ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ನೀನಲ್ಲ, ಅವನಲ್ಲ, ಇವನೂ ಅಲ್ಲ!

ಹತಾಶ ಮತದಾರರ ಸಮೂಹ ಒಂದಾಗಿ ಚುನಾವಣಾ ಅಭ್ಯರ್ಥಿಗಳ ಕೊರಳಿಗೆ ಗಂಟೆ ಕಟ್ಟಲು ‘ನೋಟಾ’ ಸೌಲಭ್ಯ ಹೆಚ್ಚು ಸಹಕಾರಿ
Published 16 ಏಪ್ರಿಲ್ 2024, 19:39 IST
Last Updated 16 ಏಪ್ರಿಲ್ 2024, 19:39 IST
ಅಕ್ಷರ ಗಾತ್ರ

ಆಡಳಿತಾರೂಢರ ಬಗೆಗೆ ಜನಸಾಮಾನ್ಯರ ಗೊಣಗಾಟ, ನೋವು, ಹತಾಶೆ ಹೊರಹೊಮ್ಮುವುದು ಸ್ವಾಭಾವಿಕ. ಜನಪ್ರತಿನಿಧಿಯಾಗಿ ಆಯ್ಕೆಯಾದವರು ಜನರ ಬವಣೆ ನಿವಾರಣೆಗೆ ಶ್ರಮಿಸುವ ಬದಲು, ಸ್ವಹಿತ ಸಾಧನೆಯತ್ತಲೇ ಲಕ್ಷ್ಯ ಹರಿಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದು, ಚುನಾವಣೆ ಬಗೆಗೆ ಜನ ಭ್ರಮ ನಿರಸನಗೊಳ್ಳಲು ಕಾರಣವಾಗುತ್ತಿದೆ. ಮತದಾನ ಕುರಿತು ನಿರ್ಲಕ್ಷ್ಯ ಹೊಂದುವಂತೆ ಮಾಡುತ್ತಿದೆ. ಈ ಬಗೆಯ ನಿರ್ಲಕ್ಷ್ಯ ಭಾವವು ಅಸಮರ್ಥರು, ಭ್ರಷ್ಟರು ಗದ್ದುಗೆ ಏರಲು ಪರೋಕ್ಷವಾಗಿ ಕಾರಣವೂ ಆಗುತ್ತಿದೆ.

ಜನಹಿತವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ‘ನೋಟಾ’ ಎಂಬ ವ್ಯವಸ್ಥೆಯನ್ನು ಅಳವಡಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಹನ್ನೊಂದು ವರ್ಷಗಳ ಹಿಂದೆ ನಿರ್ದೇಶಿಸಿತು. ಸ್ಪರ್ಧಾ ಕಣದಲ್ಲಿ ಇರುವವರಲ್ಲಿ ಒಬ್ಬರನ್ನೂ ತಾನು ಆರಿಸುವುದಿಲ್ಲ ಎಂಬ ನಿರ್ಧಾರವನ್ನು ಪ್ರಕಟಿಸಲು ಮತದಾರ ಪ್ರಭುವು ಮತಯಂತ್ರದ ಕಟ್ಟಕಡೆಯ ಗುಂಡಿಯನ್ನು ಒತ್ತಬಹುದು. ನನ್‌ ಆಫ್‌ ದಿ ಅಬವ್‌ (ನೋಟಾ) ಪದ್ಧತಿಯನ್ನು ಅಳವಡಿಸುವುದು ಮತದಾರರು ಅಭ್ಯರ್ಥಿಯ ಬಗೆಗೆ ಇರುವ ಸಿಟ್ಟು ಹೊರಹಾಕಲು, ಜನಹಿತದ ಕಾರ್ಯಕ್ರಮಗಳ ಬಗೆಗೆ ಆಡಳಿತವು ಆಸ್ಥೆ ವಹಿಸದ್ದಕ್ಕೆ ಹತಾಶೆಯನ್ನು ವ್ಯಕ್ತಪಡಿಸಲು
ಇರುವ ಸ್ಪಷ್ಟ ಅವಕಾಶವಾಗಿದೆ. ಈ ಕಾರಣದಿಂದಲಾದರೂ ಅತಿಹೆಚ್ಚು ಮತದಾರರು ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಬೇಕೆಂಬುದು ಚುನಾವಣಾ ಆಯೋಗದ ಆಶಯ ಅನಿಸುತ್ತದೆ.

ಇಂದು ಮತದಾನದಲ್ಲಿ ಭಾಗವಹಿಸುವ ಮತದಾರ ರೆಲ್ಲರಿಗೂ ಆಡಳಿತದ ಬಗೆಗೆ ಸಂಪೂರ್ಣ ತೃಪ್ತಿ ಇರುತ್ತದೆ ಎಂದೇನಿಲ್ಲ. ಚುನಾವಣಾ ಫಲಿತಾಂಶ ಸಹ ಇದನ್ನು ಸ್ಪಷ್ಟಪಡಿಸದು. ಕುಡಿಯುವ ನೀರಿಲ್ಲ, ಸುಗಮವಾದ ರಸ್ತೆಯಿಲ್ಲ, ವಿದ್ಯುತ್‌ ಸೌಕರ್ಯವಿಲ್ಲ ಎಂದು ಮತದಾರರು ಬೊಬ್ಬಿಡುವ ಕ್ಷೇತ್ರಗಳಲ್ಲಿಯೂ
ಏನೂ ಕೆಲಸ ಮಾಡದ ಅಭ್ಯರ್ಥಿಯೊಬ್ಬ ಗೆಲ್ಲುತ್ತಾನೆ ಎಂದರೆ, ಅದನ್ನು ಮತದಾರ ಪ್ರಭುವಿನ ತೀರ್ಪು ಎಂದು ಪರಿಗಣಿಸಲೇಬೇಕಾಗಿಲ್ಲ. ಮತದಾನ ತನ್ನ ಪವಿತ್ರ ಹಕ್ಕು ಎಂಬುದನ್ನು ಮನಗಂಡು ಮತಗಟ್ಟೆಗೆ ಬರುವವರಿಗೂ ಬಹುತೇಕ ಬಾರಿ ಯಾವ ಪಕ್ಷದಲ್ಲಿಯೂ ಪರಿಶುದ್ಧ ಅಭ್ಯರ್ಥಿ ಸ್ಪರ್ಧಿಸಿಲ್ಲ ಎಂಬುದು ತಿಳಿದಿರುತ್ತದೆ. ಆದರೂ ಯಾರೋ ಒಬ್ಬರ ಹೆಸರಿಗೆ ಮುದ್ರೆಯನ್ನು ಒತ್ತುತ್ತಿರುವುದೇ ಅಸಮರ್ಥರ ಆಯ್ಕೆಗೆ ಕಾರಣವಾಗುತ್ತಿದೆ.

ಮತ ಚಲಾಯಿಸುವುದರಿಂದ ದೂರ ಉಳಿಯದಂತೆ ನೋಡಿಕೊಳ್ಳಬೇಕೆಂಬ ಕಾರಣಕ್ಕೆ ಚುನಾವಣಾ ಆಯೋಗ ಕೈಗೊಳ್ಳುವ ಪ್ರಚಾರ ಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಮತಗಟ್ಟೆಗೆ ಕರೆದೊಯ್ಯಬಹುದೇ ವಿನಾ ನಿಷ್ಕಳಂಕ ಆಡಳಿತಗಾರನ ಸೃಷ್ಟಿಗೆ ಅವು ಸಹಕಾರಿಯಾಗುವುದಿಲ್ಲ. ಈಗ ಗೆಲುವಿಗಾಗಿ ಅಭ್ಯರ್ಥಿಗಳು ಕೈಗೊಳ್ಳುವ ಯಾವ ಕಸರತ್ತುಗಳೂ ರಹಸ್ಯವಾಗಿ ಉಳಿಯುವುದಿಲ್ಲ. ಮದ್ಯ, ಹಣ, ಸೀರೆ, ಕುಕ್ಕರ್‌ ಹಂಚಿ ಮತಗಳನ್ನು ಬೇಟೆಯಾಡುವವರು ಐದು ವರ್ಷಗಳ ಕಾಲ ನಿರಂತರವಾಗಿ ಮೇಯುತ್ತಾರೆ. ಒಂದು ಅವಧಿ ಮುಗಿದಾಗ ಅಭ್ಯರ್ಥಿಯು ಗಳಿಸಿದ ಆಸ್ತಿಯ ಮೌಲ್ಯವು ಆಘಾತಕಾರಿ ಸುದ್ದಿಯಾಗುತ್ತದೆ. ಜನೋಪಯೋಗಿ ಕೆಲಸಗಳನ್ನು ಮಾಡುವುದಿಲ್ಲ. ಕಮಿಷನ್‌ ದಂಧೆ
ಸುದ್ದಿಯಾಗುತ್ತದೆ. ಜಾತಿಗಳ ನಡುವೆ ಕಲಹ ತಂದುಹಾಕಿ ಚಂದ ನೋಡಲಾಗುತ್ತದೆ.

ಪ್ರತಿಸಲವೂ ಆಡಳಿತ ಚೆನ್ನಾಗಿಲ್ಲ, ಗೆದ್ದವರು ಸರಿ ಇಲ್ಲ ಎಂದು ಅತೃಪ್ತಿ ಹೊರಚೆಲ್ಲುವ ಹತಾಶ ಮತದಾರರ ಸಮೂಹ ಒಂದಾಗಿ ಅಭ್ಯರ್ಥಿಗಳ ಕೊರಳಿಗೆ ಗಂಟೆ ಕಟ್ಟಲು ನೋಟಾ ಮತದಾನದ ಸೌಲಭ್ಯ ಸಹಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ನೋಟಾ ಬಳಕೆಯಿಂದ, ಎಲ್ಲ ಪಕ್ಷಗಳೂ ಕಳೆದುಕೊಳ್ಳುವ ಸರಾಸರಿ ಮತಗಳ ಸಂಖ್ಯೆ ಇಳಿಮುಖವಾಗುತ್ತದೆ. ಜನರಿಗೆ ಉತ್ತಮ ಆಡಳಿತ ನೀಡಲು ತಾವು ಶಕ್ತಿಮೀರಿ ಶ್ರಮಿಸಬೇಕೆಂದು ಗೆದ್ದವರ ಕಿವಿ ಹಿಂಡಲು ಅದು
ಕಾರಣವಾಗಬಹುದು. ಜನಹಿತಕ್ಕಾಗಿ ಮಿಡಿಯುವವರನ್ನೇ ಕಣಕ್ಕಿಳಿಸಲು ರಾಜಕೀಯ ಪಕ್ಷಗಳಿಗೆ
ಪ್ರೇರಕವಾಗಬಹುದು. ಏನೂ ಮಾಡದೆ ಅಧಿಕಾರದ ಸುಖ ಅನುಭವಿಸುವವರನ್ನು ಭ್ರಷ್ಟತನದ ದಾರಿಯಿಂದ ಕಿಂಚಿತ್‌ ವಿಮುಖಗೊಳಿಸಬಹುದು. ಜೊತೆಗೆ ತಾನು ಪ್ರಭುವಲ್ಲ, ತನ್ನ ಅಂಕುಶ ಮತದಾರನ ಬೆರಳು ಗಳಲ್ಲಿದೆ ಎಂಬ ತಾತ್ವಿಕ ಸತ್ಯವನ್ನು ಅರಿತುಕೊಳ್ಳಲು ಸಹಾಯಕವಾಗಬಹುದು. ಹೀಗಾಗಿ, ನೋಟಾ ಮತದಾನದ ಬಗೆಗೂ ಸಾಮಾನ್ಯ ಮತದಾರರಲ್ಲಿ ಅರಿವು ಮೂಡಿಸಲು ಚುನಾವಣಾ ಆಯೋಗ ಹೆಚ್ಚು ಶ್ರಮಿಸಬೇಕು ಎನಿಸುತ್ತದೆ.

ನಮ್ಮ ಸಂವಿಧಾನದ ಆಶಯವನ್ನು ಸಂರಕ್ಷಿಸುವ, ಜನಸುಖವೇ ತನ್ನ ಬದುಕಿನ ಗುರಿಯೆಂದು ಭಾವಿಸಿ ಕೆಲಸ ಮಾಡುವ ಯೋಗ್ಯ ಜನಪ್ರತಿನಿಧಿಯ ಆಯ್ಕೆ ಇಂದು ತುರ್ತು ಅಗತ್ಯವೆನಿಸಿದೆ. ಆಸ್ತಿ ಸಂಪಾದನೆಗೆ ಬದುಕಿಡೀ ಅಕ್ರಮ ಮಾರ್ಗ ಅನುಸರಿಸುವ
ರಾಜಕಾರಣಿಯನ್ನು ಪ್ರಶ್ನಿಸುವ ಹಂಗಿಗೆ ಯಾರೂ ಹೋಗುವುದಿಲ್ಲ. ‌‌

‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?’ ಎಂದು ಪ್ರಶ್ನಿಸಿದರೆ, ತಲೆತಗ್ಗಿಸಿ ಖಿನ್ನನಾಗುವ ಜನಸಾಮಾನ್ಯನ ಕೈಯಲ್ಲಿ ಉತ್ತಮ ಆಡಳಿತಗಾರನ ಸೃಷ್ಟಿಯ ಕೀಲಿಕೈ ಇದೆ. ಈ ಅರಿವು ಮತದಾನದ ಕ್ಷಣದಲ್ಲಿ ವ್ಯಕ್ತವಾಗುವುದಕ್ಕೆ ಪೂರಕವಾಗಿ ಚುನಾವಣಾ ಆಯೋಗವು ನೋಟಾ ಮೂಲಕ ಅವಕಾಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT