ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರಶಕ್ತಿ ನಗರ: ದೂರದ ಮಾತು?

ತಾರಸಿ ಸೋಲಾರ್ ವಿದ್ಯುತ್ ಉತ್ಪಾದನಾ ಯೋಜನೆಯಲ್ಲಿನ ಲೋಪಗಳನ್ನು ಸರಿಪಡಿಸಿ, ಅದನ್ನು ಜನಸ್ನೇಹಿ ಆಗಿಸಬೇಕಾದ ಅನಿವಾರ್ಯ ಇದೆ
Last Updated 21 ಜುಲೈ 2020, 19:31 IST
ಅಕ್ಷರ ಗಾತ್ರ

ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪ್ರತೀ ರಾಜ್ಯದಲ್ಲಿ ಕನಿಷ್ಠ ಒಂದಾದರೂ ಸೌರಶಕ್ತಿ ನಗರ ಇರಬೇಕು, ಅದು ತನಗೆ ಬೇಕಾದ ಸಂಪೂರ್ಣ ವಿದ್ಯುತ್‍ ಅನ್ನು ತಾರಸಿ ಮೇಲಿನ ಸೋಲಾರ್ ವ್ಯವಸ್ಥೆಯಿಂದಲೇ ಪಡೆಯುವಂತಿರಬೇಕು ಎಂಬ ಆಶಯ ವ್ಯಕ್ತಪಡಿಸಿದ್ದು ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಅದು ರಾಜಧಾನಿ ಅಥವಾ ಪ್ರವಾಸಿ ತಾಣವಾಗಿದ್ದರೆ ಸೂಕ್ತ ಎಂದೂ ಹೇಳಿ, ಇನ್ನೆರಡು ವರ್ಷಗಳಲ್ಲಿ ತಾರಸಿ ಸೋಲಾರ್ ವ್ಯವಸ್ಥೆಯಿಂದ 40 ಗಿಗಾವಾಟ್‍ಗಳಷ್ಟು ವಿದ್ಯುತ್ ಉತ್ಪಾದನೆಯ ಗುರಿ ಸಾಧಿಸಲು 2015ರ ರಾಷ್ಟ್ರೀಯ ಸೋಲಾರ್ ಮಿಶನ್‍ನ ಗುರಿಯನ್ನು ಅಧಿಕಾರಿಗಳಿಗೆ ನೆನಪಿಸಿದ್ದರು.

ಯೋಜನೆಯಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದ ಒಟ್ಟು 175 ಗಿ.ವಾ. ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದು, ಅದರಲ್ಲಿ ಸೌರಶಕ್ತಿಯ ಪಾಲು 100 ಗಿ.ವಾ.ನಷ್ಟಿದೆ. ಯೋಜನೆ ಮುಗಿಯಲು ಎರಡೇ ವರ್ಷ ಬಾಕಿಯಿದ್ದು, ನಮ್ಮ ಉತ್ಪಾದನಾ ಸಾಮರ್ಥ್ಯವು ಹಾಕಿಕೊಂಡ ಗುರಿಗಿಂತ ತೀರಾ ದೂರದಲ್ಲಿದೆ ಎಂಬುದು ತಜ್ಞರ ಅಭಿಮತ.

ಮಿನಿಸ್ಟ್ರಿ ಆಫ್ ನ್ಯೂ ಆ್ಯಂಡ್ ರಿನ್ಯೂಅಬಲ್ ಎನರ್ಜಿಯ (ಎಂಎನ್ಆರ್‌ಇ) ದತ್ತಾಂಶದಂತೆ, ಕಳೆದ ವರ್ಷದ ಕೊನೆಗೆ ನಮ್ಮ ರೂಫ್‍ ಟಾಪ್ ಸೋಲಾರ್ (ಆರ್‌ಟಿಎಸ್) ವ್ಯವಸ್ಥೆಯ ಸ್ಥಾಪಿತ ಸಾಮರ್ಥ್ಯ 4.4 ಗಿ.ವಾ.ನಷ್ಟಿದ್ದು, ಪಡೆದ ವಿದ್ಯುತ್‌ನ ಪ್ರಮಾಣ ಕೇವಲ 2.3 ಗಿ.ವಾ. ಉಳಿದ ಅವಧಿಯಲ್ಲಿ 40 ಗಿ.ವಾ. ಉತ್ಪಾದಿಸುವ ಗುರಿ ತಲುಪುವುದು ಆಗದ ಮಾತು ಎಂದಿರುವ ಇಂಧನ ಇಲಾಖೆಯ ಉಪಕಾರ್ಯದರ್ಶಿ, ಬೃಹತ್ ಸೋಲಾರ್ ಪಾರ್ಕ್‌ಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದ್ದಾರೆ.

ಜರ್ಮನಿ ಶೇ 70, ಆಸ್ಟ್ರೇಲಿಯಾ ಶೇ 57, ಬ್ರೆಜಿಲ್ ಶೇ 50 ಮತ್ತು ಅಮೆರಿಕ ಶೇ 36ರಷ್ಟು ವಿದ್ಯುತ್ತನ್ನು ತಾರಸಿಯಿಂದಲೇ ಪಡೆಯುತ್ತಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ, ಗ್ರಿಡ್ ಸಂಪರ್ಕಿತ ತಾರಸಿ ಸೋಲಾರ್ ವಿದ್ಯುತ್ ಉತ್ಪಾದನಾ ಯೋಜನೆಯನ್ನು 2015ರಲ್ಲೇ ಪ್ರಾರಂಭಿಸಿ, ಅನುಷ್ಠಾನಕ್ಕೆ ಬೇಕಾದ ರೂಪುರೇಷೆ ನಿಗದಿ ಮಾಡಿ, ಗ್ರಾಹಕರನ್ನು ಆಕರ್ಷಿಸಲು ಹಲವು ಕ್ರಮಗಳನ್ನು ಕೈಗೊಂಡಿತ್ತು. ಆದರೆ ತಾರಸಿ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ ತಗಲುವ ದುಬಾರಿ ವೆಚ್ಚ, ಸರ್ಕಾರದಿಂದ ಶೀಘ್ರವಾಗಿ ದೊರೆಯದ ಸಬ್ಸಿಡಿ ಹಣ ಮತ್ತು ಸಾಲ ನೀಡಲು ಬ್ಯಾಂಕ್‍ಗಳು ತೋರಿಸುವ ನಿರಾಸಕ್ತಿಯಿಂದಾಗಿ ಆರ್‌ಟಿಎಸ್ ವ್ಯವಸ್ಥೆ ಸೊರಗಿ ಹೋಗಿದೆ.

ಆರ್‌ಟಿಎಸ್ ಘಟಕ ಸ್ಥಾಪನೆಗೆ ನೀಡುವ ಸಾಲವನ್ನು ಆದ್ಯತೆಯ ಸಾಲ ಎಂದು ರಿಸರ್ವ್ ಬ್ಯಾಂಕ್ ನಿಯಮ ರೂಪಿಸಿದೆಯಾದರೂ ಬ್ಯಾಂಕ್‍ಗಳು ಮಾತ್ರ ಆರ್‌ಟಿಎಸ್‌ಗೆ ಸಾಲ ನೀಡುವುದು ಅಪಾಯಕಾರಿ ಎಂಬ ನಿಲುವು ತಾಳಿವೆ. ಈ ಕಾರಣಗಳಿಂದ ಆರ್‌ಟಿಎಸ್‌ ಅಳವಡಿಕೆಗೆ ಗ್ರಾಹಕರು ಮುಂದೆ ಬರುತ್ತಿಲ್ಲ. ದೆಹಲಿ, ಮುಂಬೈ, ಚೆನ್ನೈ ನಗರಗಳ ಬೃಹತ್ ಅಪಾರ್ಟ್‌ಮೆಂಟ್‌ಗಳ ಕ್ಷೇಮಾಭಿವೃದ್ಧಿ ಸಂಘಗಳು ಆರ್‌ಟಿಎಸ್ ಘಟಕಗಳನ್ನು ಹೊಂದುವ ಹಲವು ಪ್ರಸ್ತಾವಗಳನ್ನು ಸರ್ಕಾರದ ಮುಂದಿಟ್ಟಿದ್ದವು. ಬ್ಯಾಂಕ್‍ಗಳು ಸಾಲ ನೀಡದ್ದರಿಂದ ಯೋಜನೆಗಳು ನನೆಗುದಿಗೆ ಬಿದ್ದಿವೆ.

ಕೇರಳದಲ್ಲಿ ಆರ್‌ಟಿಎಸ್ ಅಳವಡಿಸಿಕೊಂಡು ಗ್ರಿಡ್‍ಗೆ ವಿದ್ಯುತ್ ನೀಡುತ್ತಿರುವವರಿಗೆ ಯುನಿಟ್ ಅಳೆಯುವ ನೆಟ್ ಮೀಟರ್‌ಗಳನ್ನು ಎರಡು ವರ್ಷಗಳಾದರೂ ನೀಡಿಲ್ಲ. ತಮಿಳುನಾಡಿನ ಕತೆಯೂ ಇದೇ ಆಗಿದ್ದು, 2017ರಲ್ಲಿ ಸ್ಥಾಪನೆಯಾಗಿರುವ ಸಾವಿರಾರು ಗ್ರಿಡ್ ಸಂಪರ್ಕಿತ ಆರ್‌ಟಿಎಸ್‌ಗಳಿಗೆ ಇಂದಿನವರೆಗೂ ಮೀಟರ್‌ಗಳನ್ನು ಅಳವಡಿಸಲಾಗಿಲ್ಲ. ಅಲ್ಲದೆ ಗ್ರಿಡ್‍ಗೆ ನೀಡಲಾದ ವಿದ್ಯುತ್ ಯುನಿಟ್‍ಗಳ ಹಣವನ್ನೂ ನೀಡಿಲ್ಲ. ಆದರೆ ಮೊದಲ ಹಂತದ ಯೋಜನೆಯಲ್ಲಿ ದೇಶದ ಬೃಹತ್ ಆರ್‌ಟಿಎಸ್‌ಗಳ ಪೈಕಿ ಶೇ 70ರಷ್ಟನ್ನು ಹೊಂದಿರುವ ವಾಣಿಜ್ಯ ಮತ್ತು ಔದ್ಯೋಗಿಕ ವಲಯಗಳು ಸಬ್ಸಿಡಿಯನ್ನು ಪಡೆದುಕೊಂಡು, ಅಗತ್ಯವಿದ್ದಷ್ಟು ವಿದ್ಯುತ್ ಉತ್ಪಾದಿಸಿ, ಬಳಸಿ, ಹೆಚ್ಚುವರಿಯನ್ನು ಗ್ರಿಡ್‍ಗೆ ಹಾಕಿ ಅಪಾರ ಲಾಭ ಮಾಡಿಕೊಂಡಿದ್ದವು. ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುವ ವಿದ್ಯುತ್ ಯುನಿಟ್‍ನ ದರ ತೀರಾ ಜಾಸ್ತಿ ಇದ್ದುದರಿಂದ, ತಾರಸಿಯ ಮೇಲೆ ಘಟಕ ಹಾಕಿಕೊಂಡು ಅಗ್ಗವಾಗಿ ವಿದ್ಯುತ್ ಪಡೆಯುವ ವ್ಯವಸ್ಥೆಯನ್ನು ಬೃಹತ್ ಕಾರ್ಖಾನೆಗಳು ಶೀಘ್ರವಾಗಿ ಅಳವಡಿಸಿಕೊಳ್ಳುತ್ತಿದ್ದವು.

40 ಮೆಗಾವಾಟ್ ಸಾಮರ್ಥ್ಯದ ತಾರಸಿ ಘಟಕ ಹೊಂದಿರುವ ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತನಗೆ ಬೇಕಾದ ಎಲ್ಲ ವಿದ್ಯುತ್ತನ್ನು ಆರ್‌ಟಿಎಸ್‌ನಿಂದ ಪಡೆಯುತ್ತಿದ್ದು, ವಾರ್ಷಿಕ ₹ 1.1 ಕೋಟಿ ಮೌಲ್ಯದ ವಿದ್ಯುತ್ ಉಳಿತಾಯ ಮಾಡುತ್ತಿದೆ. ಆದರೆ 2019ರ ಎರಡನೇ ಹಂತದ ಯೋಜನೆಯಲ್ಲಿ ಬೃಹತ್ ವಾಣಿಜ್ಯ– ಉದ್ಯಮಗಳ ಆರ್‌ಟಿಎಸ್‍ಗಳಿಗೆ ನೀಡಲಾಗಿರುವ ಸಬ್ಸಿಡಿಯನ್ನು ಸ್ಥಗಿತಗೊಳಿಸಿರುವುದರಿಂದ ಹೊಸಬರಾರೂ ಅಳವಡಿಕೆಗೆ ಮುಂದಾಗುತ್ತಿಲ್ಲ. ಸೌರಶಕ್ತಿ ನಗರ ಹೊಂದುವ ಪ್ರಧಾನಿಯ ಆಶಯ ಸಾಕಾರಗೊಳ್ಳಬೇಕಾದರೆ, ಇಂತಹ ಪರಿಸ್ಥಿತಿಯಲ್ಲಿ ಸುಧಾರಣೆ ಆಗಲೇಬೇಕಾದುದು ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT