿವೆ, ಪ್ರತಿಭಟನೆಗಳಾಗಿವೆ.
ಆದರೆ ಈ ಕಟ್‍ಪೀಸ್ ಗೌರವಧನದ ಸಮಸ್ಯೆ ಬಗೆಹರಿದೇ ಇಲ್ಲ!

ರಾಜ್ಯದ ಸಹಕಾರಿ ಇಲಾಖೆಯಿಂದ ವಿಶೇಷ ಪ್ಯಾಕೇಜ್ ಎಂದು ₹ 3,000 ಘೋಷಣೆಯಾಗಿ ಎರಡು ತಿಂಗಳೇ ಕಳೆದರೂ ಇಂದಿಗೂ ಅರ್ಧದಷ್ಟು ಕಾರ್ಯಕರ್ತೆಯರಿಗೆ ಹಣ ತಲುಪಿಲ್ಲ! ಈಗ ಅಂತಿಮವಾಗಿ, ರಾಜ್ಯದ ಕಾರ್ಯಕರ್ತೆಯರಿಗೆ ಕನಿಷ್ಠ ₹ 12,000 ವೇತನ, ಬಾಕಿ ವೇತನ ತೀರಿಕೆ, ಕೋವಿಡ್-19 ವಿರುದ್ಧದ ಹೋರಾಟಕ್ಕೆ ಅಗತ್ಯವಿರುವಷ್ಟು ಸುರಕ್ಷಾ ಸಾಮಗ್ರಿಗಳನ್ನು ಒದಗಿಸುವುದು, ಕೋವಿಡ್‌ಗೆ ತುತ್ತಾದ ಕಾರ್ಯಕರ್ತೆಯರಿಗೆ ಪರಿಹಾರ ಮತ್ತು ಸಂಪೂರ್ಣ ಚಿಕಿತ್ಸೆ ನೀಡಬೇಕೆಂಬ ಬೇಡಿಕೆಯನ್ನಿಟ್ಟು ಹೋರಾಟ ಪ್ರಾರಂಭಿಸಿದ್ದಾರೆ.

ರಾಜ್ಯದಾದ್ಯಂತ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿ ಜಿಲ್ಲಾಧಿಕಾರಿಗಳು, ತಹಶೀಲ್ದಾರರಿಗೆ, ಎಲ್ಲ ಹಂತದ ವೈದ್ಯಾಧಿಕಾರಿಗಳಿಗೆ, ಸಚಿವರಿಗೆ ಮತ್ತು ಶಾಸಕರಿಗೆ ಮನವಿ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸಲು ಬೇಡಿಕೊಂಡಿದ್ದಾರೆ. ಕೊನೆಗೀಗ ಅನಿವಾರ್ಯವಾಗಿ ರಾಜ್ಯದಾದ್ಯಂತ ಜುಲೈ 10ರಿಂದ ತಮ್ಮ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟ ಹೋರಾಟ ನಡೆಸುತ್ತಿದ್ದಾರೆ. ಇವರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಗಲಾದರೂ ಈಡೇರಿಸಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT