ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಆನ್‌ಲೈನ್‌, ಆಫ್‌ಲೈನ್‌ ಮಿಶ್ರತಂತ್ರ

ಮೈಸೂರಿನ ಕನ್ನಡ ಶಾಲೆಯಲ್ಲಿ ಪ್ರಾಯೋಗಿಕವಾಗಿ ಅಳವಡಿಸಿಕೊಂಡ ಈ ತಂತ್ರ ‘ಮನೆಯಲ್ಲೇ ಓದು’ ಮತ್ತು ‘ತೆರೆದ ಪುಸ್ತಕ ಪರೀಕ್ಷೆ’ಗೆ ಹೊಸ ಆಯಾಮ ನೀಡಿದೆ
Last Updated 22 ನವೆಂಬರ್ 2020, 21:20 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಕೋವಿಡ್ ಕಾರಣದಿಂದ ಶಾಲೆಗಳನ್ನು ಮುಚ್ಚಿ, ಅದೇ ಸ್ಥಿತಿ ದೀರ್ಘಕಾಲ ಮುಂದುವರಿದಾಗ, ಮಕ್ಕಳ ಕಲಿಕೆಗೆ ಬೇರೆ ದಾರಿ ಯಾವುದು ಎಂದು ಎಲ್ಲರೂ ಯೋಚಿಸಬೇಕಾಯಿತು. ಆಗ, ಮೈಸೂರಿನಲ್ಲಿ ಶಾಲೆಯನ್ನು ನಡೆಸುತ್ತಿರುವ ನಮಗೆ ಹೊಳೆದಿದ್ದು ಆನ್‌ಲೈನ್‌ ಶಿಕ್ಷಣ. ಆದರೆ ನಮ್ಮದು ಕನ್ನಡ ಮಾಧ್ಯಮ ಶಾಲೆಯಾದ್ದರಿಂದ ಹೆಚ್ಚಿನ ಮಕ್ಕಳು ಕೆಳಮಧ್ಯಮ ವರ್ಗದಿಂದ ಬಂದವರಾಗಿದ್ದಾರೆ. ಅವರಲ್ಲಿ ಎಷ್ಟು ಜನರ ಬಳಿ ಮೊಬೈಲ್‌ಗಳಿವೆ ಎಂಬುದನ್ನು ತಿಳಿಯಲು ಪೋಷಕರಿಗೆ ಕರೆ ಮಾಡಿ ವಿವರ ಪಡೆದೆವು. ಆಶ್ಚರ್ಯವೆಂದರೆ, ನಮ್ಮ ಶಾಲೆಯಲ್ಲಿರುವ ಮುನ್ನೂರಕ್ಕೂ ಹೆಚ್ಚು ಮಕ್ಕಳಲ್ಲಿ ಎಲ್ಲರ ಬಳಿಯೂ ಮೊಬೈಲುಗಳಿದ್ದವು. ಆದರೆ ಆನ್‌ಲೈನ್‌ ತರಗತಿಗೆ ಬೇಕಾದ ಆ್ಯಂಡ್ರಾಯ್ಡ್ ಫೋನುಗಳು ಮತ್ತು ಇಂಟರ್ನೆಟ್‌ ಸೌಲಭ್ಯ 80 ಮಕ್ಕಳ ಪೋಷಕರ ಬಳಿ (ಬಹುತೇಕ ತಂದೆಯ ಬಳಿ) ಮಾತ್ರ ಇತ್ತು.

ಆಗ ಬೇರೆ ದಾರಿ ಇಲ್ಲದೆ ‘ಮನೆಯಲ್ಲೇ ಓದು’ವುದು ಅನಿವಾರ್ಯ ಎಂದು ಖಾತರಿಯಾಯಿತು. ಅದು ಮಕ್ಕಳಲ್ಲಿ ನಿರಂತರ ಆಸಕ್ತಿಯನ್ನು ಕಾಯ್ದುಕೊಳ್ಳುವಂತೆ ಇರಬೇಕು, ಪರಿಣಾಮಕಾರಿ ಕಲಿಕೆ ಆಗಬೇಕು, ಇಲ್ಲವಾದರೆ ಪೋಷಕರು ಆಸಕ್ತಿ ವಹಿಸದೇ ಹೋಗಬಹುದು ಎನಿಸಿತು. ನಂತರ ‘ಮನೆಯಲ್ಲೇ ಓದು’ ಮತ್ತು ವಾರಕ್ಕೊಮ್ಮೆ ‘ತೆರೆದ ಪುಸ್ತಕ ಪರೀಕ್ಷೆ’ ಎಂಬ ಕಾರ್ಯಕ್ರಮಗಳನ್ನು ಕನ್ನಡ ವಿಕಾಸ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಗೆ ಸೇರಿದ ನಮ್ಮ ‘ನೃಪತುಂಗ ಕನ್ನಡ ಶಾಲೆ’ಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದೆವು. ಇದು, ಆನ್‍ಲೈನ್ ಹಾಗೂ ಆಫ್‍ಲೈನ್ ಕಲಿಕೆಯ ಮಿಶ್ರತಂತ್ರ. ಆದ್ದರಿಂದ ಸಾಧ್ಯವಿರುವಲ್ಲಿ ಆನ್‍ಲೈನ್ ಸಂಪರ್ಕ ಬಳಸಿಕೊಂಡು, ಇಲ್ಲದ ಕಡೆ ಪರಸ್ಪರ ನೇರ ಸಂಪರ್ಕವನ್ನು ಇಲ್ಲಿಬಳಸಿಕೊಳ್ಳಲಾಗುತ್ತದೆ.

ಈಗಿರುವ ಶೈಕ್ಷಣಿಕ ವಿಧಾನದಲ್ಲಿ ಮಕ್ಕಳು ಮೊದಲು ಶಿಕ್ಷಕರಿಂದ ಪಾಠ ಕಲಿತು, ಗ್ರಹಿಸಿ, ಸ್ವಂತ ಆಲೋಚನೆಯಿಂದ ಮನನ ಮಾಡಿಕೊಳ್ಳುತ್ತಾರೆ. ಆದರೆ ಮನೆಯಲ್ಲೇ ಓದಿ ಕಲಿಯುವ ಈ ಪ್ರಾಯೋಗಿಕ ವಿಧಾನದಲ್ಲಿ ಮಕ್ಕಳು ತಾವೇ ಪಾಠ ಓದಿ, ಗ್ರಹಿಸಿ, ಸ್ವಂತ ಆಲೋಚನೆಯ ಮೂಲಕ ಮನನ ಮಾಡಿಕೊಂಡು, ಅರ್ಥವಾಗದ ಸಂದರ್ಭಗಳಲ್ಲಿ ಶಿಕ್ಷಕರತ್ತ ಮುಖ ಮಾಡಿ ವಿವರಣೆ ಪಡೆಯುತ್ತಾರೆ. ಇದರಿಂದ ಶಿಕ್ಷಕರಿಗೆ ಬೋಧನೆಯ ಅವಧಿ ಕಡಿಮೆಯಾಗುತ್ತದೆ, ಮಗುವಿಗೆ ಸ್ವಂತ ಕಲಿಕೆಯ ಅವಧಿ ಹೆಚ್ಚುತ್ತದೆ.

ಇಲ್ಲಿ ಮಕ್ಕಳಿಗೆ ಮೊದಲು ಪಠ್ಯಸಾಮಗ್ರಿಯನ್ನು ರಾಜ್ಯ ಸರ್ಕಾರ ಆನ್‍ಲೈನ್‍ನಲ್ಲಿ ಈಗಾಗಲೇ ಸಿದ್ಧಪಡಿಸಿರುವ ಪಿ.ಡಿ.ಎಫ್‍ ಮೂಲಕ ಒದಗಿಸಲಾಯಿತು. ಇಲಾಖೆಯಿಂದ ಪಠ್ಯಪುಸ್ತಕಗಳು ಬಂದಮೇಲೆ ಪೋಷಕರ ಮೂಲಕ ಮಕ್ಕಳಿಗೆ ತಲುಪಿಸಲಾಯಿತು.

ಪ್ರಸ್ತುತ 5ರಿಂದ 10ನೇ ತರಗತಿವರೆಗಿನ ಮಕ್ಕಳು ವಾರದಲ್ಲಿ ಪ್ರತಿದಿನ ಒಂದು ವಿಷಯದ ಪಠ್ಯಪುಸ್ತಕದಲ್ಲಿ ಒಂದು ಪಾಠವನ್ನು ಮನೆಯಲ್ಲೇ ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯೊಳಗೆ ಓದಲು ಪ್ರೇರೇಪಿಸಲಾಗುತ್ತದೆ. ನಂತರ ಮಧ್ಯಾಹ್ನ 1ರಿಂದ 2 ಗಂಟೆವರೆಗೆ ಅಥವಾ ಸಂಜೆ 7ರಿಂದ 8 ಗಂಟೆಯೊಳಗೆ, ದೂರವಾಣಿ ಮೂಲಕ ಶಿಕ್ಷಕರನ್ನು ಸಂಪರ್ಕಿಸಿ, ತಮ್ಮ ಸಂಶಯಗಳನ್ನು ನಿವಾರಿಸಿಕೊಳ್ಳುತ್ತಾರೆ.

ಎರಡನೆಯ ವಾರದಿಂದ ಪ್ರತಿದಿನ ಒಂದು ವಿಷಯದ ಒಂದು ಪಾಠದ ಬಗ್ಗೆ ಆನ್‌ಲೈನ್, ಆಫ್‍ಲೈನ್ ಮೂಲಕ 25 ಅಂಕಗಳ ‘ತೆರೆದ ಪುಸ್ತಕ ಪರೀಕ್ಷೆ’ ನಡೆಸಲಾಗುತ್ತದೆ. ಮುಂದಿನ ಪಾಠಗಳ ಓದೂ ವಾರಕ್ಕೊಂದು ಲಿಖಿತ ಪರೀಕ್ಷೆಯೂ ಮುಂದುವರಿಯುತ್ತದೆ. ಈ ಪ್ರಯೋಗದಿಂದ, ನವೆಂಬರ್ ನಂತರ ಶಾಲೆಗಳನ್ನು ತೆರೆದರೂ ಪ್ರತಿಯೊಂದು ವಿಷಯದಲ್ಲೂ ಕನಿಷ್ಠ ನಾಲ್ಕು ಪಾಠಗಳನ್ನು ಮಕ್ಕಳು ಕಲಿತಿರುತ್ತಾರಾದ್ದರಿಂದ ಅಲ್ಲಿಯವರೆಗೆ ಸುಮಾರು ಎಲ್ಲ ವಿಷಯಗಳ ಪಠ್ಯಪುಸ್ತಕದ ಕೆಲಭಾಗವನ್ನು ಪೂರೈಸಿರುತ್ತಾರೆ.

ಇದೇ ಸೆಪ್ಟೆಂಬರ್ 1ರಿಂದ ಪ್ರಾರಂಭಿಸಿ ಈ ಕಾರ್ಯಕ್ರಮವನ್ನು ದಸರಾ ರಜೆ ಬರುವವರೆಗೂ ಮುಂದುವರಿಸಿದೆವು. ರಜೆ ಬರುವ ಹೊತ್ತಿಗೆ ನಾಲ್ಕು ಪರೀಕ್ಷೆಗಳಲ್ಲಿ ಮಕ್ಕಳು ಭಾಗವಹಿಸಿದ್ದರು. ಬಹುಮಟ್ಟಿನ ಶಿಕ್ಷಕರು ಮತ್ತು ಪೋಷಕರು ಹುಮ್ಮಸ್ಸು ತೋರಿದರು. ತೆರೆದ ಪುಸ್ತಕ ಪರೀಕ್ಷೆಯಾದರೂ ವಿದ್ಯಾರ್ಥಿ ಪಾಠವನ್ನು ಓದದೇ ಇದ್ದರೆ ಉತ್ತರಿಸಲಾಗದಂತೆ ಪ್ರಶ್ನೆಗಳನ್ನು ಪಾಠದ ವಿವಿಧ ಭಾಗಗಳಿಂದ ಕೊಡಲಾಗಿತ್ತು. ಸ್ವಂತ ವಾಕ್ಯಗಳಲ್ಲಿ ಉತ್ತರ ಬರೆಯುವಂತೆಯೂ ಕೆಲವು ಪ್ರಶ್ನೆಗಳನ್ನು ಕೊಡಲಾಗಿತ್ತು.

ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದಾಗ ಫಲಿತಾಂಶ ಹುರುಪು ಮೂಡಿಸಿತು. ಶೇಕಡ 70ಕ್ಕೂ ಹೆಚ್ಚು ಮಕ್ಕಳು ಪ್ರಥಮ ದರ್ಜೆ ಅಂಕಗಳನ್ನು ಪಡೆದಿದ್ದರು. ಅದಕ್ಕಿಂತ ಹೆಚ್ಚಾಗಿ ಮಕ್ಕಳ ಉತ್ತರಗಳು ‘ಕ್ಲುಪ್ತವಾಗಿ’ ಇದ್ದುದು ಗಮನಾರ್ಹವಾದ ಅಂಶ. ಅವರು ಪಠ್ಯ ಓದಿ, ಗ್ರಹಿಸಿದ್ದಾರೆ ಎಂಬುದಕ್ಕೆ ಅದು ಸಾಕ್ಷಿಯಾಗಿತ್ತು.

ಇದು ಮುಖಾಮುಖಿ ಕಲಿಕೆಗೆ ಸಂಪೂರ್ಣವಾಗಿ ಪರ್ಯಾಯವಲ್ಲವಾದರೂ ಮಾರ್ಚ್‌ವರೆಗೆ ಮುಂದುವರಿಸಿದರೆ ಮಕ್ಕಳು ತಾವೇ ಪಾಠ ಓದಿ, ಸ್ವಂತವಾಗಿ ಗ್ರಹಿಸುವ ಪ್ರಯತ್ನ ಮಾಡಲು ಪ್ರೇರೇಪಿಸುತ್ತದೆ. ಆ ದೃಷ್ಟಿಯಿಂದ ಶಿಕ್ಷಣ ಇಲಾಖೆ ಈ ಪ್ರಯೋಗವನ್ನು ಪರ್ಯಾಯ ಕಲಿಕೆಗೆ ಪರಿಗಣಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT