ಭಾನುವಾರ, ಮೇ 29, 2022
30 °C
ಎದೆಭಾರ ಕಳೆದುಕೊಳ್ಳುವ ಸುಸಂದರ್ಭಗಳನ್ನು ನಮಗಾಗಿ ಸೃಷ್ಟಿ ಮಾಡಿಕೊಳ್ಳಲೇಬೇಕಾದ ಅನಿವಾರ್ಯ ಸಂದರ್ಭ ಇದು

ಸಂಗತ: ಜೀವನ್ಮುಖಿಯಾಗಲಿ ನಮ್ಮ ಜಗತ್ತು

ಸತೀಶ್ ಜಿ.ಕೆ. ತೀರ್ಥಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಿರಿಯರೊಬ್ಬರು ಮೊನ್ನೆ ದಾರಿಯಲ್ಲಿ ಸಿಕ್ಕ ತಮ್ಮ ಹಳೆಯ ಗೆಳೆಯರೊಬ್ಬರ ಮಗನನ್ನು ಮಾತನಾಡಿಸುತ್ತಾ ಅವರ ಮನೆಯವರೆಗೂ ನಡೆದುಹೋಗಿದ್ದರು. ಆದರೆ ಗೇಟಲ್ಲಿಂದಲೇ ‘ಸರಿ ಬರ್ತೀನಿ... ಬಾಯ್ ಅಂಕಲ್’ ಅಂತ ಒಳನಡೆದ ಯುವಕನ ನಡವಳಿಕೆ ಬಗ್ಗೆ, ಕುಟುಂಬದ ಹಿತೈಷಿಯಾಗಿದ್ದ ಹಿರಿಯರಿಗೆ ಅತೀವ ಬೇಸರವಾಯಿತು.

ಮನುಷ್ಯ ಸಮಾಜಜೀವಿ, ತಾವು ಸಮಾಜದೊಟ್ಟಿಗೆ ಬದುಕಬೇಕಾದವರು ಅನ್ನುವ ಪ್ರಜ್ಞೆಯನ್ನೇ ಹೊಸ ಪೀಳಿಗೆಯು ಮರೆಯಲು ಕಾರಣವೇನು? ‘ಯಾರ ಹಂಗೇನಿದೆ’ ಎಂಬ ಮನಃಸ್ಥಿತಿಯಲ್ಲಿ ತಮ್ಮ ಪರಿಧಿಯನ್ನು ನಿರಂತರವಾಗಿ ಸಂಕುಚಿಸಿಕೊಳ್ಳಲು ಕಾರಣವೇನು? ಮನೆ ಮತ್ತು ಸಮಾಜದ ಬಾಹ್ಯ ಒತ್ತಡದಲ್ಲಿ ಮಕ್ಕಳು ತಮಗೊಪ್ಪದ, ತಮ್ಮದಲ್ಲದ ಭಾಷೆ, ಓದು, ಅಂಕ, ಹುದ್ದೆ ಮತ್ತು ಸಂಪತ್ತಿನ ಕ್ರೋಡೀಕರಣವನ್ನೇ ಯಶಸ್ಸೆಂದು ಪರಿಭಾವಿಸಿ ಕೃತಕ ಬದುಕಿಗೆ ಬಂದಿಯಾಗುವ ಬಗೆ ಕಣ್ಣೆದುರಿಗಿದೆ. ಮಕ್ಕಳನ್ನು ಕಾನ್ವೆಂಟ್ ಸಂಸ್ಕೃತಿಗೆ ತಳ್ಳಿ, ಅಂಕ- ರ‍್ಯಾಂಕ್‍ಗಳ ಆಧಾರದ ಮೇಲಿನ ಜೀವನಕ್ರಮಕ್ಕೂ ಕೇವಲ ಕಾಸು ತರುವ ಉದ್ಯೋಗಕ್ಕೂ ಬೆನ್ನುಬಿದ್ದದ್ದರ ಪರಿಣಾಮವದು.

ಆಗೆಲ್ಲಾ ಸಿದ್ಧಮಾದರಿಯಾಗಿ ಮನೆಯ ಒಳ ಹೊರಗು ಲಭ್ಯವಿದ್ದ ಬದುಕಿನ ಪಾಠಗಳಲ್ಲಿ, ಬೆವರಿನ ಕಥೆಗಳಲ್ಲಿ ಜೀವನಮೌಲ್ಯಗಳ ಬೀಜ ಬಿತ್ತನೆ ಸಾಧ್ಯವಿತ್ತು. ಯಾರಾದರೂ ನಮ್ಮೆಡೆಗೆ ಆತ್ಮೀಯತೆ ತೋರುತ್ತಾರೆಂದರೆ ಅಲ್ಲೇನೋ ವಂಚನೆಯ ಸಂಚಿದೆ ಎಂದು ಅನುಮಾನ ಪಡಬೇಕಾದ ಸಂದರ್ಭವಿದು!

ಈಗೀಗ ಲೆಕ್ಕಾಚಾರದ ಬದುಕಿನಲ್ಲಿ ಸ್ವಾರ್ಥ- ಸಂಕುಚಿತತೆಯೊಂದಿಗೆ ಬೇರೂರಿದ ಧನದಾಹ ಮತ್ತು ಯಾಂತ್ರಿಕ ಜೀವನಕ್ರಮವು ಬಾಂಧವ್ಯದ ತಂತುವನ್ನು ಸಡಿಲಗೊಳಿಸಿದೆ. ಪೇಟೆ- ಪಟ್ಟಣಗಳು ಒಡನಾಟದ ಬೆಸುಗೆಯಲ್ಲಿ ನಿರ್ಜೀವೀಕರಣಗೊಂಡಾಗಿದೆ. ಹೃದಯ ವೈಶಾಲ್ಯದಿಂದ ಜೀವಿಸುತ್ತಿದ್ದ ಅನ್ನದಾತ ಹಳ್ಳಿಗಳೂ ಹೀಗೆ ಜಡವಾದರೆ ನಾಳೆಗಳ ಕಥೆ ಏನು? ಪೇಟೆಯೆಡೆಗೆ ವಲಸೆ ಹೊರಡುವ ಯುವಶಕ್ತಿಯ ಏಕಮುಖ ಪ್ರವಾಹದಲ್ಲಿ ಹಳ್ಳಿಗಳು ತಮ್ಮ ವೈಭವ ಹಾಗಿರಲಿ ಗುಣಚೈತನ್ಯವನ್ನೂ ಕಳೆದುಕೊಂಡು ನಿತ್ರಾಣಗೊಳ್ಳುತ್ತಿವೆ.

ಹಿಂದೆಲ್ಲಾ, ಇದ್ದ ಅಲ್ಪ ಸೌಖ್ಯದಲ್ಲಿ ಸಹನೆಯೂ ವಿನಯವೂ ಇದ್ದವು. ಮೈಲಿಗೊಂದು ಮನೆಯಿದ್ದರೂ ಮುಖತಃ ಮಾತಾಡಿಬರಲು ಪುರಸತ್ತು ಇತ್ತು. ಕಷ್ಟಸುಖಗಳಲ್ಲಿ ಪರಸ್ಪರ ಪಾಲ್ಗೊಳ್ಳುವಿಕೆಯಿತ್ತು. ಸಹ ಬಾಳ್ವೆಯ ಖುಷಿಯಿತ್ತು. ಇವತ್ತು ಹಾಗಿಲ್ಲ. ಬದುಕು ಅವಸರದ ಬೆನ್ನೇರಿದೆ. ಮನುಷ್ಯ ಸಾಕ್ಷರನಾದಂತೆಲ್ಲಾ ಸ್ವಾರ್ಥಿಯಾಗಿಬಿಟ್ಟ, ಸೌಲಭ್ಯ ಹೆಚ್ಚಿದಂತೆಲ್ಲಾ ಸಂಕುಚಿತತೆಯಲ್ಲಿ ಬಂದಿಯಾದ. ತನ್ನದೇ ಮುಕ್ತ ಮಾತು, ನಿರಾಳ ನಗು, ಸಹಜ ಭಾವಗಳನ್ನು ಮರೆತ.

ಮೊಬೈಲು, ಇಂಟರ್ನೆಟ್‍ ಯುಗದ ಸಂಪರ್ಕ ಕ್ರಾಂತಿಯು ಜಗತ್ತನ್ನು ಕಿರಿದಾಗಿಸಿ ದೂರದೇಶದ ಅನಾಮಿಕರೊಟ್ಟಿಗೆ ಸಂಬಂಧ ಬೆಸೆದಿದ್ದರೂ ಪಕ್ಕದಲ್ಲೇ ಕುಳಿತವರ ಬಗೆಗೊಂದು ದಿವ್ಯನಿರ್ಲಕ್ಷ್ಯ ತಳೆಯಲು ಕಾರಣವಾಗಿರುವುದು ಸುಳ್ಳಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಸ್ನೇಹಿತರನ್ನು ಕಲೆಹಾಕುವ ಭ್ರಮೆಯಲ್ಲಿ ನೆರೆಮನೆಯವರೊಟ್ಟಿಗೆ ಅಪರಿಚಿತರಾಗಿ ಉಳಿದು ನಾವೀಗ ದ್ವೀಪದಂತೆ ಬದುಕುವುದನ್ನು ರೂಢಿಸಿಕೊಂಡಿದ್ದೇವೆ. ಧಾವಂತದ ಬದುಕಿನ ಭಾಗವಾಗಿ ಎರಗಿರುವ ಅಪರಿಮಿತ ಒತ್ತಡಗಳನ್ನು ಮೀರಿ ಸಾವಧಾನ ಮತ್ತು ಮನೋಸ್ಥೈರ್ಯವನ್ನು ಕಾಯ್ದು ಕೊಳ್ಳುವ, ಜೀವನೋತ್ಸಾಹವನ್ನು ಸಾಕಿಕೊಳ್ಳಬೇಕಾದ ಸವಾಲು ನಮಗಿದೆ.

ಹಲವೆಡೆ ಕೊರೊನಾದ ಕಾಲಘಟ್ಟವು ತಂದೊ ಡ್ಡಿರುವ ಸಾವು-ನೋವು, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತ್ಯಂತರಗಳಲ್ಲಿ ಮನಸ್ಸು ಮರಗಟ್ಟಿದೆ. ಸದ್ಯದ ಸಂಕಟ ದಿಂದ ಪಾರಾಗುವ ಮಾರ್ಗವನ್ನು ಅತ್ಯಂತ ಜರೂರಾಗಿ ಹುಡುಕಿಕೊಳ್ಳಬೇಕಿದೆ.

ಬಹುಮುಖ್ಯವಾಗಿ, ಪ್ರತಿಷ್ಠೆ ಬದಿಗೊತ್ತಿ ತೆರೆದ ಮನಸ್ಸಿನಿಂದ ಪರಿಚಿತರೊಟ್ಟಿಗೆ ಪರಸ್ಪರ ಬೆರೆಯುವಂತಾಗಬೇಕು. ಅಕ್ಕಪಕ್ಕದವರು, ಬಂಧುಗಳ ಮನೆಗಳಿಗೆ ಆಗಾಗ ಭೇಟಿ ನೀಡುವ, ಇರುವುದನ್ನು ಹಂಚಿ ತಿನ್ನುವ, ಕಷ್ಟಸುಖಗಳಿಗೆ ಪರಸ್ಪರ ಕಿವಿಯಾಗುವ, ಸಣ್ಣದೊಂದು ಕುಶಲೋಪರಿಯಲ್ಲಿ ಕೂತು ಹರಟುವ, ಹಗುರಾಗುವ ಅಗತ್ಯವೀಗ ಹಿಂದೆಂದಿಗಿಂತಲೂ ಹೆಚ್ಚಿದೆ. ವಾಸ್ತವವನ್ನು ಒಪ್ಪಿಕೊಳ್ಳುವ, ವಿಭಿನ್ನ ಆಚಾರ- ಸಂಸ್ಕೃತಿಯನ್ನು ಸಹಿಸಿಕೊಳ್ಳುವ, ಇತರರ ಸದ್ಗುಣ- ಸಾಧನೆಗಳನ್ನು ಪ್ರಶಂಸಿಸುವ ಮನೋಭಾವ ಹೊಂದುವುದು ಅಪೇಕ್ಷಣೀಯ.

ಮನುಷ್ಯನನ್ನುಳಿದ ಜಗತ್ತಿನ ಜೀವಪ್ರಭೇದಗಳು ಸಮತೆಯನ್ನು ಬದುಕುತ್ತವೆ. ಮಮತೆಗೆ ಹಾತೊರೆ ಯುತ್ತವೆ. ಮನುಷ್ಯ ಮಾತ್ರ ಹುಟ್ಟಿನ ಕಾರಣಕ್ಕೆ ಜಾತಿ- ಧರ್ಮ, ಹಣ- ಅಂತಸ್ತು, ದೇಶ- ಭಾಷೆಗಳ ಗೋಡೆಗಳಲ್ಲಿ ಪ್ರತ್ಯೇಕಗೊಳ್ಳುತ್ತಾನೆ. ಎಲ್ಲಾ ಥರದ ಭೇದಭಾವದ ಗಡಿಬೇಲಿಯನ್ನು ಕಿತ್ತೊಗೆದು ಗೆರೆ ಯಾಚೆಯ ವಿಶಾಲ ಬಯಲಿನಲ್ಲಿ ಮನೆಮಕ್ಕಳು ಆಡಿ ಬೆಳೆಯುವಂತಾದರೆ ಭವಿಷ್ಯದಲ್ಲಿ ಸಮಾಜವು ಅನಾ ಚಾರ, ಹಿಂಸೆ- ಕ್ರೌರ್ಯಗಳ ವಿಜೃಂಭಣೆ, ಮೌಲ್ಯ ಕುಸಿತದ ಕಳವಳವನ್ನು ಕಳೆದೀತು. ಪ್ರೀತಿ, ಸ್ನೇಹ, ಸಹಿಷ್ಣುತೆ, ಸಹಬಾಳ್ವೆಯ ಬಗ್ಗೆ ಪುಂಖಾನುಪುಂಖ ಪ್ರವ ಚನ ನೀಡಬೇಕಾದ ದರ್ದು ಕೂಡ ಕಡಿಮೆಯಾದೀತು.

ಯಶವಂತ ಚಿತ್ತಾಲರು ಹೇಳಿದಂತೆ ‘ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗಲು ಹುಟ್ಟಿದ್ದೇವೆ’. ಹಾಗಾಗಿ ಎಲ್ಲರೊಳಗೊಂದಾಗುವುದು ಮುಖ್ಯ. ದುರಾಸೆ, ಅತಿರೇಕ, ತಲ್ಲಣಗಳಲ್ಲಿ ಬೇಯು ತ್ತಿರುವ ಮನಸ್ಸನ್ನು ಸಂತೈಸಿಕೊಳ್ಳಬೇಕು. ಮನಸ್ಸು ಕದಡುವ ನಕಾರಾತ್ಮಕತೆಗಳಿಂದ, ಟಿ.ವಿ-ಮೊಬೈಲು ಹಾವಳಿಗಳಿಂದ ಪಾರಾಗಿ, ಇಷ್ಟದ ವ್ಯಕ್ತಿ- ವಿಚಾರಗಳ ಸಾಂಗತ್ಯದಲ್ಲಿ ಜೀವನ್ಮುಖಿಯಾಗಿ ಅರಳುವ ಬಗೆಯನ್ನು ಅರಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.