ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಹೊಸ ವರ್ಷ, ನಾವು ಹೊಸಬರಾದಾಗ

ಚಲನೆಯಾಗಬೇಕಾದದ್ದು ಕ್ಯಾಲೆಂಡರಿನಲ್ಲಿ ಅಲ್ಲ, ನಮ್ಮ ಮನಃಸ್ಥಿತಿಯಲ್ಲಿ
Last Updated 30 ಡಿಸೆಂಬರ್ 2022, 23:00 IST
ಅಕ್ಷರ ಗಾತ್ರ

‘ನಿಮ್ಮ ಮುಂದಿನ ಜೀವನದಲ್ಲಿ ಸುವರ್ಣವೃಷ್ಟಿಯಾಗಲಿ’- ಹೊಸವರ್ಷ ಹುಟ್ಟಲು ಇನ್ನೂ ಮೂರು ದಿನಗಳಿರುವಾಗಲೇ ನನಗೆ ಬಂದ ಒಂದು ಓಲೆಯಲ್ಲಿ ಈ ಒಕ್ಕಣೆಯಿತ್ತು. ನನಗೆ ಸದ್ಯಕ್ಕೆ ಸಮೃದ್ಧಿ ಬೇಡ, ಏನಿದ್ದರೂ ಭವಿತವ್ಯದಲ್ಲಿ ಎನ್ನುವುದು ನನ್ನ ಈ ಮಿತ್ರರ ಆಶಯವೇ? ಪ್ರತಿವರ್ಷ ಡಿಸೆಂಬರ್ ಅಂತ್ಯ ಸಮೀಪಿ ಸುತ್ತಲೇ ನೂತನ ವರ್ಷಕ್ಕೆ ಸುನಾಮಿಯೋ ಪಾದಿಯ ಹಾರೈಕೆಗಳು.

ಡಿಸೆಂಬರ್ ನಮ್ಮ ಕುತೂಹಲ, ಆಶಯಗಳನ್ನು ನಿರ್ವಹಿಸುವ ತಿಂಗಳೆನ್ನೋಣ. ಅದೇ ಆಕಾಶದಲ್ಲಿ ಅದೇ ಸೂರ್ಯ, ಅದೇ ಚಂದ್ರ, ಅವೇ ನಕ್ಷತ್ರಗಳು, ಹೊಸದೇನು ಎಂಬ ತರ್ಕ ಇದ್ದಿದ್ದೆ. ಆದರೆ ಇಸವಿ ಬದಲಾಗುವ ನೆಪದಲ್ಲಿ ಒಂದಷ್ಟು ಸುವ್ಯವಸ್ಥೆಗೆ ಹಂಬಲಿಸಿ ಅದಕ್ಕಾಗಿ ಯೋಜಿಸಲು ಅಡ್ಡಿಯಿಲ್ಲ. ಹಾಗಾಗಿ ಪ್ರತೀ ಹೊಸವರ್ಷದ ಮೊದಲ ದಿನ ಪ್ರತಿಯೊಬ್ಬರ ಜನ್ಮದಿನ. ನಿರೀಕ್ಷೆ ಬದುಕುವ ಕೌಶಲ. ಬೆಲ್ಲವೇ ಇರಲಿ, ಬೇವು ಬೇಡ ಎಂದೋ, ಸಾಸಿವೆಯಷ್ಟೂ ನೆಮ್ಮದಿಗೆ ಭಂಗವಾಗದಿರಲಿ ಎಂದೋ ಹರಸುವಾಗ ಅತಿಶಯ ಶುಭಾಶಯದೊಳಗೊ, ಶುಭಾಶಯ ಅತಿಶಯದೊಳಗೊ ಎನ್ನುವ ಗುಮಾನಿ ಕಾಡುತ್ತದೆ. ಹೊಸ ವರ್ಷದಲ್ಲಿ ಸೌಖ್ಯ ಮಾತ್ರವೇ ತಾಂಡವವಾಡುವುದು ಅಸಂಭವ. ಏಕೆಂದರೆ ಅದರ ಕಿಮ್ಮತ್ತು ಕಾಣುವುದು ಅಸೌಖ್ಯವೆಂಬ ಕನ್ನಡಿಯಲ್ಲೇ.

‘ಸಮರಸವೇ ಜೀವನ. ಹೊಸ ವರ್ಷ ನಿಮಗೆ ಹರುಷ ತರಲಿ’ ಎಂಬ ಆಪ್ತರ ಸಂದೇಶಕ್ಕೆ ‘ನಿಮಗೂ’ ಎಂಬ ಪ್ರತಿಕ್ರಿಯೆಯಲ್ಲಿ ದುರ್ಬೀನು ಬಳಸಿದರೂ ಪ್ರೀತಿ, ವಿಶ್ವಾಸ ಕಾಣದು! ಅದು ಹಗಲಿನ ಚಂದ್ರನಂತೆ ನಿಸ್ತೇಜ. ಶುಭಾಶಯಗಳು ಸಿದ್ಧಮಾದರಿಯ ದಾರಿ ಹಿಡಿದರೆ ಅವು ಕೃತ್ರಿಮವಾದಾವು. ಹೊಸ ವರ್ಷಕ್ಕೆ ನಾವು ಹೊಸಬರಾಗದ ವಿನಾ ಹೊಸ ವರ್ಷ ನಮಗೆ ಹೊಸದೇನನ್ನೂ ತರದು, ಕೊಡದು. ಅಷ್ಟಕ್ಕೂ ‘ಉದಾರ ಚರಿತಾನಾಮ್ ತು ವಸುಧೈವ ಕುಟುಂಬಕಮ್’ ಪರಿಕಲ್ಪನೆಯ ಸಾಮಾಜಿಕ ಬದುಕಿನಲ್ಲಿ ತಾನು, ತನ್ನದೆಂಬ ನವವರ್ಷ ಬಾಲಿಶ. ನೋವು, ನಲಿವನ್ನು ಹಂಚಿಕೊಂಡಾಗಲೇ ದಿನಮಾನಗಳಲ್ಲಿ ಜೀವಸಿರಿ. ನಮ್ಮ ಕಷ್ಟ ಕಾರ್ಪಣ್ಯಗಳು ಕೊಂಚಮಟ್ಟಿಗಾದರೂ ನೀಗಿ ನಾವು ಮುಗುಳ್ನಗಲು ಆಸ್ಪದವಾಗುವ ಸಂಗತಿಗಳನ್ನು ಪರಿಶೀಲಿಸುವುದು ಜಾಣ್ಮೆ.

ನವವರ್ಷದ ಆಗಮನ ಪರಸ್ಪರ ಶುಭಕಾಮನೆಗಳ ವಿನಿಮಯಕ್ಕೆ ಸೀಮಿತವಾಗಿಬಿಟ್ಟರೆ ಒಂದು ಕ್ರಮಸಂಖ್ಯೆಯಿಂದ ಮುಂದಿನದಕ್ಕೆ ಹೋದಷ್ಟೆ ಲಾಭ ಮಾತ್ರ. ದೇಶ, ಕಾಲ ನಿರಪೇಕ್ಷವಲ್ಲ, ಅವರವರ ನೆಲೆಗೆ ತಕ್ಕಂತೆ ಎನ್ನುತ್ತದೆ ಮಹಾವಿಜ್ಞಾನಿ ಐನ್‍ಸ್ಟೀನ್‌ರ ಸಾಪೇಕ್ಷತಾ ಸಿದ್ಧಾಂತ. ಅಡುಗೆಮನೆಯಲ್ಲಿ ಲಡ್ಡು ಚಪ್ಪರಿ ಸುವವನಿಗೆ ಗಡಿಯಾರದ ಹಂಗಿರದು. ಅದರಂತೆ ನಗುನಗುತ್ತ ಎದುರಿಸುವ ಬದುಕು ಸಹನೀಯ, ಹಗುರ. ಘನ ನಿರ್ಧಾರಗಳ ಅನುಷ್ಠಾನದ ಆರಂಭಕ್ಕೆ ಜನವರಿ 1 ದಿನಾಂಕವೇ ಆಗಬೇಕೆಂದೇನಿಲ್ಲ. ಅದು ಇಚ್ಛಾನುಸಾರದ, ಪ್ರೇರಿಸಬಲ್ಲ ದಿನಾಂಕವಷ್ಟೆ. ಸಂಪನ್ನತೆ ಇರುವುದು ಸರಿಯೆ. ಆದರೆ ಅದರ ಸಮರ್ಥನೆಗಿಳಿದರೆ ಕಾಲಹರಣವಾಗುವುದು.

ಕಾರ್ಯರೂಪಕ್ಕೆ ದಕ್ಕದ ಸಂಕಲ್ಪಗಳಿಂದ ಏನು ಪ್ರಯೋಜನ? ನಿರ್ಧಾರಗಳು ವಾಸ್ತವವಾಗಿರದಿದ್ದರೆ ನಗೆಪಾಟಲು. ತಿಂಗಳಿಗೆ ನೂರು ಮಂದಿ ಅಶಕ್ತರಿಗೆ ಮಧ್ಯಾಹ್ನ ಭೋಜನದ ಏರ್ಪಾಡೆಂಬ ಗುರಿಯಿರಲಿ. ಸಂಖ್ಯೆ ಕನಿಷ್ಠ ಹತ್ತಾದರೂ ಆದೀತು. ಹೊಸ ಸಂಕಲ್ಪ ಗಳಿಗೆ ಮುನ್ನ ಹಿಂದಿನ ವರ್ಷದ ಸಂಕಲ್ಪಗಳ ಸಕಾರಾ ತ್ಮಕ ಅಂಶಗಳನ್ನು ಪರಿಷ್ಕರಿಸುವುದು ಅಗತ್ಯ. ಪರ್ವತಾ ರೋಹಿಗೆ ಪರ್ವತದ ಶಿಖರಕ್ಕೂ ಮಿಗಿಲಾಗಿ ಏರುಹಾದಿಯಲ್ಲಿನ ಮೈಲಿಗಲ್ಲುಗಳೊಂದಿಗಿನ ಅನುಸಂಧಾನ ಪ್ರಧಾನವಾಗಬೇಕು. ಹಳೆಯವನ್ನು ಕೈಬಿಡದೆ ಹೊಸ ನಿರ್ಧಾರಗಳು ಉಸಿರಾಡಬೇಕಿದೆ. ‌

ಗೋಡೆಗೆ ಸುಣ್ಣ ಬಳಿಯಬೇಕು ಎನ್ನುವವನಿಗಿಂತ ವಸ್ತುಶಃ ಬಳಿದವ ವಿಶಿಷ್ಟನಾಗುತ್ತಾನೆ. ಚಲನೆಯಾಗ ಬೇಕಾದ್ದು ಕ್ಯಾಲೆಂಡರಿನಲ್ಲಿ ಅಲ್ಲ, ನಮ್ಮ ಮನಃಸ್ಥಿತಿ ಯಲ್ಲಿ. ತಲುಪಬೇಕಾದ ಗುರಿಗಿಂತಲೂ ಸಾಗುವ ಮಾರ್ಗ ಮುಖ್ಯವಾಗುವುದು. ಹಸನಾದ ಬದುಕು ಒಮ್ಮಿಂದೊಮ್ಮೆಗೇ ಮೈದಳೆಯದು. ಅದಕ್ಕಾಗಿ ಚಿಂತನೆ, ಸಿದ್ಧತೆ ಮತ್ತು ಯೋಜನೆ ಅತ್ಯಗತ್ಯ. ಸಣ್ಣ ಪುಟ್ಟ ಯಶಸ್ಸುಗಳೇ ಭರ್ಜರಿ ಹಿಗ್ಗಿಗೆ ಒಯ್ಯುತ್ತವೆ. ಅವನ್ನೆಲ್ಲ ಸಂಕಲಿಸಿದಾಗ ಬೃಹತ್ ಯಶೋಗಾಥೆ ಕೈಗೂಡಿರುತ್ತದೆ. ಅತಿ ನಿರೀಕ್ಷೆಗಳು ಹುರುಪಿಗಿಂತಲೂ ಒತ್ತಡವನ್ನೇ ಸೃಷ್ಟಿಸಿರುತ್ತವೆ. ಹೊಸ ವರ್ಷ ಬದುಕಿನ ಒಂದು ಭಾಗ ಮಾತ್ರ ಎನ್ನುವುದು ಗಮನದಲ್ಲಿರಲಿ.

‘ಯದ್ ಭಾವಂ ತದ್ ಭವತಿ’– ಭಾವಿಸಿದಂತೆ ಮನಸ್ಸು. ಬದುಕು ಉತ್ಸಾಹಿಗಳಿಗೆ ಉತ್ಸಾಹದಂತೆ, ಮಂಕಾದವರಿಗೆ ಮಂಕಾದಂತೆ, ಸೂಕ್ಷ್ಮವಾದವರಿಗೆ ಸೂಕ್ಷ್ಮದಂತೆ ತೋರುವುದು. ನಮ್ಮ ಮನಃಸ್ಥಿತಿಯನ್ನು ತರಬೇತುಗೊಳಿಸುವವರು ನಾವೇ. ಪ್ರಸಿದ್ಧ ಹೋಟೆಲ್ ಉದ್ಯಮಿಯೊಬ್ಬನನ್ನು ವರದಿಗಾರ ‘ನೀವು ಹೇಗೆ ಯಶಸ್ಸು ಗಳಿಸಿದಿರಿ’ ಎಂದು ಪ್ರಶ್ನಿಸಿದ. ಅದಕ್ಕೆ ಉದ್ಯಮಿ ‘ನಾನು ಪಾರ್ಕಿನ ಕಲ್ಲುಬೆಂಚಿನ ಮೇಲೆ ಮಲಗಿದ್ದಾಗ ಈ ಉದ್ಯಮದ ಬಗ್ಗೆ ಯೋಜಿಸಿದೆ. ಯೋಜಿಸಿದ್ದನ್ನು ಮಾಡಿದೆ, ಮುಂದೆ ಕೂಡ ಅದನ್ನೇ ಮುಂದುವರಿಸುವೆ’ ಎಂದನಂತೆ. ನಮ್ಮಿಂದಾದ ಪ್ರಮಾದಗಳು ನಮಗೆ ಏನೆಲ್ಲ ಕಲಿಸುತ್ತವೆ.

ಹೊಸ ವರ್ಷಕ್ಕೆ ಲೆಕ್ಕವಿಲ್ಲದಷ್ಟು ಶುಭಕಾಮನೆಗಳು ವಿನಿಮಯಗೊಂಡಿರುತ್ತವೆ. ಇನ್ನೊಂದು ಬದುಕಿದ್ದರೆ ಎಷ್ಟೆಲ್ಲಾ, ಹೇಗೆಲ್ಲಾ ತಿದ್ದಿಕೊಂಡು ಬಾಳಬಹುದಿತ್ತು ಅನ್ನಿಸುತ್ತದೆ. ಅದು ಸಾಧ್ಯವಿಲ್ಲ, ಬದುಕೆನ್ನುವುದು ಒಂದೇ ಅವಕಾಶ. ತೊಟ್ಟ ಸಂಕಲ್ಪಗಳ ಸಾಕಾರಕ್ಕೆ ಮುಂದಾಗುವುದೇ ಪುನರ್ ಬದುಕೆಂದು ಭಾವಿಸುವುದರಲ್ಲಿ ಲಾಭವಿದೆ. ಆದರೆ ಆರಂಭದಲ್ಲೇ ಆಲಸ್ಯ ಅತಿಕ್ರಮಿಸಿದರೆ ಬದುಕಿನ ಒಂದೊಂದೇ ಅಮೂಲ್ಯ ಗಳಿಗೆಯು ವ್ಯರ್ಥವಾಗತೊಡಗುತ್ತದೆ. ಸಮಯವನ್ನು ವ್ಯಯಿಸಬಹುದೇ ವಿನಾ ಮತ್ತೆ ಪಡೆಯಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT