ಬುಧವಾರ, ಮಾರ್ಚ್ 29, 2023
24 °C
ಕರ್ನಾಟಕ ಏಕೀಕರಣ ಚಳವಳಿಯೂ ಸೇರಿದಂತೆ ಅನೇಕ ಉಪಯುಕ್ತ ಕೆಲಸಗಳನ್ನು ಮಾಡಿದ ಪರಿಷತ್ತಿಗೆ ಇವತ್ತು ಏನೂ ಮಾಡಲಾಗುತ್ತಿಲ್ಲ

ಸಂಗತ | ಕಸಾಪ: ತುರ್ತು ಪ್ರಶ್ನೆಗಿಲ್ಲ ಉತ್ತರ

ಪುರುಷೋತ್ತಮ ಬಿಳಿಮಲೆ Updated:

ಅಕ್ಷರ ಗಾತ್ರ : | |

ನಾಲ್ವಡಿ ಕೃಷ್ಣರಾಜ ಒಡೆಯರ್ ಬಹಳ ಮುನ್ನೋಟವುಳ್ಳ ನಾಯಕರಾಗಿದ್ದರು. ಮೈಸೂರನ್ನು ಮಾದರಿ ಸಂಸ್ಥಾನವಾಗಿ ರೂಪಿಸುವ ಕನಸು ಹೊತ್ತು ಕೆಲಸ ಮಾಡಿದ ಅವರು 1915ರಲ್ಲಿ ಬೆಂಗಳೂರಿನಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್ತನ್ನು (ಆಮೇಲೆ ಕನ್ನಡ ಸಾಹಿತ್ಯ ಪರಿಷತ್ತಾಯಿತು) ಪ್ರಾರಂಭಿಸಿದರು. ಅದು ಹುಟ್ಟುವಾಗ ಅದಕ್ಕಿದ್ದುದು ನಾಲ್ಕು ಮಂದಿ ಆಜೀವ ಸದಸ್ಯರು ಮತ್ತು 42 ಮಂದಿ ದ್ವಿತೀಯ ವರ್ಗದ ಸದಸ್ಯರು. ಆದರೆ, ಅದು ಹುಟ್ಟಿದ ಕಾಲಕ್ಕೆ ಕರ್ನಾಟಕ ಏಕೀಕರಣದ ಕೆಲಸ ನಡೆಯುತ್ತಿದ್ದುದರಿಂದಾಗಿ ಸಾಹಿತ್ಯ ಪರಿಷತ್ತು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಜೊತೆಗೂಡಿ ಮಹತ್ವದ ಕೆಲಸಗಳನ್ನು ಮಾಡಲೇಬೇಕಾಯಿತು, ಮಾಡಿತು.

ಮುಂದೆ ಪರಿಷತ್ತು ಕನ್ನಡ ಪುಸ್ತಕಗಳು ಮತ್ತು ಪತ್ರಿಕೆಗಳ ಪ್ರಕಟಣೆ, ವಾಚನಾಲಯಗಳ ಸ್ಥಾಪನೆ, ಉಪನ್ಯಾಸಗಳ ಆಯೋಜನೆಯಂತಹ ಕೆಲಸಗಳ ಮೂಲಕ ನಾಡಿನ ಹೆಮ್ಮೆಯ ಸಂಸ್ಥೆಯಾಗಿ ಬೆಳೆಯಿತು. ಕಾಲಾಂತರದಲ್ಲಿ ಮೈಸೂರಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಆಸಕ್ತಿಯ ಫಲವಾಗಿ ಬೆಂಗಳೂರಿನಲ್ಲಿ ಪ್ರಸ್ತುತ ಪ್ರಧಾನ ಕಚೇರಿ ಇರುವ ಸ್ಥಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಉಚಿತವಾಗಿ ನಿವೇಶನ ಮಂಜೂರಾಯಿತು. ಈ ನಿವೇಶನದಲ್ಲಿ ಶ್ರೀಕೃಷ್ಣರಾಜ ಪರಿಷನ್ಮಂದಿರವು 1933ರಲ್ಲಿ ತಲೆ ಎತ್ತಿತು. ಪರಿಷತ್ತು ಮುಂದೆ, ಪಂಪ ಭಾರತ, ಪಂಪ ರಾಮಾಯಣ, ಕನ್ನಡ ನಿಘಂಟು, ಚಾವುಂಡರಾಯ ಪುರಾಣ, ಸೋಮೇಶ್ವರ ಶತಕ, ಶಬ್ದಮಣಿ ದರ್ಪಣ ಮೊದಲಾದ ಪ್ರಾಚೀನ ಕೃತಿಗಳನ್ನು ಪ್ರಕಟಿಸಿ ಕನ್ನಡದ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡಿತು.

ಡಿ.ವಿ.ಗುಂಡಪ್ಪ, ಬಿ.ಎಂ.ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಅ.ನ.ಕೃಷ್ಣರಾಯ, ತಿ.ತಾ.ಶರ್ಮ, ಎ.ಎನ್.ಮೂರ್ತಿರಾವ್, ಬಿ.ಶಿವಮೂರ್ತಿ ಶಾಸ್ತ್ರೀ, ಪ್ರೊ. ಜಿ.ವೆಂಕಟಸುಬ್ಬಯ್ಯ, ಜಿ.ನಾರಾಯಣ, ಹಂಪ ನಾಗರಾಜಯ್ಯ, ಪ್ರೊ. ಜಿ.ಎಸ್.ಸಿದ್ದಲಿಂಗಯ್ಯ,
ಸಾ.ಶಿ.ಮರುಳಯ್ಯ, ಎನ್.ಬಸವಾರಾಧ್ಯ, ಚಂದ್ರಶೇಖರ ಪಾಟೀಲ ಮೊದಲಾದ ವಿದ್ವಾಂಸರು ಪರಿಷತ್ತಿಗೆ ಕೆಲಸ ಮಾಡುತ್ತಿದ್ದಾಗ ಅದಕ್ಕೊಂದು ಘನತೆ- ಗೌರವ ಇತ್ತು. ಅವರೆಲ್ಲರೂ ಕನ್ನಡದ ಮಹತ್ವದ ಲೇಖಕರೂ ಆಗಿದ್ದರಿಂದ ಪರಿಷತ್ತಿಗೆ ಹೋಗುವುದೂ ಸಂತೋಷದ ವಿಷಯವಾಗಿತ್ತು. ಆದರೆ ಮುಂದೆ ‍ಪರಿಷತ್ತು ಪತನಮುಖಿಯಾಗುತ್ತಾ ಸಾಗಿತು.

ಲಕ್ಷಾಂತರ ಮತದಾರರಿರುವ ಪರಿಷತ್ತಿಗೆ ಲೇಖಕರು ಅಧ್ಯಕ್ಷರಾಗುವ ಅವಕಾಶ ಈಗ ಕಳೆದುಹೋಗಿದೆ. ಸರ್ಕಾರಿ ಅನುದಾನದಿಂದ ವರ್ಷಕ್ಕೊಂದು ಸಮ್ಮೇಳನವನ್ನು ನಡೆಸುವ ‘ಈವೆಂಟ್‌ ಮ್ಯಾನೇಜ್‌ಮೆಂಟ್ ಸಂಸ್ಥೆ’ಯಾಗಿ ಪರಿಷತ್ತು ಪರಿವರ್ತನೆಗೊಂಡಿದೆ. ಈ ಸಮ್ಮೇಳನದ ರಾಜಕೀಯ ಲಾಭ ಪಡೆಯಲು ಸರ್ಕಾರ ಅದಕ್ಕೆ ಅನುದಾನವನ್ನೂ ಕೊಡುತ್ತದೆ. ಆದರೆ ಇದೇ ಸರ್ಕಾರ 2019ರಿಂದ ಸಗಟು ಪುಸ್ತಕ ಖರೀದಿಗೆ ಹಣ ಕೊಟ್ಟಿಲ್ಲ ಎಂಬುದನ್ನು ಮರೆಯಬಾರದು.

ಈಗ ನನ್ನ ನಿಜವಾದ ಪ್ರಶ್ನೆ ಇರುವುದು, ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಮ್ಮೇಳನಗಳನ್ನು ಹೇಗೆ ಇನ್ನಷ್ಟು ಉಪಯುಕ್ತ ಮಾಡಬಹುದು ಎಂಬುದರ ಬಗ್ಗೆ. ಕರ್ನಾಟಕ ಏಕೀಕರಣ ಚಳವಳಿಯೂ ಸೇರಿದಂತೆ ಅನೇಕ ಉಪಯುಕ್ತ ಕೆಲಸಗಳನ್ನು ಮಾಡಿದ ಪರಿಷತ್ತಿಗೆ ಇವತ್ತು ಏನೂ ಮಾಡಲಾಗುತ್ತಿಲ್ಲ. ಅನೇಕ ವರ್ಷಗಳಿಂದ ಸಮ್ಮೇಳನಗಳಲ್ಲಿ ಮಂಡಿಸಲಾಗು
ತ್ತಿರುವ ನಿರ್ಣಯಗಳ್ಯಾವುವೂ ಜಾರಿಗೆ ಬರುತ್ತಿಲ್ಲ. ಅವು ಜಾರಿಗೆ ಬರುವಂತೆ ಮಾಡುವ ಶಕ್ತಿಯೂ ಪರಿಷತ್ತಿಗೆ ಇಲ್ಲ.

21ನೇ ಶತಮಾನದ ಕನ್ನಡ– ಕರ್ನಾಟಕವು ಬಗೆಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಜಾಗತೀಕರಣವನ್ನು ಕನ್ನಡದಂಥ ದೇಸೀ ಭಾಷೆ ಎದುರಿಸುವ ಕ್ರಮಗಳು ಯಾವುವು? ಹಿಂದಿ ಭಾಷೆಯ ಜೊತೆ ನಮ್ಮ ಸಂಬಂಧಗಳು ಹೇಗಿರಬೇಕು? ‘ಸರ್ವ ಜನಾಂಗದ ಶಾಂತಿಯ ತೋಟ’ವಾಗಿದ್ದ ಕರ್ನಾಟಕವು ಕೋಮುವಾದದ ಪ್ರಯೋಗಶಾಲೆ ಆಗುವಾಗ ಪರಿಷತ್ತು ಕರ್ನಾಟಕವನ್ನು ಹೇಗೆ ರಕ್ಷಿಸುತ್ತದೆ ಎಂಬಂತಹ ತುರ್ತು ಪ್ರಶ್ನೆಗಳಿಗೆ ಪರಿಷತ್ತಿನಲ್ಲಿ ಯಾವುದೇ ಉತ್ತರಗಳು ಇದ್ದಂತಿಲ್ಲ. ಮೇಲಾಗಿ, ಹಾವೇರಿ ಸಮ್ಮೇಳನದಲ್ಲಿ ಮುಸ್ಲಿಮರಿಗೆ, ಮಹಿಳೆಯರಿಗೆ ಮತ್ತು ದಲಿತರಿಗೆ ಕೊಡಬೇಕಾದಷ್ಟು ಅವಕಾಶಗಳನ್ನು ಅದು ಕೊಟ್ಟೇ ಇಲ್ಲ. ಇಂಥ ನಡೆಗಳಿಂದಾಗಿ ಪರಿಷತ್ತು, ಸಮಸ್ತ ಕನ್ನಡಿಗರ ಪರವಾಗಿ ಧ್ವನಿ ಎತ್ತಿ, ನಾಯಕತ್ವ ನೀಡುವ ಅರ್ಹತೆಯನ್ನು ತಾನಾಗಿಯೇ ಕಳೆದುಕೊಂಡಿದೆ.

ಸರ್ಕಾರಿ ಅಂಗಸಂಸ್ಥೆಯಾಗಿ ಬೆಳೆದಿರುವ ಅದು ಇವತ್ತು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಯಾವುದೇ ನಿಲುವನ್ನು ತಳೆಯುವ ಶಕ್ತಿಯಿಲ್ಲದೆ ಸೊರಗಿದೆ. ಸಾಹಿತ್ಯದ ಮೂಲಭೂತ ಗುಣಗಳಿಗೆ ವ್ಯತಿರಿಕ್ತವಾದ ಕೆಲಸಗಳನ್ನು ಮಾಡುವ ಅದರ ಬಗ್ಗೆ ಸಾಹಿತಿಗಳಲ್ಲಿ ಅಂಥ ಉತ್ಸಾಹವೂ ಉಳಿದಿಲ್ಲ.

ಈ ಎಲ್ಲ ಕಾರಣಗಳಿಂದಾಗಿ ನಾವೆಲ್ಲ ಒಂದು ಕ್ಷಣ ನಿಂತು, ಯೋಚಿಸಿ, ನಮಗೆ ಉಪಯುಕ್ತವಾದ ಒಂದು ಸಾಹಿತ್ಯಿಕ ಸಂಘಟನೆಯನ್ನು ಕಟ್ಟಿಕೊಳ್ಳುವುದು ಇವತ್ತಿನ ಅಗತ್ಯ ಎಂದು ತೋರುತ್ತದೆ. ಈ ಕುರಿತು 1974ರಲ್ಲಿ ಕುವೆಂಪು ಅವರು ಮೈಸೂರಿನಲ್ಲಿ ನಡೆದ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಮ್ಮೇಳನದಲ್ಲಿ ಆಡಿದ ಮಾತುಗಳು ನಮಗೆ ಪ್ರೇರಣೆ ನೀಡಬೇಕು. ಲಂಕೇಶ್‌, ಸುಬ್ಬಣ್ಣ, ತೇಜಸ್ವಿ, ರಾಮದಾಸ್‌ ಅವರಂತಹವರ ಮಾರ್ಗ ನಮ್ಮ ಮುಂದಿದೆ. ಇವತ್ತು ಕನ್ನಡಕ್ಕೆ ಹೊಸ ಶಕ್ತಿ ತುಂಬುತ್ತಿರುವ ಹೊಸ ತಲೆಮಾರಿನ ಬರಹಗಾರರು ಇಂಥ ಹೊಸ ಬಗೆಯ ಸಾಹಿತ್ಯಿಕ ಸಮಾವೇಶಗಳಲ್ಲಿ ಎಲ್ಲರಿಗಿಂತ ಮುಂದೆ ಇರಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.