ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಭೂಮಿ ಸೀಮಿತ, ಜನಸಂಖ್ಯೆಯೂ ಇರಲಿ ಸೀಮಿತ

ಜಗತ್ತಿನ ಜನಸಂಖ್ಯೆ 800 ಕೋಟಿ ಸಮೀಪಿಸಿದ್ದು, ದಿನಕ್ಕೆ 2 ಲಕ್ಷದಷ್ಟು ಹೆಚ್ಚುತ್ತಿದೆ.
Published 10 ಜುಲೈ 2023, 19:59 IST
Last Updated 10 ಜುಲೈ 2023, 19:59 IST
ಅಕ್ಷರ ಗಾತ್ರ

–ಬಿ.ಎಸ್.ಭಗವಾನ್‌

ಜಗತ್ತಿನ ಜನಸಂಖ್ಯೆ 800 ಕೋಟಿ ಸಮೀಪಿಸಿದ್ದು, ದಿನಕ್ಕೆ 2 ಲಕ್ಷದಷ್ಟು ಹೆಚ್ಚುತ್ತಿದೆ. ಕೈ ಗಡಿಯಾರ ನೋಡುವಷ್ಟರಲ್ಲಿ 3 ಮಂದಿಯ ಹೆಚ್ಚಳ! ತೀವ್ರವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಪ್ರತಿಯೊಬ್ಬ ವಿಶ್ವಪ್ರಜೆಯ ಗಮನ ಸೆಳೆಯಬೇಕಿದೆ. ಇರುವುದೊಂದೇ ಭೂಮಿ, ವಾಸ್ತವವಾಗಿ 400 ಕೋಟಿ ಮಂದಿಗಷ್ಟೇ ಅದರ ಧಾರಣಾಶಕ್ತಿ. ಅಧಿಕ ಮಂದಿ ಎಂದರೆ ಆಹಾರ, ಆರೋಗ್ಯ, ಆಶ್ರಯ, ಇಂಧನ, ಆರೋಗ್ಯ ರಕ್ಷಣೆ... ಹೀಗೆ ಎಲ್ಲಕ್ಕೂ ಅಧಿಕ ಬೇಡಿಕೆ. ಈ ಬಳಕೆಗಳೆಲ್ಲ ಪರಿಸರ ಅಸಮತೋಲನ, ತೀವ್ರ ಪೈಪೋಟಿ, ಹಸಿವು, ನೆರೆ, ಬರ, ಬಡತನ, ಖಂಡಾಂತರ ವ್ಯಾಧಿಗಳಲ್ಲಿ ಪರ್ಯವಸಾನಗೊಳ್ಳುತ್ತವೆ. ಇದು ಮನುಷ್ಯ ತಂತಾನೇ ಹೇರಿಕೊಂಡ ದುರ್ದೆಸೆ.

2040ರ ವೇಳೆಗೆ ವಿಶ್ವದಲ್ಲಿ ಒಟ್ಟು 970 ಕೋಟಿ ಜನರಿರುತ್ತಾರೆ ಎಂದು ಅಂದಾಜು. ಅವರ ಆಹಾರಕ್ಕೆ ಇಂದಿನದರ ಮೂರುಪಟ್ಟು ಕೃಷಿ ಉತ್ಪನ್ನಗಳು ಬೇಕಾಗುತ್ತವೆ! ಮಹಿಳೆಯರ ಆರೋಗ್ಯ ಸುಧಾರಣೆ ಹಾಗೂ ಸಬಲೀಕರಣವು ಆದ್ಯತೆ ಪಡೆದುಕೊಂಡಂತೆ ಜನಸಂಖ್ಯಾ ವೃದ್ಧಿಗೆ ತಂತಾನೆ ಕಡಿವಾಣ ಬೀಳುವುದೆಂಬ ವಿಖ್ಯಾತ ಉದ್ಯಮಿ ಬಿಲ್‍ಗೇಟ್ಸ್‌ ಅವರ ನುಡಿ ಅರ್ಥವತ್ತಾಗಿದೆ. 1987ರ ಜುಲೈ 11ನೇ ತೇದಿಯಂದು ವಿಶ್ವಸಂಸ್ಥೆ ‘500 ಕೋಟಿ ಜನರ ಜಗತ್ತು’ ಎಂದು ಸಾರಿತು. 1989ರಲ್ಲಿ ‘ಯುನೈಟೆಡ್ ನೇಷನ್ಸ್ ಡೆವಲಪ್‍ಮೆಂಟ್‌ ಪ್ರೋಗ್ರ್ಯಾಂ’ (ಯುಎನ್‌ಡಿಪಿ) ಪ್ರತಿವರ್ಷ ಜುಲೈ 11, ‘ವಿಶ್ವ ಜನಸಂಖ್ಯಾ ದಿನ’ ಎಂದು ನಿರ್ಣಯಿಸಿತು. ಮರುವರ್ಷ ತೊಂಬತ್ತಕ್ಕೂ ಹೆಚ್ಚು ದೇಶಗಳು ‘ವಿಶ್ವ ಜನಸಂಖ್ಯಾ ದಿನ’ ಆಚರಿಸಿದವು. ಜನಸಂಖ್ಯಾ ಸ್ಫೋಟವು ಅಭಿವೃದ್ಧಿಗೆ ಮತ್ತು ಪರಿಸರಕ್ಕೆ ತಂದೊಡ್ಡುವ ಬಹುಮುಖಿ ಕಂಟಕಗಳ ಬಗ್ಗೆ ಜನಜಾಗೃತಿ ಮೂಡಿಸುವುದೇ ಏಪಾರ್ಡಿನ ಗುರಿ.

ಜೋಕೆ, ಇಳೆ ಇಷ್ಟೊಂದು ಜನಸಾಂದ್ರತೆಯನ್ನು ತಾಳಿಕೊಳ್ಳದು ಎಂದು ಎಚ್ಚರಿಸುವ ಸಲುವಾಗಿಯೇ ವರ್ಷೇ ವರ್ಷ ಈ ದಿನಾಚರಣೆ ಬಂದೇಬರುತ್ತದೆ. ಮಾತೆಯರ ಆರೋಗ್ಯ, ಕುಟುಂಬ ಯೋಜನೆ ಮತ್ತು ಮಾನವ ಹಕ್ಕುಗಳ ಬಗ್ಗೆ ಕಾಳಜಿಯು ಜನಜಾಗೃತಿಯ ಪ್ರಮುಖ ಅಂಶಗಳಾಗಿವೆ.

1960ರಲ್ಲಿ 45 ಕೋಟಿ ಜನಸಂಖ್ಯೆಯಿದ್ದ ಭಾರತದಲ್ಲಿ ಇದೀಗ 143 ಕೋಟಿ ಮಂದಿ. ಜನಸಂಖ್ಯೆ ಹೆಚ್ಚುವುದರ ಪರಿಣಾಮವಾಗಿ ಸಮಾಜದ ಮೇಲೆ ಬೀಳುವ ಒತ್ತಡ ವಿಪರೀತ. ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಲಿಂಗತ್ವ ಅಸಮಾನತೆಯ ಚಿತ್ರಣಗಳನ್ನು ಪರಿಶೀಲಿಸಬೇಕು. ಹೀನಾಯ ಅಪರಾಧಗಳು, ಶೋಷಣೆಗಳು, ಕಾನೂನು ಉಲ್ಲಂಘನೆಗಳು ಸಂಭವಿಸುತ್ತಿವೆ. ಮಹಿಳೆಯರು ಮತ್ತು ಹೆಣ್ಣುಮಕ್ಕಳ ದನಿಯನ್ನು ನಿರ್ಲಕ್ಷಿಸಿದರೆ ಕಂಟಕವಷ್ಟೇ ಅಲ್ಲ, ಪ್ರಗತಿಯ ಅಗಾಧ ಸಾಧ್ಯತೆಗಳು ಕೈತಪ್ಪುತ್ತವೆ. ಭೂಗ್ರಹದ ಉಳಿವು ಹಾಗೂ ನಾಳೆಯ ರಕ್ಷಣೆಗಾಗಿ ವಿಶ್ವದ ಇಂದಿನ ಜನಸಂಖ್ಯೆಗೆ ಕಡಿವಾಣ ಹಾಕಬೇಕು.

ಅನಿಯಂತ್ರಿತ ಜನಸಂಖ್ಯಾ ಬೆಳವಣಿಗೆಯಿಂದ ಬದುಕಿನ ಗುಣಮಟ್ಟಕ್ಕೇ ಪೆಟ್ಟು. ಭೂಮಿ ನಮ್ಮ ಪಾಲಿಗೆ, ಬದುಕಬಹುದಾದ, ನಮಗೆ ತಿಳಿದಿರುವ ಏಕೈಕ ಗ್ರಹ. ಅದು ವಿಸ್ತಾರವಾಗಿರಲಿ ಎನ್ನುವುದೇ ಆಶಯ. ಈ ವರ್ಷದ ವಿಶ್ವ ಜನಸಂಖ್ಯಾ ದಿನದ ಧ್ಯೇಯವಾಕ್ಯವಿದು: ‘ಜಗತ್ತಿನ ಪ್ರತಿಯೊಬ್ಬರೂ ಭರವಸೆ ಮತ್ತು ಶಕ್ಯತೆಯ ಭವಿಷ್ಯವುಳ್ಳವರು ಎಂದು ಆಶಿಸಿ’. ಸೀಮಿತ ಭೂಮಿಯು ಸೀಮಿತ ಜನಸಂಖ್ಯೆಗೆ ಮಾತ್ರ ಆಸರೆಯಾಗಬಲ್ಲದು, ಹಾಗಾಗಿ ಜನಸಂಖ್ಯಾ ಬೆಳವಣಿಗೆ ಆಖೈರಾಗಿ ಶೂನ್ಯವಿರಬೇಕು ಎನ್ನುವುದು ಅಮೆರಿಕದ ಖ್ಯಾತ ಪರಿಸರವಾದಿಯಾಗಿದ್ದ ಗ್ಯಾರೆಟ್ ಹಾರ್ಡಿನ್ ಅವರ ಖಡಕ್ ಅಭಿಪ್ರಾಯವಾಗಿತ್ತು. ಜಗತ್ತಿನಲ್ಲಿ ಎಲ್ಲ ವಯಸ್ಕರೂ ಒಂದುವೇಳೆ ದಿಢೀರನೆ ಜನನ ನಿಯಂತ್ರಣ ಪಾಲಿಸಿದರೂ ಕೆಲ ವರ್ಷಗಳವರೆಗೆ ಜನಸಂಖ್ಯೆ ಏರುತ್ತಲೇ ಹೋಗುವುದು. ಜನಸಂಖ್ಯಾ ಆವೇಗ (ಪಾಪ್ಯುಲೇಷನ್‌ ಮೊಮೆಂಟಂ) ಎಂಬ ವಿದ್ಯಮಾನ ಇದಕ್ಕೆ ಕಾರಣ. ವಿಶ್ವದ ಜನಸಂಖ್ಯೆ ಏರಿಕೆ ಮತ್ತು ಜಾಗತಿಕ ನಗರೀಕರಣ ಜೊತೆ ಜೊತೆಗೆ ದಾಪುಗಾಲಿಡುತ್ತವೆ.

ಸಂತಾನ ಫಲವತ್ತತೆ ಹೆಚ್ಚಲು ಸಾಮಾಜಿಕ, ಆರ್ಥಿಕ ಅಂಶಗಳು ಪರೋಕ್ಷವಾಗಿ ಕಾರಣವಾಗುತ್ತವೆ, ತನ್ಮೂಲಕ ಜನಸಂಖ್ಯೆ ಏರುವುದು. ಶಿಕ್ಷಣದ ಕೊರತೆ, ಅನಕ್ಷರತೆ, ಲೈಂಗಿಕ ಮಾರ್ಗದರ್ಶನದ ಅಪವ್ಯಾಖ್ಯಾನ ಮತ್ತು ಮೌಢ್ಯವು ಜನನ ಪ್ರಮಾಣದ ನಿಯಂತ್ರಣಕ್ಕೆ ಎದುರಾಗುವ ಸವಾಲುಗಳು. ಜನನ ಪ್ರಮಾಣದ ಏರಿಕೆಯಿಂದ ಜನಸಂಖ್ಯೆ ಹೆಚ್ಚಳ ಎನ್ನುವುದು ಸಾಮಾನ್ಯ ವಿವರಣೆ. ಆದರೆ ಅದಕ್ಕೂ ಭಿನ್ನವಾಗಿ ಮರಣ ಪ್ರಮಾಣದ ಇಳಿಕೆ, ಸಂಪನ್ಮೂಲಗಳ ಅಭಾವ, ಧಾವಂತದ ವಲಸೆ ಜನಸಂಖ್ಯಾ ವರ್ಧನೆಗೆ ಮುಖ್ಯ ಕೊಡುಗೆಗಳಾಗುತ್ತವೆ.

ಜನಸಂಖ್ಯಾ ವೃದ್ಧಿಯಿಂದ ಬಾಧಕಗಳು ಒಂದೇ? ಎರಡೇ? ವಾಯುಗುಣ ಬದಲಾವಣೆ, ಶುದ್ಧ ನೀರಿನ ಕೊರತೆ, ಸಾಗರಗಳಲ್ಲಿ ಮೀನುಗಳ ವಿರಳತೆ, ಅರಣ್ಯ ನಾಶ, ವಾಯು ಮತ್ತು ಜಲ ಮಾಲಿನ್ಯ! ಸಂಪನ್ಮೂಲಗಳ ಅಭಾವವೇನಿಲ್ಲ, ಆದರೆ ಯಾವ್ಯಾವ ಬಗೆಗಳನ್ನು ಯಾವ್ಯಾವ ರೀತಿಯಲ್ಲಿ ಸಮರ್ಥವಾಗಿ ಉಪಯೋಗಿಸಬೇಕೆಂಬ ಕೌಶಲದ್ದೇ ಪ್ರಶ್ನೆಯೆಂದು ದಶಕಗಳ ಹಿಂದೆ ಗ್ರಹಿಸಲಾಗಿತ್ತು. ಆದರೆ ಈಗ ಹಾಗೆ ಜನಸಂಖ್ಯೆ ಏರಿಕೆಯನ್ನು ಸಮರ್ಥಿಸಿಕೊಳ್ಳಲಾಗದು. ವೈದ್ಯಕೀಯ ಸೌಲಭ್ಯದ ಕೊರತೆಯಿಂದ ಅಸುನೀಗುವವರ ಸಂಖ್ಯೆ ಅತ್ಯಲ್ಪ. ಹತ್ತೊಂಬತ್ತನೆಯ ಶತಮಾನದ ಆದಿಯಲ್ಲಿ ವಿಶ್ವದ ಜನಸಂಖ್ಯೆ 100 ಕೋಟಿ. 2010ರ ವೇಳೆಗೆ ಅದು 700 ಕೋಟಿ ಮುಟ್ಟಿತು. ಈ ನಾಟಕೀಯ ಬೆಳವಣಿಗೆಗೆ ಕೈಗಾರಿಕಾ ಕ್ರಾಂತಿಯೇ ಕಾರಣ. ಆಹಾರ ಉತ್ಪಾದನೆಯಲ್ಲಿ ಹೆಚ್ಚಳ, ವೈದ್ಯಕೀಯ ಚಿಕಿತ್ಸೆಯಲ್ಲಿ ಗಣನೀಯ ಸುಧಾರಣೆ, ಶೌಚಾಲಯ ವ್ಯವಸ್ಥೆಯ ಮಾರ್ಪಾಟು... ಒಟ್ಟಾರೆ ಆಯುರ್ನಿರೀಕ್ಷೆಯ (ಲೈಫ್‌ ಎಕ್ಸ್‌ಪೆಕ್ಟೆನ್ಸಿ) ಏರಿಕೆ. ಇವೆಲ್ಲ ನಿಸ್ಸಂದೇಹವಾಗಿ ಅಭಿವೃದ್ಧಿಯ ಹೆಜ್ಜೆಗಳೇ. ಆದರೆ ಜನಸಂಖ್ಯಾ ಸ್ಫೋಟವೆಂಬ ಕಡಿವಾಣವಿಲ್ಲದ ಕುದುರೆಯನ್ನು ಅವು ಎಗ್ಗಿಲ್ಲದೇ ಪೋಷಿಸಿದ್ದು ಮಾತ್ರ ವಿಪರ್ಯಾಸ. ಆರಂಭದಲ್ಲಿ ಸಾಧಾರಣ ಅಂಕಿ, ಅಂಶಗಳು, ದೀರ್ಘಾವಧಿಯಲ್ಲಿ ಘಾತಾಂಕದ ರೂಪ. ಇದು ಜನಸಂಖ್ಯೆ ಹೆಚ್ಚಳದ ರುದ್ರ ನರ್ತನ! ಸಾರಾಂಶವಿಷ್ಟೆ: ಭೂಮಿ ಸೀಮಿತ, ಜನಸಂಖ್ಯೆಯೂ ಇರಲಿ ಸೀಮಿತ, ಅದೇ ಹಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT