ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಭಾರತೀಯ ಚಿಂತನೆಗಳ ಸಮರ್ಥನೆ

‘ಭಾಷೆಯನ್ನು ಕುರಿತ ಆಕ್ಷೇಪಗಳು ತೀರ ಸಾಪೇಕ್ಷ...’
Last Updated 26 ಮೇ 2022, 19:02 IST
ಅಕ್ಷರ ಗಾತ್ರ

‘ಶ್ರೇಷ್ಠ ಭಾರತೀಯ ಚಿಂತನೆಗಳು’ ಎಂಬ ನನ್ನ ಬರೆಹಕ್ಕೆ ಪ್ರಕಟವಾದ ಆಕ್ಷೇಪಗಳಿಗೆ (ಪ್ರ.ವಾ., ಮೇ 20, 21) ಸಂಕ್ಷಿಪ್ತವಾಗಿ ಉತ್ತರಿಸುತ್ತೇನೆ. ಸ್ಥಳಾಭಾವದ ಕಾರಣ ವಿಸ್ತರಿಸಲು ಸಾಧ್ಯವಿಲ್ಲ. ಮುಕ್ತ ಸಂವಾದವನ್ನು ಏರ್ಪಡಿಸಿದರೆ ವಿಸ್ತೃತ ಸಮರ್ಥನೆ ನೀಡಬಲ್ಲೆ. ಲೇಖನವನ್ನು ಕುರಿತ ನಿರಾಧಾರ ಆಕ್ಷೇಪಗಳನ್ನಷ್ಟೇ ಪ್ರಸ್ತಾವಿಸಲಿದ್ದೇನೆ. ಪಠ್ಯಪುಸ್ತಕದ ವಿವಾದವನ್ನಲ್ಲ. ಅದು ಸದ್ಯದ ವ್ಯಾಪ್ತಿಗೆ ಬರುವಂಥದ್ದಲ್ಲ. ನನ್ನ ಬರೆಹದ ಅಧಿಕೃತತೆಯನ್ನು ನಿರೂಪಿಸುವುದಷ್ಟೇ ಇಲ್ಲಿಯ ಉದ್ದೇಶ.

ವಿ.ಎಲ್.ನರಸಿಂಹಮೂರ್ತಿ, ಡಾ. ಪಿ.ಭಾರತಿ ದೇವಿ ಮತ್ತು ರವಿಕುಮಾರ್ ಬಾಗಿ ಅವರ ಅಭಿಪ್ರಾಯಗಳಲ್ಲಿರುವುದು ಈಚಿನ ದಶಕಗಳಲ್ಲಿ ಮರುಮರಳಿ ಬರುತ್ತಿರುವ ‘ರೆಟರಿಕ್’ ಅಲ್ಲದೆ ಮೂಲಗ್ರಂಥಗಳ ಅಧ್ಯಯನದಿಂದ ಮೂಡಿದ ಚಿಂತನೆಯಲ್ಲ. ಇವರ ಪ್ರಕಾರ ಸಾರ್ವಜನೀನವಾದ ಭಾರತೀಯತೆ ಎಂಬ ಚಿಂತನೆಯೇ ಇರಲಿಲ್ಲ. ಇದು ಸತ್ಯದೂರ. ನಿರ್ವಿಶೇಷ ಸಾರ್ವತ್ರಿಕಾನುಭವದ ಬೆಳಕಿನಲ್ಲಿ ವೇದಾಂತವು ರೂಪಿಸಿದ ತತ್ತ್ವಗಳು ಭಾರತೀಯರಿಗೆ ಮಾತ್ರವಲ್ಲದೆ ಜಗತ್ತಿನವರಿಗೆಲ್ಲ ಅನ್ವಯಿಸುತ್ತವೆ. ಇಲ್ಲಿ ದೇಶ-ಕಾಲಗಳ ಹಂಗಿಲ್ಲ. ಈ ಕಾಣ್ಕೆ ಬರಿಯ ನಂಬಿಕೆಗಳ ಮೇಲೆ ನಿಂತಿಲ್ಲ; ಜೀವ-ಜಗತ್ತುಗಳಿಗೆ ಹೊರತಾದ ಮತ್ತಾವ ಶಕ್ತಿಯನ್ನೂ ಅವಲಂಬಿಸಿಲ್ಲ.

