ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಒದಗಿಬರುವ ಭಾಗ್ಯವಲ್ಲ, ಮೂಲಭೂತ ಹಕ್ಕು

Published 7 ಮೇ 2023, 19:31 IST
Last Updated 7 ಮೇ 2023, 19:31 IST
ಅಕ್ಷರ ಗಾತ್ರ

ಡಾ. ಶಿವಲಿಂಗಸ್ವಾಮಿ ಎಚ್.ಕೆ.

ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಕೆಲವು ಸೌಲಭ್ಯಗಳನ್ನು ಉಚಿತವಾಗಿ ಒದಗಿಸುವ ಅಮಿಷಗಳನ್ನು ರಾಜಕೀಯ ಪಕ್ಷಗಳು ಪೈಪೋಟಿಯಲ್ಲಿ ನೀಡಿವೆ. ಈ ಆಮಿಷಗಳತ್ತ ಬಹಳಷ್ಟು ಜನ ಆಸೆಗಣ್ಣುಗಳಿಂದ ನೋಡುತ್ತಿದ್ದರೆ, ಒಂದುವೇಳೆ ಇವರು ಅಧಿಕಾರಕ್ಕೆ ಬಂದರೆ ಈ ಯೋಜನೆಗಳನ್ನು ಹೇಗೆ ಜಾರಿಗೆ ತರಬಹುದು ಎಂಬ ಜಿಜ್ಞಾಸೆಯಲ್ಲಿ ಕೆಲವರು ತೊಡಗುವುದು ಸಹಜ. ಹಾಗೆಯೇ ಈ ಹಂತದಲ್ಲಿ, ಒಂದು ರಾಜಕೀಯ ಪಕ್ಷ ತನ್ನ ಆಡಳಿತಾವಧಿಯನ್ನು ಪೂರ್ಣಗೊಳಿಸುವ ಸಮಯ ಬಂದಾಗ, ಅದರ ಸಾಧನೆಗಳ ಕುರಿತು ಚರ್ಚೆಯಾಗುವುದು ಸಹ ಅಷ್ಟೇ ಸಹಜ. ಇದರ ಜೊತೆಯಲ್ಲಿಯೇ ಅದೇ ಪಕ್ಷ ಪುನಃ ಅಧಿಕಾರಕ್ಕೆ ಏರುವ ದಿಸೆಯಲ್ಲಿ ತಂತ್ರ ಹೆಣೆಯುವುದು ಕೂಡ ಶುರುವಾಗುತ್ತದೆ.

ಬಡವರಾಗಲಿ, ಬಲ್ಲಿದರಾಗಲಿ ಒಟ್ಟಿನಲ್ಲಿ ಚುನಾವಣೆಯ ಸಮಯ ಸಮೀಪಿಸಿದಂತೆ ಎಲ್ಲ ಜನರಲ್ಲಿ ವಿವಿಧ ರೀತಿಯ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ. ಪ್ರತಿಯೊಬ್ಬರ ನಿರೀಕ್ಷೆ ಅವರವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಅವಲಂಬಿಸಿರುತ್ತದೆ. ಒಬ್ಬ ವ್ಯಕ್ತಿಗೆ ಮೀನು ಹಿಡಿಯುವ ಕಲೆ ಮುಖ್ಯ ಎಂದು ಅನ್ನಿಸಿದರೆ, ಮತ್ತೊಬ್ಬನಿಗೆ, ಹಸಿದಾಗ ಮೀನು ಸಿಕ್ಕರೆ ಸಾಕು ಅನ್ನಿಸಬಹುದು. ಇವರಿಬ್ಬರಲ್ಲಿ ಯಾರು ವೋಟು ಹಾಕಲು ಖಂಡಿತ ಮುಂದೆ ಬರುವರೋ ಅವರ ನಿರೀಕ್ಷೆಗೆ ತಕ್ಕಂತೆ ರಾಜಕೀಯ ನಾಯಕರು ಸ್ಪಂದಿಸುತ್ತಾರೆ.

ಪ್ರಜಾಪ್ರಭುತ್ವದ ಆಶಯದ ಪ್ರಕಾರ, ಬಹುಮತ ಪಡೆದು ಆಯ್ಕೆಯಾದ ಪಕ್ಷವು ಇಡೀ ದೇಶದ ಅಥವಾ ನಾಡಿನ ಹಿತ ಕಾಪಾಡಬೇಕು. ಅಂದರೆ, ಯಾವುದೇ ನಾಯಕ ತನ್ನ ಜಾತಿಯ ಕಾರಣದಿಂದಲೋ ಅಥವಾ ತನ್ನ ಪಕ್ಷ ಒಡ್ಡಿದ ಆಮಿಷಗಳ ಕಾರಣದಿಂದಲೋ ಅಧಿಕಾರಕ್ಕೆ ಬಂದರೆ, ತನಗೆ ವೋಟು ಹಾಕಿದವರಷ್ಟೇ ಮುಖ್ಯ ಎನ್ನಲು ಸಾಧ್ಯವಿಲ್ಲ. ಆಡಳಿತಾರೂಢ ಪಕ್ಷಕ್ಕೆ ಸರ್ವ ಜನರ ಅಭ್ಯುದಯ ಗುರಿಯಾಗಿರಬೇಕೆ ವಿನಾ ಬಹುಮತದಲ್ಲಿ ಭಾಗವಹಿಸಿದ ಮತದಾರರು ಯಾರು ಮತ್ತು ಅವರ ಮುಂದಿನ ನಿರೀಕ್ಷೆಗಳು ಏನು ಎಂಬುದಷ್ಟೇ ಅಲ್ಲ. ತಮ್ಮ ಅಮೂಲ್ಯವಾದ ಮತ ಚಲಾಯಿಸಿ ತಮ್ಮನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿದವರ ಹಿತ ಕಾಯುವುದು ಮುಖ್ಯ ಎಂದು ಆಯ್ಕೆಯಾದ ಪಕ್ಷಕ್ಕೆ ತೋರಬಹುದು. ಇದು ಅದರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ನ್ಯಾಯಸಮ್ಮತ. ಆದರೆ ಪ್ರಜಾಪ್ರಭುತ್ವದ ದೃಷ್ಟಿಯಿಂದ ಅಲ್ಲ.

ಜಸ್ವಂತ್ ಸಿಂಗ್ ತಮ್ಮ ‘ವಾಟ್ ಏಯ್ಲ್ಸ್ ಇಂಡಿಯಾ’ ಎಂಬ ಲೇಖನದಲ್ಲಿ, ನಮ್ಮ ದೇಶದ ಜನಸಂಖ್ಯೆಯ ಅರ್ಧದಷ್ಟು ಜನ ಮತ ಹಾಕಲು ಅರ್ಹರಿದ್ದಾರೆ. ಅಂತಹ ಅರ್ಹರಲ್ಲಿ ಅರ್ಧದಷ್ಟು ಜನ ಮತ ಚಲಾಯಿಸಲು ಮುಂದೆ ಬರುತ್ತಾರೆ. ಮತ ಚಲಾಯಿಸಲು ಮುಂದೆ ಬರುವ ಈ ಅಲ್ಪಸಂಖ್ಯೆಯ ಜನರು ಮತ ಚಲಾಯಿಸದ ಉಳಿದ ಬಹುಸಂಖ್ಯೆಯ ಜನರನ್ನು ಆಳುವ ಸರ್ಕಾರವನ್ನು ಆಯ್ಕೆ ಮಾಡುತ್ತಾರೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ಸಿಂಗ್ ಅವರ ಲೇಖನದ ಜಾಡಿನಲ್ಲಿಯೇ ಹೇಳುವುದಾದರೆ, ಯಾವುದೇ ರಾಜಕೀಯ ಪಕ್ಷವು ಮತ ಚಲಾಯಿಸಲು ಮುಂದೆ ಬರುವವರ ನಿರೀಕ್ಷೆಗಳಿಗೆ ಅನುಸಾರವಾಗಿಯೇ ಸಹಜವಾಗಿ ತನ್ನ ಯೋಜನೆಗಳನ್ನು ರೂಪಿಸುತ್ತದೆ. ಇವರನ್ನು ವೋಟ್ ಬ್ಯಾಂಕ್ ಎಂದು ಕರೆಯುತ್ತಾರೆ. ಹಾಗಾಗಿ ಮತ ಚಲಾಯಿಸದ ಬಹುಮಂದಿಗೆ ಯಾವುದೇ ಪಕ್ಷದ ಚುನಾವಣಾ ಪ್ರಣಾಳಿಕೆ ಮುಖ್ಯ ಎನ್ನಿಸುವುದಿಲ್ಲ. ಇದನ್ನು ದೃಷ್ಟಿಯಲ್ಲಿಟ್ಟು ನೋಡಿದರೆ, ಚುನಾವಣೆ ಎಂಬ ಮಹತ್ತರ ಪ್ರಕ್ರಿಯೆಯು ಮತ ಚಲಾಯಿಸುವ ದೇಶದ ಅಥವಾ ನಾಡಿನ ಕಾಲುಭಾಗದಷ್ಟು ಜನ ಮತ್ತು ಅವರನ್ನಷ್ಟೇ ಆಧರಿಸುವ ಜನನಾಯಕರ ನಡುವೆ ನಡೆಯುತ್ತದೆ. ಈ ಪ್ರಕ್ರಿಯೆಯ ನಡುವೆ ಉಚಿತ ಕೊಡುಗೆಯ ಯೋಜನೆಗಳು ರೂಪುಗೊಳ್ಳುತ್ತವೆ. ಆ ಯೋಜನೆಗಳನ್ನು ಬಡವರ ಅಭ್ಯುದಯಕ್ಕಾಗಿ ರೂಪಿಸುವುದರಿಂದ, ಅವು ಬಡವರ ಪಾಲಿನ ಭಾಗ್ಯಗಳು ಎನಿಸಿಕೊಳ್ಳುತ್ತವೆ.

ನಾಗರಿಕರ ತೆರಿಗೆ ಹಣವನ್ನು ಬಳಸಿ ರೂಪಿಸುವ ಈ ನೀತಿಗಳು ‘ಭಾಗ್ಯ’ಗಳು ಹೇಗೆ ಆಗುತ್ತವೆ ಎಂಬುದು ಇಲ್ಲಿ ಪ್ರತಿಯೊಬ್ಬ ನಾಗರಿಕನೂ ಕೇಳಬೇಕಿರುವ ಪ್ರಶ್ನೆ. ಹಾಗೆಯೆ, ಬಡತನದಲ್ಲಿ ಇರುವವರಿಗೆ ಪ್ರಜಾಪ್ರಭುತ್ವದಲ್ಲಿ ಈ ಉಚಿತ ಸೌಲಭ್ಯಗಳು ರಾಜಕೀಯ ಪಕ್ಷಗಳು ಸೃಷ್ಟಿಸುವ ಭಾಗ್ಯಗಳಲ್ಲ, ಅವರ ಹಕ್ಕುಗಳು ಅಲ್ಲವೇ ಎಂಬ ಪ್ರಶ್ನೆಯನ್ನೂ ಕೇಳಬೇಕಾಗುತ್ತದೆ. ಈ ಸೌಲಭ್ಯಗಳ ಫಲಾನುಭವಿಗಳಿಗೆ ಅವಮಾನವಾಗುವ ಹಾಗೆ ಬಳಕೆಯಲ್ಲಿರುವ ಮತ್ತೊಂದು ಪದವೆಂದರೆ ‘ಪುಕ್ಕಟೆ ಭಾಗ್ಯ’. ಅಧಿಕಾರದಲ್ಲಿರುವ ಪ್ರತಿ ರಾಜಕೀಯ ಪಕ್ಷವೂ ಈ ಸೌಲಭ್ಯಗಳನ್ನು ಒದಗಿಸುವುದು ತನ್ನ ಜವಾಬ್ದಾರಿ ಎಂಬುದನ್ನು ಅರಿತು ನೆರವೇರಿಸಬೇಕಿರುವ ಸಂದರ್ಭದಲ್ಲಿ, ಇವನ್ನು ಪುಕ್ಕಟೆ ಭಾಗ್ಯ ಎಂದು ಕರೆಯುವುದು ತಪ್ಪಾಗುತ್ತದೆ.

ಯುರೋಪಿನ ಫಿನ್‌ಲ್ಯಾಂಡ್‌, ಡೆನ್ಮಾರ್ಕ್, ಬೆಲ್ಜಿಯಂನಂತಹ ದೇಶಗಳಲ್ಲಿ ಶಿಕ್ಷಣ ಹಾಗೂ ಆರೋಗ್ಯ ಸೇವೆ ದೇಶದ ಎಲ್ಲ ನಾಗರಿಕರಿಗೂ ಉಚಿತವಾಗಿ ಸಿಗುವ ವ್ಯವಸ್ಥೆ ಇದೆ. ಉದ್ಯೋಗಸ್ಥ ನಾಗರಿಕರು ತಮ್ಮ ಆದಾಯದಲ್ಲಿ ಸ್ವಲ್ಪ ಪ್ರಮಾಣವನ್ನು ದೇಶದ ರಾಷ್ಟ್ರೀಯ ಯೋಜನೆಗಳಿಗೆ ಮೀಸಲಿಡುತ್ತಾರೆ. ತೆರಿಗೆದಾರರ ಹಣದ ಸದ್ಬಳಕೆ ಇದಾಗಿರುತ್ತದೆ. ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ದೇಶದ ಎಲ್ಲ ನಾಗರಿಕರಿಗೆ ಉಚಿತವಾಗಿ ಒದಗಿಸಿ ನಂತರ ಅವುಗಳನ್ನು ತಮ್ಮ ಅಪ್ರತಿಮ ಸಾಧನೆ ಎಂಬಂತೆ ಅಲ್ಲಿನ ಸರ್ಕಾರಗಳು ಬೀಗುವುದಿಲ್ಲ. ಏಕೆಂದರೆ, ಮೂಲ ಜವಾಬ್ದಾರಿಗಳು ಸಾಧನೆಗಳಾಗುವುದಿಲ್ಲ. ಹಾಗೆಯೆ, ಈ ಯೋಜನೆಗಳನ್ನು ಪುಕ್ಕಟೆ ಭಾಗ್ಯಗಳು ಎಂದು ಆ ರಾಷ್ಟ್ರಗಳು ಕರೆಯುವುದಿಲ್ಲ ಎಂಬುದನ್ನೂ ಗಮನಿಸಬೇಕಾಗುತ್ತದೆ.

ಈ ರೀತಿ ಉಚಿತ ಸೌಲಭ್ಯ ಪಡೆದ ಜನ ಸೋಮಾರಿಗಳಾಗುತ್ತಾರೆ ಎಂಬ ಭಾವನೆಯೂ ಕೆಲವರಲ್ಲಿದೆ. ಅನ್ನಕ್ಕೆ ಸುಗಮ ದಾರಿಯಾದರೆ ತಾನು ಗೌರವಯುತವಾದ ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು ಎಂದು ಸಹ ಫಲಾನುಭವಿ ಚಿಂತಿಸಬಹುದು ಎಂದು ಇದನ್ನು ಅರ್ಥೈಸುವುದು ಪ್ರಜಾಪ್ರಭುತ್ವದ ಆಶಯ.

ಈ ಹಂತದಲ್ಲಿ ನಮ್ಮಲ್ಲಿ ಆಗಬೇಕಿರುವ ಪ್ರಮುಖ ಬದಲಾವಣೆ ಎಂದರೆ, ಪದ ಬಳಕೆಯ ಬಗ್ಗೆ ಎಚ್ಚರ. ಮೂಲಭೂತ ಹಕ್ಕುಗಳನ್ನು ಪುಕ್ಕಟೆ ಭಾಗ್ಯ ಎಂದು ಕರೆಯುವುದು ಮೊದಲು ನಿಲ್ಲಬೇಕು. ಹಾಗೆಯೆ ಇಂತಹ ಯೋಜನೆಗಳನ್ನು ತಮ್ಮ ಅಭೂತಪೂರ್ವ ಯೋಜನೆಗಳು ಎಂದು ಪ್ರಣಾಳಿಕೆಗಳಲ್ಲಿ ಸೇರಿಸಿಕೊಳ್ಳುವ ರಾಜಕೀಯ ಪಕ್ಷಗಳು ಸಹ ಫಲಾನುಭವಿಗಳಿಗೆ ಅವಮಾನವಾಗುವ ರೀತಿ ಬೀಗಬಾರದು.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT