ಬಿಸಿಲ ಝಳ ಹೆಚ್ಚುತ್ತಿರುವಂತೆಯೇ ಮತ್ತೊಮ್ಮೆ ಮಂಗನ ಕಾಯಿಲೆಯ ಕರಾಳ ಬಾಹುಗಳು ಮಲೆನಾಡಲ್ಲಿ ಚಾಚುತ್ತಿವೆ. ಮತ್ತೆ ಸಾವು, ನೋವು, ಆತಂಕ. ಆದರೆ ಕೊರೊನಾದ ದೊಡ್ಡಾಟದ ಮುಂದೆ, ಮಲೆನಾಡಿಗಷ್ಟೇ ಸೀಮಿತಗೊಂಡಂತಿರುವ ಮಂಗನ ಕಾಯಿಲೆಯೆಂಬ ಸಣ್ಣಾಟ ಮಾತ್ರ ಗಮನ ಸೆಳೆಯುತ್ತಿಲ್ಲ.

ಈ ಬೇಸಿಗೆಯಲ್ಲಿ ತೀರ್ಥಹಳ್ಳಿ ತಾಲ್ಲೂಕೊಂದರಲ್ಲೇ ನೂರ ಇಪ್ಪತ್ತಕ್ಕೂ ಅಧಿಕ ರೈತರು, ಕೃಷಿಕಾರ್ಮಿಕರು ಈ ವ್ಯಾಧಿಯಿಂದ ಬಾಧಿತರಾಗಿದ್ದಾರೆ. ಮೂರ್ನಾಲ್ಕು ಮಂದಿ ಈಗಾಗಲೇ ಬಲಿಯಾಗಿದ್ದಾರೆ. ದಿನದಿಂದ ದಿನಕ್ಕೆ ನಿಗೂಢವಾಗುತ್ತಿರುವ ಮಂಗನ ಕಾಯಿಲೆಯಲ್ಲಿ ಮಂಗನ ಪಾತ್ರ ಆ್ಯಂಪ್ಲಿಫೈಯರ್ ಹೋಸ್ಟ್ (ಅಂದರೆ, ಆಕಸ್ಮಿಕವಾಗಿ ಮಂಗನ ದೇಹ ಸೇರುವ ವೈರಾಣುಗಳು ಅತಿ ಶೀಘ್ರದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ವೃದ್ಧಿಯಾಗುವುದು ಎಂದರ್ಥ) ರೀತಿಯಲ್ಲಿ ಇರುತ್ತದೆ.

ತೀವ್ರ ಸೋಂಕಿಗೆ ತುತ್ತಾಗುವ ಮಂಗವು ಅತಿ ಜ್ವರ, ರಕ್ತಸ್ರಾವ, ಮೆದುಳಿನ ಉರಿಯೂತದಿಂದ ಸಾವನ್ನಪ್ಪುತ್ತದೆ. ಸೋಂಕಿರುವ ರಕ್ತ ಹೀರಿರುವ ಉಣ್ಣೆಗಳು (ಇಣುಗು/ವಣುಗು) ಸತ್ತ ದೇಹವನ್ನು ಬಿಟ್ಟು ಹತ್ತಿರವಿರುವ ಮತ್ತೊಂದು ಪ್ರಾಣಿ ಅಥವಾ ಮಾನವನಿಗೆ ಕಚ್ಚಿಕೊಂಡು ರೋಗಾಣುಗಳನ್ನು ದಾಟಿಸುತ್ತವೆ. ಮಂಗಗಳು ಗುಂಪು ಗುಂಪಾಗಿ ವಾಸಿಸುವುದರಿಂದ ಈ ಉಣ್ಣೆಗಳು ಒಂದರಿಂದ ಮತ್ತೊಂದಕ್ಕೆ ಅತಿ ಶೀಘ್ರದಲ್ಲಿ ಪಸರಿಸಿ, ದೊಡ್ಡ ಸಂಖ್ಯೆಯಲ್ಲಿ ಸಾಯುತ್ತವೆ. ಇದು ನಾವೆಲ್ಲಾ ಇಲ್ಲಿಯವರೆಗೆ ನಂಬಿಕೊಂಡು ಬಂದಿರುವ ವಿಚಾರ. 1957ರಲ್ಲಿ ಸೊರಬದ ಕ್ಯಾಸನೂರು ಕಾಡಿನಲ್ಲಿ ನಡೆದದ್ದು ಇದೇ. ಹಾಗಾಗಿ ಇದನ್ನು ವೈದ್ಯಕೀಯವಾಗಿ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್‍ಡಿ) ಎಂದು ಕರೆದರೂ ಸಾಮಾನ್ಯರ ಬಾಯಲ್ಲಿ ಅದು ಮಂಗನ ಕಾಯಿಲೆಯಾಯಿತು. ಅಲ್ಲಿಂದೀಚೆಗೆ ನೂರಾರು ಜನ ಈ ಸೋಂಕಿಗೆ ಬಲಿಯಾಗಿದ್ದಾರೆ.

ಈಗಲೂ ಈ ಕಾಯಿಲೆ ತರುವಲ್ಲಿ ಮಂಗಗಳ ಪಾತ್ರ ಇದೆಯೇ? ಹಾಗಿದ್ದರೆ ಮಾನವ ಸೋಂಕು ಕಂಡುಬಂದಿರುವಲ್ಲಿ ಮಂಗಗಳೂ ಅಧಿಕ ಸಂಖ್ಯೆಯಲ್ಲಿ ಸಾಯಬೇಕಿತ್ತು. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಈ ವರ್ಷ ನೂರಾರು ಮಾನವ ಪ್ರಕರಣಗಳು ವರದಿಯಾಗಿವೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಏರುತ್ತಲೇ ಇದೆ. ಹಾಗೆಂದು, ಕಾಯಿಲೆ ಕಂಡುಬಂದಿರುವ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಂಗಗಳು ಸತ್ತಿಲ್ಲ. ಸಿದ್ಧಾಪುರ, ಸಾಗರದ ಎರಡು ಪ್ರಕರಣಗಳನ್ನು ಹೊರತುಪಡಿಸಿದರೆ, ಪರೀಕ್ಷೆಗೆ ದೊರೆತ ಮತ್ಯಾವ ಮಂಗಗಳಲ್ಲೂ ಮಂಗನ ಕಾಯಿಲೆ ವೈರಾಣು ಕಂಡುಬಂದಿಲ್ಲ. ಹಾಗಾಗಿಯೇ ಮನದಲ್ಲಿ ಹಲವು ಪ್ರಶ್ನೆಗಳು.

ಹಿಂದೇನೋ ಸರಿ, ಮಂಗಗಳ ಸಾವಿಗೂ ಈ ಕಾಯಿಲೆ ಮಾನವರಲ್ಲಿ ಕಂಡು ಬಂದಿದ್ದಕ್ಕೂ ಸಂಬಂಧವಿತ್ತು. ಈಗಲೂ ಹೀಗೇ ಇದೆಯೇ? ಖಂಡಿತಾ ಅನುಮಾನ. ಅಂದರೆ ರೋಗಾಣುಗಳು ಪ್ರಸಾರಕ್ಕೆ ಬೇರೆ ಬೇರೆ ಹಾದಿಗಳನ್ನು ಆಯ್ಕೆ ಮಾಡಿಕೊಂಡಿರಬಹುದು. ಮೊದಲೇ ಈ ವೈರಲ್ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆಯಿಲ್ಲ. ನಿಯಂತ್ರಣಕ್ಕಾಗಿ ಹಲವು ದಶಕಗಳಿಂದ ಬಳಸುತ್ತಿರುವ ಲಸಿಕೆಯಿಂದಲೂ ಪರಿಪೂರ್ಣ ರಕ್ಷಣೆ ಸಿಗುತ್ತಿಲ್ಲ. ಹಾಗಾಗಿಯೇ ವ್ಯಾಧಿಯ ಬಗ್ಗೆ ವ್ಯಾಪಕ ಅಧ್ಯಯನ ನಡೆಯಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ಪ್ರತಿವರ್ಷವೂ ಪ್ರಾಣಹಾನಿ, ವೈದ್ಯಕೀಯ ವೆಚ್ಚ, ಜಾಗೃತಿ, ನಿಯಂತ್ರಣ, ಲಸಿಕಾ ಕಾರ್ಯಕ್ರಮಗಳೆಂದು ಮಾನವ ಮತ್ತು ಆರ್ಥಿಕ ಸಂಪನ್ಮೂಲ ವ್ಯಯವಾಗುತ್ತಲೇ ಇರುತ್ತದೆ.

ಹೌದು, ಕೆಎಫ್‍ಡಿ ಮಾನವ ಪ್ರಕರಣಗಳು ವರದಿಯಾದ ಸ್ಥಳಗಳಲ್ಲಿ ಕೂಲಂಕಷ ಕ್ಷೇತ್ರ ಅಧ್ಯಯನದ ಅಗತ್ಯವಿದೆ. ಆ ಭಾಗದಲ್ಲಿನ ಉಣ್ಣೆಗಳ ಜೊತೆಯಲ್ಲಿ ಇಲಿ, ಹೆಗ್ಗಣ, ಅಳಿಲು, ಹಕ್ಕಿಗಳ ತಪಾಸಣೆಯೂ ಆಗಬೇಕು. ನೀರು, ಮಣ್ಣಿನ ಪರೀಕ್ಷೆ ಆಗಬೇಕು. ಗಾಳಿಯಿಂದ ವೈರಾಣುಗಳು ಹರಡುತ್ತಿವೆಯೇ ಎಂಬ ಬಗ್ಗೆ ತನಿಖೆಯಾಗಬೇಕು. ರೋಗಿಯ ವಿಸರ್ಜನೆಗಳಲ್ಲಿ ರೋಗಾಣುಗಳು ಇರಬಹುದೇ? ಸದ್ಯದ ನಮ್ಮ ಜ್ಞಾನದ ಪ್ರಕಾರ, ಇದು ಮನುಷ್ಯರಿಂದ ಮನುಷ್ಯರಿಗೆ ಹರಡದು. ಆದರೆ ಇದೊಂದು ವೈರಲ್ ಕಾಯಿಲೆಯಾದ್ದರಿಂದ ಈ ನಿಟ್ಟಿನಲ್ಲೂ ಆಳವಾದ ಅಧ್ಯಯನ ನಡೆಸಬೇಕಾದ ಅಗತ್ಯವಿದೆ.

ಈ ಪರಿಯ ಸಮಗ್ರ ಅಧ್ಯಯನ ಮತ್ತು ಸಂಶೋಧನೆಗೆ ಪರಿಣತರ ತಂಡ ರಚಿಸಿ, ಅತ್ಯುತ್ತಮ ಪ್ರಯೋಗಾಲಯದ ಜೊತೆಯಲ್ಲಿ ಎಲ್ಲಾ ಅವಶ್ಯಕ ಸೌಕರ್ಯಗಳನ್ನು ಒದಗಿಸಿದಾಗ ಮಾತ್ರ ಮಂಗನ ಕಾಯಿಲೆ ಬಗ್ಗೆ ಪೂರ್ಣ ಮಾಹಿತಿ ಸಿಗಬಹುದು. ರೋಗ ಹರಡುವ ವಿಧಾನಗಳು, ಹರಡಿಸುವ ಪ್ರಾಣಿ, ಪಕ್ಷಿಗಳ ಕುರಿತಾಗಿ ಒಮ್ಮೆ ಸಮಗ್ರ ಮಾಹಿತಿ ದೊರೆತರೆ ಈ ರೋಗವನ್ನು ತಡೆಯುವುದು ಅಥವಾ ನಿರ್ಮೂಲ ಮಾಡುವುದು ಸುಲಭ. ಇಲ್ಲದಿದ್ದರೆ ಮಾನವ ಬಲಿಯ ಮಧ್ಯೆ ಆರು ದಶಕಗಳಿಂದ ನಡೆಯುತ್ತಿರುವ ‘ಯುದ್ಧಕಾಲದ ಶಸ್ತ್ರಾಭ್ಯಾಸ’ ಮಾತ್ರ ಒಂದಿನಿತೂ ಬದಲಾವಣೆಯಿಲ್ಲದೆ ಮುಂದುವರಿಯುತ್ತಲೇ ಇರುತ್ತದೆ!

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ, ಬಾಳೇಬೈಲು, ತೀರ್ಥಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.