ಸನಾತನಧರ್ಮವು ವ್ಯಾವಹಾರಿಕ ಜಗತ್ತಿನ ಬಹುತ್ವವನ್ನೆಂದೂ ನಿರಾಕರಿಸುವುದಿಲ್ಲ. ಇದು ಪರಮಾರ್ಥವಲ್ಲ ಎಂದಷ್ಟೇ ಹೇಳುತ್ತದೆ. ಸರ, ಬಳೆ, ಉಂಗುರಗಳ ನಾಮರೂಪಾತ್ಮಕವಾದ ಅಸ್ತಿತ್ವವನ್ನು ಪ್ರಶ್ನಿಸುವ ಅವಿವೇಕವಿಲ್ಲಿಲ್ಲ. ಇವುಗಳಲ್ಲಿರುವುದು ಒಂದೇ ಹೊನ್ನು; ಅದಕ್ಕೇ ನಿಜವಾದ ಬೆಲೆ ಎಂಬ ಆತ್ಯಂತಿಕ ಸತ್ಯದ ತಿಳಿವಿದೆ. ಪಾರಮಾರ್ಥಿಕವಾದ ಅಭೇದವನ್ನು ಒಪ್ಪದ ಬಹುತ್ವ ತನ್ನ ನಾನಾತ್ವಗಳ ಪರಸ್ಪರ ವೈಷಮ್ಯಗಳ ಮೂಲಕ ದ್ವೇಷವನ್ನು ಹರಡಿ ಪ್ರತಿಯೊಂದು ಪಂಗಡವೂ ಮತ್ತೊಂದರೊಡನೆ ಸೆಣಸಿ ಎಲ್ಲವನ್ನೂ ಅಳಿಸದಿರದು. ಬಹುತ್ವದ ಹೆಸರಿನಲ್ಲಿ ಆಗುತ್ತಿರುವುದಾದರೂ ಇಂಥ ವೈರವಲ್ಲದೆ ಶಾಂತಿ-ಸಹಜೀವನಗಳಲ್ಲ. ಭಾರತೀಯತೆ ಕ್ರಿಯಾದ್ವೈತವನ್ನು ಬೆಂಬಲಿಸದು. ಅಲ್ಲಿ ಭಾವಾದ್ವೈತಕ್ಕೆ ಬೆಲೆ. ಇಲ್ಲಿರುವುದು ಒಂದೇ ತತ್ತ್ವವಲ್ಲ; ಎರಡಲ್ಲದ ತತ್ತ್ವ. ಇದನ್ನು ಬಲ್ಲವರಿಗೆ ಹೆಚ್ಚಿನ ವಿವರಣೆ ಬೇಕಿಲ್ಲ. ಈ ಸತ್ಯವನ್ನು ವೈದಿಕ-ಅವೈದಿಕ ದರ್ಶನಗಳಲ್ಲೆಲ್ಲ ಕಾಣಬಹುದು. ನಮ್ಮ ಜಾನಪದ ಜೀವನದಲ್ಲಿ, ಅನುಭಾವಿಗಳಲ್ಲಿ ಹಾಸು-ಹೊಕ್ಕಾಗಿರುವುದು ಇದೇ. ಈ ನೆಲದ ಜೀವನಪದ್ಧತಿಗಳು ಭಗವಂತನನ್ನು ಆರಾಧಿಸುವಾಗ ಅವನ ಸೃಷ್ಟಿಯನ್ನೂ ಭಗವಂತನೆಂದೇ ಬಗೆದು ಅರ್ಚಿಸುತ್ತವೆ. ಇಲ್ಲಿ ಭಗವಂತನು ಗಂಡೆಂಬ ಆಗ್ರಹವಿಲ್ಲ. ಭಗವಂತ ಲಿಂಗಾತೀತ. ‘ಏಬ್ರಹಾಮಿಕ್’ ಮತಗಳಲ್ಲಿ ಮಾತ್ರ ಇದಕ್ಕೆ ವಿರುದ್ಧವಾದ ನಿಲವುಗಳು ಪ್ರತಿಪಾದಿತವಾಗುತ್ತವೆ. ಅವುಗಳಂತೆಯೇ ಭಾರತೀಯ ದರ್ಶನಗಳೂ ಇವೆಯೆಂದು ಭ್ರಮಿಸಬಾರದು. ಸ್ವಾಮಿ ವಿವೇಕಾನಂದ, ನಾರಾಯಣಗುರು, ರಮಣ ಮಹರ್ಷಿಗಳಂಥ ಜ್ಞಾನಿಗಳ ಕಾಣ್ಕೆಯೂ ಇದೇ.

ದೇಶ-ಕಾಲಗಳಿಗೆ ಅತೀತವಾದ ಸನಾತನ ಧರ್ಮದ ಮೂಲತತ್ತ್ವಗಳನ್ನು ಉಪೇಕ್ಷಿಸಿ ಕೆಲವೊಂದು ದೇಶ-ಕಾಲಗಳಲ್ಲಿ ತಲೆದೋರಿದ ಸಾಮಾಜಿಕ ವಿಕೃತಿಗಳನ್ನಷ್ಟೇ ಎತ್ತಿ ತಿವಿಯುವುದು ಅನ್ಯಾಯ. ಇದು ತಂತ್ರಜ್ಞಾನದ ಅವಿವೇಕಗಳಿಗೆ ವಿಜ್ಞಾನವನ್ನು ನಿಂದಿಸಿದಂತೆ; ಬಡಿಸುವವರ ತಪ್ಪಿಗೆ ಅಡುಗೆಯನ್ನು ಹಳಿದಂತೆ. ಇಂಥ ಆಕ್ಷೇಪಗಳಿಗೆಲ್ಲ ಪಿ.ವಿ.ಕಾಣೆ ಅವರಂಥ ಎಷ್ಟೋ ಮಂದಿ ವಿದ್ವಾಂಸರು ಸಮರ್ಥವಾಗಿ ಉತ್ತರಿಸಿದ್ದಾರೆ.

ಪ್ರೊ. ಸಿ.ಎನ್.ರಾಮಚಂದ್ರನ್ ಅವರು ಅಮೂರ್ತ ಪರಿಕಲ್ಪನೆಗಳಿಗೆ ನಾನು ‘ನಿಜವಾದ’ ಅರ್ಥವನ್ನು ಕೊಟ್ಟಿರುವೆನೆಂದಿದ್ದಾರೆ. ಹೌದು, ನಾನು ನಿಜವಾದ ಅರ್ಥವನ್ನೇ ಹೇಳಿರುವುದು; ‘ನಿಜವಾದ’ ಅರ್ಥವನ್ನಲ್ಲ. ನನ್ನ ವಿವರಣೆಗಳಿಗೆ ಮೂಲಗ್ರಂಥಗಳ ಆಧಾರವಿದೆ. ಋಕ್ಸಂಹಿತೆ-ಅಥರ್ವಸಂಹಿತೆಗಳಲ್ಲಿ ಋತದ ವಿವರಣೆ ಇದೆ. ಯಾಸ್ಕರಿಂದ ಮೊದಲ್ಗೊಂಡು ಸಾಯಣರಂಥ ಪ್ರಾಚೀನರು ಹಾಗೂ ದಯಾನಂದ, ಅರವಿಂದ ಮುಂತಾದ ಆಧುನಿಕರು ಇಲ್ಲಿ ಸಂವಾದಿಯಾಗಿದ್ದಾರೆ. ಮಹಾಕವಿ ಕುವೆಂಪು ಋತತತ್ತ್ವವನ್ನು ಇದೇ ಅರ್ಥದಲ್ಲಿ ನೂರಾರು ಬಾರಿ ಬಳಸಿದ್ದಾರೆ. ಪತ್ರಿಕೆಯಲ್ಲಿ ಪ್ರಕಟಿಸದ- ಆದರೆ ಪಠ್ಯಪುಸ್ತಕದಲ್ಲಿ ಸೇರಿದ- ಒಂದು ಭಾಗದಲ್ಲಿ ‘ಇಷ್ಟ’ ಮತ್ತು ‘ಪೂರ್ತ’ ಎಂಬ ತತ್ತ್ವಗಳನ್ನು ವಿವರಿಸಿದ್ದೇನೆ. ಅಲ್ಲಿ ಇಂದು ‘ಸೆಕ್ಯುಲರ್’ ಎಂದು ಭಾವಿಸಲ್ಪಡುವ ಎಲ್ಲ ಬಗೆಯ ಸಮಾಜಹಿತ ಕಾರ್ಯಗಳೂ ತತ್ತ್ವತಃ ಯಜ್ಞವೆಂದು ನಿರೂಪಿಸಲಾಗಿದೆ. ಇಡಿಯ ವಿಶ್ವಜೀವನವೇ ಯಜ್ಞವೆಂಬ ದಿವ್ಯಭಾವನೆ ಕೌಷೀತಕೀಬ್ರಾಹ್ಮಣ ಮತ್ತು ತೈತ್ತಿರೀಯ ಆರಣ್ಯಕಗಳಲ್ಲಿ ವಿಶದವಾಗಿದೆ. ಇದನ್ನೇ ಎಷ್ಟೋ ಶತಮಾನಗಳ ಬಳಿಕ ಬುದ್ಧ ಭಗವಂತ ಕುಟದಂತಸುತ್ತದಲ್ಲಿ ಸಾರಿದ್ದಾನೆ.

ಸಿ.ಎನ್.ಆರ್. ಅವರು ಯಜ್ಞದಲ್ಲಿ ಬರುವ ಪ್ರಾಣಿವಧೆಯನ್ನು ಪ್ರಸ್ತಾವಿಸಿದ್ದಾರೆ. ಸನಾತನಧರ್ಮ ಆಹಾರ ಸಂಸ್ಕೃತಿಯನ್ನು ಆದರಿಸಿದೆ. ಯಜ್ಞವೆಂದರೆ ಅಕ್ಕರೆಯಿಂದ ಹಂಚಿಕೊಂಡು ಬಾಳುವ ಪ್ರಕ್ರಿಯೆ. ಅವರವರಿಗೆ ಒಗ್ಗಿದ ಆಹಾರವನ್ನು ಹಂಚಿಕೊಳ್ಳುವುದೂ ಇಲ್ಲಿದೆ. ಬೃಹದಾರಣ್ಯಕೋಪನಿಷತ್ತು, ವಾಲ್ಮೀಕಿ ರಾಮಾಯಣ, ಭಗವದ್ಗೀತೆ ಮುಂತಾದ ಕೃತಿಗಳಲ್ಲಿ ಇಂಥ ಉದಾರದೃಷ್ಟಿಯನ್ನು ಕಾಣಬಹುದು. ದ್ರವ್ಯ ಯಜ್ಞದಿಂದ ಜ್ಞಾನಯಜ್ಞದವರೆಗೆ ಎಲ್ಲ ಬಗೆಯ ಸಂವಿಭಾಗ ಅಲ್ಲಿ ಕಾಣಸಿಗುತ್ತದೆ. ಅವರೆಂದಂತೆ ಧರ್ಮಕ್ಕೆ ‘ರಿಲಿಜನ್’ ಎಂಬ ಅರ್ಥವಿಲ್ಲ. ಮಹಾಭಾರತ, ಮನುಸ್ಮೃತಿ, ಜೈಮಿನಿಸೂತ್ರಗಳಂಥ ಪ್ರಮಾಣಗ್ರಂಥಗಳನ್ನು ಅವರು ಪರಿಶೀಲಿಸಲಿ. ಧರ್ಮದಲ್ಲಿ ಯಾವುದೇ ನಂಬಿಕೆ, ಪ್ರವಾದಿ, ಪರಲೋಕಗಳ ಪ್ರಸ್ತಾವವಿಲ್ಲ. ಅಲ್ಲಿರುವುದು ತಾಳಿಸಿ ಬಾಳಿಸುವ ವೈಶ್ವಿಕಸಾಮರಸ್ಯ. ಇದರ ಯಥಾರ್ಥಜ್ಞಾನ ಪ್ರಾಮಾಣಿಕ ವಿದ್ವಾಂಸರಿಗೆಲ್ಲ ಇದೆ.

ಸಿ.ಎನ್.ಆರ್. ಅವರು ಸ್ವಧರ್ಮದ ಅರ್ಥವನ್ನು ತಿರುಚಲು ನೋಡಿದ್ದಾರೆ. ನನ್ನ ಲೇಖನದ ಕಡೆಯಲ್ಲಿ ‘ಯಾವುದೇ ವ್ಯಕ್ತಿಯು ತನ್ನ ಸ್ವಭಾವಕ್ಕೆ ಅನುಸಾರವಾಗಿ ತನ್ನದಾದ ಬದುಕನ್ನು ರೂಪಿಸಿಕೊಳ್ಳುವ ಮೂಲಕ ತಾನೂ ತನ್ನ ಸುತ್ತಮುತ್ತಲ ಜಗತ್ತೂ ಹೆಚ್ಚಿನ ನೆಮ್ಮದಿಯನ್ನು ಗಳಿಸುವ ಪರಿಯೇ ಸ್ವಧರ್ಮ’ ಎಂದಿರುವುದನ್ನು ಅವರು ಮರೆತಂತಿದೆ.

ಭಾಷೆಯನ್ನು ಕುರಿತ ಆಕ್ಷೇಪಗಳು ತೀರ ಸಾಪೇಕ್ಷ. ಪಂಪ, ಕುಮಾರವ್ಯಾಸ, ಕುವೆಂಪು ಅಂಥವರ ಭಾಷೆ ಕಠಿಣವಾದರೆ ನನ್ನದೂ ಆಗಲಿ. ಈ ಗಂಗಾನದಿಯಲ್ಲಿ ನಾನೂ ಒಂದು ಹನಿಯೆಂಬ ನಮ್ರವಾದ ಹೆಮ್ಮೆ ನನ್ನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT