ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ತಾಯಂದಿರಿಗೆ ಸಾಂತ್ವನ ಹೇಳಬಲ್ಲಿರಾ?

21ನೆಯ ಶತಮಾನದ ಭಾರತೀಯ ಸಮಾಜವು ಪ್ರೀತಿಯನ್ನು ನಿರಾಕರಿಸುವ ಹಕ್ಕನ್ನೂ ಮಹಿಳೆಯಿಂದ ಕಸಿದುಕೊಂಡಿದೆಯೇ ಎಂಬ ಪ್ರಶ್ನೆ ಈಗ ಎದುರಾಗಿದೆ
Published 23 ಮೇ 2024, 21:30 IST
Last Updated 23 ಮೇ 2024, 21:30 IST
ಅಕ್ಷರ ಗಾತ್ರ

ದೇಶದ ಆಡಳಿತ ವ್ಯವಸ್ಥೆಯಲ್ಲಿ ಹಾಗೂ ನ್ಯಾಯ ವ್ಯವಸ್ಥೆ ಯಲ್ಲಿ ಮಹಿಳಾ ಸಬಲೀಕರಣದ ಧ್ವನಿ ಗಟ್ಟಿಯಾಗಿ ಕೇಳುತ್ತಲೇ ಇದ್ದರೂ, ದಿನದಿಂದ ದಿನಕ್ಕೆ ಮಹಿಳೆಯೇ ಏಕೆ ಪಾತಕ ಕೃತ್ಯಗಳಿಗೆ ಬಲಿಯಾಗುತ್ತಿದ್ದಾಳೆ? ಈ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳದೇ ಹೋದರೆ ಬಹುಶಃ ನಮ್ಮ ಪ್ರಜ್ಞೆ ಸತ್ತಿದೆ ಎಂದೇ ಹೇಳಬೇಕು.

ಲೈಂಗಿಕ ದೌರ್ಜನ್ಯ, ತಾರತಮ್ಯ, ಅತ್ಯಾಚಾರಗಳನ್ನು ದಿನನಿತ್ಯ ವರದಿ ಮಾಡುವ ಸರ್ಕಾರದ ಅಧಿಕೃತ ಸಂಸ್ಥೆಗಳನ್ನೂ ಕಾಡಬೇಕಾದ ಪ್ರಶ್ನೆ ಇದು. ಎಲ್ಲಕ್ಕಿಂತಲೂ ಮಿಗಿಲಾಗಿ ಬೇಟಿ ಪಢಾವೋ ಬೇಟಿ ಬಚಾವೋ ಘೋಷಣೆಯಿಂದ ಗೃಹಲಕ್ಷ್ಮಿ, ಶಕ್ತಿ ಯೋಜನೆಗಳವರೆಗೆ ವಿಸ್ತರಿಸಿರುವ ಆಳ್ವಿಕೆಯ ಅಂಗಳದಲ್ಲಿ ಧ್ವನಿಸಲೇಬೇಕಾದ ಗಹನವಾದ ಪ್ರಶ್ನೆ ಇದು.

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಕೊಡಲಾಗುವ ಹಣವನ್ನೂ ತಮ್ಮ ಧಾರ್ಮಿಕ ಚಟುವಟಿಕೆಗಳಿಗಾಗಿ ಕಸಿದುಕೊಳ್ಳುವ ಒಂದು ಪುರುಷಾಧಿಪತ್ಯದ ಸಮಾಜದ ನಡುವೆ ಈ ಸೂಕ್ಷ್ಮವಾದ ಪ್ರಶ್ನೆಗೆ ಉತ್ತರ ದೊರೆಯಲು ಸಾಧ್ಯವೇ?

ಹಿಂದಿನ ಎರಡು ತಿಂಗಳ ಅವಧಿಯಲ್ಲಿ ರಾಜ್ಯದ ಮೂವರು ಯುವತಿಯರು ಹತ್ಯೆಗೀಡಾಗಿದ್ದಾರೆ.
ಈ ಮೂವರಲ್ಲಿ ಇಬ್ಬರು ಮಾಡಿದ ದೊಡ್ಡ ‘ಅಪರಾಧ’ ಎಂದರೆ ಪ್ರೀತಿಸಲು ನಿರಾಕರಿಸಿದ್ದು! ಅಂದರೆ, 21ನೆಯ ಶತಮಾನದ ಭಾರತೀಯ ಸಮಾಜವು ಪ್ರೀತಿಯನ್ನು ನಿರಾಕರಿಸುವ ಹಕ್ಕನ್ನೂ ಮಹಿಳೆಯಿಂದ ಕಸಿದುಕೊಂಡಿದೆಯೇ? ನೇಹಾ, ಮೀನಾ, ಅಂಜಲಿ ಈ ಮೂವರೂ ಹೆಣ್ಣುಮಕ್ಕಳು ಬಲಿಯಾಗಿರುವುದು ಒಂದು ಕ್ರೂರ, ವಿಕೃತ ಮನಃಸ್ಥಿತಿಗೆ ಅಥವಾ ಕಾನೂನು ಪರಿಭಾಷೆಯಲ್ಲಿ ಪಾತಕಿ ಕೃತ್ಯಕ್ಕೆ ಎಂದು ಹೇಳಿದರೆ ಅದು ಅರ್ಧಸತ್ಯವಾದೀತು. ಈ ಮನಃಸ್ಥಿತಿಯ ಹಿಂದಿರುವ ಒಂದು ಸಾಮಾಜಿಕ ಆಯಾಮವನ್ನು ಗಮನಿಸದೇ ಹೋದರೆ ಕಲಿತ ಪ್ರಜ್ಞಾವಂತ ಸಮಾಜ ಇನ್ನೂ ಅಂಧಕಾರದಲ್ಲಿದೆ ಎಂದೇ ಅರ್ಥಮಾಡಿಕೊಳ್ಳಬಹುದು.

ಏಕೆಂದರೆ ಈ ಮೂರೂ ಹೀನ, ಹೇಯ, ಅಮಾನುಷ ಕೃತ್ಯಗಳನ್ನೂ ಮೀರಿಸುವಂತಹ ಪ್ರಕರಣ ಹಾಸನದಲ್ಲಿ ನಡೆದಿದೆ. ಮಹಿಳೆಯರ ಘನತೆಯ ಬದುಕಿನ ಹಕ್ಕನ್ನೇ ಕಸಿದುಕೊಂಡಿರುವ ಕಿರಾತಕ ಕೃತ್ಯಗಳು ಅಲ್ಲಿ ನಡೆದಿವೆ. ಪುರುಷಾಧಿಪತ್ಯಕ್ಕೆ ಮೂವರು ಯುವತಿಯರು ಜೀವ ತೆತ್ತಿದ್ದರೆ, ಹಾಸನದ ಪ್ರಕರಣದಲ್ಲಿ ಕಾಮತೃಷೆಯ ಪರಾಕಾಷ್ಠೆಗೆ ಅನೇಕ ಮಹಿಳೆಯರು ತಮ್ಮ ಘನತೆಯ ಬದುಕನ್ನು ಕಳೆದುಕೊಳ್ಳುವಂತಾಗಿದೆ. ಈ ಎಲ್ಲ ಸಂದರ್ಭಗಳಲ್ಲಿ ನಾಗರಿಕ ಸಮಾಜ ಯೋಚಿಸಬೇಕಿರುವುದು, ಸಮಾಜದಲ್ಲಿ ಮಹಿಳೆ ಹೊಂದಿರುವ ಸ್ಥಾನಮಾನಗಳ ಬಗ್ಗೆ. ಮಹಿಳಾ ಸಮೂಹಕ್ಕೆ ನೀಡಲಾಗುವ ಸಾಂವಿಧಾನಿಕ, ಕಾನೂನಾತ್ಮಕ ರಕ್ಷಣಾ ಕವಚಗಳನ್ನು ಸುಲಭವಾಗಿ ಭೇದಿಸುವ ತಂತ್ರಗಾರಿಕೆಯನ್ನು ಪುರುಷ ಸಮಾಜ ರೂಢಿಸಿಕೊಂಡಿರುವುದು ಈ ಪ್ರಕರಣಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಸಮಾಜದಲ್ಲಿ ನಡೆಯುವ ಪ್ರತಿಯೊಂದು ಅಪರಾಧ ವನ್ನೂ ಪಾತಕಿಗಳ ಮತೀಯ ಅಸ್ಮಿತೆಗೆ ಅನುಗುಣವಾಗಿ ಪರಾಮರ್ಶಿಸುವ ಒಂದು ವಿಕೃತ ರಾಜಕೀಯ ಪರಂಪರೆಯ ನಡುವೆಯೇ ನಾವು ಗಮನಿಸಬೇಕಾಗಿದೆ. ಈ ಪ್ರಕರಣಗಳಲ್ಲಿ ಮಹಿಳಾ ಸಂಕುಲದ ಅಸ್ತಿತ್ವ, ಅಸ್ಮಿತೆ ಹಾಗೂ ಹೆಣ್ತನದ ಘನತೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ನೇಹಾ, ಮೀನಾ ಮತ್ತು ಅಂಜಲಿ ಮೂವರೂ ತಮ್ಮ ಸಾಂವಿಧಾನಿಕ ಹಕ್ಕುಗಳಿಂದ ವಂಚಿತರಾಗಿರುವುದು ಸ್ಪಷ್ಟವಾಗಿದೆ. ತನ್ನ ಬದುಕನ್ನು ರೂಪಿಸಿಕೊಳ್ಳಲು ಸ್ವಇಚ್ಛೆಯಂತೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಭೂತ ಹಕ್ಕು ಸಾಂವಿಧಾನಿಕವಾಗಿ ಪ್ರಾಪ್ತವಾಗಿದೆ. ಆದರೆ ಈ ಗ್ರಾಂಥಿಕ ಹಕ್ಕುಗಳನ್ನು ನಿರಾಕರಿಸಿದ ಪಕ್ಷದಲ್ಲಿ ಬದುಕುವ ಹಕ್ಕನ್ನೂ ಕಸಿದುಕೊಳ್ಳುವಂತಹ ಒಂದು ಸಮಾಜ ನಮ್ಮ ನಡುವೆ ಇರುವುದು ಏನನ್ನು ಸೂಚಿಸುತ್ತದೆ?

ಇದೇ ಪ್ರಶ್ನೆಯನ್ನು ಹಾಸನ ಪ್ರಕರಣಕ್ಕೆ ವಿಸ್ತರಿಸಿದಾಗ, ತಮ್ಮ ನಿತ್ಯ ಬದುಕಿನ ಜೀವನಾವಶ್ಯಕತೆ ಗಳನ್ನು ಪೂರೈಸಿಕೊಳ್ಳಲು ಅಧಿಕಾರ ಕೇಂದ್ರಗಳನ್ನು, ಆಡಳಿತ ಕೇಂದ್ರಗಳನ್ನು ಸಂಪರ್ಕಿಸುವ ಹೆಣ್ಣುಮಕ್ಕಳೂ ತಮ್ಮ ಘನತೆಯ ಬದುಕಿನ ಹಕ್ಕುಗಳನ್ನು ಕಳೆದುಕೊಂಡಿರುವುದು ಕಂಡುಬರುತ್ತದೆ.

ಸರ್ಕಾರವು ಮಹಿಳೆಯರ ಜೀವನೋಪಾಯಕ್ಕಾಗಿ ನೀಡುವ ಅಲ್ಪಹಣವನ್ನು ಕಸಿದುಕೊಳ್ಳುವುದಕ್ಕೂ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗಾಗಿ ಅಧಿಕಾರಸ್ಥರನ್ನು ಸಂಪರ್ಕಿಸುವ ಮಹಿಳೆಯರನ್ನು ಸರಕುಗಳಂತೆ ಬಳಸಿಕೊಳ್ಳುವುದಕ್ಕೂ ತಾತ್ವಿಕವಾಗಿ ಯಾವ ವ್ಯತ್ಯಾಸವನ್ನು ಕಾಣಲು ಸಾಧ್ಯ? ಇವು ಮಹಿಳೆಯನ್ನು ವ್ಯಕ್ತಿಗತವಾಗಿ, ಸಾಮೂಹಿಕವಾಗಿ ಅಧೀನದಲ್ಲಿರಿಸುವ ಒಂದು ಪಿತೃಪ್ರಧಾನ ತಂತ್ರಗಾರಿಕೆಯಾಗೇ ಕಾಣುವುದಿಲ್ಲವೇ? ಒಂದರಲ್ಲಿ ಜೀವ ಹರಣವಾಗುತ್ತದೆ ಮತ್ತೊಂದರಲ್ಲಿ ಜೀವನದ ಹರಣವಾಗುತ್ತದೆ.

ಒಂದು ಮಾನಗೆಟ್ಟ ಪುರುಷಾಧಿಪತ್ಯ ವ್ಯವಸ್ಥೆಯಲ್ಲಿ ಮಾತ್ರ ಇಂತಹ ಹೇಯ ಕೃತ್ಯ, ಅಮಾನುಷ ನಡೆಯನ್ನು
ಸಹಿಸಿಕೊಳ್ಳಲು ಸಾಧ್ಯ. ಈ ನೊಂದ ಮಹಿಳೆಯರಿಗೆ, ಮಕ್ಕಳನ್ನು ಕಣ್ಣೆದುರಿನಲ್ಲೇ ಕಳೆದುಕೊಂಡ ತಾಯಂದಿರಿಗೆ ಸಾಂತ್ವನ ಹೇಳುವ ಕ್ಷಮತೆ ಅಥವಾ ನೈತಿಕ ಅರ್ಹತೆ ನಮ್ಮ ಸಮಾಜಕ್ಕಿದೆಯೇ? ಈ ಪ್ರಶ್ನೆ ನಾಗರಿಕರನ್ನು ಕಾಡಲೇಬೇಕಿದೆ.

ಇದು ಬರೀ ಕಾನೂನು, ಪೊಲೀಸು, ತನಿಖಾ ವಲಯವನ್ನು ಕಾಡುವ ಅಥವಾ ನ್ಯಾಯ ವ್ಯವಸ್ಥೆಯ ನಿಷ್ಕರ್ಷೆಗೆ ಒಳಗಾಗಬೇಕಾದ ಪ್ರಶ್ನೆಯಲ್ಲ. ಇದು ಆಧುನಿಕ ಸಮಾಜವನ್ನು ನಿರಂತರವಾಗಿ ಕಾಡಬೇಕಾದ ನೈತಿಕತೆ ಮತ್ತು ಮಾನವೀಯತೆಯ ಪ್ರಶ್ನೆ. ರಾಜಕೀಯ ಪಕ್ಷಗಳಿಗೆ ಇದು ಮಾರುಕಟ್ಟೆಯ ಸರಕು. ಆದರೆ ನಾಗರಿಕರಿಗೆ ಇದು ಮನೆಯೊಳಗಿನ ಒಂದು ಬಿಕ್ಕಟ್ಟು ಎಂದೇ ತೋರಬೇಕು. ಆಗ ಮಾತ್ರವೇ ನಾಗರಿಕತೆಗೂ ಒಂದು ಅರ್ಥ ಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT