ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕೂಸು ಹುಟ್ಟಿದೆ, ‘ಕುಲಾವಿ’ ಸಿದ್ಧವೇ?

‘ಕೂಸಿನ ಮನೆ’ ಯೋಜನೆಯು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದರೆ, ಕಾರ್ಮಿಕ ಮಹಿಳೆಯರ ಸ್ವಾವಲಂಬಿ ಬದುಕಿಗೆ ಬಹುದೊಡ್ಡ ಬೆಂಬಲ ಸಿಕ್ಕಂತೆ ಆಗುತ್ತದೆ
Published 8 ಮಾರ್ಚ್ 2024, 23:54 IST
Last Updated 8 ಮಾರ್ಚ್ 2024, 23:54 IST
ಅಕ್ಷರ ಗಾತ್ರ

ಹಳ್ಳಿಗಳಲ್ಲಿರುವ ಬಡ ಕುಟುಂಬಗಳಲ್ಲಿ ಮನೆಯಲ್ಲಿ ಇರುವವರೆಲ್ಲರೂ ಕೆಲಸ ಮಾಡಿ ಒಂದಷ್ಟು ಹಣ ಗಳಿಸಿದರೆ ಮಾತ್ರ ಬದುಕು ಸಾಧ್ಯ. ಪೋಷಕರು ಕೆಲಸಕ್ಕೆ ಹೋದಾಗ, ಮನೆಯಲ್ಲಿದ್ದ ಹಿರಿಯರು ಮಕ್ಕಳ ಲಾಲನೆ- ಪಾಲನೆ ಮಾಡುತ್ತಿದ್ದ ಕಾಲ ಇದಲ್ಲ. ಇಲ್ಲಿ ಜನರು ಸ್ವತಃ ಹೊಲ, ಗದ್ದೆ, ತೋಟ ಹೊಂದಿಲ್ಲ, ಶಿಕ್ಷಣದ ಮಟ್ಟವೂ ಹೆಚ್ಚಿಲ್ಲ. ಹೀಗಿರುವಾಗ, ನಿರ್ಮಾಣ, ಕಟ್ಟಡ ಕಾಮಗಾರಿಗಳಲ್ಲಿ ಅವರು ತೊಡಗಿಸಿಕೊಳ್ಳುತ್ತಿದ್ದಾರೆ. ಮಹಿಳೆಯರೂ ಇದಕ್ಕೆ ಹೊರತಲ್ಲ. ಆದರೆ ಇಂತಹ ಮಹಿಳಾ ಕಾರ್ಮಿಕರು ತಾಯಂದಿರಾದಾಗ ಅನುಭವಿಸುವ ಪಾಡು ಹೇಳತೀರದು. ಹಾಲು ಕುಡಿ ಯುವ ಹಸುಗೂಸುಗಳನ್ನು ಬೆನ್ನ ಹಿಂದೆ ಕಟ್ಟಿಕೊಂಡು ಕೆಲಸ ಮಾಡುವುದು ಅಥವಾ ರಸ್ತೆ ಬದಿ, ಹೊಲ, ಮರ ಹೀಗೆ ಅಲ್ಲಲ್ಲೇ ಮಕ್ಕಳನ್ನು ಮಲಗಿಸುವುದು ಸಾಮಾನ್ಯ.

ಒಂದೊಮ್ಮೆ ಮನೆಯಲ್ಲಿಯೇ ಮಗುವನ್ನು ಬಿಟ್ಟು ಹೋದರೆ ಸಂಜೆ ತಾಯಿ ಮರಳಿ ಬರುವ ತನಕವೂ ಮಗುವಿಗೆ ಸಿಗುವ ಆಹಾರ, ಆರೈಕೆ ಅಷ್ಟಕ್ಕಷ್ಟೇ. ಪರಿಣಾಮವಾಗಿ, ಬೆಳೆಯುವ ಹಂತದಲ್ಲಿಯೇ ಅಪೌಷ್ಟಿಕತೆಗೆ ತುತ್ತಾಗಿ ನರಳುತ್ತಿರುವ ಮಕ್ಕಳು ಸಾವಿರಾರು. ಇವೆಲ್ಲದರ ಅರಿವಿದ್ದೂ ತಾಯಿಯಾದ ಕಾರ್ಮಿಕ ಮಹಿಳೆ ಸೂಕ್ತ ಬೆಂಬಲ, ತಕ್ಕ ವ್ಯವಸ್ಥೆ ಇಲ್ಲದ ಕಾರಣ, ಯಾವಾಗ ಏನಾಗುತ್ತದೋ ಎಂದು ಹೆದರುತ್ತಾ, ತಪ್ಪಿತಸ್ಥ ಭಾವನೆಯಿಂದ ನರಳುತ್ತಾ ಮಾನಸಿಕ ಒತ್ತಡದಲ್ಲಿಯೇ ಹೊಟ್ಟೆಪಾಡಿಗಾಗಿ ಕೆಲಸವನ್ನು ಮಾಡಲೇಬೇಕಾದ ಅನಿವಾರ್ಯ ಇದೆ.

ಇದನ್ನೆಲ್ಲ ಗಮನದಲ್ಲಿಟ್ಟು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಯಡಿ (ಮನರೇಗ) ಕೂಲಿಗೆ ಬರುವ ತಾಯಂದಿರ ಎಳೆಯ ಮಕ್ಕಳ ಆರೈಕೆಗಾಗಿ ರೂಪುಗೊಂಡಿರುವ ತಾಣ ‘ಕೂಸಿನ ಮನೆ’. ಇಲ್ಲಿ ಮೂರು ವರ್ಷದ ಒಳಗಿನ ಮಕ್ಕಳ ಪೋಷಣೆ, ರಕ್ಷಣೆ ಮತ್ತು ಪೌಷ್ಟಿಕತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಅನುಕೂಲವಾಗುವ ಹಾಗೆ ಆಕರ್ಷಕ ಆಟಿಕೆಗಳು, ಅಕ್ಷರಗಳನ್ನು ಚಿತ್ರದ ಮೂಲಕ ಬರೆಯುವುದು, ಆಟ, ಹಾಡು, ಕುಣಿತದ ಜತೆ ನಲಿಯುತ್ತಾ ಕಲಿಯುವ ಅವಕಾಶ ಕಲ್ಪಿಸಲಾಗಿದೆ.

ಮಕ್ಕಳಿಗೆ ಅನುಕೂಲವಾಗುವಂತೆ ಶೌಚಾಲಯದ ಜತೆ ಅಂಗವಿಕಲ ಮಕ್ಕಳಿಗಾಗಿ ಹೆಚ್ಚಿನ ವ್ಯವಸ್ಥೆಯೂ ಕೆಲವೆಡೆ ಇದೆ. ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸುವ ಈ ಕೇಂದ್ರಗಳಲ್ಲಿ ಕನಿಷ್ಠ 10ನೇ ತರಗತಿ ವಿದ್ಯಾರ್ಹತೆ ಹೊಂದಿರುವ 22ರಿಂದ 45 ವರ್ಷದ ಒಳಗಿನವರನ್ನು ಮಕ್ಕಳ ಆರೈಕೆದಾರರಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಮಕ್ಕಳಿಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟ ಮತ್ತು ಸಂಜೆ ಲಘು ಆಹಾರ ನೀಡಲಾಗುತ್ತಿದೆ. ಅದು ಹಾಲು, ಪೊಂಗಲ್, ಗಂಜಿ, ಮೊಳಕೆ ಬರಿಸಿದ ಕಾಳು, ಗೋಧಿ ಪಾಯಸ... ಹೀಗೆ ವೈವಿಧ್ಯಮಯ ಪೌಷ್ಟಿಕ ಆಹಾರವನ್ನು ಒಳಗೊಂಡಿದೆ.

ಹಿಂದಿನ ವರ್ಷವೇ ಯೋಜನೆ ಘೋಷಣೆಯಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಕಾರಣ, ಈ ಕೂಸಿನ ಮನೆಗಳ ಉಸ್ತುವಾರಿ ಮತ್ತು ನಿರ್ವಹಣೆ ವಿಷಯದಲ್ಲಿ ಬಹಳಷ್ಟು ಗೊಂದಲಗಳಿವೆ. ಮುಖ್ಯವಾದ ಸಮಸ್ಯೆ ಎಂದರೆ, ಕೂಸಿನ ಮನೆಗೆ ಸೂಕ್ತ ಕೊಠಡಿಗಳು ಲಭ್ಯವಿಲ್ಲದೇ ಇರುವುದು. ಈ ಯೋಜನೆಗೆ ಅಗತ್ಯವಿರುವ ಕಟ್ಟಡ, ಇತರ ಮೂಲಸೌಲಭ್ಯಗಳನ್ನು ಗ್ರಾಮ ಪಂಚಾಯಿತಿಗಳು ತಮ್ಮ
ಸಂಪನ್ಮೂಲದಲ್ಲಿಯೇ ಒದಗಿಸಬೇಕು. ಸದ್ಯಕ್ಕೆ ಗ್ರಾಮಗಳಲ್ಲಿರುವ ಶಾಲೆ, ಸಮುದಾಯ ಭವನ, ಅಂಗನವಾಡಿಗಳ ಹಳೆಯ ಕಟ್ಟಡ ಮತ್ತು ಕೆಲವು ಕಡೆ ಬಳಕೆಯಾಗದೇ ಇರುವ ಸರ್ಕಾರಿ ಕಟ್ಟಡಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಅನೇಕ ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಆ ವ್ಯವಸ್ಥೆ ಮಾಡುವ ಮೊದಲೇ ಈ ರೀತಿ ಹೊಸ ಯೋಜನೆ ಆರಂಭಿಸಿರುವುದರಿಂದ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚು. ಜತೆಗೆ, ಆರೈಕೆದಾರರ ಅನುದಾನ, ಅವರಿಗೆ ಸರಿಯಾದ ತರಬೇತಿಯನ್ನು ನೀಡಲಾಗಿದೆಯೇ ಇಲ್ಲವೇ ಎಂದು ಖಚಿತಪಡಿಸಿಕೊಳ್ಳುವುದು, ಆಹಾರ ಪಟ್ಟಿ ಸಿದ್ಧಪಡಿಸು ವುದು, ಅದರ ನಿರ್ವಹಣೆ, ಚಟುವಟಿಕೆ ಕುರಿತಂತೆ ಸಭೆ ನಡೆಸುವುದು ಇವೆಲ್ಲಾ ಗ್ರಾಮ ಪಂಚಾಯಿತಿಗಳಿಗೆ ಆರ್ಥಿಕ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಹೆಚ್ಚಿನ ಹೊರೆ. ಇದನ್ನು ನಿರ್ವಹಿಸುವುದು ಕಷ್ಟ ಎನ್ನುವ ಅಭಿಪ್ರಾಯ ಹಲವು ಸದಸ್ಯರದ್ದಾಗಿದೆ.

ಇದರೊಂದಿಗೆ ಗ್ರಾಮ ಪಂಚಾಯಿತಿಯ ವ್ಯಾಪ್ತಿ ಆರರಿಂದ ಹತ್ತು ಕಿಲೊಮೀಟರ್ ಇದ್ದು, ಬೇರೆ ಬೇರೆ ಸ್ಥಳಗಳಲ್ಲಿ ಕಾಮಗಾರಿ ನಡೆಯುತ್ತಿದ್ದಾಗ ಶಿಶುವನ್ನು ಕರೆದೊಯ್ದು ತರುವ ವ್ಯವಸ್ಥೆ, ಹಾಲುಣಿಸಲು ಮತ್ತೆ ಮತ್ತೆ ಓಡಾಡುವುದು ಹೇಗೆ ಎಂಬ ಸಮಸ್ಯೆಗಳು ಕಾರ್ಮಿಕ ಮಹಿಳೆಯರನ್ನು ಕಾಡುತ್ತಿವೆ. ಶಿಶುಗಳನ್ನು ಸಾಕುವ ಗುರುತರವಾದ ಜವಾಬ್ದಾರಿಯನ್ನು ನಿರ್ವಹಿಸಲು ನೇಮಿಸಲಾದ ಆರೈಕೆದಾರರಿಗೆ ಎರಡು ವಾರಗಳ ತರಬೇತಿ ಸಾಕೇ? ಪ್ರತಿ ಮಗುವಿಗೆ ಪೌಷ್ಟಿಕ ಆಹಾರಕ್ಕಾಗಿ ಹನ್ನೆರಡು ರೂಪಾಯಿ ನೀಡಲಾಗುತ್ತಿದೆ. ಇಷ್ಟು ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಸಿಗಲು ಸಾಧ್ಯವೇ, ಪೂರೈಕೆ ಹೇಗೆ ಎಂಬ ಆತಂಕಕ್ಕೆ ಒಳಗಾಗಿ ಅನೇಕ ಕಡೆ ಮಹಿಳೆಯರು ಈ ಸೌಲಭ್ಯ ಪಡೆಯಲು ಹಿಂಜರಿಯುತ್ತಿದ್ದಾರೆ.

ಕೂಸಿನ ಮನೆ ಯೋಜನೆ ಅತ್ಯುತ್ತಮವಾದದ್ದು. ಆದರೆ ಸಮರ್ಪಕ ಅನುಷ್ಠಾನಕ್ಕೆ ಅಗತ್ಯವಿರುವ ವಿವಿಧ ಇಲಾಖೆಗಳ ಸಮನ್ವಯ- ನಿರ್ವಹಣೆ ವಿಷಯದಲ್ಲಿ ಸರ್ಕಾರ ಬದ್ಧವಾಗಿದ್ದರೆ, ಕಾರ್ಮಿಕ ಮಹಿಳೆಯರ ಸ್ವಾವಲಂಬಿ ಬದುಕಿನ ಹೋರಾಟಕ್ಕೆ ಬಹುದೊಡ್ಡ ಬೆಂಬಲ ಸಿಕ್ಕಂತೆ ಆಗುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT