ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ‘ರತ್ನಾಕರ’ನ ಒಡಲೀಗ ವಿಷಮಯ

ತ್ಯಾಜ್ಯವನ್ನು ಚರಂಡಿಗೋ ನದಿಗೋ ಎಸೆಯುವುದು ಭೂಮಿಯ ಜೈವಿಕ ಸಂಪತ್ತಿನ ಕೋಟೆಯನ್ನೇ ಛಿದ್ರಗೊಳಿಸುತ್ತದೆ ಎಂಬ ಸತ್ಯವನ್ನು ಅರಿಯಬೇಕಿದೆ
Last Updated 16 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಇಂಡೊನೇಷ್ಯಾದ ಮಧ್ಯ ಸುಲವೇನಿ ಪ್ರಾಂತ್ಯದ ಪಲು ನದಿಯಲ್ಲಿ ಒಂದು ಮೊಸಳೆಯನ್ನು ಹಿಡಿಯಲು ಪರಿಸರ ತಜ್ಞರು ಐದು ವರ್ಷಗಳಿಂದ ಪ್ರಯತ್ನಿಸುತ್ತಲೇ ಇದ್ದಾರೆ. ದಡದ ಬಳಿಗೆ ಬಂದರೂ ಅದು ಕೈವಶವಾಗದೆ ನುಸುಳಿಕೊಳ್ಳುತ್ತಿದೆ. ಯಾಕೆ ಈ ಪ್ರಯತ್ನ ಎಂದರೆ, ಮೊಸಳೆಯ ಕುತ್ತಿಗೆಯಲ್ಲಿ ದ್ವಿಚಕ್ರ ವಾಹನವೊಂದರ ಟೈರು ಬಿಗಿಯಾದ ಹಾರದ ಹಾಗೆ ಸೇರಿಕೊಂಡಿದೆ. ಅದಕ್ಕೆ ಕುತ್ತಿಗೆ ತಿರುಗಿಸಲು ಕಷ್ಟವಾಗಿದೆ. ದೊಡ್ಡ ಬೇಟೆಯ ಮೇಲೆರಗಲು ಸಾಧ್ಯವಾಗದೆ ಹಸಿವಿನಿಂದ ಒದ್ದಾಡುತ್ತಿರುವ ಮೊಸಳೆ ಸಾವಿನ ದಿನಗಣನೆ ಮಾಡುತ್ತಿದೆ. ಆದರೂ ಅದನ್ನು ಹಿಡಿದು ಟೈರಿನಿಂದ ಕುತ್ತಿಗೆಯನ್ನು ವಿಮುಕ್ತಗೊಳಿಸಲು ತಜ್ಞರು ಹರಸಾಹಸ ಮಾಡುತ್ತಿದ್ದರೂ ಸಾಧ್ಯವಾಗದೆ ಹೋಗಿದೆ.

ಒಂದು ವಸ್ತು ನಿರುಪಯುಕ್ತ ಎನಿಸಿದಾಗ ಅದರ ವಿಲೇವಾರಿಗೆ ಕಾಣಿಸುವ ಸುಲಭ ಪರಿಹಾರ ಮಾರ್ಗವೆಂದರೆ ನದಿಗಳಿಗೆ ಎಸೆಯುವುದು. ಅದರಲ್ಲಿ ಬಹುದೊಡ್ಡ ಪಾಲು ಪ್ಲಾಸ್ಟಿಕ್‌ನ ನೀರಿನ ಬಾಟಲಿಗಳು ಹಾಗೂ ಕೈಚೀಲಗಳು. ನದಿಗಳು ಇದರಲ್ಲಿ ಬಹುಪಾಲನ್ನು ಸಾಗರಗಳಿಗೆ ತಲುಪಿಸಿ ತಮ್ಮ ಕೆಲಸ ಮುಗಿಸುತ್ತವೆ. ಆದರೆ ಕೋಟಿ ಕೋಟಿ ಜೀವರಾಶಿಗೆ ನೆಲೆಯಾಗಿರುವ ಸಾಗರ ಈಗ ಶತಮಾನಗಳಿಂದ ಬದುಕಿಕೊಂಡಿದ್ದ ಹಲವಾರು ಜೀವಿಗಳನ್ನು ನಿರಂತರ ವಾಗಿ ಭೂಪಟದಿಂದ ಅಳಿಸಿಹಾಕಲು ಸನ್ನದ್ಧವಾಗಿದೆ.

ಸಮುದ್ರವನ್ನು ರತ್ನಾಕರ ಎಂಬ ಹೆಸರಿನಿಂದಲೂ ಕರೆಯಲಾಗಿದೆ. ಅಸಂಖ್ಯ ಸುವಸ್ತುಗಳಿಗೆ ಕಣಜ ದಂತಿದ್ದ ಈ ಜಲರಾಶಿಯಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಚೀಲಗಳು ನೀರು ಮತ್ತು ಸೂರ್ಯನ ಬೆಳಕಿನ ಸಂಪರ್ಕದಿಂದಾಗಿ ಬಹು ಸೂಕ್ಷ್ಮ ಮೈಕ್ರೊ ಕಣಗಳಾಗಿ ನೀರಿನ ಮೇಲ್ಮೈ ಮತ್ತು ಏಳು ಮೈಲು ಆಳದವರೆಗೂ ತಲುಪುತ್ತವೆ. ನೀರಿನೊಂದಿಗೆ ಈ ಕಣಗಳನ್ನು ಸೇವಿಸಿದ ಮೀನುಗಳು, ಸಸ್ತನಿಗಳು, ಪಕ್ಷಿಗಳು ಜೀರ್ಣಶಕ್ತಿ ಕಳೆದು ಕೊಂಡು ನಿರ್ವಂಶವಾಗುವ ಸಾಧ್ಯತೆಯ ಕುರಿತು ಪರಿಸರ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಪ್ಲಾಸ್ಟಿಕ್ ಉತ್ಪಾದನಾ ಕಾರ್ಖಾನೆಗಳ ತ್ಯಾಜ್ಯವನ್ನು ಸಮುದ್ರಕ್ಕೆ ಸೇರಿಸಲಾಗುತ್ತದೆ. ಈಕ್ವೆಡಾರ್‌ನಿಂದ ದಕ್ಷಿಣ ಆಫ್ರಿಕಾದ ತನಕ 28 ದೇಶಗಳಿಂದ ಹರಿದು ಬರುವ ಈ ತ್ಯಾಜ್ಯ 20 ಮಿಲಿಗ್ರಾಂ ತೂಕದ ನರ್ಡಲ್ಸ್ ಎಂಬ ಉಂಡೆಯಾಗಿ ನೀರಿನಲ್ಲಿ ತೇಲುತ್ತದೆ. ಡಿಡಿಟಿ, ಪಾದರಸದಂತಹ ವಿಷ ರಾಸಾಯನಿಕಗಳನ್ನು ಅದು ಹೀರಿಕೊಳ್ಳುತ್ತದೆ. ನರ್ಡಲ್ಸ್ ಸುಲಭವಾಗಿ 200 ಜಾತಿಯ ಮೀನು ಮತ್ತು 400 ಬಗೆಯ ಹಕ್ಕಿಗಳ ಹೊಟ್ಟೆ ಸೇರಿದ ಫಲವಾಗಿ ಅವುಗಳ ವಂಶವೇ ನಿರ್ಮೂಲವಾಗಿದೆಯಂತೆ.

ಕಡಲಿನ ಬಳಿ ಆಹಾರ ಸೇವಿಸದೆ ರಾಶಿ ಬಿದ್ದಿರುವ ಆಮೆಗಳನ್ನು ಪರೀಕ್ಷಿಸಿದಾಗ ಅವುಗಳ ಕರುಳಿನ ಪೂರ್ತಿ ತುಂಬಿಕೊಂಡಿರುವ ನರ್ಡಲ್ಸ್, ಆಹಾರ ಸೇವನೆಯನ್ನು ತಡೆದಿರುವ ಅಂಶ ಬಯಲಿಗೆ ಬಂದಿದೆ. ಈಕ್ವೆಡಾರ್‌ನಲ್ಲಿ ಇದೇ ಕಾರಣದಿಂದ 5.70 ಲಕ್ಷ ಏಡಿಗಳ ಮಾರಣಹೋಮ ನಡೆದುದನ್ನೂ ಗಮನಿಸಲಾಗಿದೆ.

ದಕ್ಷಿಣ ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದ ಹೆಂಡರ್ಸನ್ ಹಾಗೂ ಕೊಕೋನ್ ದ್ವೀಪಗಳ ಬಳಿ ಒಂದೇ ವರ್ಷದಲ್ಲಿ ಒಂದು ಅಡಿ ದಪ್ಪವಿರುವ ನೂತನ ವಿಶಾಲ ದ್ವೀಪ ಸೃಷ್ಟಿಯಾಗಿದೆ. ಕೋವಿಡ್‌– 19ರ ಸಮಯದ ಕೈಗವಸು ಮತ್ತು ಮಾಸ್ಕ್‌ಗಳೇ ಅತ್ಯಧಿಕ ಪ್ರಮಾಣದಲ್ಲಿ ಇಲ್ಲಿ ಸಂಗ್ರಹಗೊಂಡು ದ್ವೀಪದ ನೆಲವನ್ನು ರೂಪಿಸಿವೆ. ಕೆರಿಬಿಯನ್ ಸಮುದ್ರದಲ್ಲಿ ಭಾರಿ ಗಾತ್ರದ ಆಕೃತಿಗಳು ತೇಲುವುದನ್ನು ಕಂಡು ಸಾಗರ ಸಂಶೋಧಕರು ದಿಗ್ಭ್ರಮೆಗೊಂಡಿದ್ದರು. ಅವು ಆಮೆಗಳಾಗಿರಲಿಲ್ಲ. ಮೈಕ್ರೊಪ್ಲಾಸ್ಟಿಕ್ ಚೀಲಗಳು ಒಟ್ಟುಗೂಡಿ ಪರ್ವತಾಕಾರ ತಳೆದು ಮುಂದೆ ಹೋಗುತ್ತಿದ್ದವು. ಪೆಸಿಫಿಕ್, ಅಟ್ಲಾಂಟಿಕ್, ಆರ್ಕಟಿಕ್‌ ಸೇರಿ ಐದು ಸಾಗರಗಳಲ್ಲಿ ಇಂತಹ ಸಾವಿರಾರು ಪರ್ವತಗಳ ದೃಶ್ಯ ಪ್ರತಿದಿನವೂ ಸಾಮಾನ್ಯವಾಗಿದ್ದರೆ, 90 ಲಕ್ಷ ಟನ್ ಭಗ್ನಾವಶೇಷ ದಡಗಳಿಗೆ ತಲುಪುತ್ತಿದೆಯಂತೆ. ಹೀಗಾಗಿ ಫ್ರಾನ್ಸ್ ಸೇರಿ 30 ದೇಶಗಳು ಪ್ಲಾಸ್ಟಿಕ್ ಚೀಲದ ಬಳಕೆಗೆ ಅಂಕುಶ ಹಾಕಿವೆ.

ವೆನಿಸ್ ಬಿನಾಲೆಯಲ್ಲಿ ಕಡಲಿನಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ಸಲಕರಣೆಗಳನ್ನು ಹಾರ, ಗೊಂಬೆಯಂತಹ ಉಪಯುಕ್ತ ವಸ್ತುಗಳಾಗಿ ರೂಪಿಸುವ ಕಾಯಕದಲ್ಲಿ ನಿರತರಾಗಿರುವ ಬಹುಸಂಖ್ಯಾತರು ‘ಗಾರ್ಬೇಜ್ ರಾಜ್ಯ’ ವನ್ನು ಸ್ಥಾಪಿಸಿದ್ದಾರೆ. ಈ ಕಾಲ್ಪನಿಕ ರಾಜ್ಯದ ಅಧ್ಯಕ್ಷರಾಗಿದ್ದವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ.

ಬಲು ದೂರದ ಮಾತೇಕೆ, ಚೆನ್ನೈಯಲ್ಲಿ ಬಂಗಾಳ ಕೊಲ್ಲಿಯ ಮರೀನಾ ಬೀಚ್‍ನಲ್ಲಿ ಹಿಮಸಾಗರದಂತೆ ರಾಶಿ ರಾಶಿ ನೊರೆ ಹರಡುತ್ತದೆ. ಈ ಬುರುಗಿನಲ್ಲಿ ಮಕ್ಕಳು ಮತ್ತು ಪ್ರವಾಸಿಗರು ಖುಷಿಯಿಂದ ಆಟವಾಡು ತ್ತಾರೆ. ವಿಯೆನ್ನಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಇದನ್ನು ಪರೀಕ್ಷಿಸಿದ್ದಾರೆ. ಇದರಲ್ಲಿ ಕೊಳೆಯುತ್ತಿರುವ ಕಡಲಕಳೆ, ಪ್ಲಾಸ್ಟಿಕ್ ಕಣಗಳ ಜೊತೆಗೆ ನಗರದ ಶೇ 40ರಷ್ಟು ಕೊಳಚೆ ನೀರನ್ನು ಸಮುದ್ರಕ್ಕೆ ಸೇರಿಸುವ ಕಾರಣ ಅದರಲ್ಲಿರುವ ಸಾಬೂನಿನ ಕಣ ಗಳಿಂದಾಗಿ ಬುರುಗು ಸೃಷ್ಟಿಯಾಗುತ್ತದೆ. ಇದರಲ್ಲಿ ಆಟವಾಡಿದವರಿಗೆ ವಿಷ ರಾಸಾಯನಿಕಗಳು ಮಾರಕ ವಾಗುತ್ತವೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ತ್ಯಾಜ್ಯವನ್ನು ಸಂಗ್ರಹಿಸಿ, ಬೇರ್ಪಡಿಸುವ ಶ್ರಮವೇ ಬೇಡವೆಂದು ಪ್ರಜ್ಞಾವಂತರು ಕೂಡ ಚರಂಡಿಗೋ ನದಿಗೋ ಅದನ್ನು ಎಸೆಯುವುದಿದೆ. ತಮ್ಮ ಈ ಕೊಡುಗೆ ಭೂಮಿಯ ಜೈವಿಕ ಸಂಪತ್ತಿನ ಕೋಟೆಯನ್ನೇ ಛಿದ್ರಗೊಳಿಸುತ್ತದೆ ಎಂಬ ಸತ್ಯವನ್ನು ಅವರು ಅರಿಯ ಬೇಕಾಗಿದೆ. ಕೊಳಚೆ ನೀರು, ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರ ಸೇರದಂತೆ ಮಾಡುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ನಿರ್ವಹಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT