ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮೊಟಕಾಯಿತು ಭಾವನಾತ್ಮಕ ವಿಕಾಸ

ಅಸಮರ್ಪಕ ಆನ್‌ಲೈನ್‌ ತರಗತಿಗಳನ್ನು ನಡೆಸಿಯೂ ಅವೈಜ್ಞಾನಿಕ ಶುಲ್ಕ ಹೇರುವುದನ್ನು ಪರಾಮರ್ಶಿಸಲೇಬೇಕಾಗಿದೆ
Last Updated 19 ಅಕ್ಟೋಬರ್ 2020, 20:00 IST
ಅಕ್ಷರ ಗಾತ್ರ

ರಾಜ್ಯದ ಬಹುತೇಕ ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿವೆ. ಕೆಲವು ಪೋಷಕರನ್ನು ಸಂಪರ್ಕಿಸಿ ಚರ್ಚಿಸಿದಾಗ, ಆನ್‌ಲೈನ್‌ ತರಗತಿ ಕುರಿತಂತೆ ಅನೇಕ ಅಂಶಗಳು ಹೊರಬಂದವು.

ಕೆಲವು ಶಾಲೆಗಳಲ್ಲಿ ಶಿಕ್ಷಕರು ಕ್ಲಾಸ್‌ ರೂಮಿನಿಂದ ತರಗತಿಗಳನ್ನು ನಡೆಸದೆ, ತಮ್ಮ ಮನೆಯಿಂದಲೇ ನಡೆಸುತ್ತಾರೆ. ದಿನಕ್ಕೆ ಎರಡು, ಮೂರು ಗಂಟೆಗಳಂತೆ ತರಗತಿಗಳು ನಡೆಯುತ್ತಿವೆ. ಪ್ರವೇಶ, ಹಾಜರಿ ತೆಗೆದುಕೊಳ್ಳುವುದು ಮೊದಲಾದವು ಗಮನಾರ್ಹ ಸಮಯವನ್ನು ಕಬಳಿಸುತ್ತವೆ. ಆನ್‌ಲೈನ್‌ನಲ್ಲಿ ಪಾಠ ಮಾಡಲು ಬೇಕಾದ ಕನಿಷ್ಠ ತರಬೇತಿಯೂ ಶಿಕ್ಷಕರಿಗಿಲ್ಲ. ವರ್ಚುವಲ್ ಕ್ಲಾಸ್ ರೂಮಿನ ಕನಿಷ್ಠ ಪರಿಕಲ್ಪನೆಯೂ ಇಲ್ಲದಂತೆ ತರಗತಿಗಳು ನಡೆಯುತ್ತಿವೆ. ಸಂವಹನ ತಾಂತ್ರಿಕತೆಯ ಕಾರಣದಿಂದಾಗಿಯೇ ಅನೇಕ ಮಕ್ಕಳಿಗೆ ಪಾಠಗಳನ್ನು ಗ್ರಹಿಸುವಲ್ಲಿ ತೊಂದರೆ ಆಗುತ್ತಿದೆ. ಆನ್‌ಲೈನ್‌ ನೀಡುವ ಚ್ಯಾಟ್ ಸೌಲಭ್ಯಗಳಿಗೆ ಸುಲಭವಾಗಿ ಆಕರ್ಷಿತರಾಗುವ ಮಕ್ಕಳು ಏಕಾಗ್ರತೆಯ ಸವಾಲನ್ನು ಎದುರಿಸುತ್ತಿದ್ದಾರೆ. ಕೆಲವೊಮ್ಮೆ ನೆಟ್‌ವರ್ಕ್ ಸಮಸ್ಯೆಗಳೂ ಉಂಟಾಗಿ ತರಗತಿ ಸುಲಲಿತವಾಗಿ ನಡೆಯದಂತಾಗಿರುತ್ತದೆ. ಕನಿಷ್ಠ ಸ್ಮಾರ್ಟ್ ಫೋನ್ ಸವಲತ್ತು ಕೂಡಾ ಇಲ್ಲದ ಮಕ್ಕಳ ಕಷ್ಟ ಇನ್ನೊಂದು ಬಗೆಯದು.

ಜಗತ್ತಿನ ತುಂಬಾ ಅನೇಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಂಸ್ಥೆಗಳು ಹಿಂದಿನಿಂದಲೂ ಆನ್‌ಲೈನ್‌ ತರಗತಿಗಳನ್ನು ಅತ್ಯಂತ ವೃತ್ತಿಪರವಾಗಿ ನಡೆಸುತ್ತಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ತಮ್ಮ ಕುಟುಂಬದ ಮೊದಲ ಆದ್ಯತೆ ಎಂದು ಯೋಚಿಸುವವರಿಗೆ ಅವು ಬೆರಳತುದಿಯಲ್ಲಿಯೇ ಎಟಕುವಂತೆಯೂ ಇವೆ. ಹೀಗಿರುವಾಗ ಅಸಮರ್ಪಕ ಆನ್‌ಲೈನ್‌ ತರಗತಿಗಳು ಬೇಕೇ ಎನ್ನುವ ಪ್ರಶ್ನೆಯೂ ಎದ್ದಿದೆ.

ಶಾಲಾ ಆವರಣದಲ್ಲಿನ ವಿದ್ಯಾರ್ಜನೆಯು ನೀಡುವ ಸರ್ವತೋಮುಖ ಶಿಕ್ಷಣದ ಅತಿಮುಖ್ಯ ಚಟುವಟಿಕೆಗಳನ್ನು ಆನ್‌ಲೈನ್‌ ಶಿಕ್ಷಣವು ಮೊಟಕುಗೊಳಿಸುತ್ತದೆ. ಪ್ರಾತ್ಯಕ್ಷಿಕೆ, ಲ್ಯಾಬೊರೇಟರಿ ಮತ್ತು ಪ್ರಾಜೆಕ್ಟ್ ವರ್ಕ್ ಚಟುವಟಿಕೆಗಳಿಗೆ ವಿದ್ಯಾರ್ಥಿಗಳು ಗಂಭೀರವಾಗಿ ತೆರೆದುಕೊಳ್ಳುವುದು ಮಾಧ್ಯಮಿಕ ಶಿಕ್ಷಣದ ಹಂತದಲ್ಲಿಯೇ. ಅವು ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಾದ ಅತ್ಯವಶ್ಯ ಬುನಾದಿಯನ್ನು ಹಾಕುತ್ತವೆ. ಜೊತೆಗೆ, ಶಾಲೆಗಳಲ್ಲಿ, ಅಂತರಶಾಲಾ ಮಟ್ಟದಲ್ಲಿ ನಡೆಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳೂ ಎನ್.ಸಿ.ಸಿ, ಎನ್.ಎಸ್.ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಪೂರ್ಣ ಇಲ್ಲದಂತಾಗಿವೆ. ಸಹಪಾಠಿಗಳ, ವಿದ್ಯಾರ್ಥಿ ಮತ್ತು ಶಿಕ್ಷಕರ ಒಡನಾಟದಿಂದ ಲಭ್ಯವಾಗುವ ಸಾಮುದಾಯಿಕ ಮತ್ತು ಭಾವನಾತ್ಮಕ ವಿಕಾಸದಿಂದ ಮಕ್ಕಳು ದೂರವಾಗಿದ್ದಾರೆ.

ಕೊರೊನಾ ಸಾಂಕ್ರಾಮಿಕವು ಅನಿವಾರ್ಯವಾಗಿಸಿರುವ ಇಂತಹ ಪರಿಸ್ಥಿತಿಯನ್ನು ದಾಟುವವರೆಗೆ ಇವನ್ನೆಲ್ಲ ಸಹಿಸಿಕೊಳ್ಳಲೇಬೇಕು ಎನ್ನುವ ವಾದವೂ ಇದೆ. ಶಾಲೆ ಆರಂಭಿಸಿದರೂ ಸಮರ್ಥ ಲಸಿಕೆ ದೊರೆಯುವವರೆಗೂ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎನ್ನುವುದು ಅನೇಕ ಪೋಷಕರ ನಿಲುವು. ಹೀಗಾಗಿ ಸದ್ಯಕ್ಕಂತೂ ಮಕ್ಕಳು ಆನ್‌ಲೈನ್‌ ತರಗತಿಗಳ ಮೂಲಕವೇ ಕಲಿಯಬೇಕಿದೆ.

ಅನೇಕ ಶಾಲೆಗಳು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಸಂಖ್ಯೆಯನ್ನು ಅರ್ಧದಷ್ಟು ಕಡಿತಗೊಳಿಸಿ, ಮಿಕ್ಕವರಿಗೆ ಅರ್ಧ ಸಂಬಳ ಕೊಡುತ್ತಾ ಶಾಲೆಗಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಿಕೊಂಡಿವೆ. ಹೀಗಿದ್ದರೂ ಕೆಲವು ಶಾಲೆಗಳು ಪೋಷಕರಿಂದ ಪೂರ್ಣ ಪ್ರಮಾಣದ ಶುಲ್ಕವನ್ನೇ ಕೇಳುತ್ತಿವೆ. ಇನ್ನು ಕೆಲವು ಶಾಲೆಗಳು ಶುಲ್ಕ ಕಟ್ಟದ ಮಕ್ಕಳಿಗೆ ಆನ್‌ಲೈನ್‌ ತರಗತಿಗಳಿಗೇ ಪ್ರವೇಶ ನೀಡುತ್ತಿಲ್ಲ. ಅಸಮರ್ಪಕ ಆನ್‌ಲೈನ್‌ ತರಗತಿಗಳನ್ನು ನಡೆಸಿಯೂ ಅವೈಜ್ಞಾನಿಕ ಶುಲ್ಕ ಹೇರುವುದನ್ನು ಪರಾಮರ್ಶಿಸಲೇಬೇಕಾಗಿದೆ.

ಲಾಕ್‌ಡೌನ್‌ನಿಂದಾಗಿ ಅನೇಕ ಪೋಷಕರು ಅರೆಕಾಲಿಕರೋ ಪೂರ್ತಿ ನಿರುದ್ಯೋಗಿಗಳೋ ಆಗಿದ್ದಾರೆ. ಸ್ವಯಂ ಉದ್ಯೋಗಿಗಳು ಕೆಲಸವಿಲ್ಲದೆ ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಶೈಕ್ಷಣಿಕ ವರ್ಷ ಕೊನೆಗೊಳ್ಳುತ್ತಿದ್ದಂತೆ ಶುಲ್ಕ ಕಟ್ಟಲಾಗದ ಮಕ್ಕಳನ್ನು ಶಾಲೆಗಳು ಪರೀಕ್ಷೆಗೆ ಕೂರಿಸುತ್ತವೆಯೇ, ತೇರ್ಗಡೆ ಮಾಡುತ್ತವೆಯೇ ಎನ್ನುವ ಆತಂಕ ಪೋಷಕರನ್ನು ಕಾಡುತ್ತಿದೆ. ಮಕ್ಕಳ ಶಾಲಾ ಶುಲ್ಕಕ್ಕೆ ಸಂಬಂಧಿಸಿದಂತೆ ಕೊರೊನಾ ಕಾಲಿಟ್ಟ ಶುರುವಿನಲ್ಲಿ ತುಸು ಬಿಗಿಯಾಗಿ ನಡೆದುಕೊಂಡ ಸರ್ಕಾರ ಆನಂತರ ಖಾಸಗಿ ಶಾಲೆಗಳು ಶುಲ್ಕ ಪಡೆಯಬಹುದು, ಆದರೆ ಒತ್ತಾಯಿಸುವಂತಿಲ್ಲ ಎನ್ನುವ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತಹ ಆದೇಶ ಹೊರಡಿಸಿತು. ಸರ್ಕಾರವು ಖಾಸಗಿ ಶಿಕ್ಷಣ ಲಾಬಿಗೆ ಮಣಿಯಿತೇ?

ದೇಶದ ಆರ್ಥಿಕ ಹಿಂಜರಿತವು ಎಲ್ಲ ಕ್ಷೇತ್ರ, ವರ್ಗಗಳನ್ನೂ ಬಾಧಿಸುತ್ತಿರುವಾಗ ಎಲ್ಲ ಕ್ಷೇತ್ರಗಳೂ ಸಂಕಷ್ಟವನ್ನು ಹಂಚಿಕೊಳ್ಳಬೇಕಾಗುತ್ತದೆ. ಖಾಸಗಿ ಶಾಲೆಗಳು ಮತ್ತು ಪೋಷಕರು ಪರಸ್ಪರ ಸಹಕಾರ ಮಾರ್ಗದಲ್ಲಿ ತುಸುದೂರ ಸಾಗಿಬಂದು ಪರಿಸ್ಥಿತಿಯನ್ನು ಎದುರಿಸಬೇಕು. ಸರ್ಕಾರವೂ ಎಲ್ಲ ಆಯಾಮಗಳಿಂದ ಸಮಸ್ಯೆಯನ್ನು ನೋಡಿ ಸೂಕ್ತ ಆದೇಶವನ್ನು ಹೊರಡಿಸಬೇಕು. ಇಲ್ಲವಾದರೆ, ಕೆಲವು ಆಸ್ಪತ್ರೆಗಳು ಕೋವಿಡ್ ಹೆಸರಿನಲ್ಲಿ ಸೋಂಕಿತರ ಶೋಷಣೆ ನಡೆಸುತ್ತಿರುವುದಕ್ಕೂ, ಶಾಲೆಗಳು ಅಸಮರ್ಪಕ ಆನ್‌ಲೈನ್‌ ತರಗತಿಗಳನ್ನು ನಡೆಸಿ ಪೂರ್ತಿ ಶುಲ್ಕವನ್ನು ಕೇಳುವುದಕ್ಕೂ ಏನೂ ವ್ಯತ್ಯಾಸ ಇರುವುದಿಲ್ಲ. ಶಕ್ತಿಕೇಂದ್ರಗಳ ಗುದ್ದಾಟದಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಯನ್ನು, ಅವರ ಭವಿಷ್ಯವನ್ನು ಒತ್ತಡದಲ್ಲಿ ಸಿಲುಕಿಸಿದಂತೆ ಆಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT