ವೈವಾಹಿಕ ದೌರ್ಜನ್ಯವೆಂದು ಯಾವುದನ್ನು ಪರಿಗಣಿಸಬಹುದೋ ಅದಕ್ಕೆ ಸಂಬಂಧಿಸಿದಂತೆ ಹಿರಿಯ ಬರಹಗಾರ ಎಸ್.ಎಲ್.ಭೈರಪ್ಪನವರು ಸಮಾರಂಭವೊಂದರಲ್ಲಿ ಮಾತನಾಡುತ್ತಾ ‘ಪತ್ನಿಯನ್ನು ಸಹಿ ಪಡೆದು ಮುಟ್ಟಬೇಕಾದೀತು’ ಎಂದು ಚಟಾಕಿ ಹಾರಿಸಿದ್ದು (ಪ್ರ.ವಾ., ಏ.29) ತಮಾಷೆಯಾಗಿ ಸರಿಯೆನ್ನಿಸಬಹುದು. ಆದರೆ, ಮನೆಯೊಳಗಿನ ಸಂದರ್ಭಗಳಿಗೆ ಬಂದಾಗ ಅದು ಬರೀ ತಮಾಷೆಯೆನಿಸದು.
ಭಾವನೆಗಳಿಗೆ ಸಂಬಂಧಿಸಿದಂತೆ ಹೆಣ್ಣಿನ ಪ್ರಪಂಚವೇ ಒಂದಾದರೆ, ಗಂಡಿನ ಪ್ರಪಂಚವೇ ಇನ್ನೊಂದು ಎಂಬುದಕ್ಕೆ ಬಹಳಷ್ಟು ಅಧ್ಯಯನಗಳು ನಡೆದಿವೆ. ಕಾಮದಿಂದ ಪ್ರೇಮವನ್ನು ಅನುಭವಿಸುವುದೋ ಅಥವಾ ಪ್ರೇಮದಿಂದ ಕಾಮದ ಅನುಭೂತಿಯನ್ನು ಪಡೆಯಬೇಕೋ ಎಂಬುದು ಬೀಜವೃಕ್ಷ ನ್ಯಾಯವಾದೀತು. ಗಂಡಿನ ಪಥವೇ ಬೇರೆ, ಹೆಣ್ಣಿನ ನಿರೀಕ್ಷೆಗಳೇ ಬೇರೆಯಾಗಿರುವುದು ಹೊಸತಲ್ಲ. ಆದರೆ ಪತ್ನಿಯ ಅನುಮತಿಯಿಲ್ಲದೇ ಅವಳ ಶರೀರವನ್ನು ಯಾವ ಗಂಡನೂ ತನ್ನ ಇಚ್ಛೆಗೆ ಬೇಕಾದಂತೆ ಬಳಸಿಕೊಳ್ಳುವುದು ಸರ್ವಥಾ ದ್ರೋಹವೇ ತಾನೆ? ಇಲ್ಲಿ ‘ಬಳಸಿಕೊಳ್ಳುವುದು’ ಎಂಬುದಕ್ಕಿರುವ ಅರ್ಥ ವಿಸ್ತಾರವನ್ನು ಅವಶ್ಯವಾಗಿ ಪರಿಗಣಿಸಬೇಕಾಗುತ್ತದೆ.
ಹೆಣ್ಣಿನ ಭಾವಪ್ರಪಂಚದ ಮೂಲಕವೇ ಅವಳನ್ನು ಸಮೀಪಿಸಬೇಕಾದ ಪತಿ, ಕೇವಲ ಪತ್ನಿಯೆಂಬ ಕಾರಣಕ್ಕೆ ಅಧಿಕಾರ ಚಲಾಯಿಸಲು ಹೊರಟರೆ, ಬದುಕು ನೋಡನೋಡುತ್ತಿದ್ದಂತೆಯೇ ನರಕವಾದೀತು. ತಾಳಿ ಕಟ್ಟಿದ ಒಂದೇ ಕಾರಣಕ್ಕೆ ಮನಸ್ಸುಗಳು ಬೆರೆಯುವುದು ಸಾಧ್ಯವಿಲ್ಲವಲ್ಲ! ಅದು ಸಾಧ್ಯವಾಗಬೇಕಾದರೆ ಪರಸ್ಪರರ ಭಾವನೆಗಳನ್ನು ಅರಿಯುವ ಹೃದಯಇರಬೇಕು. ಅವಳ ಭಾವನೆಗಳಿಗೆ ಧಕ್ಕೆ ಬರುವಂತೆ ಸಂಗಾತಿಯಾದವನು ಸುಖವನ್ನು ಅಪೇಕ್ಷಿಸಿದರೆ ಅಲ್ಲಿ ಉಳಿಯುವ ಅನುಬಂಧವಾದರೂ ಏನು?
ಇದನ್ನು ವಿಷದೀಕರಿಸಲು ಎರಡು ಉದಾಹರಣೆಗಳನ್ನು ಗಮನಿಸೋಣ. ಮೊದಲನೆಯದು, ಪತ್ನಿಗೆ ಕುಟುಂಬ ಯೋಜನೆಯ ಶಸ್ತ್ರಚಿಕಿತ್ಸೆ ಮಾಡಿಸುವುದಕ್ಕೆ ಅನುಮತಿಸದೆ, ತಾನೂ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಪದೇಪದೇ ಅವಳಿಗೆ ಗರ್ಭಪಾತವಾಗುವಂಥ ಸಂದರ್ಭ ಬಂದರೆ, ಆ ಪತ್ನಿಗೆ ತನ್ನ ಸಂಗಾತಿಯ ಸ್ಪರ್ಶ ಆಪ್ಯಾಯಮಾನವೆನಿಸೀತೇ? ನಾಲ್ಕಾರು ಬಾರಿ ಗರ್ಭಪಾತ ಮಾಡಿಸಿಕೊಳ್ಳಬೇಕಾಗಿ ಬಂದ ಹೆಣ್ಣಿನ ಒಟ್ಟಂದದ ಆರೋಗ್ಯ ಮೊದಲಿನಂತೆಯೇ ಉಳಿದೀತೇ ಎಂಬುದೇ ಪ್ರಶ್ನೆ. ಅಷ್ಟಾಗಿಯೂ ಅಕಸ್ಮಾತ್ ಅವನೇನಾದರೂ ಅವಳ ಶರೀರದ ಕುರಿತಾಗಿ ಅವಹೇಳನದ ಮಾತಾಡಿದರೆ ಮಾನಸಿಕವಾಗಿಯೂ ಆಕೆ ಕುಗ್ಗಿ ಹೋಗುತ್ತಾಳೆ. ಅವಳ ಶರೀರ ಬದಲಾಗುವುದಕ್ಕೆ ಕಾರಣಕರ್ತ ಅವನೂ ಹೌದಷ್ಟೆ! ಹೆರಿಗೆಯ ನೋವಿನಲ್ಲಾದರೆ ಜೀವವೊಂದಕ್ಕೆ ಜನ್ಮ ನೀಡುವ ಸಂತಸವಿರುತ್ತದೆ, ಮಗುವಿನ ನಿರೀಕ್ಷೆಯೇ ಅವಳಿಗೆ ಚೇತರಿಸಿಕೊಳ್ಳಲು ಸಂಜೀವಿನಿಯಾಗಿರುತ್ತದೆ. ಆದರೆ ಗರ್ಭಪಾತವೆಂಬುದು ಉಂಟು ಮಾಡಬಲ್ಲ ಮಾನಸಿಕ ತೊಳಲಾಟ ಸುಲಭದ ಹಿಂಸೆಯಲ್ಲ. ಕಣ್ಣೆದುರು ಆಡುತ್ತಿರುವ ಪುಟ್ಟ ಮಗುವನ್ನು ನೋಡನೋಡುತ್ತಲೇ ಗರ್ಭದಲ್ಲಿ ಅಂಕುರಿಸಿದ ಇನ್ನೊಂದು ಭ್ರೂಣವನ್ನು ಕಿತ್ತೆಸೆಯುವ ಪ್ರಕ್ರಿಯೆ ಹೆಣ್ಣಾದವಳನ್ನು ಬಹಳ ಕಾಡೀತು. ಈ ಸಂದರ್ಭದಲ್ಲಿ ದೌರ್ಜನ್ಯವೆಂದರೆ ಅತ್ಯಾಚಾರವೇ ಆಗಬೇಕೆಂದೇನೂ ಇಲ್ಲ.
ಎರಡನೆಯದು, ಹೆಣ್ಣಿಗೆ ಎರಡನೆಯ ಮಗು ಬೇಕೆಂಬ ಅಪೇಕ್ಷೆಯಿದ್ದು ಅಥವಾ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಮನಸ್ಸಿಲ್ಲದೇ ಇದ್ದಲ್ಲಿ ಬಲವಂತವಾಗಿ ಅವಳನ್ನು ಶಸ್ತ್ರಚಿಕಿತ್ಸೆಗೆ ಗುರಿ ಮಾಡಿದರೆ ಅದು ಕೂಡಾ ಅವಳ ಶರೀರವನ್ನು ತಾನು ಗುತ್ತಿಗೆಗೆ ಪಡೆದಿದ್ದೇನೆ ಎಂಬ ಗಂಡಿನ ಧೋರಣೆಯ ದ್ಯೋತಕವಾಗುತ್ತದೆ. ತಾಯ್ತನವೆಂಬುದನ್ನು ಹೆಣ್ಣಿನ ಬದುಕಿನ ಸಾರ್ಥಕ್ಯವೆಂದು ನೋಡಬೇಕಾಗಿಲ್ಲವಾದರೂ ಸಹಜವಾಗಿ ಮಾತೃತ್ವದ ಹಂಬಲವುಳ್ಳ ಹೆಣ್ಣುಮಗಳಿಗೆ ತಾನಿನ್ನೆಂದೂ ತಾಯಿಯಾಗಲಾರೆ ಎಂಬ ಭಾವವು ನೋವು ಕೊಡುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗುವುದಿಲ್ಲ.
ಮನೆಯ ಎಲ್ಲ ಅನುಕೂಲಗಳನ್ನೂ ಗಮನಿಸಿಕೊಂಡೇ ‘ಮಗುವೊಂದು ಸಾಕೇ ಎರಡು ಬೇಕೇ’ ಎಂಬ ತೀರ್ಮಾನವನ್ನು ದಂಪತಿ ತೆಗೆದುಕೊಳ್ಳುವುದು ಎಂಬುದೇನೋ ನಿಜವೇ. ಹೆಚ್ಚಿನ ಕುಟುಂಬಗಳು ಇಬ್ಬರು ಮಕ್ಕಳು ಬೇಕೆಂಬ ಆಶಯವನ್ನೇ ಮುಂದಿಟ್ಟಾವು. ಇನ್ನೂ ಅನೇಕರು ಒಂದೇ ಮಗು ಸಾಕೆಂದೋ ಮಕ್ಕಳೇ ಬೇಡವೆಂದೋ ತೀರ್ಮಾನ ತೆಗೆದುಕೊಂಡಾರು. ಆದರೆ ತೆಗೆದುಕೊಳ್ಳುವ ತೀರ್ಮಾನ ಪತಿ–ಪತ್ನಿ ಇಬ್ಬರಿಗೂ ಸಮಾನವಾಗಿ ಇರಬೇಕೇ ವಿನಾ ಒಬ್ಬರದ್ದಲ್ಲ. ಮಗು ಬೇಕೆಂಬ ಹಂಬಲವುಳ್ಳ ಪತಿಗೆ ಮಗು ಬೇಡವೆಂಬ ಪತ್ನಿ ಸಿಕ್ಕಿ ವಿಚ್ಛೇದನವಾದ ಕತೆಗಳೂ ನಮ್ಮಲ್ಲಿ ಇರಬಹುದು. ಆದರೆ ಎಂತಹ ಸಂದರ್ಭದಲ್ಲೇ ಆದರೂ ತನ್ನ ಶರೀರದ ಮೇಲಿನ ಅಧಿಕಾರ, ಸ್ವಾತಂತ್ರ್ಯ ತಮ್ಮ ತಮ್ಮವೇ ಆಗಬೇಕಲ್ಲದೆ ಇತರರದ್ದಾಗಲು ಸಾಧ್ಯವಿಲ್ಲ. ಒಂದೊಮ್ಮೆ ಆದರೆ ಅದು ಸಾಧುವೂ ಅಲ್ಲ.
ಬದುಕಿನ ಎಲ್ಲ ಮಜಲುಗಳನ್ನೂ, ಅನುಭವಗಳನ್ನೂ ಕಾನೂನಿನ ವ್ಯಾಪ್ತಿಯಲ್ಲೇ ನೋಡಲಾಗದು. ಯಾಕೆಂದರೆ ಬದುಕು ನಿಲ್ಲುವುದು ಭಾವನೆಗಳ ತಳಹದಿಯ ಮೇಲೆ. ಹಾಗಾಗಿ, ದಂಪತಿ ಪರಸ್ಪರರನ್ನು ಮುಟ್ಟುವುದಕ್ಕೆ ಸಹಿ ಬೇಕಾಗುತ್ತದೆ. ಆದರೆ ಅದು, ಕಾಗದದ ಮೇಲೆ ಅಕ್ಷರಗಳದ್ದಲ್ಲ, ಮನಸ್ಸಿನ ಪುಟದ ಮೇಲೆ ಭಾವನೆಗಳದ್ದು!
ಲೇಖಕಿ: ಉಪನ್ಯಾಸಕಿ ವಿದ್ಯಾನಿಧಿ ಪದವಿಪೂರ್ವ ಕಾಲೇಜು, ತುಮಕೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.