ಬುಧವಾರ, ಆಗಸ್ಟ್ 17, 2022
28 °C
ಶಾಲಾ ಶಿಕ್ಷಕ ಹುದ್ದೆಗಳಿಗೆ ಎಂಜಿನಿಯರಿಂಗ್ ಪದವೀಧರರಿಗೆ ಅವಕಾಶ ಕಲ್ಪಿಸುವ ನಿರ್ಧಾರವು ಶೈಕ್ಷಣಿಕ ಸುಧಾರಣೆ ದೃಷ್ಟಿಯಿಂದ ಮಹತ್ವದ್ದು

ಸಂಗತ: ಶಿಕ್ಷಣದ ಬುನಾದಿಗೆ ಹೊಸ ಚಿಂತನೆ

ಎಸ್.ಸುರೇಶ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಸಾರ್ವಜನಿಕ ಶಾಲಾ ಶಿಕ್ಷಣದ ವಿಚಾರದಲ್ಲಿ ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ಒಂದು ಐತಿಹಾಸಿಕ ನಿರ್ಣಯ ಅಂಗೀಕರಿಸಿತು. ನಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರ ಶೈಕ್ಷಣಿಕ ಹಿನ್ನೆಲೆಗೆ ಒಂದು ಹೊಸ ಸ್ವರೂಪ ನೀಡುವುದು ಬಹಳ ದಿನಗಳಿಂದ ಅಗತ್ಯವಾಗಿತ್ತು.

ಈ ಪ್ರಮುಖ ನಿರ್ಣಯ ಕೈಗೊಳ್ಳಲು ನಾವು ಕಳೆದ ವರ್ಷ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದಾಗ ದೊರೆತ ನೀರಸವಾದ ಪ್ರತಿಕ್ರಿಯೆ ತಕ್ಷಣದ ಕಾರಣವಾಗಿತ್ತು. ಆದರೆ ಶಿಕ್ಷಕರ ನೇಮಕಾತಿಗೆ ಇದ್ದ ವೃಂದ ಮತ್ತು ನೇಮಕಾತಿ ನಿಯಮಗಳ ಬದಲಾವಣೆ ಬಗ್ಗೆ ಆಲೋಚಿಸಿದಾಗ, ಈ ನಿರ್ಣಯ ಶೈಕ್ಷಣಿಕ ಸುಧಾರಣೆ ದೃಷ್ಟಿಯಿಂದ ಹೆಚ್ಚು ಸಮಗ್ರವಾಗಿ ಹಾಗೂ ಶಿಕ್ಷಕ ಸಂಪನ್ಮೂಲದಲ್ಲಿ ವೈವಿಧ್ಯ ಕಾಯ್ದುಕೊಳ್ಳುವ ಉದ್ದೇಶದ ಕಾರಣಕ್ಕಾಗಿ ಮಹತ್ವ ಪಡೆಯಿತು.

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಉಪನ್ಯಾಸಕರ ನೇಮಕಾತಿಗೆ ನಡೆಸುವ ಅರ್ಹತಾ ಪರೀಕ್ಷೆ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಸಲಾಗುತ್ತದೆ. ಅಭ್ಯರ್ಥಿಗಳ ಶೈಕ್ಷಣಿಕ ಹಿನ್ನೆಲೆ, ಅವರ ಕಲಿಕೆಯ ಗುಣಮಟ್ಟದ ಸಮಗ್ರತೆಯನ್ನು ಈ ಪರೀಕ್ಷೆ ಅಂತರ್ಗತವಾಗಿಸಿಕೊಂಡಿದೆ. ವಿಶೇಷವಾಗಿ 6ರಿಂದ 8ನೇ ತರಗತಿಯ ಹಂತವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಮುಖವಾದುದು. ಅದು ಜ್ಞಾನಾರ್ಜನೆಗೆ ಗಟ್ಟಿ ಅಡಿಪಾಯ ಹಾಕಬೇಕಾದ ಕಾಲಘಟ್ಟ. ಗುಣಮಟ್ಟದ ಶಿಕ್ಷಣದ ಹಾಗೆಯೇ ಜ್ಞಾನಾರ್ಜನೆಗೆ ಅಗತ್ಯವಾದ ಶಿಕ್ಷಕರ ನೇಮಕ ಈ ಹಂತದಲ್ಲಿ ಪ್ರಮುಖವಾಗಿದೆ. ಹಾಗಾಗಿ ನಮ್ಮ ಶಿಕ್ಷಕರ ಆಯ್ಕೆ ಪ್ರಕ್ರಿಯೆ ಉದ್ದೇಶಪೂರ್ವಕವಾಗಿ ಹೆಚ್ಚು ಸ್ಪರ್ಧಾತ್ಮಕವಾಗಿದೆ. ಆ ಕಾರಣಕ್ಕಾಗಿಯೇ 2018ರಲ್ಲಿ 10,000 ಅಧಿಸೂಚಿತ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ 3,389 ಅಭ್ಯರ್ಥಿಗಳು, ಅದೇ ರೀತಿ 2019ರಲ್ಲಿ 10,565 ಅಧಿಸೂಚಿತ ಹುದ್ದೆಗಳಿಗೆ ಕೇವಲ 1,994 ಅಭ್ಯರ್ಥಿಗಳು ದೊರೆತರು. ವಿಶೇಷವಾಗಿ ಗಣಿತ, ವಿಜ್ಞಾನ ವಿಷಯಗಳ ಶಿಕ್ಷಕರ ಕೊರತೆಯೇ ಹೆಚ್ಚಾಗಿ ಕಂಡುಬಂತು.

ಇದನ್ನು ಮನಗಂಡು ವಿಶೇಷ ಪರಿಣತರ ಸಮಿತಿಯೊಂದನ್ನು ರಚಿಸಿದೆವು. ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಷಯಗಳನ್ನು ಪದವಿಯಲ್ಲಿ ವ್ಯಾಸಂಗ ಮಾಡಿದ್ದು, 3ನೇ ವಿಷಯವನ್ನು ಕಡ್ಡಾಯಗೊಳಿಸುವಾಗ ರಸಾಯನಶಾಸ್ತ್ರದ ಜೊತೆಗೆ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಭೂಗೋಳಶಾಸ್ತ್ರ, ಸ್ಟ್ಯಾಟಿಸ್ಟಿಕ್ಸ್, ಗೃಹವಿಜ್ಞಾನ ವಿಷಯಗಳಿಗೂ ಅವಕಾಶ ಮಾಡಿಕೊಡುವುದು. ಹಾಗೆಯೇ ಆರ್ಕಿಟೆಕ್ಟ್ ನಿಕಾಯ ಹೊರತುಪಡಿಸಿ ನಾಲ್ಕು ವರ್ಷದ ಅವಧಿಯ ಕೋರ್ಸ್‌ಗಳಾದ ಎಂಜಿನಿಯರಿಂಗ್/ ಬಿ-ಟೆಕ್ ಪದವೀಧರರಿಗೆ ಮೊದಲ 3 ಮತ್ತು 4ನೇ ಸೆಮಿಸ್ಟರ್‌ಗಳಲ್ಲಿ ಗಣಿತ ಅನ್ವಯಿಕ ವಿಷಯಗಳನ್ನು ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವುದು, ಹಾಗೆಯೇ ಪದವಿಪೂರ್ವ ತರಗತಿಗಳಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳನ್ನು ಅಧ್ಯಯನ ಮಾಡಿರುವ ಕಾರಣ ಡಿ.ಇಡಿ/ಬಿ.ಇಡಿ ಹಾಗೂ ಎಂಜಿನಿಯರಿಂಗ್ ಮತ್ತು ಬಿ-ಟೆಕ್ ಪದವಿ ಪಡೆದ ಅಭ್ಯರ್ಥಿಗಳನ್ನು ಪರಿಗಣಿಸಲು ಪರಿಣತರ ಸಮಿತಿ ತನ್ನ ವರದಿಯಲ್ಲಿ ಅಭಿಪ್ರಾಯ ಮಂಡಿಸಿತ್ತು.

ಅದೇ ರೀತಿ ಸಿಬಿಝಡ್ ಅಧ್ಯಯನ ಮಾಡಿದವರಿಗೆ ಪ್ರಸ್ತುತ ಇರುವ ಶಿಕ್ಷಕರ ನೇಮಕಾತಿಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅವಕಾಶ ಇರಲಿಲ್ಲ. ಪದವಿ ಹಂತದಲ್ಲಿ ಕಡ್ಡಾಯವಾಗಿ ಮೂರು ವರ್ಷ ರಸಾಯನಶಾಸ್ತ್ರ ಅಧ್ಯಯನ ಮಾಡಿರುವ, ಉಳಿದಂತೆ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ರೇಷ್ಮೆಶಾಸ್ತ್ರ, ಪರಿಸರಶಾಸ್ತ್ರ, ಜೈವಿಕ ವಿಜ್ಞಾನದಲ್ಲಿ ಯಾವುದಾದರೂ ಎರಡು ವಿಷಯಗಳಲ್ಲಿ ಕಡ್ಡಾಯವಾಗಿ ಎಲ್ಲ ಮೂರು ವರ್ಷಗಳಲ್ಲಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ವಿಷಯದ 2ನೇ ಹುದ್ದೆ ಇರುವ ಶಾಲೆಗಳಲ್ಲಿ ಜೀವವಿಜ್ಞಾನ ಶಾಸ್ತ್ರದ ಹುದ್ದೆಗೆ ಪರಿಗಣಿಸಲು ಅವಕಾಶವನ್ನು ಕಲ್ಪಿಸಲು ನಿರ್ಣಯಿಸಲಾಯಿತು.

ಇಲ್ಲಿ ಯಾವುದೇ ಎಂಜಿನಿಯರರನ್ನು ಶಿಕ್ಷಕರಾಗಬನ್ನಿ ಎಂದು ಬಲವಂತ ಮಾಡುವ ಉದ್ದೇಶ ಇಲ್ಲ. ಹಾಗೆಯೇ ಜ್ಞಾನಶಿಸ್ತಿನ ಪದವಿ ಪಡೆದವರನ್ನು ನೇಮಕಾತಿಯಿಂದ ಹೊರಗಿಡುವ ಇರಾದೆಯೂ ಇಲ್ಲ. ವಿದ್ಯಾರ್ಥಿಗಳನ್ನು ವಿಜ್ಞಾನ ಪದವಿ ಪಡೆಯುವಂತೆ ಪ್ರೇರೇಪಿಸುವುದನ್ನು ಸರ್ಕಾರ ಮಾಡಿಯೇ ಮಾಡುತ್ತದೆ. ಅಕಾಡೆಮಿಕ್ ಜ್ಞಾನಶಿಸ್ತಿನ ಯಾವುದೇ ಪದವಿಯನ್ನು ಸರ್ಕಾರ ನಿರ್ಲಕ್ಷ್ಯ ಮಾಡುವುದೂ ಇಲ್ಲ.

ಆದರೆ ಯಾವುದೇ ಶೈಕ್ಷಣಿಕ ಹಿನ್ನೆಲೆಯವರು ಶಿಕ್ಷಕರಾಗಲು ಇಲಾಖೆಯು ರೂಪಿಸುವ ಕಠಿಣ ನಿಯಮಗಳಿಗೆ ಬದ್ಧರಾಗಿರುವುದು, ನಿರೀಕ್ಷಿತ ಗುಣಮಟ್ಟವನ್ನು ತೋರುವುದು ಅನಿವಾರ್ಯವಾಗಿರುತ್ತದೆ. ಎಂಜಿನಿಯರಿಂಗ್ ಪದವೀಧರರು ಬಿ.ಇಡಿ/ಡಿ.ಇಡಿ ಪದವಿಯನ್ನು ಹೊಂದದೇ ಶಿಕ್ಷಕರಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸದೇ ಶಿಕ್ಷಕರಾಗುವುದು ಹೇಗೆ ಸಾಧ್ಯವಿಲ್ಲವೋ ಅಂತೆಯೇ ಪ್ರತೀ ಜ್ಞಾನಶಿಸ್ತಿನ ಪದವಿ ಹೊಂದಿದ ಅಭ್ಯರ್ಥಿಯನ್ನು ನೀವು ಶಿಕ್ಷಕರೇ ಆಗಬೇಕೆಂದು ಪ್ರೇರೇಪಿಸಲು ಸಹ ಸಾಧ್ಯವಿಲ್ಲ.

ಹೊಸ ಚಿಂತನೆಯಿಂದ ಕೂಡಿದ ಈ ನಿರ್ಣಯ ವಿಶಿಷ್ಟ ಮತ್ತು ಗಟ್ಟಿತನದಿಂದ ಕೂಡಿದ ಬೋಧಕರನ್ನು ಒದಗಿಸಲು ಕಾರಣವಾಗಲಿದೆ. ವಿಶೇಷವಾಗಿ ಪ್ರತಿಭಾನ್ವೇಷಣೆಗೆ ಇನ್ನಷ್ಟು ವ್ಯಾಪಕತೆಯನ್ನು ಸೃಷ್ಟಿಸುವುದು ಇದರ ಉದ್ದೇಶ. ಈ ವೈವಿಧ್ಯ ಕಂಡುಕೊಳ್ಳುವ ನಿರ್ಧಾರ ಅವಸರದಲ್ಲಿ ತೆಗೆದುಕೊಂಡದ್ದೂ ಅಲ್ಲ.

ಲೇಖಕ: ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.