ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ವಿತ್ತೀಯ ಕೊರತೆ: ಹೆಚ್ಚುತ್ತಿದೆ ಭಾರ

ಈ ಭಾರವನ್ನು ಜೀರ್ಣಿಸಿಕೊಳ್ಳುವುದು ಅರ್ಥವ್ಯವಸ್ಥೆಗೆ ಖಂಡಿತ ಸುಲಭವಲ್ಲ
Last Updated 14 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದೇ ಒಂದರಂದು ಮಂಡಿಸಿದ 2021-22ನೇ ಸಾಲಿನ ಬಜೆಟ್‌ನಲ್ಲಿ, ಒಟ್ಟು ವಿತ್ತೀಯ ಕೊರತೆಯ ಪ್ರಮಾಣವು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 6.8ರಷ್ಟಾಗ ಬಹುದೆಂದು ಅಂದಾಜು ಮಾಡಲಾಗಿದೆ. ಇದು 2025-26ರ ಹೊತ್ತಿಗೆ ಶೇ 4.5ಕ್ಕೆ ಇಳಿಯಬಹುದೆಂದು ಸಚಿವೆ ನಿರೀಕ್ಷಿಸಿದ್ದಾರೆ. ಈ ತನಕ ಧಾರಾಳವಾಗಿ ಕೇಂದ್ರ ಸರ್ಕಾರದೊಂದಿಗೆ ಸಹಕರಿಸುತ್ತಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತನ್ನ ನೀತಿಯನ್ನು ಇನ್ನಷ್ಟು ಸಡಿಲಿಸಿ, ಆರ್ಥಿಕ ಪುನಶ್ಚೇತನ ಮತ್ತು ಅಭಿವೃದ್ಧಿ ಸಾಧಿಸಲು ಸರ್ಕಾರಕ್ಕೆ ನೆರವಾಗುವ ಔದಾರ್ಯ ತೋರಿಸಬೇಕಾಗಿದೆ.

ಶಕ್ತಿಕಾಂತ ದಾಸ್ ಆರ್‌ಬಿಐ ಗವರ್ನರ್ ಆಗಿರುವ ತನಕ ಸಹಕಾರದ ಪ್ರವಾಹವೇ ಕೇಂದ್ರ ಸರ್ಕಾರದತ್ತ ಹರಿಯುವುದರಲ್ಲಿ ಅನುಮಾನವೇ ಇಲ್ಲ ಎನ್ನುವುದು ದಾಖಲೆಯಾದ ಸತ್ಯ. ಈಗ ವಿತ್ತೀಯ ಕೊರತೆಯ ಪ್ರಮಾಣ ಜಿಡಿಪಿಯ ಶೇ 3ರಷ್ಟಕ್ಕೆ ಸೀಮಿತವಾಗಿರಬೇಕೆಂದು ಘೋಷಿಸುತ್ತಿರುವ ‘ವಿತ್ತೀಯ ಹೊಣೆಗಾರಿಕೆ ಮತ್ತು ನಿರ್ವಹಣೆ’ ಕಾನೂನಿನಲ್ಲಿ (ಎಫ್.ಆರ್.ಬಿ.ಎಂ) ಸರ್ಕಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ತಿದ್ದುಪಡಿ ಮಾಡಬೇಕಾಗಿದೆ. ಬಹುಮತದ ಬಲ ಇರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಇದು ಸಮಸ್ಯೆಯೇ ಅಲ್ಲ.

ಎಲ್ಲ ಉದ್ದೇಶಗಳಿಗೆ ತಗಲುವ ಸಾರ್ವಜನಿಕ ವೆಚ್ಚ ಮತ್ತು ಎಲ್ಲ ಮೂಲಗಳಿಂದ ಬರುವ ಒಟ್ಟು ವರಮಾನದ ನಡುವಿನ ಅಂತರಕ್ಕೆ ವಿತ್ತೀಯ ಕೊರತೆಯೆಂಬ ಹೆಸರು. ಸಹಜವಾಗಿ ಈ ಕೊರತೆಯನ್ನು ಭರಿಸಲು ಆರ್‌ಬಿಐ ಸಹಕರಿಸಿದಾಗ ಹಣದ ಚಲಾವಣೆಯಲ್ಲಿ ಹೆಚ್ಚಳವಾಗುತ್ತದೆ. ಜಿಡಿಪಿ ಮತ್ತು ವಿತ್ತೀಯ ಕೊರತೆಯ ಅನುಪಾತದಲ್ಲಿ ಕಾಣುವ ಏರಿಳಿತವು ಆರ್ಥಿಕ ಸ್ಥಿತಿಗತಿಯನ್ನು ತೋರಿಸುವ ಪ್ರಧಾನ ಸೂಚಿಗಳಲ್ಲೊಂದು.

1970ರ ದಶಕದಲ್ಲೇ ಆರ್ಥಿಕ ತಜ್ಞ ಬಿ.ಆರ್.ಶೆಣೈ ಅವರು ಸಣ್ಣ ಗಾತ್ರದ ಬಜೆಟ್ ಕೊರತೆಯ ಬದಲಾಗಿ ದೊಡ್ಡ ಗಾತ್ರದ ವಿತ್ತೀಯ ಕೊರತೆಯತ್ತ ಗಮನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದರು. ಆದರೆ ಇದಕ್ಕೆ ಕಾಸಿನ ಬೆಲೆ ಬರಲಿಲ್ಲ. ಜನಸಾಮಾನ್ಯರ ಬದುಕಿಗೆ ದೊಡ್ಡ ಪ್ರಹಾರ ನೀಡಬಲ್ಲ ವಿತ್ತೀಯ ಕೊರತೆಯನ್ನು ನಿಯಂತ್ರಿಸುವಂತೆ ಸಲಹೆ ನೀಡಿದ ಶೆಣೈ ಇಂದು ನಮ್ಮ ಜತೆಗೆ ಇಲ್ಲದಿರುವಾಗ, 1991ರಿಂದ ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಒತ್ತಡಕ್ಕೆ ಒಳಗಾಗಿರುವ ಕೇಂದ್ರ ಸರ್ಕಾರವು ವಿತ್ತೀಯ ಕೊರತೆಯನ್ನು ನಿಯಂತ್ರಿಸಬೇಕಾಗಿದೆ.

ಕೇಂದ್ರದ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಐಎಂಎಫ್‌ನ ಒತ್ತಡಕ್ಕೆ ಒಳಗಾಗಿಯೇ, 1996-97ನೇ ಸಾಲಿನ ಬಜೆಟ್‌ನಲ್ಲಿ ಬಜೆಟ್ ಕೊರತೆಗೆ ಮಹತ್ವವನ್ನು ನೀಡದೆ, ವಿತ್ತೀಯ ಕೊರತೆಯ ಮಹತ್ವವನ್ನು ಮೇಲ್ನೋಟಕ್ಕಾದರೂ ಪರಿಗಣಿಸದೆ ಬೇರೆ ದಾರಿಯಿರಲಿಲ್ಲ. ಆದರೆ ಎಫ್.ಆರ್.ಬಿ.ಎಂ ಪ್ರಕಾರ, ಹಲವಾರು ಕಾರಣಗಳಿಂದ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 3ಕ್ಕೆ ಸೀಮಿತ ಗೊಳಿಸುವ ಮತ್ತು ರೆವಿನ್ಯೂ ಕೊರತೆಯನ್ನು (ಸಾಮಾನ್ಯ ವಾರ್ಷಿಕ ವೆಚ್ಚ, ಕೇಂದ್ರ ಸರ್ಕಾರಿ ನೌಕರರ ವೇತನ, ಸಬ್ಸಿಡಿಗಳು ಮತ್ತು ಸಾಲಗಳ ಮೇಲಿನ ಬಡ್ಡಿ ಭಾರ ಸೇರಿದಂತೆ) ಶೂನ್ಯಕ್ಕೆ ಇಳಿಸುವುದು ಸರ್ಕಾರಕ್ಕೆಸಾಧ್ಯವಾಗಿಲ್ಲ. ಹೀಗಾಗಿ, ಚಲಾವಣೆಯಲ್ಲಿರುವ ಹಣದ ಪ್ರಮಾಣ ಜಾಸ್ತಿಯಾಗಿ, ಇಡೀ ಸಾಮಾಜಿಕ ವ್ಯವಸ್ಥೆಯ ವೈರಿಯಾದ ಬೆಲೆಯೇರಿಕೆಯ ಶಕ್ತಿಗಳಿಗೆ ಆಗಾಗ ಚಾಲನೆ ಬಂದುಬಿಡುತ್ತದೆ.

ಯುಪಿಎ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದ ಚಿದಂಬರಂ 2008-09ರ ಬಜೆಟ್‌ನಲ್ಲಿ ಮತ ಬೇಟೆಗೋಸ್ಕರ ಹೆಚ್ಚು ಕಡಿಮೆ ₹ 71 ಸಾವಿರ ಕೋಟಿಯ ಕೃಷಿ ಸಾಲ ಮನ್ನಾ ಮಾಡಿದಾಗ ವಿತ್ತೀಯ ಕೊರತೆಯ ಜ್ವರ ಏರಿತ್ತು. ಅದರ ಬೆನ್ನಲ್ಲೇ, ಅವರ ಉತ್ತರಾಧಿಕಾರಿಯಾಗಿದ್ದ ಪ್ರಣವ್ ಮುಖರ್ಜಿ ಮಹಾ ಆರ್ಥಿಕ ಹಿಂಜರಿತದ ಹೊಡೆತ ಎದುರಿಸಲು ಮೂರು ಸುತ್ತಿನಲ್ಲಿ ಭಾರಿ ಪ್ರಮಾಣದ ವಿತ್ತೀಯ ಉತ್ತೇಜನಗಳನ್ನು ಘೋಷಿಸಬೇಕಾಯಿತು. 2010ರ ಮಾರ್ಚ್ ಅಂತ್ಯಕ್ಕೆ ವಿತ್ತೀಯ ಕೊರತೆ ಶೇ 6.5ರಷ್ಟಾಗಿ ಎಫ್.ಆರ್.ಬಿ.ಎಂ ಕಾನೂನು ಮೂಲೆಗೆ ಸರಿದಿತ್ತು, ಬೆಲೆಯೇರಿಕೆ ಆಕಾಶದತ್ತ ಮುಖ ಮಾಡಿತ್ತು. ನಂತರ ಮತ್ತೆ ಹಣಕಾಸು ಸಚಿವರಾಗಿದ್ದ ‘ಸ್ನೇಹಿತ-ವೈರಿ’ ಚಿದಂಬರಂ ಇದನ್ನು ಪ್ರಚುರಪಡಿಸಿದ್ದರು.

ರಾಷ್ಟ್ರಪತಿ ಭವನದಲ್ಲಿದ್ದು ಮುಜುಗರ ಅನುಭವಿಸಿದ್ದ ಪ್ರಣವ್ ಮುಂದೆ ವಿದೇಶ ಪ್ರವಾಸ ದಲ್ಲಿದ್ದಾಗ ಇದನ್ನು ಅಲ್ಲಗಳೆದಾಗ, ವಿತ್ತೀಯ ಕೊರತೆಯ ಪ್ರತಾಪದ ದರ್ಶನವಾಗಿದ್ದಂತೂ ಹೌದು. 2014ರ ಮಹಾಚುನಾವಣೆಯಲ್ಲಿ ಯುಪಿಎ ಸೋಲಲು ಬೆಲೆಯೇರಿಕೆಯೂ ಕಾರಣವಾಯಿತೆಂದು ಮನಮೋಹನ ಸಿಂಗ್ ಒಪ್ಪಿಕೊಳ್ಳಬೇಕಾಯಿತು.

ಈಗಂತೂ ಕೊರೊನಾ ಹಾವಳಿಯ ಹೊಡೆತದ ಜತೆಗೆ ಹಣದುಬ್ಬರ ತನ್ನ ಶಕ್ತಿ ಪ್ರದರ್ಶನ ಮಾಡುತ್ತಿದೆ. ಅಧಿಕ ವಿತ್ತೀಯ ಕೊರತೆಯನ್ನು ಭರಿಸಲು ಬೃಹತ್ ಹೂಡಿಕೆ ಹಿಂತೆಗೆತ ಒಂದು ಮಾರ್ಗ ಎನ್ನುವುದು ಸರ್ಕಾರದ ಭಾವನೆ. 2021-22ರ ಬಜೆಟ್ ಭಾಷಣ ತಿಳಿಸಿದಂತೆ, ಹೂಡಿಕೆ ಹಿಂತೆಗೆತದ ಮೂಲಕ ₹ 1.75 ಲಕ್ಷ ಕೋಟಿ ವರಮಾನ ಸಂಗ್ರಹಿಸಲು ನೀತಿ ಆಯೋಗ ಯೋಜನೆ ರೂಪಿಸಬೇಕಾಗಿದೆ.

ನಿರ್ಮಲಾ ಅವರೇ ಹೇಳಿದಂತೆ ‘ಜಡ ಆಸ್ತಿಗಳು ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡಲಾರವು’. ಇಂಥ ಜಡ ಆಸ್ತಿಗಳು ಖಾಸಗಿ ರಂಗವನ್ನು ಆಕರ್ಷಿಸಲು ಸಾಧ್ಯವೇ? ವಿತ್ತೀಯ ಕೊರತೆಯ ಭಾರವನ್ನುಜೀರ್ಣಿಸಿಕೊಳ್ಳುವುದು ಅರ್ಥವ್ಯವಸ್ಥೆಗೆ ಖಂಡಿತ ಸುಲಭವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT