ಭಾನುವಾರ, ಜನವರಿ 17, 2021
18 °C
ನೀರವತೆ ಎಲ್ಲರ ಹಕ್ಕು. ಅಸಹನೀಯ ಶಬ್ದದ ಮೂಲಕ ಅದನ್ನು ಉಲ್ಲಂಘಿಸುವ ಹಕ್ಕು ಯಾರಿಗೂ ಇರುವುದಿಲ್ಲ

‘ಗದ್ದಲ ಗುಮ್ಮ’ನಿಗೆ ಏಕಿಷ್ಟು ಸದರ?

ಯೋಗಾನಂದ Updated:

ಅಕ್ಷರ ಗಾತ್ರ : | |

Prajavani

ಪರಿಸರ ಸಂರಕ್ಷಣೆ ಎನ್ನುವಾಗ ನೆಲ, ಜಲ, ವಾಯು- ಇವು ಮೂರೇ ಎದ್ದು ಕಾಣುವಂತಾಗಿದೆ. ಅದೇಕೋ ‘ಶಬ್ದ’ ಬಹುತೇಕ ನಮ್ಮ ಕಿವಿಗೆ ಕೇಳಿಸುತ್ತಲೇ ಇಲ್ಲ! ಆಲಿಸುವುದು ಶಬ್ದ. ಗದ್ದಲವೆಂದರೆ ಅನಪೇಕ್ಷಿತ, ಅಹಿತಕರ ಶಬ್ದ. ಸಂವಹನಕ್ಕೆ, ರಂಜನೆಗೆ, ಅಪಾಯದ ಮುನ್ಸೂಚನೆಗೆ ಶಬ್ದ ಅನಿವಾರ್ಯವೆ. ಆದರೆ ಶಬ್ದವು ರಮಣೀಯತೆಯನ್ನು ಕಳೆದುಕೊಂಡಾಗ ಕೋಲಾಹಲವಾಗುತ್ತದೆ. ಶಬ್ದಕ್ಕೂ ಗದ್ದಲಕ್ಕೂ ಇರುವ ವ್ಯತ್ಯಾಸ ಕೇಳುಗ ಮತ್ತು ಸನ್ನಿವೇಶಗಳನ್ನು ಅವಲಂಬಿಸಿರುತ್ತದೆ.
ಕ್ರಿಕೆಟ್ ಕಾಮೆಂಟರಿ ಒಬ್ಬರಿಗೆ ಹಿತ, ಕೆಲವರಿಗೆ ಮುಜುಗರ.

ಶಬ್ದವನ್ನು ಡೆಸಿಬೆಲ್ ಎಂಬ ಮಾನದಿಂದ ಅಳೆಯಲಾಗುತ್ತದೆ. ಒಂದು ಡೆಸಿಬೆಲ್ ಎಂದರೆ ಶ್ರವಣಸಾಧ್ಯವಾದ ಕನಿಷ್ಠ ಶಬ್ದ ಘೋಷ. 130 ಡೆಸಿಬೆಲ್‍ಗಳಿಗೂ ಹೆಚ್ಚಿನ ಶಬ್ದ ಗದ್ದಲವೆನ್ನಿಸೀತು. ನಾವು ಓಡಿಸುವ ಕಾರು, ಸ್ಕೂಟರ್ ಮಾತಿರಲಿ ಗೃಹೋಪಕರಣಗಳಾದ ವ್ಯಾಕ್ಯೂಮ್ ಕ್ಲೀನರ್, ಮಿಕ್ಸರ್, ಏರ್ ಕಂಡೀಶನರ್, ಫ್ರಿಜ್, ಟಿ.ವಿ., ರೇಡಿಯೊ, ವಿ.ಸಿ.ಆರ್... ಈ ಒಂದೊಂದು ಪರಿಕರವೂ ಗದ್ದಲಕ್ಕೆ ತಮ್ಮದೇ ಕೊಡುಗೆ ನೀಡುತ್ತವೆ. ಕರ್ಕಶ ಸದ್ದು ವಾತಾವರಣದ ಲಯ, ನೆಮ್ಮದಿ ಕೆಡಿಸುತ್ತದೆ. ನಿದರ್ಶನವೆಂದರೆ, ವಾಚನಾಲಯದಲ್ಲಿ ನಾವು ಓದಿನಲ್ಲಿ ತನ್ಮಯರಾದಾಗ ಅಕ್ಕಪಕ್ಕದವರ ಪಿಸುಮಾತೂ ನಮ್ಮನ್ನು ಕೆರಳಿಸುತ್ತದೆ.

ಧ್ವನಿವರ್ಧಕಗಳಂತೂ ನಮ್ಮ ಕರ್ಣಪಟಲಗಳ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತವೆ. ನರವ್ಯೂಹದಲ್ಲಿ ಒತ್ತಡ ಸೃಜಿಸುತ್ತವೆ. ಗೌಜು, ರಂಪದಲ್ಲಿ ಯಾವ ಸೃಜನಶೀಲತೆ ತಾನೆ ಅರಳಲು ಸಾಧ್ಯ? ಅಂದಹಾಗೆ, ಟೆಲಿಫೋನ್ ಕಂಡುಹಿಡಿದವರಲ್ಲಿ ಒಬ್ಬರಾದ ಸ್ಕಾಟ್ಲೆಂಡ್ ಸಂಜಾತ, ಅಮೆರಿಕದ ಅಲೆಗ್ಸಾಂಡರ್ ಗ್ರಹಾಂಬೆಲ್‍ ಗೌರವಾರ್ಥ ಡೆಸಿಬೆಲ್ ಎಂದು ಹೆಸರಿಸಲಾಗಿದೆ.

ಒಂದು ಸ್ವಾರಸ್ಯವಿದೆ. ಸ್ವತಃ ಗ್ರಹಾಂಬೆಲ್ ಅಷ್ಟಾಗಿ ಫೋನಾಯಿಸುತ್ತಿರಲಿಲ್ಲ. ದಿನದ ಬಹು ಸಮಯ ತಮ್ಮ ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಶ್ರವಣದೋಷ ಕಾಡಿದ್ದ ಅವರು ಆ ದೋಷವುಳ್ಳವರಿಗೆ ವಿಶಿಷ್ಟ ವಿಧಾನದಲ್ಲಿ ಪಾಠ ಮಾಡಿ ವಿದ್ಯಾವಂತರನ್ನಾಗಿಸುತ್ತಿದ್ದ ಸಾಹಸಿ, ಉದಾರಹೃದಯಿ. ಸಾಧಾರಣ ಸಂಭಾಷಣೆ 60 ಡೆಸಿಬೆಲ್‌ಗಳು, ಹುಲ್ಲು ಕತ್ತರಿಸುವ ಯಂತ್ರ 90 ಡೆಸಿಬೆಲ್‌ಗಳು, ರಾಕ್ ನೃತ್ಯ 120 ಡೆಸಿಬೆಲ್‍ಗಳು, ಒಂದು ವಿಮಾನ 120-140 ಡೆಸಿಬೆಲ್‌ ತನಕ ಸದ್ದು ಮಾಡುತ್ತದೆ. ಗುಡುಗೇನು ಕಡಿಮೆಯೇ?

ಕಾರ್ಖಾನೆಗಳಲ್ಲಿ ಯಂತ್ರಗಳನ್ನು ನೆಲಮಟ್ಟದಿಂದ ಕನಿಷ್ಠ ಒಂದು ಅಡಿ ಮೇಲೆ ಅಳವಡಿಸಿದ್ದರೆ ಕಂಪನಗಳು ಕಡಿಮೆಯಾಗಿ ಶಬ್ದದ ಬಾಧೆ ತಗ್ಗುವುದು. ಇನ್ನು ವಾಹನಗಳ ಸೈಲೆನ್ಸರ್ ಉತ್ತಮ ದರ್ಜೆಯದ್ದಾಗಿದ್ದರೆ ಸದ್ದು ನಿಯಂತ್ರಣವಾದೀತು. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಹಾರ್ನ್‌ಗಳ ಅಗತ್ಯವೇ ಇರದು. ಒಬ್ಬರ ಮನೆಯ ಸದ್ದು, ಆಸುಪಾಸಿನ ಮನೆಗಳವರಿಗೆ ಕಿರಿಕಿರಿಯಾಗಬಾರದು, ನಾಯಿ ಕೂಡ ಜೋರಾಗಿ ಬೊಗಳಬಾರದು. ಅಂತಿದ್ದರೆ ಸಂಪನ್ನ ನೆರೆಹೊರೆಯವರೆನ್ನಿಸುತ್ತಾರೆ.

ಕೈಗಾರಿಕೋದ್ಯಮಗಳು ಸಣ್ಣವೋ ದೊಡ್ಡವೋ ಅವು ಸೃಷ್ಟಿಸುವ ಗದ್ದಲಮಾಲಿನ್ಯ ಗಂಭೀರವೇ. ಆದರೆ ಕೈಗಾರಿಕೆ ನಮ್ಮ ಜೀವನಾಡಿ. ಉಪಾಯವೆಂದರೆ, ಅವುಗಳ ಸದ್ದಿಗೆ ಕಡಿವಾಣ ಹಾಕುವುದು. ಕೈಗಾರಿಕೋದ್ಯಮಗಳ ಸುತ್ತಮುತ್ತ ಹೇರಳವಾಗಿ ಹಸಿರು ಬೆಳೆಸುವುದು ಪರಿಣಾಮಕಾರಿ ಕ್ರಮವೆನ್ನುವುದನ್ನು ವಿಜ್ಞಾನ ದೃಢಪಡಿಸಿದೆ. ಕರ್ಕಶ ಸದ್ದನ್ನು ತಕ್ಕಮಟ್ಟಿಗೆ ಹೀರಿಕೊಳ್ಳುವ ಗಿಡ, ಮರಗಳು ನೈಸರ್ಗಿಕ ಶಬ್ದ ನಿರೋಧಕಗಳು.

ಒಂದು ಕಾಲದಲ್ಲಿ ಆಚೀಚೆ ಮನೆಗಳಿಗೆ ರೇಡಿಯೊ ತಂದಾಗ ‘ದಯವಿಟ್ಟು ಧ್ವನಿ ಹೆಚ್ಚಿಸಿ’ ಅಂತ ಗೋಗರೆಯಲಾಗುತ್ತಿತ್ತು. ನಿಜವೆ, ಆ ದಿನಮಾನಗಳಲ್ಲಿ ರೇಡಿಯೊ ಲಗ್ಶುರಿ! ಇಂದು ‘ಬಳಸಿ. ನಿಮ್ಮ ಮನೆ, ನಿಮ್ಮ ರೇಡಿಯೊ. ಆದರೆ ಸದ್ದು ನಮಗೆ ಕೇಳಿಸುವುದು ಬೇಡ’ ಎಂಬ ಖಡಕ್ ಎಚ್ಚರಿಕೆ. ಬದುಕಿನ ಶೈಲಿ ಎಷ್ಟೊಂದು ಬದಲಾಗಿದೆ?

ನಿಸ್ಸಂದೇಹವಾಗಿ ನೀರವತೆ ಎಲ್ಲರ ಹಕ್ಕು. ಅಸಹನೀಯ ಶಬ್ದವನ್ನು ಸರ್ವರೂ ಒಕ್ಕೊರಲಿನಿಂದ ನಿರುತ್ತೇಜಿಸಬೇಕು. ಮನುಷ್ಯನಂತೆಯೇ ಪ್ರಾಣಿಗಳೂ ಗದ್ದಲದ ಉಪದ್ರವಕ್ಕೊಳಗಾಗುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ಏರುಧ್ವನಿಯಲ್ಲಿ ಹರಟುವುದರಿಂದಲೂ ಅಕ್ಕಪಕ್ಕದವರಿಗೆ ಕಿರಿಕಿರಿಯಾಗುವುದೆಂಬ ಅರಿವು ಅಗತ್ಯ. ನಿಶ್ಶಬ್ದವನ್ನು ವಿಶೇಷವಾಗಿ ನಿರೀಕ್ಷಿಸುವ ಗ್ರಂಥಾಲಯ, ವಾಚನಾಲಯಗಳಲ್ಲೂ ಮೊಬೈಲ್ ಬಳಸುವುದು ಎಂತಹ ವಿಪರ್ಯಾಸ! ವಾಹನ ಚಲಾಯಿಸುವಾಗ ಮೊಬೈಲ್‍ನಲ್ಲಿ ಮಾತನಾಡುವುದರಿಂದ ಘೋರ ಪರಿಣಾಮ ಸಂಭವಿಸಬಹುದು. ತಾನು ಬಹಳ ಬ್ಯುಸಿ ಎಂದು ಬಿಂಬಿಸಿಕೊಳ್ಳುವುದಕ್ಕೋ ಅಥವಾ ಚಲಾಯಿಸಲು ಒಂದೇ ಕೈ ಸಾಕೆಂಬ
ಪ್ರಾತ್ಯಕ್ಷಿಕೆಯೋ ಅರ್ಥವಾಗದು. ಐವತ್ತು ಮಂದಿ ಪ್ರಯಾಣಿಸುವ ಬಸ್ಸಿನಲ್ಲಿ ಹತ್ತೇ ಮಂದಿ ಮೊಬೈಲಿನಲ್ಲಿ ಸಂಭಾಷಿಸುತ್ತಿದ್ದರೆ ಸಾಕು, ಇತರ ಪ್ರಯಾಣಿಕರಿಗೆ ಎಂತಹ ಹಿಂಸೆ ಎಂಬುದನ್ನು ಊಹಿಸಿಕೊಳ್ಳಬಹುದು. ಬಹುಮುಖ್ಯವೆಂದರೆ, ಯಾವುದೇ ಸಾರಿಗೆ ವಾಹನದಲ್ಲಿ ಧ್ವನಿವರ್ಧಕ, ಟೇಪ್ ರೆಕಾರ್ಡರ್‌ ಮೊಳಗಿಸುವ ಅಗತ್ಯವಾದರೂ ಏನಿದೆ? ಹೌದು, ಪರರ ಖಾಸಗಿತನವನ್ನು ಅತಿಕ್ರಮಿಸುವ ‘ಸ್ವರ ಪರಿಚಾರಿಕೆ’ ಶಬ್ದ ಮಾಲಿನ್ಯಕ್ಕೆ ಸೊಪ್ಪು ಹಾಕುತ್ತದೆ.

ಮಾನವನು ಪರಿಸರದ ಒಂದು ಭಾಗ. ಎಂದಮೇಲೆ ಕೆಲವೇ ಮಂದಿ ಮಾತ್ರವಲ್ಲ, ಎಲ್ಲರೂ ಪರಿಸರವಾದಿಗಳಾಗಬೇಕು. ಎಲ್ಲರಿಗೂ ‘ಗದ್ದಲ’ ಕೇಳಿಸಬೇಕು. ಶಬ್ದಾಸುರನ ಬಾಯಿಗೆ ಬಟ್ಟೆ ಕಟ್ಟಲು ಸಂಕಲ್ಪಿಸಿ, ಕಾರ್ಯಶೀಲರಾಗಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.