ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕಷ್ಟಕ್ಕೊದಗುವ ಕಟಿಕಿ ಜಲಪಾತ!

ವಿಶಾಖಪಟ್ಟಣ ಜಿಲ್ಲೆಯಲ್ಲಿರುವ ಈ ಜಲಪಾತಕ್ಕೆ ಬರುವ ಪ್ರವಾಸಿಗರಿಂದ ಸಂಗ್ರಹವಾದ ಹಣವನ್ನು ಗ್ರಾಮಸ್ಥರ ಅಭ್ಯುದಯಕ್ಕೆ ಬಳಸಲಾಗುತ್ತಿದೆ
Last Updated 14 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ವಿಶಾಖಪಟ್ಟಣ ಜಿಲ್ಲೆಯಲ್ಲಿರುವ ಈ ಜಲಪಾತಕ್ಕೆ ಬರುವ ಪ್ರವಾಸಿಗರಿಂದ ಸಂಗ್ರಹವಾದ ಹಣವನ್ನು ಗ್ರಾಮಸ್ಥರ ಅಭ್ಯುದಯಕ್ಕೆ ಬಳಸಲಾಗುತ್ತಿದೆ.

ಅಬ್ಬಿ, ಜೋಗ, ಮಾಗೋಡು, ಶಿವಗಂಗೆ, ಉಂಚಳ್ಳಿ ಜಲಪಾತಗಳನ್ನು ನೋಡಿರುತ್ತೀರಿ ಇಲ್ಲವೆ ಅವುಗಳ ಬಗ್ಗೆ ಕೇಳಿರುತ್ತೀರಿ. ನಯಾಗರ, ಏಂಜಲ್ ಜಲಪಾತಗಳೂ ಗೊತ್ತಿವೆ. ಆದರೆ ಇದೇನಿದು? ‘ಎಟಿಎಂ ಜಲಪಾತ’? ನೋಡಿಲ್ಲ, ಕೇಳಿಲ್ಲ, ಇದೆಲ್ಲಿದೆಯಪ್ಪಾ ಎಂಬ ಪ್ರಶ್ನೆ ಮೂಡದೇ ಇರದು.

ಇದು ಅಂತಿಂಥ ಜಲಪಾತವಲ್ಲ! ಇಲ್ಲಿ ಮೇಲಿನಿಂದ ನೀರೂ ಧುಮುಕುತ್ತದೆ ಮತ್ತು ವರ್ಷಪೂರ್ತಿ ಹಣವೂ ಸುರಿಯುತ್ತದೆ! ಹಳ್ಳಿ ಮನೆಗಳ ಸದಸ್ಯರ ಹುಟ್ಟು, ಸಾವು, ಹೆರಿಗೆ, ಅಪಘಾತ, ಆಂಬುಲೆನ್ಸ್ ಸೌಲಭ್ಯ, ಚಿಕಿತ್ಸೆಗೆ ತಗಲುವ ತುರ್ತು ಖರ್ಚನ್ನು ಈ ಜಲಪಾತವೇ ಭರಿಸುತ್ತದೆ. ಇದೇನೂ ಪವಾಡ ಭೂಮಿಯಲ್ಲ. ಹಾಗಂತ ನಮಗೂ ಹಣಕಾಸಿನ ಮುಗ್ಗಟ್ಟಿದೆ ಎಂದು ರಾತ್ರಿ ಬಸ್ ಹತ್ತಿ ಬೆಳಿಗ್ಗೆ ಜಲಪಾತದೆದುರು ನಿಂತುಬಿಟ್ಟೀರಿ! ಈ ಸೌಲಭ್ಯ ನಿಮಗಲ್ಲ. ಕಟಿಕಿ ಗ್ರಾಮದವರಿಗೆ ಮಾತ್ರ. ವಿಶಾಖಪಟ್ಟಣ ಜಿಲ್ಲೆಯ ನಯನ ಮನೋಹರ ಅರಕು ಕಣಿವೆಯಲ್ಲಿ ಗೋಸ್ಥಾನಿ ನದಿಯಿಂದಾದ ಕಟಿಕಿ ಜಲಪಾತ ಮಳೆಗಾಲವಿರುವಷ್ಟೂ ದಿನ ಮೈದುಂಬಿಕೊಂಡು ಸುಮಾರು 52 ಅಡಿಗಳಿಂದ ಕೆಳಗೆ ಧುಮುಕಿ ನೋಡುಗರ ಹೃನ್ಮನ ತಣಿಸುತ್ತದೆ.

ಪೂರ್ವ ಘಟ್ಟಗಳ ದಟ್ಟಾರಣ್ಯದ ಅರಕು ಕಣಿವೆಯಲ್ಲಿ 19 ಬುಡಕಟ್ಟು ಜನಾಂಗಗಳಿವೆ. ಅವರ ಸಂಸ್ಕೃತಿ– ಆಚರಣೆ, ಚಿಕಿತ್ಸಾ ಪದ್ಧತಿ, ಮರದ ಮೇಲಿನ ಗುಡಿಸಲು, ಬೊರ‍್ರಾ ಗುಹೆ, ಸಾಂಪ್ರದಾಯಿಕ ಡಿಂಶಾ ನೃತ್ಯ, ಬುಡಕಟ್ಟು ಮ್ಯೂಸಿಯಂ, ಕರಕುಶಲ ಕಲೆ ಮತ್ತು ಜಲಪಾತಗಳು ಸಾವಿರಾರು ಪ್ರವಾಸಿಗರನ್ನು ವರ್ಷವಿಡೀ ಕೈಬೀಸಿ ಕರೆಯುತ್ತವೆ.

ಬುಡಕಟ್ಟು ಜನರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕಟಿಕಿ, ಡೇಕಾಪುರಂ, ಕುಂತಿಯಸಿಮಿಡಿ ಹಳ್ಳಿಗಳಲ್ಲಿ ಶಾಲೆಗೆ ಹೋಗಿ ಓದು ಕಲಿತವರು ಕಡಿಮೆ. ಜೀವನದ ಪಾಠ ಕಲಿತ ಬುದ್ಧಿವಂತರ ಸಂಖ್ಯೆಯೇ ಹಿರಿದು. ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ವಿಧಿಸಿ, ಅದರಿಂದ ಬರುವ ಆದಾಯವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ತೀರ್ಮಾನಿಸಿದ ಯುವಕರು, 2009ರಲ್ಲಿ ‘ಕಟಿಕಿ ಜಲಪಾತ ಅಭಿವೃದ್ಧಿ ಸಮಿತಿ’ಯನ್ನು ರಚಿಸಿ ಗ್ರಾಮಸಭೆಯ ಸಹಕಾರ ಕೋರಿದರು. ಮೂರೂ ಹಳ್ಳಿಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಿ, ಸ್ಥಳಕ್ಕೆ ಬರುವ ಕಾರಿಗೆ ನಲವತ್ತು ಮತ್ತು ಬೈಕಿಗೆ ಹತ್ತು ರೂಪಾಯಿ ಶುಲ್ಕ ವಸೂಲು ಮಾಡಲು ಜಲಪಾತದ ದಾರಿಯ ಆರಂಭದಲ್ಲಿ ಶುಲ್ಕ ಸಂಗ್ರಹ ಕಟ್ಟೆ ಸ್ಥಾಪಿಸಲಾಯಿತು. ಸುದ್ದಿ ತಿಳಿದ ಮರುದಿನವೇ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಟೋಲ್ ಕಟ್ಟೆಯನ್ನು ಕಿತ್ತು ಹಾಕಿ ‘ನೀವು ಮಾಡುತ್ತಿರುವುದು ಕಾನೂನಿನ ಉಲ್ಲಂಘನೆಯಾಗುತ್ತದೆ, ಪ್ರವಾಸಿ ತಾಣವನ್ನು ನೋಡಿಕೊಳ್ಳಲು, ನಿರ್ವಹಿಸಲು ಸಂಯೋಜಿತ ಬುಡಕಟ್ಟು ಅಭಿವೃದ್ಧಿ ನಿಗಮಗಳಿವೆ (ಇಂಟಿಗ್ರೇಟೆಡ್ ಟ್ರೈಬಲ್ ಡೆವಲಪ್‍ಮೆಂಟ್ ಏಜೆನ್ಸಿ), ಹಳ್ಳಿಗಳಿಗೆ ನೈಸರ್ಗಿಕ ಸಂಪತ್ತಿನ ವ್ಯಾಪಾರೀಕರಣದ ಹಕ್ಕಿಲ್ಲ’ ಎಂದು ಧಮಕಿ ಹಾಕಿಹೋದರು.

ಹೆದರದ ಊರಿನ ಯುವಕ ಗೆಮ್ಮೇಲ ಚಿಮ್ಮಯ್ಯ ತಮ್ಮ ಯೋಜನೆ ಕಾರ್ಯಗತಗೊಳಿಸಲು ಜಿಲ್ಲಾಧಿಕಾರಿ ಕಚೇರಿಗೆ ಊರಿನ ಹತ್ತಾರು ಯುವಕರೊಂದಿಗೆ ನಿಯೋಗ ಹೊರಟೇಬಿಟ್ಟರು. ಆಗ ನೆರವಿಗೆ ಬಂದ ವಿಶಾಖಪಟ್ಟಣದ ಎನ್‍ಜಿಒ ‘ಸಮತಾ’ದ ನಿರ್ದೇಶಕ ರವಿ ರೆಬ್ಬಪ್ರಗಾದ, ಜಿಲ್ಲಾಧಿಕಾರಿಯನ್ನು ಒಪ್ಪಿಸುವಲ್ಲಿ ಸಹಾಯವಾಗುವ ಕಾನೂನಿನ ಬಗ್ಗೆ ಯುವಕರ ತಂಡಕ್ಕೆ ಮಾಹಿತಿ ನೀಡಿದರು.

ಬುಡಕಟ್ಟು ಜನರ ಸಾಂಸ್ಕೃತಿಕ ಮತ್ತು ಆರ್ಥಿಕ ಮೂಲಗಳನ್ನು ಕಾಪಾಡಲೆಂದೇ ಇರುವ ಸಂವಿಧಾನದ 5ನೇ ಶೆಡ್ಯೂಲ್, ಬುಡಕಟ್ಟು ಜನರಿರುವ ಪ್ರದೇಶದ ಜಲಪಾತ, ಗಿರಿಧಾಮ, ಸರೋವರ, ಬೃಹತ್ ಮರ ಅಥವಾ ಇನ್ನಾವುದೇ ನೈಸರ್ಗಿಕ ತಾಣದ ಮೇಲೆ ಬುಡಕಟ್ಟು ಜನರ ಸಂಪೂರ್ಣ ಹಕ್ಕು ಇರುತ್ತದೆ ಎಂದು ಹೇಳಿದೆ. ಇದನ್ನೇ ಜಿಲ್ಲಾಧಿಕಾರಿಗೆ ಮನದಟ್ಟು ಮಾಡಿಕೊಟ್ಟ ಗ್ರಾಮಸಭಾದ ಸದಸ್ಯರು 7 ವರ್ಷಗಳ ನಿರಂತರ ಹೋರಾಟದ ನಂತರ ಜಲಪಾತ ವೀಕ್ಷಣೆಯ ಪ್ರವೇಶ ಶುಲ್ಕ ಸಂಗ್ರಹಿಸಲು ಅನುಮತಿ ಪಡೆದುಕೊಂಡರು. ಕೂಡಲೇ ಮೂರೂ ಹಳ್ಳಿಗಳ 10 ಜನ ಪ್ರಜ್ಞಾವಂತ ಪ್ರತಿನಿಧಿಗಳ ತಂಡ ರಚಿಸಿದ ಗ್ರಾಮಸಭಾ, ವ್ಯವಸ್ಥಿತವಾಗಿ ಶುಲ್ಕ ಸಂಗ್ರಹಿಸಿ ಬ್ಯಾಂಕ್‍ನಲ್ಲಿ ಖಾತೆ ತೆರೆದು ಜಮಾ ಮಾಡುವಂತೆ ಸದಸ್ಯರಿಗೆ ಸೂಚಿಸಿತು.

ಕಳೆದ ಮಳೆಗಾಲದ ದಿನಗಳಲ್ಲಿ ₹ 2.30 ಲಕ್ಷ ಶುಲ್ಕ ಸಂಗ್ರಹವಾಯಿತು. ಅದರಲ್ಲಿ ₹ 38,000 ಖರ್ಚು ಮಾಡಿ, ಜಲಪಾತದ ಹಾದಿಯ ಜಾರು ಮೆಟ್ಟಿಲುಗಳನ್ನು ಸುಲಭವಾಗಿ ಕ್ರಮಿಸಲು ರೈಲುಹಳಿಗಳ ಹಿಡಿಕೆಯನ್ನು ಅಳವಡಿಸಿ, ಪ್ರವಾಸಿಗರಿಗಾಗಿ ಶೌಚಾಲಯವನ್ನೂ ನಿರ್ಮಿಸಿದ ಸಮಿತಿ, ಹಳ್ಳಿಯ ಜನರಿಗೆ ಬೇಕಾದ ಔಷಧಿ, ಮಕ್ಕಳ ಶಾಲಾ ಶುಲ್ಕ, ರಸ್ತೆ ನಿರ್ಮಾಣ, ಜಲಪಾತದ ದಾರಿಯ ನಿರ್ವಹಣೆ ವೆಚ್ಚಗಳನ್ನು ಭರಿಸುತ್ತ, ದೇಶದ ಇತರ ಗ್ರಾಮಸಭೆಗಳಿಗೆ ಮಾದರಿ ಎನಿಸಿದೆ.

ಕೋವಿಡ್– 19 ಸ್ಫೋಟವಾದಾಗ ಸರ್ಕಾರದ ನೆರವಿಗಾಗಿ ಕಾಯದೆ, ₹ 50 ಸಾವಿರ ಖರ್ಚು ಮಾಡಿ ಮೂರೂ ಹಳ್ಳಿಗಳ ಜನರಿಗೆ ಎರಡು ತಿಂಗಳು ತರಕಾರಿ ಮತ್ತು ಅಡುಗೆ ಎಣ್ಣೆಯನ್ನು ವಿತರಿಸಿದ ಸಮಿತಿ, ಸ್ವಾವಲಂಬನೆಯ ತಾಜಾ ಉದಾಹರಣೆಯನ್ನು ದೇಶದ ಮುಂದಿರಿಸಿದೆ. ಅನುಕರಿಸುವವರು ಬೇಕಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT