ಗುರುವಾರ , ಜುಲೈ 7, 2022
23 °C
ವ್ಯಾಪಾರಕ್ಕೆ ದಶಕಗಳ ಹಿಂದೆಯೇ ದೇಶದ ಗಡಿ ಮುಕ್ತವಾಗಿಸಿದ ನಮಗೆ, ಇಂದು ನಮ್ಮದೇ ಬೀದಿಯ ವ್ಯಾಪಾರಿಗಳಿಗೆ ಮುಕ್ತ ಅವಕಾಶ ಕಲ್ಪಿಸಲು ಆಗದಿರುವುದು ಏನನ್ನು ಸೂಚಿಸುತ್ತದೆ?

ಸೀಮಿತ ಆಯ್ಕೆ: ಗ್ರಾಹಕರಿಗೆ ಮಾರಕ

ಎಚ್.ಕೆ.ಶರತ್ Updated:

ಅಕ್ಷರ ಗಾತ್ರ : | |

Prajavani

ಗುಣಮಟ್ಟ ಮತ್ತು ಕಡಿಮೆ ಬೆಲೆ... ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅಸ್ತಿತ್ವ ಕಂಡುಕೊಳ್ಳಲು ಬಯಸುವ ಯಾವುದೇ ಉದ್ದಿಮೆ ಸಂಸ್ಥೆ ತನ್ನ ಗಮನ ಕೇಂದ್ರೀಕರಿಸ ಬೇಕಿರುವುದು ಈ ಎರಡು ಅಂಶಗಳ ಮೇಲಲ್ಲವೇ? ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಕ್ಕೆ ದೇಶದ ಆರ್ಥಿಕತೆಯನ್ನು ಮುಕ್ತವಾಗಿಸಿದ ನಂತರ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಕೊಂಡಿ ರುವ ಬಹುತೇಕ ಎಲ್ಲರೂ ಗ್ರಾಹಕರನ್ನು ತಮ್ಮೆಡೆಗೆ ಸೆಳೆಯಲು ಪರಿಗಣಿಸುತ್ತಿರುವ ಎರಡು ಮುಖ್ಯ ಸಂಗತಿಗಳು ಇವೇ ಅಲ್ಲವೇ?

ಮಾರುಕಟ್ಟೆಯಲ್ಲಿನ ತೀವ್ರ ಸ್ಪರ್ಧೆಯಿಂದಾಗಿ, ಉತ್ಪನ್ನಗಳ ಖರೀದಿಗೆ ಮುಂದಾಗುವ ಗ್ರಾಹಕನ ಎದುರು ಬಹಳಷ್ಟು ಆಯ್ಕೆಗಳಿವೆ. ಗ್ರಾಹಕನ ಆಯ್ಕೆ ಯನ್ನು ಅಂತಿಮವಾಗಿ ಪ್ರಭಾವಿಸುವುದು ಕೂಡ ಗುಣಮಟ್ಟ ಮತ್ತು ಕಡಿಮೆ ಬೆಲೆಯೇ ಎಂಬುದನ್ನು ಅರಿಯಲು ಹೆಚ್ಚೇನೂ ತಿಣುಕಾಡಬೇಕಿಲ್ಲ.

ದೇಶದ ಆರ್ಥಿಕತೆಯು ಉದಾರೀಕರಣಕ್ಕೆ ತೆರೆದು ಕೊಳ್ಳುವ ಮುನ್ನ ಗ್ರಾಹಕರ ಎದುರು ಇದ್ದದ್ದು ಸೀಮಿತ ಆಯ್ಕೆಗಳು ಮಾತ್ರ. ಆದರೆ ಇಂದು ದೂರಸಂಪರ್ಕ ಕ್ಷೇತ್ರ ಹೊರತುಪಡಿಸಿ ಉಳಿದ ಸೇವೆ ಮತ್ತು ಉತ್ಪನ್ನ
ಗಳನ್ನು ಪೂರೈಸಲು ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಇದೆ. ಈ ಪೈಪೋಟಿಯು ಬೆಲೆ ಸಮರಕ್ಕೂ ತಿರುಗಿ, ಗ್ರಾಹಕನಿಗೆ ಕಡಿಮೆ ಬೆಲೆಗೆ ಗುಣಮಟ್ಟದ ಉತ್ಪನ್ನ ಕೊಂಡುಕೊಳ್ಳುವ ಅವಕಾಶ ಒದಗುವುದೂ ಇದೆ.

ಈ ನಡುವೆ ಬಹುರಾಷ್ಟ್ರೀಯ ಕಂಪನಿಗಳು ಮತ್ತು ದೊಡ್ಡ ಬ್ರ್ಯಾಂಡ್‍ಗಳ ಜೊತೆ ಸೆಣಸಲಾಗದೆ ಸಣ್ಣಪುಟ್ಟ ವ್ಯಾಪಾರಸ್ಥರು ತತ್ತರಿಸುತ್ತಿರುವುದು ಕೂಡ ವಾಸ್ತವ. ಆದರೂ, ಗ್ರಾಹಕರ ಚಿತ್ತ ಕಡಿಮೆ ಬೆಲೆಗೆ ಗುಣಮಟ್ಟದ ಉತ್ಪನ್ನ ಲಭ್ಯವಿರುವತ್ತಲೇ ವಾಲುತ್ತಿರುವುದು ಸಹಜವೆ.

ಮುಕ್ತ ಮಾರುಕಟ್ಟೆಯ ನಿರೀಕ್ಷೆ ಮತ್ತು ನಿಯಮ ಗಳಿಗೆ ಅನುಗುಣವಾಗಿ ಮೂರು ದಶಕಗಳಿಂದ ಕಟ್ಟಿ ಕೊಂಡಿರುವ ಈ ಮಾರುವ- ಕೊಳ್ಳುವ ವ್ಯವಸ್ಥೆಯಲ್ಲಿ ಇತ್ತೀಚೆಗೆ ಇಣುಕತೊಡಗಿರುವ ಧರ್ಮಸೂಕ್ಷ್ಮದ ಪ್ರಜ್ಞೆ ಹೆಚ್ಚು ದಿನ ತನ್ನ ಅಸ್ತಿತ್ವ ಕಂಡುಕೊಳ್ಳಲು ಸಾಧ್ಯವೇ? ಧರ್ಮದ ಕಾರಣಕ್ಕೆ ಇವ ನಮ್ಮವನೆಂದು ಭಾವಿಸಿ ಗ್ರಾಹಕನೊಬ್ಬ ಮಾರುಕಟ್ಟೆಯಲ್ಲಿ ತನ್ನೆದುರು ಇರುವ ಆಯ್ಕೆಗಳನ್ನು ನಿರ್ಲಕ್ಷಿಸಬಹುದೇ? ಗುಣಮಟ್ಟ ಮತ್ತು ಕಡಿಮೆ ಬೆಲೆ ಎಂಬ ಸಹಜ ಆಕರ್ಷಣೆಗಳ ಜೊತೆಗೆ ಧರ್ಮವೂ ಕೂಡಿಕೊಂಡರೆ ಇದು ಹೇಗೋ ಮುಂದುವರಿಯಬಹುದೇ ವಿನಾ, ಅಂತಿಮವಾಗಿ ಮಾರುಕಟ್ಟೆಯಲ್ಲಿ ಸೆಣಸಲು ಯಾರೇ ಆದರೂ ಮೊರೆ ಹೋಗಬೇಕಿರುವುದು ಗುಣಮಟ್ಟ ಮತ್ತು ಕಡಿಮೆ ಬೆಲೆ ಎಂಬ ಸೂತ್ರಕ್ಕಲ್ಲವೇ?

ಇತ್ತೀಚೆಗೆ ಬಹಳಷ್ಟು ವಿವಾದ ಸೃಷ್ಟಿಸಿದ ಹಲಾಲ್ ಮತ್ತು ಜಟ್ಕಾ ಕಟ್ ನಿದರ್ಶನವನ್ನೇ ಪರಿಗಣಿಸಿದರೆ, ಮುಸ್ಲಿಮರಿಗೆ ಅವರ ಧಾರ್ಮಿಕ ನಂಬಿಕೆಗಳ ಕಾರಣಕ್ಕೆ ಹಲಾಲ್ ಕಟ್ ಕೂಡ ಮಾಂಸದ ಖರೀದಿಗೆ ಇರುವ ಪ್ರಮುಖ ಮಾನದಂಡವಾದರೆ, ಉಳಿದ ಮಾಂಸಪ್ರಿಯರಿಗೆ ಅಂತಹ ಯಾವುದೇ ಧಾರ್ಮಿಕ ಅಡೆ ತಡೆಗಳು ಇಲ್ಲದಿರುವುದರಿಂದ ಅವರ ಆಯ್ಕೆಯನ್ನು ಪ್ರಭಾವಿಸುವ ಅಂಶಗಳು ಗುಣಮಟ್ಟ ಮತ್ತು ಕಡಿಮೆ ಬೆಲೆಯೇ. ಸದ್ಯದ ಸಾಮಾಜಿಕ ಸನ್ನಿವೇಶ ಸೃಷ್ಟಿಸುವ ಪ್ರಚೋದನೆಗೆ ಒಳಗಾಗಿ ಈ ಎರಡು ಅಂಶಗಳನ್ನು ಬದಿ ಗಿರಿಸಿ ಆಯ್ಕೆ ಮಾಡಿಕೊಂಡರೂ, ಅದು ಗ್ರಾಹಕನನ್ನು ಎಲ್ಲಿಯವರೆಗೂ ಪ್ರಭಾವಿಸಬಲ್ಲದು?

ಗ್ರಾಹಕನಿಗೆ ಗುಣಮಟ್ಟದ ಮಾಂಸ ಪೂರೈಸುತ್ತ, ಅವರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವ
ವ್ಯಾಪಾರಿಗಳೆಡೆಗೆ ಗ್ರಾಹಕರು ಮುಗಿಬೀಳುವುದು ಮುಕ್ತ ಮಾರುಕಟ್ಟೆಯ ಸೂತ್ರದ ಪ್ರಕಾರ ಸಹಜವಲ್ಲವೇ? ಇದನ್ನು ಮುರಿಯಲು ಹೊರಡುವುದರಿಂದ ಕೊನೆಗೂ ನಷ್ಟವಾಗುವುದು ಗ್ರಾಹಕನಿಗಲ್ಲವೇ? ತನ್ನೆದುರು ಇರುವ ಆಯ್ಕೆಗಳು ಸೀಮಿತಗೊಂಡಷ್ಟೂ ಕತ್ತರಿ ಬೀಳು ವುದು ಗ್ರಾಹಕನ ಜೇಬಿಗೆ ತಾನೆ? ಇದರೊಂದಿಗೆ ಗುಣಮಟ್ಟದೊಂದಿಗೂ ರಾಜಿಯಾಗಬೇಕಾದ ಸನ್ನಿವೇಶ ಸೃಷ್ಟಿಯಾಗಲೂಬಹುದು.

ದೂರಸಂಪರ್ಕ ಕ್ಷೇತ್ರದಲ್ಲಿನ ಕಳೆದ ಆರೇಳು ವರ್ಷಗಳ ಬೆಳವಣಿಗೆಗಳನ್ನು ಗಮನಿಸಿದರೆ ಇದು ಮನದಟ್ಟಾಗಲಿದೆ. ಸ್ಪರ್ಧಾತ್ಮಕ ಮಾರುಕಟ್ಟೆಯ ಬೆಳವಣಿಗೆಗೆ ಅಗತ್ಯವಿರುವ ನೀತಿ ನಿಯಮಗಳನ್ನು ರೂಪಿಸಿ, ಅಲ್ಲಿ ಸೆಣಸಲು ಸಿದ್ಧರಿರುವ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಬೇಕಿರುವುದು ಆಳುವವರ ಹೊಣೆಗಾರಿಕೆ. ಇದರ ಬದಲು ತಮಗೆ ಬೇಕಾದವರಿಗೆ ಅನುಕೂಲ ಮಾಡಿಕೊಡಲು ಹೊರಟರೆ ಎಲ್ಲವೂ ಅಯೋಮಯವಾಗಲು ಹೆಚ್ಚು ಸಮಯವೇನೂ ಬೇಕಾಗುವುದಿಲ್ಲ.

ಕಾನೂನು- ಸುವ್ಯವಸ್ಥೆ ಕಾಪಾಡುವ ತನ್ನ ಮೂಲಭೂತ ಹೊಣೆಗಾರಿಕೆಯಿಂದ ಸರ್ಕಾರ ನುಣುಚಿಕೊಂಡರೆ, ಅದು ಉದ್ದಿಮೆ ವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಾರದೇ? ಧರ್ಮರಕ್ಷಕರೆಂದು ತಮ್ಮನ್ನು ಕರೆದುಕೊಳ್ಳುವ ಕೆಲ ವ್ಯಕ್ತಿಗಳಿಗೆ ಮಾರುಕಟ್ಟೆ ನಿಯಂತ್ರಿಸಲು ಬಿಟ್ಟರೆ, ಮುಕ್ತ ಮಾರುಕಟ್ಟೆಯ ಸೂತ್ರ ಪಾಲಿಸಲು ಸಾಧ್ಯವೇ? ವ್ಯಾಪಾರಕ್ಕಾಗಿ ಮೂರು ದಶಕಗಳ ಹಿಂದೆಯೇ ದೇಶದ ಗಡಿಯನ್ನು ಮುಕ್ತವಾಗಿಸಿದ ನಮಗೆ, ಇಂದು ಕ್ಷುಲ್ಲಕ ಕಾರಣಗಳಿಗಾಗಿ ನಮ್ಮದೇ ಬೀದಿಯ ವ್ಯಾಪಾರಿಗಳಿಗೆ ಮುಕ್ತ ಅವಕಾಶ ಕಲ್ಪಿಸುವುದು ಕೂಡ ಸಾಧ್ಯವಾಗದಿರು ವುದು ಏನನ್ನು ಸೂಚಿಸುತ್ತದೆ?

ಈ ಅವಿವೇಕದ ನಂಜಿಗೆ ಬಲಿಯಾಗುವುದು ಕೇವಲ ಒಂದು ಸಮುದಾಯದ ವ್ಯಾಪಾರಸ್ಥರಷ್ಟೇ ಅಲ್ಲ, ಅಂತಿಮವಾಗಿ ಗ್ರಾಹಕರಿಗೂ ಇದರ ಬಿಸಿ ತಟ್ಟಲಿದೆ. ತನ್ನೆದುರು ಇರುವ ಆಯ್ಕೆಗಳನ್ನು ಕಡಿತ ಗೊಳಿಸಲು ಯತ್ನಿಸುವ ಕೆಲವರ ಅಟಾಟೋಪಕ್ಕೆ ಮಣೆ ಹಾಕದಿರುವ ವಿವೇಕವಷ್ಟೇ ಗ್ರಾಹಕರ ಹಿತ ಕಾಯಬಲ್ಲದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು