ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಬದುಕೆಂದರೆ ಹಾಗೆ, ಅಚ್ಚರಿಗಳ ಸಂತೆ

ಕೆಲವೊಮ್ಮೆ ಬಂದೆರಗುವ ಕಷ್ಟ-ನಷ್ಟಗಳು ನಮ್ಮ ಮನೋಬಲವನ್ನೇ ಉಡುಗಿಸಿಬಿಡುವ ಅಪಾಯವಿದೆ. ಕೋವಿಡ್‌ ಕಾಲಘಟ್ಟದಲ್ಲಿ ಮನೋಸ್ಥೈರ್ಯವನ್ನು ಗಟ್ಟಿಗೊಳಿಸುವ ಪ್ರಯತ್ನ ಬಲಗೊಳ್ಳಬೇಕಿದೆ
Last Updated 15 ಸೆಪ್ಟೆಂಬರ್ 2021, 4:32 IST
ಅಕ್ಷರ ಗಾತ್ರ

ಇಲ್ಲಿ ಯಾವುದೂ ಶಾಶ್ವತ ಅಲ್ಲ, ಎಲ್ಲವೂ ಬದಲಾಗು ತ್ತವೆ. ಬದಲಾವಣೆಯೊಂದೇ ಶಾಶ್ವತ. ಕಾರಣ ‘ಪರಿವರ್ತನೆ ಜಗದ ನಿಯಮ’. ಹಣ, ಕೀರ್ತಿ, ಆಸ್ತಿ, ಅಂತಸ್ತು, ಸಾಮ್ರಾಜ್ಯ, ದೇಶ, ಭಾಷೆ, ಈರ್ಷ್ಯೆ ಎಲ್ಲವೂ ಮುಂದೊಂದು ದಿನ ಮಾಯವಾಗುತ್ತವೆ. ಆದರೆ ಬಗೆ ಬಗೆಯಾಗಿ ಬರೆದಿಟ್ಟ ಕೃತಿ, ಕಡೆದ ಕಲೆ, ಮಾಡಿದ ಸಾಧನೆ, ಬೀರಿದ ಪ್ರಭಾವಗಳೆಲ್ಲ ಕಾಲಗಡಿಯಾಚೆಗೆ ವರ್ತಮಾನವನ್ನು ಆಳುತ್ತವೆ.

ಹತ್ತನೇ ಶತಮಾನದಲ್ಲಿ ಬರೆಯುತ್ತಿದ್ದ ಪಂಪ ತನ್ನ ಕೃತಿಗಳಲ್ಲಿ ಇವತ್ತೂ ಬದುಕಿದ್ದಾನೆ. ಕಣ್ಕು ಕುಕ್ಕುವ ಹಂಪಿ- ಹಳೇಬೀಡಿನ ಶಿಲಾಕೃತಿಗಳು ಈಗಲೂ ಜೀವಂತ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ನಮ್ಮೊಡನೆ ಉಸಿರಾಡುತ್ತಲೇ ಇದ್ದಾರೆ. ಭೌತಿಕ ವ್ಯಕ್ತಿ ಯಾಗಿ- ವಸ್ತುವಾಗಿ ಅಲ್ಲದಿದ್ದರೂ ಜೀವ ಪ್ರಚೋದಕ ಶಕ್ತಿಯಾಗಿ... ಶಕ್ತಿಗೆ ಸಾವಿಲ್ಲ. ಕಾರಣ ‘ಶಕ್ತಿ ನಿತ್ಯದ ನಿಯಮ’. ಭೂಮಿ- ಭಾನು, ಗ್ರಹ- ನಕ್ಷತ್ರಗಳಾದಿಯಾಗಿ ಯಾವ ಕಾಯ- ಚರಾಚರಗಳೂ ಸ್ಥಿರವಲ್ಲ. ಸ್ಥಿರವಾದರೆ ಅವಕ್ಕೆ ಉಳಿವಿಲ್ಲ. ಬದುಕೂ ಅಷ್ಟೇ, ಅದು ನಿಂತ ನೀರಲ್ಲ. ನಿಂತರದು ಬಗ್ಗಡ.

ಭೂಮಿ ತನ್ನ ಪರಿಭ್ರಮಣೆಯ ಹಾದಿಯಲ್ಲಿ ಕ್ಷಣಕ್ಷಣಕ್ಕೆ ದಿಕ್ಕು ಬದಲಿಸುತ್ತಿದ್ದರೂ ನಿರ್ದಿಷ್ಟ ಕಕ್ಷೆಯನ್ನು ಬಿಟ್ಟು ಹೊರಳದೇ ಉರುಳಬೇಕಾದಲ್ಲೇ ಉರುಳುತ್ತದೆ. ನಮ್ಮ ನಾಳೆಗಳ ಬಗ್ಗೆ ನಮಗೆ ಅರಿವಿಲ್ಲ, ಸಾಗುವ ಹಾದಿಯುದ್ದ ಏರಿಳಿತಗಳು, ಅಸಂಖ್ಯ ತಿರುವುಗಳು. ನಿತ್ಯವೂ ಎದುರುಗೊಳ್ಳಲು ತುದಿಗಾಲಲ್ಲಿ ಕಾದಿರುವ ಸಮಸ್ಯೆ– ಸವಾಲುಗಳಿಗೆ ನಾವು ಎದೆಗೊಡಲೇಬೇಕು. ದೃಢ ಸಂಕಲ್ಪದೊಟ್ಟಿಗಿನ ಸತತ ಪರಿಶ್ರಮಕ್ಕೆ ಮಾತ್ರ ಅನಿರೀಕ್ಷಿತಗಳನ್ನು ಗೆಲ್ಲಬಲ್ಲ ತಾಕತ್ತು ಬರುತ್ತದೆ. ಸನ್ನಿವೇಶದ ಕೂಸಾಗಿರುವ ನಾವು ಕಠಿಣ ಸಂದರ್ಭ, ಪಾರಿಸರಿಕ ಸಂಗತಿಗಳನ್ನು ಹೇಗೆಲ್ಲಾ ಎದುರುಗೊಳ್ಳುತ್ತೇವೆ, ವಿದ್ಯಮಾನಗಳಿಗೆ ಎಷ್ಟು ಜೀವಂತಿಕೆ ಯಲ್ಲಿ ಪ್ರತಿಕ್ರಿಯಿಸುತ್ತೇವೆ ಎನ್ನುವುದರ ಆಧಾರದಲ್ಲಿ ನಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಡಾ. ಅಬ್ದುಲ್ ಕಲಾಂ ಅವರು ನುಡಿದಂತೆ ‘ಇಲ್ಲಿ ಯಾವುದೂ ಅಸಾಧ್ಯ ಅಲ್ಲ, ನಾನೇ ಸಾಧ್ಯ!’ ಈ ಮಾತಿಗೆ ಜೀವಂತ ಸಾಕ್ಷಿಯಾಗಿದ್ದವರು ಖಗೋಳ ಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ಸ್. ಅಸಹಜ ದೈಹಿಕ ದೌರ್ಬಲ್ಯಗಳಲ್ಲಿ ಅವರು ಸುದೀರ್ಘ ಎಪ್ಪತ್ತಾರು ವರ್ಷಗಳ ಕಾಲ ಬದುಕುಳಿದಿದ್ದೇ ವೈದ್ಯಲೋಕದ ದೊಡ್ಡ ಅಚ್ಚರಿ! ತಮ್ಮ ದೌರ್ಬಲ್ಯಗಳನ್ನು ಮೀರಿ ವಿಶ್ವಸೃಷ್ಟಿಯ ಅನೂಹ್ಯಗಳನ್ನು ಭೇದಿಸುತ್ತಾ ಹೊರಟ ಅವರ ಸಂಶೋಧನಾ ದಾರಿಯು ಮತ್ತೊಂದು ಅಚ್ಚರಿಯೇ ಸರಿ.

ಅಷ್ಟಕ್ಕೂ ನಮ್ಮ ಸೃಷ್ಟಿಯೇ ಒಂದು ವಿಸ್ಮಯ. ಜೀವ, ದೇಹ, ಜನನ, ಜೀವನ ಎಲ್ಲವೂ ಅದ್ಭುತಗಳೇ, ಲೋಕಸೃಷ್ಟಿಯಂತೆ. ಗರ್ಭಾಂಕುರದ ಪೂರ್ವದಲ್ಲಿ ಹೆಣ್ಣಿನ ಅಂಡನಾಳವನ್ನು ಪ್ರವೇಶಿಸುವ ಕೋಟ್ಯಂತರ ಶಕ್ತ ವೀರ್ಯಾಣುಗಳು ತತ್ತಿಯೊಳಗೆ ನುಸುಳಲು ನಿರಂತರವಾಗಿ ಸೆಣಸುತ್ತಿರುತ್ತವೆ, ಗೆಲುವಿನ ಆ ಒಂದು ಕ್ಷಣಕ್ಕಾಗಿ. ಕಟ್ಟಕಡೆಗೆ ಸ್ಪರ್ಧೆ ಗೆದ್ದು ತತ್ತಿಯ ಭಿತ್ತಿಯೊಳಗಿಳಿದು ಫಲಿತಗೊಳ್ಳುವುದು ಕೇವಲ ಒಂದೇ ಒಂದು ವೀರ್ಯಾಣು. ನಮ್ಮೆಲ್ಲರ ವಿಷಯದಲ್ಲಿ ಹಾಗೆ ಯಶಸ್ವಿಯಾದ ಏಕೈಕ ಲಿಂಗಾಣುವೆಂದರೆ ಅದು ಸ್ವತಃ ನಾವೇ! ಒಂದೊಮ್ಮೆ ಆ ಕೋಟ್ಯಂತರ ವೀರ್ಯಾಣುಗಳಲ್ಲಿ ಅದನ್ನು ಬಿಟ್ಟು ಬೇರಾವುದೇ ಲಿಂಗಾಣು ಗರ್ಭಾಂಕುರವಾಗಿದ್ದಲ್ಲಿ ಭೂಮಿಯ ಮೇಲಿಂದು ನಾವಿರುತ್ತಿರಲಿಲ್ಲ, ಇನ್ಯಾರೋ ಇರು ತ್ತಿದ್ದರು. ಹತ್ತೇಹತ್ತು ಜನ ಓಡುವವರಲ್ಲಿ ನಾವು ಮೊದಲಿಗರಾದರೆ ಆ ಹೊತ್ತು ಜಗತ್ತು ಗೆದ್ದಂತೆ ಬೀಗುತ್ತೇವೆ. ಆದರೆ ಹುಟ್ಟುವ ಮೊದಲೇ ಅತ್ಯಂತ ತೀವ್ರತರದ ಸ್ಪರ್ಧೆ ಜಯಿಸಿ ಬಂದಿದ್ದೇವೆಂಬ ಸತ್ಯ ವನ್ನು ಸಂಭ್ರಮಿಸುವುದನ್ನು ಮರೆತಿರುತ್ತೇವೆ. ಸರ್ವರೀತಿಯಲ್ಲೂ ಶಕ್ತರೂ ಸ್ವತಂತ್ರರೂ ಆದ ನಾವು ಸೋಲಿಗಂಜದೇ ಅವಕಾಶಕ್ಕಾಗಿ ಕಾಯುತ್ತಾ ಕೂರದೇ ಸಮಸ್ಯೆಗಳನ್ನೇ ಸವಾಲಾಗಿ ಪರಿಗಣಿಸಬೇಕು ಸತ್ಕಾರ್ಯ- ಸಾಧನೆಗಳಿಗೆ ನಮ್ಮ ಜೀವಿತಾವಧಿಯನ್ನೇ ಸುಮುಹೂರ್ತವೆಂದು ಭಾವಿಸಿ ಕ್ರಿಯಾಶೀಲ ರಾಗಬೇಕು. ಕರ್ತೃತ್ವವ ನಂಬಿ ಆತ್ಮವಿಶ್ವಾಸದಿಂದ ಅಡಿಯಿಡುವಾಗ ಸೋಲುಗಳನ್ನೂ ಸೋಲಿಸಲು ಸಾಧ್ಯ. ಹಿರಿಯರು ಹೇಳುವಂತೆ ‘ಬದುಕೆಂಬುದು ಕನಸುಗಳನ್ನು ಮಾರುವ ಬಜಾರು, ಅಚ್ಚರಿ- ಅನಿರೀ ಕ್ಷಿತಗಳ ನಿತ್ಯಸಂತೆ. ಬೇಕಾದ್ದು, ಬೇಡದ್ದು ಎಲ್ಲವೂ ಅಲ್ಲಿ ಬಿಕರಿಗಿವೆ, ಅವರವರ ಅಗತ್ಯಕ್ಕೆ ಬೇಕಾಗಿದ್ದನ್ನು ಕೊಂಡುಕೊಳ್ಳುವ ಜಾಣತನವಿರಬೇಕಷ್ಟೆ’.

ಹೌದು, ಕೆಲವೊಮ್ಮೆ ಸಂಬಂಧಿಗಳ ಸಾವು, ಪರೀಕ್ಷೆಯ ಸೋಲು, ವ್ಯಾಪಾರ ನಷ್ಟ, ಉದ್ಯೋಗ ಅನಿಶ್ಚಿತತೆ, ಆರೋಗ್ಯ ಬಾಧೆ, ಹಿಂಸೆ- ಅವಮಾನಗಳು ಮನೋಬಲವನ್ನೇ ಗಾಸಿಗೊಳಿಸುವುದಿದೆ. ಹಾಗೆಂದು ಬದುಕನ್ನು ಮೊಟಕುಗೊಳಿಸುವುದಲ್ಲ. ವಾಸ್ತವವನ್ನು ಒಪ್ಪಿಕೊಂಡು ಮುಂದೆ ನಡೆಯಬೇಕು. ಬದುಕು ಹಿಮ್ಮುಖವಾಗಿಯೇನೂ ಚಲಿಸುವುದಿಲ್ಲ. ಮಣ್ಣೊಳಗೆ ಮಣ್ಣಾದಂತೆ ಕಾಣುವ ಬೀಜವೊಂದು ನೆಲದಿಂದ ಮೇಲೆದ್ದು ಮುಗಿಲಿಗೆ ಬೆಳೆಯುವ ಆದರ್ಶವನ್ನೂ ಪ್ರೇರಣೆಯನ್ನೂ ಗ್ರಹಿಸಬೇಕು.

ಅವರವರ ನೆಲೆಯಲ್ಲಿ ಸಾಧಿಸಲು ಎಲ್ಲರಿಗೂ ಸಾಧ್ಯವಿದೆ. ಸೀಮಿತ ಜೀವಿತಾವಧಿಯಲ್ಲಿ ಪ್ರತಿಕ್ಷಣವೂ ಅಮೂಲ್ಯ. ಸಾವಿರಾರು ಮೈಲಿಗಳ ಪ್ರಯಾಣವೂ ಪುಟ್ಟ ಹೆಜ್ಜೆಯಿಂದಲೇ ಶುರುವಾಗುವ ಹಾಗೆ, ಸವಾಲೊಡ್ಡುವ ಸಣ್ಣಸಣ್ಣ ಸಮಸ್ಯೆಗಳನ್ನು ಗೆಲ್ಲುತ್ತಾ ಹೋದಂತೆ ಗುರಿ ಸಾಧನೆಗೆ ಹತ್ತಿರವಾಗುತ್ತೇವೆ.

ಪ್ರಯತ್ನವನ್ನೆಲ್ಲಾ ಒಗ್ಗೂಡಿಸಿಕೊಂಡು ಕನಸುಗಳನ್ನು ಬೆನ್ನುಹತ್ತಿ ದುಡಿದರಾಯಿತು. ಸರಳ, ನಿಸ್ಪೃಹ, ನಂಬಿಕೆಯುಳ್ಳ ಮನಃಸ್ಥಿತಿಯೇ ಸಂತೃಪ್ತ ಜೀವನದ ಅಡಿಪಾಯ. ವಿಶ್ವಾಸ- ಜೀವನೋತ್ಸಾಹದಿಂದ ಸರಳವಾಗಿ, ಸಮಾಜಮುಖಿಯಾಗಿ ಬದುಕು ಕಟ್ಟಿ ಕೊಳ್ಳುತ್ತಾ ಅಸ್ತಿತ್ವದ ಸಾರ್ಥಕತೆಯನ್ನು ಸಿದ್ಧಿಸಿಕೊಳ್ಳಬೇಕಾದ ಅನಿವಾರ್ಯ ನಮ್ಮದಾಗಿರಲಿ ಸದಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT