ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಎಂ.ಟೆಕ್: ಓದಲು ನಿರಾಸಕ್ತಿಯೇಕೆ?

ಬೇಡಿಕೆಯೇ ಇರದ ಕೋರ್ಸುಗಳ ಸೀಟು ಭರ್ತಿಗಾಗಿ ಕೆಇಎ ಮೂಲಕ ಪ್ರವೇಶ ಪರೀಕ್ಷೆ ನಡೆಸಿ, ಸೀಟು ಹಂಚಿಕೆ ಮಾಡುವ ಅಗತ್ಯ ಇದೆಯೇ ಎನ್ನುವ ಪ್ರಶ್ನೆ ಎದ್ದಿದೆ
Published : 15 ಆಗಸ್ಟ್ 2024, 23:30 IST
Last Updated : 15 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಎಂ.ಟೆಕ್ ಕೋರ್ಸ್‌ಗೆ ಪ್ರವೇಶ ನೀಡಲು ನಡೆಸುವ ಪಿಜಿ–ಸಿಇಟಿ (ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ) ರದ್ದುಗೊಳಿಸಿ, ಎಂಜಿನಿಯರಿಂಗ್ ಪದವಿಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಪ್ರವೇಶ ನೀಡುವುದನ್ನು ಪರಿಗಣಿಸುವಂತೆ ಕೋರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ), ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದ ಪ್ರಸ್ತಾವ ತಿರಸ್ಕೃತಗೊಂಡಿರುವುದಾಗಿ ವರದಿಯಾಗಿದೆ. ಹೀಗಾಗಿ, ಯಥಾರೀತಿಯಲ್ಲೇ ಪ್ರವೇಶಾತಿ ಪ್ರಕ್ರಿಯೆ ಮುಂದುವರಿಯಲಿದೆ.

ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸಲು ಕೆಇಎ ನೀಡಿರುವ ಕಾರಣಗಳು ಗಮನಾರ್ಹ. ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲು ವಿದ್ಯಾರ್ಥಿಗಳ ನಿರಾಸಕ್ತಿ, ಪರೀಕ್ಷೆ ತೆಗೆದುಕೊಂಡವರು ಕೂಡ ಒಂದೋ ಪರೀಕ್ಷೆಗೆ ಗೈರಾಗುವುದು ಅಥವಾ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯದಿರುವುದನ್ನು ಕೆಇಎ ಉಲ್ಲೇಖಿಸಿದೆ. ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳ ಸಲುವಾಗಿ ಪ್ರಾಧಿಕಾರದ ಸಂಪನ್ಮೂಲಗಳನ್ನು ವಿನಿಯೋಗಿಸುವುದು ಸೂಕ್ತವಲ್ಲ ಎನ್ನುವುದು ಅದರ ಅಭಿಮತ. ಈ ಬೆಳವಣಿಗೆಯನ್ನು ಕೆಲವರು ಖಾಸಗಿ ಕಾಲೇಜುಗಳ ಕ್ಯಾಪಿಟೇಷನ್ ಲಾಬಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಮಾಡಿರುವ ಶಿಫಾರಸು ಎಂದೇ ವಿಶ್ಲೇಷಿಸಿದರು.

ಎಂ.ಟೆಕ್‌ ಕೋರ್ಸ್‌ಗೆ ಪಿಜಿ–ಸಿಇಟಿ ರದ್ದುಗೊಳಿಸಲು ಕೆಇಎ ನೀಡಿರುವ ಕಾರಣಗಳು ವಾಸ್ತವಿಕ ನೆಲೆಗಟ್ಟಿ
ನಲ್ಲಿಯೇ ಇವೆ. ಆದರೆ, ಸಾಮಾನ್ಯ ಪ್ರವೇಶ ಪರೀಕ್ಷೆ ರದ್ದುಗೊಳಿಸಿ ಪದವಿ ಅಂಕಗಳ ಆಧಾರದಲ್ಲಿ ಸೀಟು ಹಂಚಬಹುದು ಎನ್ನುವ ಸಲಹೆ ಸಮಸ್ಯಾತ್ಮಕ. ಎಲ್ಲ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಎಂಜಿನಿಯ ರಿಂಗ್ ಪದವಿ ಅಂಕಗಳನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಪಾರದರ್ಶಕ ನಡೆಯಲ್ಲ. ಸ್ವಾಯತ್ತ ಕಾಲೇಜುಗಳಲ್ಲಿ ಪರೀಕ್ಷೆಯ ಎಲ್ಲ ಪ್ರಕ್ರಿಯೆಗಳೂ ಆಯಾ ಕಾಲೇಜುಗಳ ಹಂತದಲ್ಲೇ ನಡೆಯುವುದರಿಂದ ಅಲ್ಲಿನ ವಿದ್ಯಾರ್ಥಿಗಳು ಪಡೆಯುವ ಅಂಕಗಳನ್ನು, ವಿಶ್ವವಿದ್ಯಾಲಯ ಹಂತದ ಪರೀಕ್ಷೆಗಳನ್ನು ಎದುರಿಸು ವವರ ಅಂಕಗಳಿಗೆ ಸರಿಸಮನಾಗಿ ಪರಿಗಣಿಸಲಾಗದು. ಇನ್ನು ಖಾಸಗಿ ವಿಶ್ವವಿದ್ಯಾಲಯಗಳು ನೀಡುವ ಪದವಿ ಅಂಕಗಳನ್ನು ಯಥಾವತ್ತಾಗಿ ಪರಿಗಣಿಸಿ, ಅದರ ಆಧಾರದಲ್ಲಿ ಪ್ರವೇಶ ನೀಡುವುದು ಸೂಕ್ತವಲ್ಲ.

ಇದೇ ವೇಳೆ, ಎಂ.ಟೆಕ್ ಓದಲು ವಿದ್ಯಾರ್ಥಿಗಳು ಏಕೆ ಆಸಕ್ತಿ ತೋರುತ್ತಿಲ್ಲ ಎಂಬ ಕುರಿತು ಕೂಡ ಪರಾಮರ್ಶಿಸುವ ಅಗತ್ಯ ಇದೆ. ಎಂಜಿನಿಯರಿಂಗ್ ಪದವಿ ನಂತರವೂ ಓದು ಮುಂದುವರಿಸಲು ಬಯಸುವ ವಿದ್ಯಾರ್ಥಿಗಳ ಪೈಕಿ ಹಲವರು ಉನ್ನತ ವ್ಯಾಸಂಗಕ್ಕಾಗಿ ವಿದೇಶಿ ವಿಶ್ವವಿದ್ಯಾಲಯಗಳನ್ನು ಆರಿಸಿಕೊಳ್ಳುತ್ತಿ
ದ್ದಾರೆ. ಮತ್ತೆ ಕೆಲವರು ಐಐಎಂಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ, ಬಹಳಷ್ಟು ಕಾಲೇಜುಗಳಲ್ಲಿ ಲಭ್ಯವಿದ್ದ ಎಂ.ಟೆಕ್ ಕೋರ್ಸುಗಳನ್ನು ವಿದ್ಯಾರ್ಥಿಗಳು ದಾಖಲಾಗದ ಕಾರಣಕ್ಕೆ ಮುಚ್ಚಲಾಗಿದೆ. ಎಂ.ಟೆಕ್ ಕೋರ್ಸುಗಳನ್ನು ಇಂದಿಗೂ ನಡೆಸಿಕೊಂಡು ಹೋಗುತ್ತಿರುವ ಕಾಲೇಜುಗಳಲ್ಲೂ ಪರಿಸ್ಥಿತಿ ಆಶಾದಾಯಕ
ವಾಗಿಲ್ಲ. ಗಣನೀಯ ಸಂಖ್ಯೆಯ ಸೀಟುಗಳು ಭರ್ತಿಯಾಗದೆ ಉಳಿಯುತ್ತಿವೆ. ಹೀಗಾಗಿ, ಬೇಡಿಕೆಯೇ ಇರದ ಕೋರ್ಸುಗಳ ಸೀಟು ಭರ್ತಿಗಾಗಿ ಪ್ರಾಧಿಕಾರದ ಮೂಲಕ ಪ್ರವೇಶ ಪರೀಕ್ಷೆ ನಡೆಸಿ, ಸೀಟು ಹಂಚಿಕೆ ಮಾಡುವ ಅಗತ್ಯ ಇದೆಯೇ ಎನ್ನುವ ಪ್ರಶ್ನೆ ಎದ್ದಿದೆ.

ಸರ್ಕಾರವು ಪ್ರಾಧಿಕಾರದ ಮೂಲಕ ನಡೆಸುವ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರವೂ ಉಳಿಯುವ ಸೀಟುಗಳಿಗೆ ಕಾಲೇಜುಗಳ ಹಂತದಲ್ಲಿ ಪ್ರವೇಶಾವಕಾಶ ಕಲ್ಪಿಸಲು ಈ ಹಿಂದೆ ವಿಧಿಸುತ್ತಿದ್ದ ‘ಪಿಜಿ–ಸಿಇಟಿ ಬರೆದಿರಲೇಬೇಕು’ ಎನ್ನುವ ನಿಯಮ ಸಡಿಲಿಸುವ ಕುರಿತು ಚಿಂತಿಸಬೇಕಿದೆ. ಮೊದಲಿಗೆ, ಇನ್ನು ಓದು ಮುಂದುವರಿಸುವುದು ಬೇಡವೆನ್ನುವ ಧೋರಣೆ ತಳೆದು ಪಿಜಿ–ಸಿಇಟಿ ಬರೆಯದ ಕೆಲ ವಿದ್ಯಾರ್ಥಿಗಳು, ನಾನಾ ಕಾರಣಗಳಿಗಾಗಿ ಆನಂತರ ಎಂ.ಟೆಕ್ ಕೋರ್ಸಿಗೆ ಪ್ರವೇಶ ಪಡೆಯಲು ಆಸಕ್ತಿ ತೋರುವುದಿದೆ. ಉಳಿದಿರುವ ಸೀಟುಗಳನ್ನು ಇಂತಹ ವಿದ್ಯಾರ್ಥಿಗಳಿಗೆ ನೀಡಲು ತೊಡಕಾಗದ ಹಾಗೆ ನಿಯಮಾವಳಿಗಳಲ್ಲಿ ಬದಲಾವಣೆ ತರಬೇಕಿದೆ.

ಎಂ.ಟೆಕ್ ಓದಲು ವಿದ್ಯಾರ್ಥಿಗಳು ಏಕೆ ಆಸಕ್ತಿ ತೋರುತ್ತಿಲ್ಲ ಎಂಬ ಕುರಿತೂ ತಾಂತ್ರಿಕ ಶಿಕ್ಷಣ ವಲಯ ಚಿಂತಿಸಬೇಕಿದೆ. ಎಂ.ಟೆಕ್ ಓದುವ ಬದಲು ಉದ್ಯೋಗಕ್ಕೆ ತೆರಳಿ ವೃತ್ತಿ ಅನುಭವ ಪಡೆಯುವುದು ಸೂಕ್ತವೆನ್ನುವ ಅಭಿಪ್ರಾಯವಿದೆ. ಬೋಧನಾ ವೃತ್ತಿ ಆರಿಸಿಕೊಳ್ಳ ಬಯಸುವವರೇ ಹೆಚ್ಚಾಗಿ ಎಂ.ಟೆಕ್.ಗೆ ಪ್ರವೇಶ ಪಡೆಯುವುದು. ಉದ್ಯಮ ವಲಯದ ವೇತನಕ್ಕೆ ಹೋಲಿಸಿದರೆ, ಖಾಸಗಿ ಕಾಲೇಜುಗಳಲ್ಲಿ ಬೋಧಕರಿಗೆ ನೀಡುವ ವೇತನ ಕಡಿಮೆ ಇರುವುದರಿಂದಲೂ ಎಂ.ಟೆಕ್ ಓದಲು ಹಿಂಜರಿಯುತ್ತಿದ್ದಾರೆ.

ಕೆಲ ವರ್ಷಗಳಿಂದ ವಿದ್ಯಾರ್ಥಿಗಳು ಎಂ.ಟೆಕ್‌ಗೆ ದಾಖಲಾಗದೇ ಇರುವುದರಿಂದ ಕಾಲೇಜುಗಳಿಗೆ ಅಗತ್ಯ ಇರುವಷ್ಟು ಹೊಸ ಬೋಧಕರನ್ನು ನೇಮಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಸಂಶೋಧನಾ ಕೇಂದ್ರಗಳು ಸಂಶೋಧನಾರ್ಥಿಗಳ ಅಭಾವ ಎದುರಿಸುತ್ತಿವೆ. ಎಂಜಿನಿಯರಿಂಗ್ ಪದವಿ ಮುಗಿಸಿದ ವಿದ್ಯಾರ್ಥಿಗಳು ಸ್ಥಳೀಯವಾಗಿಯೇ ಉನ್ನತ ಶಿಕ್ಷಣ ಮುಂದುವರಿಸಲು ತೋರುತ್ತಿರುವ ನಿರಾಸಕ್ತಿ, ನಮ್ಮಲ್ಲಿನ ಶೈಕ್ಷಣಿಕ ಹಾಗೂ ಸಂಶೋಧನಾ ಗುಣಮಟ್ಟ ಹೇಗಿದೆ ಎಂಬುದಕ್ಕೂ ಕನ್ನಡಿ ಹಿಡಿಯುತ್ತಿದೆ. ಪರಿಸ್ಥಿತಿಯ ಸುಧಾರಣೆಗೆ ಏನು ಮಾಡಬೇಕು ಎನ್ನುವ ಚಿಂತನ-ಮಂಥನ ನಡೆದು, ಉನ್ನತ ಶಿಕ್ಷಣ ವಲಯದಲ್ಲಿ ಆಮೂಲಾಗ್ರ ಬದಲಾವಣೆ ತಾರದೇ ಹೋದಲ್ಲಿ ವಿದ್ಯಾರ್ಥಿಗಳು ಇನ್ನು ಮುಂದೆಯೂ ಇತ್ತ ಸುಳಿಯಲಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT