ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಮೈಮೇಲೆ ಬಂದೀತು ‘ಮಾಹಿತಿ ದೇವರು’!

ಸುದ್ದಿ ಸುನಾಮಿಯಾದ ಮೊಬೈಲ್‌ ಫೋನ್‌ನ ಉಪಟಳ ಬಹುಮುಖಿ
Last Updated 20 ಜುಲೈ 2021, 19:31 IST
ಅಕ್ಷರ ಗಾತ್ರ

ಹೋಟೆಲಿನಲ್ಲಿ ಆ ಯುವಕ ಕೇಸರಿಬಾತ್‌ಗೆ ಆರ್ಡರ್‌ ಮಾಡಿದ್ದ. ಪರಿಚಾರಕ ಮೇಜಿಗೆ ಅದನ್ನು ತಂದಿಡುವುದಕ್ಕೂ ಇವನ ಮೊಬೈಲು ರಿಂಗಣಿಸುವುದಕ್ಕೂ ಕಾಕತಾಳೀಯವಾಗಿತ್ತು. ಮುಂದೇನು ಗೊತ್ತಿದ್ದದ್ದೆ. ಸಂಭಾಷಿಸುತ್ತಲೇ ಯುವಕ ಸಿಹಿ ಸೇವಿಸಿದ. ಆದರೆ ಒಂದು ಐಬು. ಚಪ್ಪರಿಸಬೇಕಿದ್ದವ ತಿಂದ!

ಮಾಲ್‍ಗೆ ಬಂದ ನವದಂಪತಿಯ ಪಾಡು ಅದೇ. ಅವರವರ ಮೊಬೈಲ್ ದೆಸೆಯಿಂದ ಖರೀದಿ ಸುಖವನ್ನೇ ಮರೆತಿದ್ದರು. ಮೈಮೇಲೆ ‘ದೇವರು’ ಬರುತ್ತದೆ ಎನ್ನುತ್ತಾರೆ. ಅದರ ಸತ್ಯಾಸತ್ಯತೆ ಹೇಗೂ ಇರಲಿ. ಮೊಬೈಲಿನ ಅತಿ ಮೋಹಕ್ಕೆ ಬಿದ್ದರೆ ‘ಮಾಹಿತಿ ದೇವರು’ ಮೈಮೇಲೆ ಬರುವುದಂತೂ ಖರೆ.

ಈ ‘ದೇವರು’ ಯಾರಿಗಾದರೂ ಎಲ್ಲೇ ಆದರೂ ಹೇಗೇ ಇದ್ದರೂ ಬರಬಹುದು. ವಾಹನಗಳನ್ನು ಚಲಾಯಿಸುವಾಗ ಬಂದರಂತೂ ಪರಿಣಾಮ ಘೋರ. ಮಾಹಿತಿಗಳು ಪುಂಖಾನುಪುಂಖವಾಗಿ ಹರಿದುಬರುತ್ತಿದ್ದರೆ ಒಂಟಿತನ ನೀಗುವುದೆನ್ನುವುದು ಹುಸಿ. ಹಾಗೆ ನೋಡಿದರೆ ಸುದ್ದಿ ಸುನಾಮಿಯಿಂದ ಒಬ್ಬಂಟಿತನ, ಉದ್ವೇಗ ಮತ್ತೂ ಹೆಚ್ಚುವುದು. ಆನೆಯಿಂದ ಆಳನ್ನು ರಕ್ಷಿಸುವವ ಒಬ್ಬನೇ, ದೃಶ್ಯ ಕ್ಲಿಕ್ಕಿಸುವವರು ಐವರು!

ಯಾವುದೇ ಸಾಧನ, ಪರಿಕರ ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಒಳಿತು-ಕೆಡುಕು ಅದನ್ನು ಬಳಸುವುದನ್ನೇ ಅವಲಂಬಿಸಿದೆ. ಮನುಷ್ಯ ಸ್ವಭಾವತಃ ಚಿತ್ತಭ್ರಮಣೆ, ಮನಸ್ಸಿನ ಚಾಪಲ್ಯಕ್ಕೆ ಸುಲಭವಾಗಿ ಆಕರ್ಷಿತನಾಗುತ್ತಾನೆ. ಮಾದಕವಸ್ತು, ಜೂಜಿನಂತಹ ವ್ಯಸನಗಳಂತೆ ಮಾಹಿತಿ ದಾಹವೂ. ಮೈಮೇಲೆ ಬರುವ ‘ಮಾಹಿತಿ ದೇವರ’ ಉಪಟಳ ಬಹುಮುಖಿ. ಪ್ರಥಮತಃ ಎದುರಿಗಿರುವವರು ದೂರವಾಗಿ, ದೂರವಿರುವವರು ಹತ್ತಿರವಾಗಿರುತ್ತಾರೆ! ತನ್ನ ಕುಟುಂಬದವರೊಂದಿಗೆ ಹೆಚ್ಚಿನ ಸಮಯವಿದ್ದರೆ ಅಸೂಯೆಯಿರಬೇಕು ಈ ‘ದೈವ’ಕ್ಕೆ. ರಕ್ತದೊತ್ತಡ ಏರಿಕೆ, ನಿದ್ರಾಹೀನತೆ, ಮುಖಚರ್ಯೆಯಲ್ಲಿ ಅತಿ ಹಿಗ್ಗು ಅಥವಾ ಅತಿ ಕುಗ್ಗು ಎದ್ದುಕಾಣುವುದು. ಬೆರಳ ತುದಿಯಿಂದ ಕೊನೆಗಾಣದ ಮೆಸೇಜ್‍ಗಳನ್ನು ಇಳಿಬೀಳಿಸುವಾ ಗಲಂತೂ ವ್ಯಕ್ತಿ ಅದೃಶ್ಯ ಜಾದೂಗಾರ ನಿಯಂತ್ರಿಸುವ ಮಾಯಾ ದರ್ಪಣದ ಮುಂದೆ ಗರಬಡಿದಂತೆ ತೋರುತ್ತಾನೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುವುದು. ಕರೆ ರವಾನೆ, ಸ್ವೀಕಾರ ಹೊರತಾಗಿ ಯಾವುದೇ ಸಂಗತಿಗಳಲ್ಲಿ ಆಸಕ್ತಿ ಕುಂದುತ್ತದೆ. ದೃಷ್ಟಿದೋಷ, ಆಯಾಸ, ಕುತ್ತಿಗೆ, ಬೆನ್ನು, ಮಣಿಕಟ್ಟಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ವ್ಯಕ್ತಿ ಯಾವ ಹಂತ ತಲುಪಬಹುದೆಂದರೆ, ನಿಮಿಷ ಮೊಬೈಲ್ ರಿಂಗಣಿಸದಿದ್ದರೆ ತಾನೇ ಕರೆ ಮಾಡಿ ಹಲೋ ಎನ್ನಬಹುದು! ಅತ್ತ ಕರೆ ಸ್ವೀಕರಿಸಿದವರಿಗೂ ಇದೇ ಬಗೆಯ ‘ದೇವರು’ ಮೈಮೇಲಿರುತ್ತದೆಂದು ಬೇರೆ ಹೇಳಬೇಕಿಲ್ಲ.

ಅಂದಹಾಗೆ ಅತ್ತ ಕಡೆಯವರು ಎಲ್ಲ ಅಗತ್ಯ ವಿವರ ನೀಡಿದ್ದರೂ ಇತ್ತ ಕಡೆಯಿಂದ ಮತ್ತೆ ಮತ್ತೆ ‘ಇನ್ನೇನು?’, ‘ಆಮೇಲೆ ಫೋನಾಯಿಸುವೆ’, ‘ಫೋನ್ ಮಾಡು’ ಮುಂತಾದ ಉದ್ಗಾರಗಳು ನಿಲ್ಲುವುದೇ ಇಲ್ಲ. ವಿಜ್ಞಾನ ಅಂಗೈನಲ್ಲಿ ವಿಶ್ವದರ್ಶನ ಮಾಡಿಸಿಕೊಟ್ಟಿದೆ. ಅತಳ, ವಿತಳ, ಪಾತಾಳದಲ್ಲಿ ಯಾವುದೇ ಸುದ್ದಿ ಅಡಗಿರಲಿ ಬೆಳಕಿನಷ್ಟೇ ವೇಗದಲ್ಲಿ ನಮ್ಮತ್ತ ಲಗ್ಗೆಯಿಡುವುದು ಸರಿ. ಆದರೆ ರಾಶಿ ರಾಶಿ ಕಥೆ, ಕಗ್ಗ, ಅಂಕಿಅಂಶಗಳನ್ನೆಲ್ಲ ಇಟ್ಟುಕೊಂಡು ಮಾಡಬೇಕಾದ್ದೇನು? ಒಂದು ದಿನದಲ್ಲಿ ಇಪ್ಪತ್ತನಾಲ್ಕು ತಾಸುಗಳು ಮಾತ್ರ ತಾನೆ?

ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದರೆ ನಾಳೆಗಳ ಬಗೆಗಿನ ಅಮೂಲ್ಯ ಯೋಜನೆ, ಕನಸುಗಳು ಕಳೆದು ಹೋಗುತ್ತವೆ. ಬೆಳಕಿಲ್ಲದ ಹಾದಿಯಲ್ಲಾದರೂ ಸಾಗಬಹುದು. ಆದರೆ ಕನಸಿಲ್ಲದ ಹಾದಿಯಲ್ಲಿ? ವಿಶ್ವಮಾನ್ಯ ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೀನ್ ‘ತಂತ್ರಜ್ಞಾನವು ಮನುಷ್ಯರ ಪರಸ್ಪರತೆಯನ್ನು ಹಿಂದಿಕ್ಕಿ, ಜಗತ್ತು ಎಲ್ಲಿ ಮೂರ್ಖರ ಪೀಳಿಗೆ ಹೊಂದೀತೋ ಎನ್ನುವ ಆತಂಕ ನನಗೆ’ ಎಂದಿದ್ದರು. ಅವರು ಕಾಲವಾದ ಏಳು ದಶಕಗಳೊಳಗೆ ಅವರು ಪಟ್ಟ ಭಯಕ್ಕೆ ಸಮರ್ಥನೆಯೇ?

ಮಾಹಿತಿ ದೇವರಿಂದ ಮುಕ್ತರಾಗುವುದು ತ್ರಾಸ, ಆದರೆ ಸಾಧ್ಯ. ಮೊಬೈಲ್ ಹೊರತಾಗಿ ದಿನಮಾನ ಗಳನ್ನು ಅನುಸಂಧಾನಿಸುವಂತೆ ಮೆದುಳನ್ನು ತರಬೇತುಗೊಳಿಸುವುದೇ ರಾಜಮಾರ್ಗ. ಮುಖ್ಯವಾದ ಕಾರ್ಯಗಳಲ್ಲಿ ತೊಡಗುವಾಗ ಮೊಬೈಲ್ ಆಫ್ ಮಾಡುವುದೇನು ಘನ ಸಾಹಸವೇ? ಮೊಬೈಲ್ ಅನಿವಾರ್ಯವಾಗದ ಗಹನವಾದ ಅದೆಷ್ಟೋ ಕೆಲಸಗಳುಂಟು. ಹಾಗಾಗಿ ಹೊರಗೆ ಹೊರಡುವಾಗ ಅದನ್ನು ಸಾಧ್ಯವಾದಷ್ಟು ಮನೆಯಲ್ಲೇ ಇರಿಸಿದರೆ ಯೋಜಿತ ದಿನಚರಿ ಸರಾಗ. ಮೊದಲಿನ ಉತ್ತಮ ಹವ್ಯಾಸಗಳಲ್ಲಿ, ನೆರೆಹೊರೆಯವರೊಡನೆ ಉಭಯಕುಶಲೋಪರಿಯಲ್ಲಿ, ವ್ಯಾಯಾಮದಲ್ಲಿ, ಓದು ಬರಹದಲ್ಲಿ ತನ್ಮಯರಾದರೆ ‘ಮಾಹಿತಿ ದೇವರು’ ನಿಸ್ಸಂದೇಹವಾಗಿ ಶಾಂತವಾಗುವುದು. ತುರ್ತು ಸಂದರ್ಭಗಳಿದ್ದಾಗ್ಯೂ ಇಷ್ಟು ನಿಮಿಷ ಎಂದು ಟೈಮರ್ ನಿಗದಿಪಡಿಸಿಕೊಂಡರೂ ಆಯಿತು, ಬಳಕೆ ನಿಯಂತ್ರಿಸಬಹುದು.

ಗಮನಿಸಬೇಕಿದ್ದು ಇಲ್ಲೂ ಒಂದಿದೆ. ಮಾತೆಯೊಬ್ಬಳು ತನ್ನ ಕೂಸಿಗೆ ಮೊಲೆಯುಣಿಸುವ ಸಮಯಕ್ಕೆ ಸ್ಮಾರ್ಟ್ ಫೋನಿನಲ್ಲಿ ಅಲಾರ್ಮ್ ಇಟ್ಟಿರುತ್ತಾಳೆ. ಆಗಿದ್ದೇ ಬೇರೆ. ಅಲಾರ್ಮ್ ಸದ್ದಿಗೆ ಮಗು ಬೆದರುತ್ತದೆ. ಅದನ್ನು ಸಂತೈಸಲು ಆಕೆಗೆ ಅರ್ಧ ತಾಸೇ ಹಿಡಿಯುತ್ತದೆ. ಒಂದು ಮೌಲಿಕ ತೀರ್ಮಾನಕ್ಕೆ ಬರುತ್ತಾಳೆ: ಅರೆ! ಫೋನ್ ಎಷ್ಟೇ ಸ್ಮಾರ್ಟ್ ಆಗಲಿ, ಅದಕ್ಕೆ ಕರುಳಿಲ್ಲ. ತನಗಿದೆ. ಹಾಗಾಗಿ ನಾಳೆಯಿಂದ, ಜೈವಿಕ ಗಡಿಯಾರವಾದ ತಾನೇ ಮಮತೆಯಿಂದ ಕೂಸನ್ನು ಎಚ್ಚರಿಸುವೆ. ‘ಮಾಹಿತಿ ದೇವರು’ ಎರಗುವುದನ್ನು ತಪ್ಪಿಸಲು ಇದಕ್ಕೂ ಬೇರೆ ಸಂಕಲ್ಪವುಂಟೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT