ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ವೈದ್ಯಕೀಯ ಕ್ಷೇತ್ರ: ಬೇಕು ಚಿಕಿತ್ಸೆ

ವೈದ್ಯಕೀಯ ಸಿಬ್ಬಂದಿಯ ಮೇಲೆ ನಡೆಯುವ ಹಲ್ಲೆಗಳನ್ನು ನಿಯಂತ್ರಿಸಬೇಕಾದರೆ, ವೈದ್ಯಕೀಯ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳನ್ನು ಸಮಗ್ರವಾಗಿ ಪರಿಗಣಿಸಬೇಕಾಗುತ್ತದೆ
ಸದಾನಂದ ಆರ್‌.
Published : 26 ಆಗಸ್ಟ್ 2024, 23:30 IST
Last Updated : 26 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಕೋಲ್ಕತ್ತದ ಆಸ್ಪತ್ರೆಯೊಂದರಲ್ಲಿ ಇತ್ತೀಚೆಗೆ ನಡೆದಿರುವ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಆಕೆಯ ಕೊಲೆಯ ಅಮಾನವೀಯ ಪ್ರಕರಣವು ವೈದ್ಯರ ಸುರಕ್ಷತೆ ಕುರಿತು ಬಹಳಷ್ಟು ಪ್ರಶ್ನೆಗಳನ್ನು ದೇಶದ ಮುಂದಿಟ್ಟಿದೆ. ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಯ ವಿಚಾರವನ್ನು ಈ ಅಮಾನವೀಯ ಪ್ರಕರಣದ ಆಚೆಗೂ ನೋಡಿ ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ. ಏಕೆಂದರೆ ಹಿಂಸೆಯ ಹಿಂದಿರುವ ಸ್ಥೂಲ ಚಿತ್ರಣದ ಸ್ಪಷ್ಟತೆ ದೊರೆಯದ ವಿನಾ ಈ ನಿರ್ದಿಷ್ಟ ಪ್ರಕರಣವನ್ನು ಬಿಡಿಸಿ ನೋಡಲು ಆಗುವುದಿಲ್ಲ.

ದೇಶದ ಆರೋಗ್ಯ ಸೇವಾ ವ್ಯವಸ್ಥೆಯ ಕ್ಷಮತೆಯ ಮೇಲೆ, ಪ್ರಜೆಯ ಒಟ್ಟಾರೆ ಆರೋಗ್ಯ ಸಂಬಂಧಿ ಖರ್ಚು-ವೆಚ್ಚ ಅವಲಂಬಿಸಿರುತ್ತದೆ. ಹಿಂದಿನ ಮೂರ್ನಾಲ್ಕು ದಶಕಗಳಿಂದ ಸಾರ್ವಜನಿಕ ಆರೋಗ್ಯ ಸೇವಾ ವ್ಯವಸ್ಥೆ ಕುಸಿಯುತ್ತಾ ಬರುತ್ತಿರುವುದನ್ನು ತಜ್ಞರು ಗುರುತಿಸಿದ್ದಾರೆ. ಭಾರತೀಯರು ಆರೋಗ್ಯ ಸೇವೆಯನ್ನು ಪಡೆಯಲು ತಮ್ಮ ಜೇಬಿನಿಂದ ಖರ್ಚು ಮಾಡಬೇಕಾದ ಹಣದ ಪ್ರಮಾಣ ಶೇ 62ರಷ್ಟು ಇದೆ ಎಂದು ಅಕಾಡೆಮಿ ಆಫ್‌ ಫ್ಯಾಮಿಲಿ ಫಿಜಿಷಿಯನ್ಸ್‌ ಆಫ್‌ ಇಂಡಿಯಾದ ನಿಯತಕಾಲಿಕ (2022ರ ನವೆಂಬರ್‌) ವರದಿ ಮಾಡಿದೆ. ಇದರ ಪ್ರಕಾರ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಸಾರ್ವಜನಿಕ ಆರೋಗ್ಯ ಸೇವೆಯಿಂದ ದೊರೆಯುವ ಉಚಿತ ಸೇವೆಯ ಪ್ರಮಾಣ ಶೇಕಡ 38ರಷ್ಟು ಮಾತ್ರ ಆಗಿರುತ್ತದೆ. ಇದು ಬಡವರ ಆರ್ಥಿಕ ಸ್ಥಿತಿಗತಿಯ ಮೇಲೆ ಬಹಳಷ್ಟು ಗಂಭೀರವಾದ ಪ್ರಭಾವವನ್ನು ಬೀರುತ್ತದೆ.

ಜೊತೆಗೆ, ಲಭ್ಯವಿರುವ ಸೇವೆಯನ್ನು ಉತ್ತಮವಾಗಿ ನೀಡಲಾಗದ ಸ್ಥಿತಿಯಲ್ಲಿ ಸಾರ್ವಜನಿಕ ಆಸ್ಪತ್ರೆಗಳು ಇರುತ್ತವೆ. ಆಸ್ಪತ್ರೆಗಳು ತಮ್ಮ ಸಾಮರ್ಥ್ಯವನ್ನು ಮೀರಿ ರೋಗಿಗಳನ್ನು ನಿಭಾಯಿಸಬೇಕಾದ ಪರಿಸ್ಥಿತಿ ಇದೆ. ಮೂಲ ಸೌಕರ್ಯಗಳ ಕೊರತೆಯ ಜೊತೆಗೆ ಮಾನವ ಸಂಪನ್ಮೂಲದ ತೀವ್ರ ಕೊರತೆಯನ್ನೂ ಈ ಆಸ್ಪತ್ರೆಗಳು ಎದುರಿಸುತ್ತಿವೆ. ಮಾನವ ಸಂಪನ್ಮೂಲದ ಕೊರತೆಯನ್ನು ನಿಭಾಯಿಸಲು ಬಹುತೇಕ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರವು ಹೊರಗುತ್ತಿಗೆ ವ್ಯವಸ್ಥೆಯನ್ನು ಅವಲಂಬಿಸಿರುತ್ತದೆ. ಇದರಿಂದ ಆಸ್ಪತ್ರೆಯ ಆಡಳಿತಕ್ಕೆ ಮತ್ತು ಹೊರಗುತ್ತಿಗೆಯ ಮೂಲಕ ಬರುವ ಸಿಬ್ಬಂದಿಗೆ ಸಂವಹನದ ಕೊರತೆಯ ಜೊತೆಗೆ ಉತ್ತರದಾಯಿತ್ವದ ಕೊರತೆಯೂ ಉಂಟಾಗುತ್ತದೆ.

ಆಸ್ಪತ್ರೆಗಳಲ್ಲಿ ಸುರಕ್ಷತಾ ಕಾರ್ಯದ ಹೊಣೆಗಾರಿಕೆಯನ್ನು ಈಗ ಹೊರಗುತ್ತಿಗೆಯ ಮೂಲಕವೇ ನಿಭಾಯಿಸಲಾಗುತ್ತದೆ. ಅನೇಕ ವೇಳೆ ಸುರಕ್ಷತಾ ಸಿಬ್ಬಂದಿಯೇ ಭ್ರಷ್ಟಾಚಾರದ ಮೂಲಗಳಾಗಿಬಿಡುತ್ತಾರೆ. ಕೋಲ್ಕತ್ತದ ಪ್ರಕರಣದಲ್ಲಿ, ಬಂಧಿತ ವ್ಯಕ್ತಿಯು ಇಂತಹ ವ್ಯವಸ್ಥೆಯ ಭಾಗವಾಗಿದ್ದನೆಂದು ವರದಿಗಳು ಹೇಳುತ್ತವೆ.

ಸ್ಥಳೀಯ ಹಂತದಲ್ಲಿ ಸೂಕ್ತ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಗುಣಾತ್ಮಕ ಆರೋಗ್ಯ ಕೇಂದ್ರಗಳು ಇಲ್ಲದಿರುವ ಕಾರಣದಿಂದ, ಮೂರನೇ ಹಂತದ ಆರೋಗ್ಯ ಸೇವೆಯನ್ನು ಒದಗಿಸುವ ಜಿಲ್ಲಾ ಆಸ್ಪತ್ರೆಗಳು ಇಲ್ಲವೇ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗಳ ಮೇಲೆ ಅತಿಯಾದ ಒತ್ತಡ ಉಂಟಾಗುತ್ತಿದೆ. ಪ್ರಾಥಮಿಕ ಆರೋಗ್ಯ ಸೇವೆ ಸಕಾಲಕ್ಕೆ ದೊರೆಯದಿದ್ದಾಗ ಆಗುವ ಸಮಸ್ಯೆಗಳು ಎರಡು: ಸಕಾಲಕ್ಕೆ ಚಿಕಿತ್ಸೆ ದೊರೆಯದ ಕಾರಣ, ರೋಗ ಉಲ್ಬಣವಾಗಿ ಮೂರನೇ ಹಂತದ ಆಸ್ಪತ್ರೆಯನ್ನು ಅವಲಂಬಿಸಬೇಕಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಗುಣಾತ್ಮಕ ಸೇವೆ ದೊರೆತಾಗ, ಬಹುತೇಕ ರೋಗಗಳನ್ನು ಸ್ಥಳೀಯ ಹಂತದಲ್ಲೇ ಯಶಸ್ವಿಯಾಗಿ ನಿರ್ವಹಿಸಲಾಗುತ್ತದೆ. ಇದರಿಂದ ಅನಗತ್ಯವಾದ ಓಡಾಟ ಮತ್ತು ಹಣ ವ್ಯಯವಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ದೊಡ್ಡಾಸ್ಪತ್ರೆಗಳ ಮೇಲಿನ ಹೊರೆ ಕಡಿಮೆಯಾಗುತ್ತದೆ.

ಗುಣಾತ್ಮಕ ಪ್ರಾಥಮಿಕ ಆರೋಗ್ಯ ಸೇವೆಯ ಅನುಪಸ್ಥಿತಿ ಮತ್ತೊಂದು ಸಮಸ್ಯೆಗೆ ದಾರಿಯಾಗುತ್ತದೆ. ಮನೆಯ ಸಮೀಪದಲ್ಲಿರುವ ಔಷಧಿ ಅಂಗಡಿಗಳೇ ಅನೌಪಚಾರಿಕ ಆರೋಗ್ಯ ಸೇವಾ ಕೇಂದ್ರಗಳಾಗಿ ಕೆಲಸ ಮಾಡುತ್ತವೆ. ಔಷಧಿಗಳ ಮಾರಾಟದ ಮೇಲೆ ಕಟ್ಟುನಿಟ್ಟಾದ ನಿಯಂತ್ರಣ ಇರದ ಕಾರಣ, ವೈದ್ಯರ ಸಲಹಾ ಚೀಟಿಯಿಲ್ಲದೆ, ರೋಗಿ ಹೇಳುವ ವಿವರಣೆಯ ಆಧಾರದಲ್ಲಿ ಅಂಗಡಿಯ ಮಾಲೀಕನೇ ಔಷಧಿಯನ್ನು ವಿತರಿಸುತ್ತಾನೆ. ವ್ಯಾಪಾರದ ಲಾಭ ಅಂಗಡಿಯಾತನಿಗೆ ದೊರೆತರೆ, ಸಮಯ ಮತ್ತು ಹಣವನ್ನು ಉಳಿಸಿದ ನೆಮ್ಮದಿ ರೋಗಿಯ ಪಾಲಿಗೆ. ಇದರ ಒಟ್ಟಾರೆ ಪರಿಣಾಮ, ಎಷ್ಟೋ ಸಂದರ್ಭಗಳಲ್ಲಿ ಯಾವುದೋ ಕಾಯಿಲೆಗೆ ಯಾವುದೋ ಔಷಧ ಸೇವಿಸುವಂತಾಗಿ ವ್ಯಕ್ತಿಯ ಆರೋಗ್ಯ ಬಿಗಡಾಯಿಸುತ್ತದೆ.

ಔಷಧಿಗಳ ಅನಿಯಂತ್ರಿತ ಅಪಬಳಕೆಯ ಕಾರಣದಿಂದ ರೋಗಾಣುಗಳಲ್ಲಿ ಔಷಧಿನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆಗ ರೋಗಗಳ ನಿರ್ವಹಣೆ ವೈದ್ಯರಿಗೆ ಸವಾಲಾಗುತ್ತದೆ. ಔಷಧಿನಿರೋಧಕ ಶಕ್ತಿ ಬೆಳೆಸಿಕೊಂಡ ರೋಗಾಣುಗಳಿಂದ ರೋಗಿಗಳನ್ನು ರಕ್ಷಿಸಲು ಶಕ್ತಿಶಾಲಿಯಾದ ಔಷಧಿಗಳ ಮೊರೆ ಹೋಗಬೇಕಾಗುತ್ತದೆ. ಇದರಿಂದ ಔಷಧಿಗಳ ವೆಚ್ಚ ಹೆಚ್ಚಾಗುತ್ತದೆ. ಆಗ ರೋಗಿಯಲ್ಲಿ ಮತ್ತು ರೋಗಿಯ ಸಂಬಂಧಿಗಳಲ್ಲಿ ಹತಾಶೆ ಹೆಚ್ಚಾಗುತ್ತದೆ. ಆ ಸಿಟ್ಟು ಅನೇಕ ಸಂದರ್ಭಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ವಿರುದ್ಧ ತಿರುಗುವ ಸಾಧ್ಯತೆ ಇರುತ್ತದೆ.

ಹಾಗಾಗಿ, ವೈದ್ಯಕೀಯ ಕ್ಷೇತ್ರವು ಒಟ್ಟಾರೆಯಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಸಮಗ್ರವಾಗಿ ಪರಿಗಣಿಸಬೇಕಾಗುತ್ತದೆ. ಹಾಗೆ ಮಾಡದಿದ್ದರೆ, ಆರೋಗ್ಯ ಸೇವೆಗಳನ್ನು ನೀಡುವ ಸಿಬ್ಬಂದಿಯ ಒಟ್ಟಾರೆ ಸುರಕ್ಷತೆಯನ್ನು ನಿಭಾಯಿಸುವುದು ಕಷ್ಟಸಾಧ್ಯವಾದ ಕಾರ್ಯವಾಗುತ್ತದೆ.

ಲೇಖಕ: ಉಪನ್ಯಾಸಕ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಹುಣಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT