ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ತೆರೆದ ಪುಸ್ತಕ ಪರೀಕ್ಷೆ– ಬೇಕು ಸಿದ್ಧತೆ

ಈ ವಿಧಾನವನ್ನು ವಿದ್ಯಾರ್ಥಿಗಳು ಲಘುವಾಗಿ ಪರಿಗಣಿಸುವ ಸಾಧ್ಯತೆ ಹೆಚ್ಚು
ಪ್ರೊ. ಬಿ.ಎಸ್.ಶ್ರೀಕಂಠ
Published 10 ಜನವರಿ 2024, 20:00 IST
Last Updated 10 ಜನವರಿ 2024, 20:00 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು, ಒತ್ತಡ ಕಡಿಮೆ ಮಾಡಲು ಉನ್ನತ ಶಿಕ್ಷಣದಲ್ಲಿ ‘ತೆರೆದ ಪುಸ್ತಕ ಪರೀಕ್ಷಾ ಪದ್ಧತಿ’ (ಓಪನ್‌ ಬುಕ್‌) ಪರಿಚಯಿಸುವಂತೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ
ಎಸ್‌.ಎಂ.ಜಯಕರ ನೇತೃತ್ವದ ಸಮಿತಿಯು ಸರ್ಕಾರಕ್ಕೆ ಇತ್ತೀಚೆಗೆ ಶಿಫಾರಸು ಮಾಡಿರುವುದು ಗಮನಾರ್ಹ. ಈ ಶಿಫಾರಸು ಶೈಕ್ಷಣಿಕ ವಲಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿರುವುದು ಸ್ವಾಗತಾರ್ಹ ಬೆಳವಣಿಗೆ.

ಪ್ರಪಂಚದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಈ ಬಗೆಯ ಪರೀಕ್ಷಾ ಪದ್ಧತಿ ಈಗಾಗಲೇ ಚಾಲ್ತಿಯಲ್ಲಿದೆ. ಕೋವಿಡ್‌ ಕಾಲಘಟ್ಟದಲ್ಲಿ ಮತ್ತು ನಂತರದ ದಿನಗಳಲ್ಲಿ ಆನ್‌ಲೈನ್‌ ಪರೀಕ್ಷೆ, ಓಪನ್‌ ಬುಕ್‌ ಪರೀಕ್ಷೆ ಸಾಮಾನ್ಯವಾಗಿವೆ. ಜ್ಞಾನ, ಕೌಶಲ, ಸಾಮರ್ಥ್ಯದ ಮೂಲಕ ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ಮೌಲ್ಯಮಾಪನಕ್ಕೆ ಒಳಪಡಿಸುವ ಪರೀಕ್ಷೆಯ ವಿಧಾನಗಳು ಹಲವಾರು. ಮೌಖಿಕ ಪರೀಕ್ಷೆ, ಮುಚ್ಚು ಪುಸ್ತಕದ ಪರೀಕ್ಷೆ (ನಮ್ಮ ದೇಶದಲ್ಲಿ ಹೆಚ್ಚು ಚಾಲ್ತಿಯಲ್ಲಿದೆ), ಆನ್‌ಲೈನ್‌ ಪರೀಕ್ಷೆ, ತೆರೆದ ಪುಸ್ತಕದ ಪರೀಕ್ಷೆಯಂತಹ ವಿಧಾನಗಳು ಚಾಲ್ತಿಯಲ್ಲಿವೆ.

ತೆರೆದ ಪುಸ್ತಕದ ಪರೀಕ್ಷಾ ಪದ್ಧತಿಯಲ್ಲಿ, ಪರೀಕ್ಷಾ ಪ್ರಾಧಿಕಾರ ಅನುಮತಿಸಿರುವ ಪುಸ್ತಕಗಳು, ನೋಟ್ಸ್‌, ಅಧ್ಯಯನ ವಸ್ತುಗಳು, ಕ್ಯಾಲ್ಕ್ಯುಲೇಟರುಗಳಂತಹ ಪೂರಕವಾದ ಸಲಕರಣೆಗಳನ್ನು ಪರೀಕ್ಷಾ ಕೊಠಡಿಗೆ ಒಯ್ಯಬಹುದು ಮತ್ತು ಅವುಗಳ ಸಹಾಯದಿಂದ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯಬಹುದು.

ಈಗಿನ ಸಾಂಪ್ರದಾಯಿಕ ಕಲಿಕೆ ಮತ್ತು ಮೌಲ್ಯಮಾಪನ ಪದ್ಧತಿಗೆ ಒಗ್ಗಿಕೊಂಡಿರುವ ಬಹುತೇಕ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಈ ವಿಧಾನ ಕ್ರಾಂತಿಕಾರಕ ಮತ್ತು ಅಸಂಗತ ಎನಿಸುತ್ತದೆ. ಇಂತಹ ಪರೀಕ್ಷೆಯಲ್ಲಿ ಯಾವುದೇ ಅರ್ಥವಿಲ್ಲ, ಕಲಿಕೆಯ ಮೌಲ್ಯಮಾಪನ ಪ್ರಕ್ರಿಯೆಯ ಉದ್ದೇಶವೇ ಈಡೇರುವುದಿಲ್ಲ ಎಂಬ ವಾದವನ್ನು ಕೆಲವರು ಮಂಡಿಸುತ್ತಾರೆ. ಆದರೂ ಈ ಪದ್ಧತಿಯಲ್ಲಿ ಹಲವು ಅನುಕೂಲಗಳನ್ನೂ ಕಾಣಬಹುದು. ಪರಿಕಲ್ಪನಾ ತಿಳಿವಳಿಕೆ, ವಿಮರ್ಶಾತ್ಮಕ ಚಿಂತನೆ ಮತ್ತು ವಿಶ್ಲೇಷಣಾ ಕೌಶಲಕ್ಕೆ ಈ ಪದ್ಧತಿ ಹೆಚ್ಚು ಒತ್ತು ನೀಡುತ್ತದೆ. ಸೃಜನಶೀಲ ಕಲಿಕೆ ಮತ್ತು ಸಂಶೋಧನೆಯಲ್ಲಿ ಆಸಕ್ತಿಯುಂಟಾಗುವ ಅವಕಾಶ ಇರುತ್ತದೆ. ಇದಕ್ಕೆ ವಿರುದ್ಧವಾಗಿ, ಪ್ರಸಕ್ತ ಪರೀಕ್ಷಾ ಪದ್ಧತಿಯಲ್ಲಿ ವಿಷಯಗಳ ಬಗೆಗಿನ ಜ್ಞಾನ ಮತ್ತು ಗ್ರಹಣಶಕ್ತಿಯನ್ನು ಅಳೆಯುವ ಬದಲು, ವಿದ್ಯಾರ್ಥಿಗಳ ಸ್ಮರಣ
ಶಕ್ತಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಉತ್ತರಗಳ ಉರು ಹೊಡೆಯುವುದನ್ನು ಉತ್ತೇಜಿಸಲಾಗುತ್ತಿದೆ.

ತೆರೆದ ಪುಸ್ತಕ ಪರೀಕ್ಷಾ ವಿಧಾನದಲ್ಲಿ ಕೆಲವು ಅನನುಕೂಲಗಳಿವೆ. ವಿದ್ಯಾರ್ಥಿಗಳ ಸ್ಮರಣಶಕ್ತಿಯ ಸಂರಕ್ಷಣಾ ಸಾಮರ್ಥ್ಯ ಕುಗ್ಗುತ್ತದೆ. ನಿಯಮಗಳು, ಸೂತ್ರಗಳಂತಹ ಮೂಲಭೂತ ಅಂಶಗಳನ್ನು ಸಹ ಕಂಠಪಾಠ ಮಾಡುವ ಪ್ರಕ್ರಿಯೆ ಕುಂಠಿತವಾಗುತ್ತದೆ.

ವಿಷಯಗಳ ಪರಿಕಲ್ಪನೆ ಮತ್ತು ಅನ್ವಯಿಸುವಿಕೆ ಆಧಾರದ ಪ್ರಶ್ನೆಗಳನ್ನು ಕೇಳುವುದರಿಂದ, ವಿದ್ಯಾರ್ಥಿ
ಗಳಲ್ಲಿ ಆತಂಕ ಉಂಟಾಗಬಹುದು. ಸಾಮಾನ್ಯ ಗ್ರಹಿಕೆಯಿರುವ ವಿದ್ಯಾರ್ಥಿಗಳ ಸಾಧನೆಯ ಮಟ್ಟ ಕುಂಠಿತ
ವಾಗಬಹುದು. ವಿದ್ಯಾರ್ಥಿಗಳ ಬಳಿ ಅಧ್ಯಯನ ಸಾಮಗ್ರಿಯಿದ್ದರೂ ಸರಿಯಾದ ಪರೀಕ್ಷಾ ಸಿದ್ಧತೆ ಇಲ್ಲದಿದ್ದಲ್ಲಿ ಉತ್ತರಗಳನ್ನು ಹುಡುಕಲು ಸಾಧ್ಯವಾಗದಿರಬಹುದು ಅಥವಾ ಹೆಚ್ಚು ಕಾಲ ತೆಗೆದುಕೊಳ್ಳಬಹುದು.‌

ಎಲ್ಲ ಪರೀಕ್ಷಾ ಪದ್ಧತಿಗಳಿಗಿಂತ ಈ ಪರೀಕ್ಷಾ ವಿಧಾನ ಬಹು ಕಠಿಣವಾದದ್ದು. ಹೀಗಿದ್ದರೂ ವಿದ್ಯಾರ್ಥಿಗಳು ಪರೀಕ್ಷೆಯನ್ನು ಲಘುವಾಗಿ ಪರಿಗಣಿಸಬಹುದು ಮತ್ತು ಅತಿಯಾದ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬಹುದು. ಪುಸ್ತಕಗಳನ್ನು ನೋಡಿಕೊಂಡು ಉತ್ತರವನ್ನು ನಕಲು ಮಾಡಬಹುದು ಎಂಬಂತಹ ತಪ್ಪುಕಲ್ಪನೆಯೂ ಇದೆ. ಪುಸ್ತಕಗಳಿಂದ ನೇರವಾಗಿ ಉತ್ತರಗಳನ್ನು ನಕಲು ಮಾಡಿದರೆ ಕೃತಿಚೌರ್ಯ ಶೋಧನೆಗೆಳಪಡಿಸಲಾಗುತ್ತದೆ ಎಂಬ ಮಾಹಿತಿ ವಿದ್ಯಾರ್ಥಿಗಳಿಗೆ ತಿಳಿದಿಲ್ಲ. ವಾಸ್ತವದಲ್ಲಿ, ಈ ಪದ್ಧತಿಯಲ್ಲಿ ನೇರವಾಗಿ ಉತ್ತರಿಸಬಲ್ಲ
ಪ್ರಶ್ನೆಗಳೇ ಇರುವುದಿಲ್ಲ. ಹೀಗಾಗಿ, ಬುದ್ಧಿಶಕ್ತಿ ಬಳಸಿ ಬರೆಯುವ ಸಾಮರ್ಥ್ಯ ಇರಬೇಕಾಗುತ್ತದೆ.

ಈ ಪದ್ಧತಿ ಅಳವಡಿಕೆಗೆ ಮುನ್ನ ಬೋಧನೆ, ಕಲಿಕೆಗೆ ಸಂಬಂಧಿಸಿದಂತೆ ಮೊದಲು ಸುಧಾರಣೆಗಳನ್ನು ತರಬೇಕಾಗುತ್ತದೆ. ಈಗಿನ ಶಿಕ್ಷಕಕೇಂದ್ರಿತ ಕಲಿಕಾ ವಿಧಾನವು ವಿದ್ಯಾರ್ಥಿಕೇಂದ್ರಿತ ಆಗಬೇಕಾ
ಗುತ್ತದೆ. ವಿದ್ಯಾರ್ಥಿಗಳು ವಿಷಯಗಳನ್ನು ಅರ್ಥ ಮಾಡಿಕೊಂಡು ಅಭ್ಯಾಸ ಮಾಡಬೇಕಾಗುತ್ತದೆ. ಪ್ರಶ್ನೆಪತ್ರಿಕೆಗಳ ಮಾದರಿಯಲ್ಲಿಯೂ ಸುಧಾರಣೆ ಅವಶ್ಯ. ಉರು ಹೊಡೆದು ಬರೆಯಬಹುದಾದಂತಹ ಪ್ರಶ್ನೆಗಳಿಗೆ ಬದಲಾಗಿ, ಪರಿಕಲ್ಪನಾ ತಿಳಿವಳಿಕೆಯನ್ನುಅಳೆಯುವ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಬೇಕಾಗು
ತ್ತದೆ. ಉದಾಹರಣೆಗೆ, ‘ನ್ಯೂಟನ್‌ ಚಲನೆಯ ನಿಯಮಗಳನ್ನು ಬರೆಯಿರಿ’ ಎಂಬ ನೇರ ಪ್ರಶ್ನೆಗೆ ಬದಲು, ಈ ನಿಯಮಗಳನ್ನು ಆಧರಿಸಿದ ಸಮಸ್ಯೆಗಳನ್ನು ಬಿಡಿಸಲು ಕೇಳಬೇಕು. ನ್ಯೂಟನ್‌ ಚಲನೆಯ ನಿಯಮಗಳ ಹಿಂದೆ ಇರುವ ತತ್ವಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಂಡಿದ್ದರೆ ಮಾತ್ರ ಸಮಸ್ಯೆಗಳನ್ನು ಬಿಡಿಸಲು ಸಾಧ್ಯವಾಗುತ್ತದೆ.

ಸೂಕ್ತ ಸಿದ್ಧತೆ ಮಾಡಿಕೊಂಡು, ನೂತನ ಪರೀಕ್ಷಾ ಪದ್ಧತಿಯನ್ನು ಅನುಷ್ಠಾನಗೊಳಿಸಿದರೆ ಯಶಸ್ಸು ಕಾಣಬಹುದು. ತಕ್ಷಣವೇ ಜಾರಿ ಮಾಡಿದರೆ, ಶಿಕ್ಷಣದ ಗುಣಮಟ್ಟ ಕಡಿಮೆಯಾಗಿ ನಕಾರಾತ್ಮಕ ಪರಿಣಾಮಗಳು ಹೆಚ್ಚಾಗುತ್ತವೆ. ಮತ್ತೊಂದು ವಿಷಯವೆಂದರೆ, ತೆರೆದ ಪುಸ್ತಕದ ವಿಧಾನದಲ್ಲಿಯೂ ಕಲಿಕೆಯಲ್ಲಿ ಆಸಕ್ತಿಯಿಲ್ಲದಿರುವ ವಿದ್ಯಾರ್ಥಿಗಳು ಅನುತ್ತೀರ್ಣರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಉತ್ತಮ ಪರಿಣಾಮಗಳನ್ನು ಕಾಣಬೇಕೆಂದಾದರೆ ಆತುರದ ನಿರ್ಧಾರ ಸಲ್ಲದು.

ಲೇಖಕ: ನಿವೃತ್ತ ನಿರ್ದೇಶಕ ಹಾಗೂ ಪ್ರಾಂಶುಪಾಲ
ಸಿಂಧಿ ಕಾಲೇಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT