ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪ್ರಾಣ ತೆಗೆಯದಿರಲಿ ಪ್ರೀತಿ!

ಯುವಜನರಿಗೆ ವಯೋಸಹಜ ಪ್ರೀತಿ, ಆಕರ್ಷಣೆಗಳ ಬಗ್ಗೆ ತಿಳಿಸುವುದರ ಜತೆಗೆ, ಅದಕ್ಕಿರುವ ಮಿತಿ, ಆಗಬಹುದಾದ ಅಪಾಯಗಳನ್ನೂ ಮನದಟ್ಟು ಮಾಡಿಸಬೇಕು
Last Updated 4 ಜನವರಿ 2023, 19:46 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಹತ್ತೊಂಬತ್ತು ವರ್ಷದ ವಿದ್ಯಾರ್ಥಿನಿಯನ್ನು ಇತ್ತೀಚೆಗೆ ಹಲವು ಬಾರಿ ಚಾಕುವಿನಿಂದ ಇರಿದು ಕೊಂದು ನಂತರ ಆತ್ಮಹತ್ಯೆಗೆ ತಾನೂ ಪ್ರಯತ್ನಿಸಿದ ಯುವಕನ ಬಗ್ಗೆ ವರದಿಯಾಗಿತ್ತು. ವರ್ಷದ ಹಿಂದೆ ಯುವವೈದ್ಯೆಯೊಬ್ಬಳು ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ಮೂವರು ಯುವಕರು ಆಕೆಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದರು. ಒಂದೇ ಎರಡೇ... ಕೇಳಿದೊಡನೆ ಎದೆ ನಡುಗಿಸುವ ಇಂಥ ದುರಂತಗಳ ಮೂಲ ಪ್ರೀತಿಯ ನಿರಾಕರಣೆ.

ಪ್ರೀತಿ ಎನ್ನುವುದು ಪರಸ್ಪರ ಮನಸ್ಸುಗಳ ನಡುವಿನ ಸುಂದರ ಅನುಭೂತಿ, ಮನಸ್ಸುಗಳನ್ನು ಅರಳಿಸುವ ಶಕ್ತಿ. ಅದು ಬದಲಾಗಿ ಈ ರೀತಿ ಪ್ರಾಣ ತೆಗೆಯುವ, ಬದುಕನ್ನು ನರಕ ಮಾಡುವ ಹಾಗಾಗಿರುವುದು ನಿಜಕ್ಕೂ ಗಂಭೀರವಾದ ವಿಷಯ. ನಮ್ಮ ಭವಿಷ್ಯ ಎಂದು ಪರಿಗಣಿಸಲಾದ ಹದಿಹರೆಯದವರ ಈ ನಡವಳಿಕೆಯು ಆತಂಕ ಮೂಡಿಸುವ ವಿಷಯ.

ಹರೆಯ ಎಂಬುದು ಸುಂದರ ಕಾಲವಷ್ಟೇ ಅಲ್ಲ, ಸೂಕ್ಷ್ಮ ಹಾಗೂ ಮಹತ್ವದ ಘಟ್ಟವೂ ಹೌದು. ಕಾಲೇಜಿಗೆ ಕಾಲಿಟ್ಟ ಹರೆಯದವರಿಗೆ ಸ್ವತಂತ್ರವಾದ ಸಂಭ್ರಮ. ಈ ಸಮಯದಲ್ಲಿ ದೇಹದಲ್ಲಿ ನಾನಾ ಬದಲಾವಣೆಗಳ ಜತೆ ಮಾನಸಿಕವಾಗಿಯೂ ಪ್ರೀತಿ, ಪ್ರೇಮ, ಸಂಗಾತಿಯ ಬಯಕೆ ಹೀಗೆ ಭಾವನೆಗಳ ಕುದಿಸಮಯ. ಮನದಲ್ಲಿ ಹೊತ್ತಿಕೊಂಡ ಆಕರ್ಷಣೆಯ ಕಿಡಿಗೆ ಮಾಧ್ಯಮಗಳಿಂದ ಗಾಳಿ ಹಾಕುವ ಕೆಲಸ ನಡೆಯುತ್ತದೆ. ಸಿನಿಮಾ, ಧಾರಾವಾಹಿ, ಜಾಹೀರಾತುಗಳ ಮುಖ್ಯ ಬಂಡವಾಳ ಯುವಜನರ ಸೂಕ್ಷ್ಮ ಸಂವೇದನೆಗಳನ್ನು ಕೆರಳಿಸುವುದು. ಪ್ರೀತಿ ಎಂಬುದನ್ನು ದೈಹಿಕ ಆಕರ್ಷಣೆ ಎಂದು ಬಿಂಬಿಸಿ ಅದಕ್ಕೆ ತಕ್ಕದಾಗಿ ಕಾಮಪ್ರಚೋದನೆ ಇವೆಲ್ಲದರ ಮುಖ್ಯ ಗುರಿ.

ಪ್ರೀತಿ– ಪ್ರೇಮ ಯಾವಾಗ ಯಾರೊಂದಿಗೆ ಆಗುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೂ ಪ್ರೀತಿಸಬೇಕೆಂಬ ಸಹಜ ಬಯಕೆ ಅತ್ಯಂತ ತೀವ್ರವಾಗುವುದು ಹದಿನೈದರಿಂದ ಹತ್ತೊಂಬತ್ತರ ಹದಿಹರೆಯದಲ್ಲೇ! ಹುಮ್ಮಸ್ಸಿನಲ್ಲಿ ಅದಕ್ಕೊಂದು ಕಾರಣವೂ ಬೇಕಿಲ್ಲ. ಕಣ್ಣಿಗೆ ಚೆಂದ ಕಂಡಿದ್ದು, ಮನಸ್ಸಿಗೆ ಖುಷಿ ಕೊಟ್ಟಿದ್ದು ಎಲ್ಲವೂ ಪ್ರೀತಿಯೇ. ಪರಿಚಿತ ಹುಡುಗಿ, ದೂರದ ಸಂಬಂಧಿ, ನಗುತ್ತಾ ಮಾತನಾಡಿದ ಗೆಳತಿ, ನೋಟ್ಸ್ ಕೊಟ್ಟ ಕ್ಲಾಸ್‍ಮೇಟ್ ಹೀಗೆ ಕಂಡಲ್ಲೆಲ್ಲಾ ಪ್ರೀತಿಯ ಮಾಯೆ. ವಯಸ್ಸೇ ಹಾಗೆ ಅಂದರೂ ವಾಸ್ತವದ ತಳಹದಿಯೇ ಇಲ್ಲದ, ಹಸಿಬಿಸಿ ಭಾವನೆಗಳೇ ಪ್ರಧಾನವಾಗಿರುವ ಪ್ರೀತಿಯಿಂದ ಆಗುವ ಅಪಾಯ, ಸಮಸ್ಯೆಗಳು ಹಲವಾರು.

ಪ್ರೀತಿ ಎನ್ನುವುದು ಮಾನವರಿಗಿರುವ ತೀವ್ರವಾದ ತುಡಿತ, ಅವಶ್ಯಕತೆ. ಹರೆಯದಲ್ಲಿ ಮಧುರ ಪ್ರೀತಿ (ರೊಮ್ಯಾಂಟಿಕ್) ಮುಖ್ಯವಾದದ್ದು. ಸುರಕ್ಷೆ ಮತ್ತು ನೆಮ್ಮದಿ ನೀಡುವ ಬಾಂಧವ್ಯದ ಬಗ್ಗೆ ಅರಿವೇ ಇಲ್ಲ. ಈ ಹಂತ ತಲುಪಲು ಪರಸ್ಪರ ಒಪ್ಪಿತ ದೀರ್ಘಕಾಲದ ಸಂಬಂಧಗಳಲ್ಲಿ ಮಾತ್ರ ಸಾಧ್ಯ ಎಂಬುದು ಕುರುಡು ಪ್ರೀತಿಗೆ ಕಾಣದು. ಸಹಜವಾದ ಸ್ನೇಹ-ಸಲುಗೆಯನ್ನು ಪ್ರೀತಿಯೆಂದು ಭ್ರಮಿಸಿ ಪ್ರೇಮದ ಅತಿಯಾದ ವೈಭವೀಕರಣದಿಂದ ಪ್ರಭಾವಿತರಾಗಿ ಒಟ್ಟಿಗೇ ತಿರುಗುವ, ತಿನ್ನುವ, ಹಾಡಿ-ಕುಣಿಯುವ ಕಲ್ಪನಾ ಜಗತ್ತಿನಲ್ಲಿ ವಿಹರಿಸುತ್ತಿರುವವರಿಗೆ ಪ್ರೀತಿಯ ನಿರಾಕರಣೆ ಅತೀವ ಆಘಾತವನ್ನುಂಟು ಮಾಡುವುದು ಸಹಜವೇ. ಹೆಚ್ಚಿನವರು ಒಂದಷ್ಟು ದುಃಖಿಸಿ ಸಾಮಾನ್ಯ ಜೀವನಕ್ಕೆ ಮರಳುತ್ತಾರೆ. ಆದರೆ ಅನೇಕರು ಜೀವನವೇ ಮುಗಿಯಿ ತೆಂಬಂತೆ ನಿರಾಶೆಗೆ ಒಳಗಾಗುತ್ತಾರೆ. ವಿದ್ಯಾಭ್ಯಾಸ, ಕೌಟುಂಬಿಕ ಜೀವನವನ್ನೂ ನಿರ್ಲಕ್ಷಿಸುತ್ತಾರೆ. ದುಃಖ ಮರೆಯಲು ಕೆಟ್ಟ ಚಟಗಳಿಗೆ ಮೊರೆ ಹೋಗುವ ಸಾಧ್ಯತೆ ಇರುತ್ತದೆ. ಸ್ವಮರುಕ, ಖಿನ್ನತೆ, ಕೀಳರಿಮೆಯಿಂದ ಆತ್ಮಹತ್ಯೆಯ ಯೋಚನೆಯನ್ನೂ ಮಾಡಬಹುದು.

ಇದರೊಂದಿಗೆ ಹಲವರಲ್ಲಿ ತಾನು ಪ್ರೀತಿಸುವ ವ್ಯಕ್ತಿಯ ಬಗ್ಗೆ ಸಂಪೂರ್ಣ ಅಧಿಕಾರ ತನಗಿದೆ ಎಂಬ ಭಾವನೆ ಆಳವಾಗಿ ಬೇರೂರಿರುತ್ತದೆ. ಹಾಗಾಗಿ ಆ ವ್ಯಕ್ತಿ ಇನ್ನೊಬ್ಬರೊಡನೆ ಒಡನಾಡಿದರೆ ಅಸೂಯೆ. ವ್ಯಕ್ತಿಯ ನಿಕಟವರ್ತಿಗಳು, ಪ್ರೀತಿಪಾತ್ರರ ಬಗ್ಗೆ ಸಂಶಯ, ಸಿಟ್ಟಿನಿಂದ ಮನಸ್ಸು ಉರಿಯುತ್ತದೆ. ನಿರಾಕರಣೆಗೆ ಬುದ್ಧಿ ಕಲಿಸಬೇಕು, ತನಗಾದ ಅಪಮಾನಕ್ಕೆ ಪ್ರತೀಕಾರ ಕೈಗೊಳ್ಳಬೇಕು, ತನಗೆ ಸಿಗಲಾರದ್ದು ಯಾರಿಗೂ ಸಿಗಬಾರದು... ಹೀಗೆ ದ್ವೇಷ, ಸೇಡಿನ ಮನೋಭಾವವೂ ಮೂಡಬಹುದು. ನಡತೆಯ ಬಗ್ಗೆ ಅಪಪ್ರಚಾರ, ಜಾಲತಾಣಗಳ ಮೂಲಕ ಬೆದರಿಕೆ, ಅಸಭ್ಯ ಕರೆ-ಫೋಟೊ, ದೈಹಿಕ ಹಲ್ಲೆ, ಕೊಲೆ ಪ್ರಯತ್ನ ಹೀಗೆ ಅಪಾಯಕಾರಿ ಮಾರ್ಗ ಹಿಡಿಯಬಹುದು. ಪರಿಣಾಮವಾಗಿ, ಪ್ರೀತಿ ಬಾಳಿನ ಬುತ್ತಿಯಾಗಿರದೇ ಸುಡುವ ಬತ್ತಿಯಾದೀತು!

ಈ ದಿಸೆಯಲ್ಲಿ ಮನೆಯಲ್ಲಿ ತೀರಾ ನಿರ್ಬಂಧಿತವಲ್ಲದ, ಹೆಣ್ಣು-ಗಂಡು ಸಹಜವಾಗಿ ಒಡನಾಡುವ, ಪರಸ್ಪರ ಗೌರವ, ವಿಶ್ವಾಸದಿಂದ ಕಾಣುವ ವಾತಾವರಣವನ್ನು ಬಾಲ್ಯದಿಂದಲೇ ಪ್ರೋತ್ಸಾಹಿಸಬೇಕು. ಹರೆಯದಲ್ಲಿ ಮಕ್ಕಳಿಗೆ ಸ್ವಾತಂತ್ರ್ಯ ನೀಡಿದರೂ ಅವರ ಚಟುವಟಿಕೆ, ಸ್ನೇಹಿತರ ಬಗ್ಗೆ ಗಮನವಿಡುವುದು ಅಗತ್ಯ. ಶಾಲಾ ಕಾಲೇಜುಗಳಲ್ಲಿ ಯುವಜನರಿಗೆ ವಯೋಸಹಜ ಪ್ರೀತಿ, ಆಕರ್ಷಣೆಗಳ ಬಗ್ಗೆ ತಿಳಿಸುವುದರ ಜತೆಗೆ ಅದಕ್ಕಿರುವ ಮಿತಿ, ಆಗಬಹುದಾದ ಅಪಾಯಗಳನ್ನೂ ಮನದಟ್ಟು ಮಾಡಿಸಬೇಕು.

ಯುವಜನರು ಮಾಧ್ಯಮಗಳನ್ನು ಅತಿಯಾಗಿ ಅವಲಂಬಿಸದೇ ಇರುವುದರ ಜತೆಗೆ ವಸ್ತುನಿಷ್ಠವಾಗಿ ಜೀವನವನ್ನು ಗ್ರಹಿಸಲು ಕಲಿಯಬೇಕು. ಚಂಚಲ ಮನಸ್ಸನ್ನು ಹಿಡಿತದಲ್ಲಿಡಲು ಸಾಹಿತ್ಯ, ಕಲೆ, ನಡಿಗೆ, ಪ್ರವಾಸದಂತಹ ಉತ್ತಮ ಹವ್ಯಾಸಗಳು ಸಹಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT